ಇಂಗ್ಲಿಷ್ ಬೋಧಕರ ಕೊರತೆ ಹಳ್ಳಿಮಕ್ಕಳ ಭವಿಷ್ಯಕ್ಕೆ ಪೆಟ್ಟು..!

By Kannadaprabha NewsFirst Published Sep 20, 2023, 2:00 AM IST
Highlights

ಸರ್ಕಾರಿ ಪ್ರೌಢಶಾಲೆಗಳಲ್ಲಿನ ಖಾಲಿ ಹುದ್ದೆಗಳ ನೇಮಕದಲ್ಲಾದ ಹಿನ್ನಡೆ, ಬೇರೆ ಜಿಲ್ಲೆಗಳಿಗೆ ಶಿಕ್ಷಕರ ವರ್ಗಾವಣೆ ಹಾಗೂ ಅತಿಥಿ ಶಿಕ್ಷಕರನ್ನೇ ಹೆಚ್ಚಿನ ಶಾಲೆಗಳು ಆಶ್ರಯಿಸಿರುವುದು ರಾಜ್ಯಮಟ್ಟದಲ್ಲಿ ಜಿಲ್ಲೆಯ ಸ್ಥಾನ ಪಾತಾಳಕ್ಕೆ ಕುಸಿಯಲು ಪ್ರಮುಖ ಕಾರಣವಾಗಿದೆ. 

ಕೆ.ಎಂ. ಮಂಜುನಾಥ್

ಬಳ್ಳಾರಿ(ಸೆ.20): ಇಂಗ್ಲಿಷ್ ವಿಷಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪ್ರತಿವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣಗೊಳ್ಳುತ್ತಿದ್ದು, ಜಿಲ್ಲೆಯ ಶೈಕ್ಷಣಿಕ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ. ಸರ್ಕಾರಿ ಪ್ರೌಢಶಾಲೆಗಳಲ್ಲಿನ ಖಾಲಿ ಹುದ್ದೆಗಳ ನೇಮಕದಲ್ಲಾದ ಹಿನ್ನಡೆ, ಬೇರೆ ಜಿಲ್ಲೆಗಳಿಗೆ ಶಿಕ್ಷಕರ ವರ್ಗಾವಣೆ ಹಾಗೂ ಅತಿಥಿ ಶಿಕ್ಷಕರನ್ನೇ ಹೆಚ್ಚಿನ ಶಾಲೆಗಳು ಆಶ್ರಯಿಸಿರುವುದು ರಾಜ್ಯಮಟ್ಟದಲ್ಲಿ ಜಿಲ್ಲೆಯ ಸ್ಥಾನ ಪಾತಾಳಕ್ಕೆ ಕುಸಿಯಲು ಪ್ರಮುಖ ಕಾರಣವಾಗಿದೆ. ಅಷ್ಟೇ ಅಲ್ಲ; ಇಂಗ್ಲಿಷ್ ಬೋಧನೆ ಕೊರತೆಯಿಂದಾಗಿ ಒಮ್ಮೆ ಅನುತ್ತೀರ್ಣಗೊಂಡ ಬಾಲಕಿಯರು ಮತ್ತೆ ಶಿಕ್ಷಣದ ಕಡೆ ಮನಸ್ಸು ಹಾಯಿಸದಿರುವುದು ಬೆಳಕಿಗೆ ಬಂದಿದ್ದು, ಇದು ಮಹಿಳಾ ಶೈಕ್ಷಣಿಕ ಪ್ರಗತಿಗೆ ಕುತ್ತು ತಂದೊದಗಿದೆ.

ಹಳ್ಳಿಮಕ್ಕಳು ವಂಚಿತ:

ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿರುವ ಶಿಕ್ಷಕರ ಕೊರತೆ ಬರೀ ಇಂಗ್ಲಿಷ್‌ಗಷ್ಟೇ ಸೀಮಿತವಾಗಿಲ್ಲ. ಕನ್ನಡ, ಹಿಂದಿ ಮತ್ತಿತರ ವಿಷಯ ಕೊರತೆ ಸಹ ದೊಡ್ಡ ಸಂಖ್ಯೆಯಲ್ಲಿದೆ. ಆದರೆ, ಉಳಿದ ವಿಷಯಕ್ಕಿಂತಲೂ ಇಂಗ್ಲಿಷ್ ವಿಷಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಅನುತ್ತೀರ್ಣಗೊಳ್ಳುತ್ತಿದ್ದಾರೆ. ಕಾಯಂ ಬೋಧಕರಿಲ್ಲದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂಗ್ಲಿಷ್ ವಿಷಯದಲ್ಲಿ ತೀರಾ ಹಿಂದುಳಿಯುತ್ತಿದ್ದು, ಕಾಲೇಜು ಶಿಕ್ಷಣದಿಂದ ಪ್ರತಿವರ್ಷ ನೂರಾರು ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ.

ಉನ್ನತ ಶಿಕ್ಷಣ ಇಲಾಖೆಯಲ್ಲಿ ಮತ್ತೆ ಅಂಕಪಟ್ಟಿ ಗೊಂದಲ: ಭೌತಿಕ ಅಂಕಪಟ್ಟಿ ನೀಡಲು ವಿವಿಗಳ ಮೀನಾಮೇಷ..!

ಎಸ್ಸೆಸ್ಸೆಲ್ಸಿಯಲ್ಲಿ ಫಲಿತಾಂಶ ಹೆಚ್ಚಿಸಲು ಜಿಲ್ಲಾಡಳಿತ ಕಳೆದ ಐದಾರು ವರ್ಷಗಳಿಂದ ಪರೀಕ್ಷಾ ಸಿದ್ಧತಾ ಶಿಬಿರ, ನುರಿತ ಶಿಕ್ಷಕರಿಂದ ತರಬೇತಿ ಸೇರಿದಂತೆ ನಾನಾ ಕಸರತ್ತುಗಳನ್ನು ನಡೆಸುತ್ತಿದೆಯಾದರೂ ಫಲಿತಾಂಶ ಏರುಮುಖ ಕಾಣುತ್ತಿಲ್ಲ.

ಇದಕ್ಕೆ ಕಾರಣವೂ ಇದೆ. ಇಡೀ ವರ್ಷ ಇಂಗ್ಲಿಷ್ ಪಠ್ಯ ಚಟುವಟಿಕೆಯಿಂದ ದೂರ ಉಳಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮೀಪಿಸುತ್ತಿರುವಾಗ ವರ್ಷದ ಪಠ್ಯವನ್ನು ಹತ್ತಾರು ದಿನಗಳಲ್ಲಿ ಬೋಧಿಸುವುದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಇಂಗ್ಲಿಷ್ ಶಿಕ್ಷಕರ ನೇಮಕದಿಂದ ಮಾತ್ರ ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಸಲು ಸಾಧ್ಯವೇ ವಿನಃ, ಪರೀಕ್ಷಾ ಮುನ್ನ ನಡೆಯುವ ತುರ್ತು ಕಸರತ್ತುಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬುದನ್ನು ಶಿಕ್ಷಕರು ಸಹ ಒಪ್ಪಿಕೊಳ್ಳುತ್ತಾರೆ.

ಶಿಕ್ಷಕರ ಕೊರತೆ ಎಷ್ಟು?

ಜಿಲ್ಲೆಯಲ್ಲಿರುವ 116 ಸರ್ಕಾರಿ ಪ್ರೌಢಶಾಲೆಗಳಲ್ಲಿ 79 ಇಂಗ್ಲಿಷ್ ಶಿಕ್ಷಕರ ಕೊರತೆ ಇದೆ. ಈ ಪೈಕಿ ಗ್ರಾಮೀಣ ಭಾಗದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರ ಅಭಾವವಿದೆ. ಇದಲ್ಲದೆ, ಕನ್ನಡ ಭಾಷಾ ಶಿಕ್ಷಕರು 72 ಹಾಗೂ ಹಿಂದಿ ಭಾಷಾ ಶಿಕ್ಷಕರು 44ರಷ್ಟು ಖಾಲಿ ಇವೆ. ಇಂಗ್ಲಿಷ್ ಹಾಗೂ ಹಿಂದಿ ಶಿಕ್ಷಕರ ಕೊರತೆಯಿಂದಾಗಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದ್ದೇವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ನೇಮಿತ ಅತಿಥಿ ಶಿಕ್ಷಕರಿಂದ ಫಲಿತಾಂಶ ಸುಧಾರಿಸಲು ಸಾಧ್ಯವಾಗಿಲ್ಲ. ಇದು ಇಲಾಖೆ ಅಧಿಕಾರಿಗಳಿಗೂ ಗೊತ್ತಿದೆ. ಆದರೆ, ಸರ್ಕಾರ ಕಾಯಂ ಶಿಕ್ಷಕರನ್ನು ನೇಮಿಸುವರಿಗೆ ನಾವೇನೂ ಮಾಡುವಂತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಹಿಜಾಬ್ ವಿವಾದ ಬಳಿಕ ಶಾಲೆಗಳಲ್ಲಿ ನಿಖಾಬ್ ನಿಷೇಧ, ಸೆ.30 ರಿಂದ ಈ ಮುಸ್ಲಿಂ ದೇಶದಲ್ಲಿ ಜಾರಿ!

ಇಂಗ್ಲಿಷ್ ಶಿಕ್ಷಕರ ಕೊರತೆ ಸಾಕಷ್ಟು ಸಂಖ್ಯೆಯಲ್ಲಿರುವುದು ನಿಜ. ಹೀಗಾಗಿಯೇ ಫಲಿತಾಂಶದಲ್ಲಿ ಇಳಿಮುಖವಾಗುತ್ತಿದೆ. ಸದ್ಯಕ್ಕೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಅವರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತಿದೆ ಎಂದು ಬಳ್ಳಾರಿ ಪ್ರಭಾರಿ ಡಿಡಿಪಿಐ ಹನುಮಕ್ಕ ತಿಳಿಸಿದ್ದಾರೆ. 

ಇಂಗ್ಲಿಷ್ ಶಿಕ್ಷಕರ ಕೊರತೆಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೆಟ್ಟು ಬಿದ್ದಿದೆ. ಗಡಿಭಾಗ ಹಳ್ಳಿಗಳ ಶಾಲೆಗಳ ಕಡೆ ಶಿಕ್ಷಣ ಇಲಾಖೆ ಗಮನ ನೀಡಬೇಕು ಎಂದು ಬಳ್ಳಾರಿ ತಾಲೂಕಿನ ಬೆಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ. ಸುರೇಶ್ ತಿಳಿಸಿದ್ದಾರೆ. 

click me!