ಆ.23ರಿಂದ ಶಾಲೆ, ಕಾಲೇಜು ಆರಂಭಕ್ಕೆ ಸಿದ್ಧತೆ

By Kannadaprabha NewsFirst Published Aug 21, 2021, 7:13 AM IST
Highlights

*   ಶಾಲೆಗಳು ಸಜ್ಜು-9ರಿಂದ 12ನೇ ಕ್ಲಾಸಿನ ಭೌತಿಕ ತರಗತಿ ಶುರು
*  16 ಸಾವಿರ ಶಾಲೆ, 5 ಸಾವಿರ ಕಾಲೇಜಲ್ಲಿ ಅಂತಿಮ ತಯಾರಿ
*  ಕೈಗೊಂಡ ಸುರಕ್ಷತಾ ಕ್ರಮಗಳ ವಿಡಿಯೋ ಚಿತ್ರೀಕರಣ
 

ಬೆಂಗಳೂರು(ಆ.21):  ಸರ್ಕಾರದ ಆದೇಶದಂತೆ 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸೋಮವಾರದಿಂದ (ಆ.23) ಭೌತಿಕ ಆರಂಭಿಸಲು ರಾಜ್ಯದ 16,850 ಪ್ರೌಢ ಶಾಲೆಗಳು, 5,492 ಪದವಿ ಪೂರ್ವ ಕಾಲೇಜುಗಳಲ್ಲಿ ಅಂತಿಮ ಹಂತದ ತಯಾರಿ ನಡೆದಿದೆ.

ಕೋವಿಡ್‌ ಕ್ಷೀಣಿಸಿದ ಬಳಿಕ ಕಳೆದ ಜನವರಿಯಿಂದ ಶಾಲೆ, ಪಿಯು ಕಾಲೇಜುಗಳನ್ನು ಸರ್ಕಾರ ಆರಂಭಿಸಿತ್ತು. ಬಳಿಕ 2ನೇ ಅಲೆ ಶುರುವಾಗಿದ್ದರಿಂದ ಮಾ.23ರಿಂದ ಶಾಲೆ, ಕಾಲೇಜುಗಳನ್ನು ಬಂದ್‌ ಮಾಡಿತ್ತು. ಈಗ ಐದು ತಿಂಗಳ ಬಳಿಕ ಶಾಲೆಗಳ ಪುನಾರಂಭಕ್ಕೆ ಅವಕಾಶ ದೊರೆತಿರುವುದರಿಂದ ಮಕ್ಕಳನ್ನು ಬರಮಾಡಿಕೊಳ್ಳಲು ಆಯಾ ಶಾಲಾ ಕಾಲೇಜುಗಳ ಶಿಕ್ಷಕರು, ಆಡಳಿತ ಮಂಡಳಿಗಳು ಕಾತರದಿಂದ ಕಾಯುತ್ತಿದ್ದಾರೆ. 

ಕೋವಿಡ್‌ ಮಾರ್ಗಸೂಚಿ ಅನುಸಾರ ಶಾಲಾ, ಕಾಲೇಜಿನ ಆವರಣ, ಪ್ರತಿ ಕೊಠಡಿ, ಪ್ರಯೋಗಾಲಯ ಎಲ್ಲವನ್ನೂ ಸ್ವಚ್ಛಗೊಳಿಸಿ ಸ್ಯಾನಿಟೈಸಿಂಗ್‌ ಮಾಡಿಸುತ್ತಿರುವ ಆಡಳಿತ ಮಂಡಳಿಗಳು, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ತಾವು ಕೈಗೊಂಡಿರುವ ಕ್ರಮಗಳ ಬಗ್ಗೆ ವಿಡಿಯೋ ಮಾಡಿ ಪೋಷಕರಿಗೆ ರವಾನಿಸುತ್ತಿವೆ. ಆ ಮೂಲಕ ಶಾಲೆ, ಕಾಲೇಜಿನಲ್ಲಿ ಮಕ್ಕಳು ಸುರಕ್ಷಿತವಾಗಿರಲಿದ್ದು ನಿರ್ಭಯವಾಗಿ ಭೌತಿಕ ತರಗತಿಗೆ ಕಳುಹಿಸುವಂತೆ ಮನವಿ ಮಾಡುತ್ತಿವೆ. ಕೆಲ ಶಾಲಾ ಆಡಳಿತ ಮಂಡಳಿಗಳು ಪೋಷಕರ ಸಭೆ ನಡೆಸಿ ವಾಸ್ತವತೆಯನ್ನು ವಿವರಿಸಿ ಮಕ್ಕಳನ್ನು ಕಳುಹಿಸುವಂತೆ ಜಾಗೃತಿ ಮೂಡಿಸುತ್ತಿದ್ದಾರೆ.

ರಾಜ್ಯ ಸರಕಾರದ ಹೆಗ್ಗುರಿ ಬಿಚ್ಚಿಟ್ಟ ಡಾ.ಸಿ.ಎನ್.‌ಅಶ್ವತ್ಥನಾರಾಯಣ

ಪೋಷಕರ ಒಪ್ಪಿಗೆ ಕಡ್ಡಾಯ: 

ಸರ್ಕಾರದ ಸೂಚನೆಯಂತೆ ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಅನುಸರಿಸಿ ಶಾಲೆಗಳನ್ನು ಆರಂಭಿಸಲು ಕ್ರಮ ವಹಿಸಲಾಗುತ್ತಿದೆ. ಮಕ್ಕಳು ಭವತಿಕ ತರಗತಿ ಹಾಜರಾತಿಗೆ ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ. ಅನುಮತಿ ಪತ್ರ ನೀಡದ ಹೊರತು ಯಾವ ವಿದ್ಯಾರ್ಥಿಗಳನ್ನೂ ಭೌತಿಕ ತರಗತಿಗೆ ಹಾಜರಾಗಲು ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ(ಕ್ಯಾಮ್ಸ್‌) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಹೇಳಿದ್ದಾರೆ.

ವಿಶ್ವಾಸವಿದೆ- ಶಿಕ್ಷಕರು:

‘ನಮ್ಮ ಶಾಲೆಯಲ್ಲಿ ಆ.23ರಿಂದ ಭೌತಿಕ ತರಗತಿ ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪೋಷಕರಲ್ಲಿ ಮನವಿ ಮಾಡಿದ್ದೇವೆ. ಇನ್ನೂ ಒಂದಷ್ಟು ಪೋಷಕರು ಕೋವಿಡ್‌ ಆತಂಕದಿಂದ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಎಷ್ಟೇ ಮಕ್ಕಳು ಬಂದರೂ ಭೌತಿಕ ತರಗತಿ ಆರಂಭಿಸುತ್ತೇವೆ. ದಿನ ಕಳೆದಂತೆ ಒಬ್ಬರನ್ನು ನೋಡಿಕೊಂಡು ಇನ್ನೊಬ್ಬರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಾರೆ ಎಂಬ ವಿಶ್ವಾಸವಿದೆ. ಶಾಲೆಗೆ ಬರದ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣವನ್ನೂ ಮುಂದುವರೆಸುತ್ತೇವೆ’ ಎಂದು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಬೆಂಗಳೂರಿನ ಲಿಟ್‌್ಲ ಫ್ಲವರ್‌ ಶಾಲೆಯ ಪ್ರಾಂಶುಪಾಲರಾದ ಗಾಯತ್ರಿ ಅವರು ಹೇಳಿದರು.

ಹೆಸರೇಳಲಿಚ್ಛಿಸದ ಮತ್ತೊಂದು ಶಾಲೆಯ ಮುಖ್ಯಶಿಕ್ಷಕರು ಮಾತನಾಡಿ, ಸಾಕಷ್ಟು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ಧರಿದ್ದಾರೆ. ಕೆಲವರು ಮಾತ್ರ ಸೆಪ್ಟಂಬರ್‌ನಲ್ಲಿ ಮಕ್ಕಳಿಗೂ ವ್ಯಾಕ್ಸಿನ್‌ ಬರುತ್ತದೆ ಎಂದು ಹೇಳುತ್ತಿದ್ದಾರೆ. ಹಾಗಾಗಿ ಇನ್ನೊಂದು ವಾರ ಶಾಲಾರಂಭ ತಡ ಮಾಡಿ ವ್ಯಾಕ್ಸಿನ್‌ ಕೊಡಿಸಿ ಮಕ್ಕಳನ್ನು ಶಾಲೆಗೆ ಕಳಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ಕೋವಿಡ್‌ ನಡುವೆಯೂ ಶಾಲೆಗಳನ್ನು ಮುಚ್ಚಿಲ್ಲ. ಅಲ್ಲಿ ಮಕ್ಕಳ ಮೇಲೆ ಅಂತಹ ಗಂಭೀರ ಪರಿಣಾಮಗಳು ಆಗಿಲ್ಲ. ಹಾಗಾಗಿ ಪೋಷಕರು ಆತಂಕ ಬಿಟ್ಟು ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.
 

click me!