18 ಕೋಟಿ ವೆಚ್ಚದಲ್ಲಿ 3 ಅಲೆಮಾರಿ ವಸತಿ ಶಾಲೆ : CBSE ರೀತಿಯಲ್ಲೇ ಶಿಕ್ಷಣ

By Kannadaprabha News  |  First Published Aug 21, 2021, 8:01 AM IST
  •  ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ತಲಾ ಆರು ಕೋಟಿ ರು.ವೆಚ್ಚದಲ್ಲಿ ಮೂರು ಅಲೆಮಾರಿ ವಸತಿ ಶಾಲೆ
  •  ವಸತಿ ಶಾಲೆಗಳನ್ನು ಪ್ರಾರಂಭ ಮಾಡಲಾಗುವುದು ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

 ಬೆಂಗಳೂರು (ಆ.21):  ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ತಲಾ ಆರು ಕೋಟಿ ರು.ವೆಚ್ಚದಲ್ಲಿ ಮೂರು ಅಲೆಮಾರಿ ವಸತಿ ಶಾಲೆಗಳನ್ನು ಪ್ರಾರಂಭ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 106ನೇ ಜನ್ಮ ದಿನಾಚರಣೆ ಹಾಗೂ ಡಿ.ದೇವರಾಜು ಅರಸು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಈಗಾಗಲೇ 4 ಅಲೆಮಾರಿ ವಸತಿ ಶಾಲೆಗಳು ಇದ್ದು, ಹೊಸದಾಗಿ ಮೂರು ಅಲೆಮಾರಿ ವಸತಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ತಲಾ ಆರು ಕೋಟಿ ರು.ಗಳನ್ನು ಒದಗಿಸಲಾಗುವುದು. ಜೊತೆಗೆ ವಿಶ್ವವಿದ್ಯಾಲಯಗಳಲ್ಲಿ ಅಲೆಮಾರಿ ಜನಾಂಗದ ಸಂಸ್ಕೃತಿ ಅಧ್ಯಯನಕ್ಕೂ ನಿರ್ಣಯ ಕೈಗೊಳ್ಳುತ್ತೇವೆ ಎಂದು ಹೇಳಿದರು.

Tap to resize

Latest Videos

ಗ್ರಾಮೀಣ ವಸತಿ ಯೋಜನೆಯಡಿ 4 ಲಕ್ಷ ಮನೆ: ಸಿಎಂ ಬೊಮ್ಮಾಯಿ

ರಾಜ್ಯದ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ಒದಗಿಸಲು ಸರ್ಕಾರ ವಿಶೇಷ ಕಾರ್ಯಕ್ರಮ ರೂಪಿಸಲಿದೆ. ಸಿಬಿಎಸ್‌ಇ ಮಾದರಿಯಲ್ಲೇ ವಸತಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲು ಉನ್ನತೀಕರಣಗೊಳಿಸಲಾಗುವುದು. ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ವಸತಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ದೊರೆಯುವಂತೆ ಸುಧಾರಣಾ ಕ್ರಮಕೈಗೊಳ್ಳುತ್ತೇವೆ. ಸಿಇಟಿ ಮತ್ತು ನೀಟ್‌ ಪರೀಕ್ಷೆಗಳನ್ನು ಆತ್ಮಸ್ಥೈರ್ಯಗಳಿಂದ ಬರೆಯುವಂತೆ ಆ ಶಾಲೆಗಳ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ರಾಜ್ಯದ 8.50 ಲಕ್ಷ ವಿದ್ಯಾರ್ಥಿಗಳಿಗೆ 625 ಕೋಟಿ ರು. ವಿದ್ಯಾರ್ಥಿ ವೇತನವನ್ನು ಹಿಂದುಳಿದ ವರ್ಗದ ವತಿಯಿಂದ ನೀಡಲಾಗುತ್ತಿದೆ. ಸ್ವ ಉದ್ಯೋಗಕ್ಕೂ ಸಾಕಷ್ಟುಸಹಾಯ ಒದಗಿಸಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗ ಕಲ್ಪಿಸಲು 83 ಕೋಟಿ ರು.ಖರ್ಚು ಮಾಡಲಾಗುತ್ತಿದೆ ಎಂದ ಅವರು, ಪ್ರಧಾನ ಮಂತ್ರಿಗಳು ಸಿಇಟಿ ಮತ್ತು ನೀಟ್‌ ಪರೀಕ್ಷೆಗಳಲ್ಲಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ಸೌಲಭ್ಯ ಕಲ್ಪಿಸಿದ್ದಾರೆ. ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವೂ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು, ಸ್ವಯಂ ಉದ್ಯೋಗ ಹಾಗೂ ಖಾಸಗಿ ವಲಯದಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗುವಂತೆ ಹೊಸ ಕಾರ್ಯಕ್ರಮ ರೂಪಿಸಲಿದೆ ಎಂದು ಭರವಸೆ ನೀಡಿದರು.

ಪ್ರಶಸ್ತಿ ಪ್ರದಾನ: ಸುಮಂಗಲಿ ಸೇವಾಶ್ರಮದ ಸುಶೀಲಮ್ಮ, ಬಸವಪ್ರಭು ಲಕನಗೌಡ ಪಾಟೀಲ್‌ (ಬಿ.ಎನ್‌.ಪಾಟೀಲ್‌), ಅಲೆಮಾರಿ ಜನಾಂಗದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಕೆ.ಭಾಸ್ಕರದಾಸ್‌ ಎಕ್ಕಾರ್‌ ಅವರಿಗೆ ಡಿ.ದೇವರಾಜ ಅರಸು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 106ನೇ ಜನ್ಮ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೂವರು ಗಣ್ಯರಿಗೆ ಡಿ.ದೇವರಾಜು ಅರಸು ಪ್ರಶಸ್ತಿ ಪ್ರದಾನ ಮಾಡಿದರು.

ದೇವರಾಜು ಅರಸು ಗುಲಾಮಗಿರಿ ರಹಿತ ಬದುಕಿಗೆ ದೊಡ್ಡ ಆಯಾಮ ಕೊಟ್ಟಧೀಮಂತ ನಾಯಕ. ಭೂಮಿ ಉಳುವ ಮಣ್ಣಿನ ಮಕ್ಕಳನ್ನು ಸ್ವತಂತ್ರಗೊಳಿಸಿದರು. ಕೆಲವರಲ್ಲೇ ಇದ್ದ ಭೂ ಸಂಪತ್ತನ್ನು ಸರ್ವರಿಗೂ ದೊರೆಯುವಂತೆ ಮಾಡಿದರು. ಅವರು ಕೈಗೊಂಡ ಭೂ-ಸುಧಾರಣಾ ನಿರ್ಣಯದಿಂದ ಸ್ವತಂತ್ರ ಮತ್ತು ಸ್ವಾಭಿಮಾನದ ಬದುಕು ನಡೆಸಲು ಸಾಧ್ಯವಾಯಿತು. ಅರಸು ಅವರು ಭೂ ಸುಧಾರಣೆಗಾಗಿ ಮಾಡಿದ ಕ್ರಾಂತಿ ಮೆಚ್ಚುವಂತಹದ್ದು. ಅದರಿಂದ ಸಾಕಷ್ಟುಪಾಠ ಕಲಿಯಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಿಜ್ವಾನ್‌ ಅರ್ಷದ್‌, ಸಂಸದ ಪಿ.ಸಿ.ಮೋಹನ್‌,ಹಿರಿಯ ಸಾಹಿತಿ ಪ್ರೊ.ದೊಡ್ಡರಂಗೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

click me!