ಶಾಲಾ ಪಠ್ಯ ಪರಿಷ್ಕರಣೆ ವಿವಾದ ಮುಗಿಯಿತು ಎನ್ನುವಷ್ಟರಲ್ಲೇ ಈಗ ವೀರ ಸಾವರ್ಕರ್ ಕುರಿತ ಪಾಠವನ್ನು 8ನೇ ತರಗತಿ ಪಾಠದಲ್ಲಿ ಸೇರಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ದೇಶಭಕ್ತಿ ವರ್ಣಿಸುವ ಭರದಲ್ಲಿ ಉತ್ಪ್ರೇಕ್ಷೆ ಮಾಡಿರುವ ಆರೋಪ ಕೇಳಿಬಂದಿದೆ.
ಬೆಂಗಳೂರು (ಆ.27): ಶಾಲಾ ಪಠ್ಯ ಪರಿಷ್ಕರಣೆ ವಿವಾದ ಮುಗಿಯಿತು ಎನ್ನುವಷ್ಟರಲ್ಲೇ ಈಗ ವೀರ ಸಾವರ್ಕರ್ ಕುರಿತ ಪಾಠವನ್ನು 8ನೇ ತರಗತಿ ಪಾಠದಲ್ಲಿ ಸೇರಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಸಾವರ್ಕರ್ ದೇಶಭಕ್ತಿಯನ್ನು ವರ್ಣಿಸುವ ಭರದಲ್ಲಿ ‘ಬ್ರಿಟಿಷರು ಅವರನ್ನು ಬಂಧಿಸಿಟ್ಟಿದ್ದ ಅಂಡಮಾನ್ ಜೈಲಿನ ಕೋಣೆಗೆ ಬುಲ್‌ಬುಲ್ ಹಕ್ಕಿಗಳು ಬರುತ್ತಿದ್ದವು. ಅವುಗಳ ರೆಕ್ಕೆಗಳ ಮೇಲೆ ಕುಳಿತು ಸಾವರ್ಕರ್ ಪ್ರತಿ ದಿನ ತಾಯ್ನಾಡಿನ ನೆಲವನ್ನು ಸಂಪರ್ಕಿಸಿ ಬರುತ್ತಿದ್ದರು’ ಎಂಬ ಉತ್ಪ್ರೇಕ್ಷೆಯ ಸಾಲುಗಳನ್ನು ಸೇರಿಸಲಾಗಿದೆ ಎಂಬ ಆರೋಪಿಸಲಾಗುತ್ತಿದೆ. 8ನೇ ತರಗತಿ ಕನ್ನಡ ಪಠ್ಯದಲ್ಲಿ ಈ ಮೊದಲು ಇದ್ದ ವಿಜಯಮಾಲಾ ರಂಗನಾಥ ಅವರ ಬ್ಲಡ್ ಗ್ರೂಪ್ ಎಂಬ ಪಾಠವನ್ನು ಕೈಬಿಡಲಾಗಿದೆ. ಇದರ ಬದಲು ಕೆ.ಟಿ.ಗಟ್ಟಿಅವರು ಸಾವರ್ಕರ್ ಅವರನ್ನು ಬಂಧಿಸಿಟ್ಟಿದ್ದ ಅಂಡಮಾನ್ ಜೈಲಿಗೆ ಭೇಟಿ ನೀಡಿದ್ದರ ಬಗ್ಗೆ ಬರೆದಿರುವ ಪ್ರವಾಸ ಕಥನ ಆಧಾರಿತ ‘ಕಾಲವನ್ನು ಗೆದ್ದವರು’ ಪಾಠವನ್ನು ಸೇರಿಸಲಾಗಿದೆ. ಈ ಪಾಠದ ಪುಟಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಚರ್ಚೆಯ ವಸ್ತುವಾಗಿವೆ. ಆದರೆ, ಶಿಕ್ಷಣ ಇಲಾಖೆಯ ಪಠ್ಯ ಪುಸ್ತಕ ಸೊಸೈಟಿ ಅಧಿಕಾರಿಗಳು ‘ಇದರಲ್ಲಿ ಹೊಸದಾಗಿ ಯಾವುದನ್ನೂ ಸೇರಿಸಿಲ್ಲ, ಲೇಖಕರ ಸಾಲುಗಳನ್ನಷ್ಟೇ ಸೇರಿಸಲಾಗಿದೆ’ ಎಂದು ಹೇಳುತ್ತಿದ್ದಾರೆ.
ಪಾಠದಲ್ಲೇನಿದೆ?: ‘ವಿನಾಯಕ ದಾಮೋದರ ಸಾವರ್ಕರ್ ಅವರು ಬ್ರಿಟಿಷರಿಂದ ಕಠೋರ ಶಿಕ್ಷೆಗೆ ಗುರಿಯಾದರು. ಅವರನ್ನು ಎರಡು ಜೀವಾವಧಿ ಶಿಕ್ಷೆಗಳಿಗೆ ಗುರಿಪಡಿಸಲಾಯಿತು. ಒಟ್ಟು 50 ವರ್ಷ ಕಾಲ ಜೈಲುವಾಸ ಅನುಭವಿಸಬೇಕೆಂಬ ತೀರ್ಪು ನೀಡಲಾಗಿತ್ತು. ಬ್ರಿಟಿಷರು ತಮ್ಮ ನಿರಂಕುಶ ಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಿದ ಮಂದಿಯನ್ನು ಅಂಡಮಾನಿನ ದ್ವೀಪದ ಜೈಲಿನಲ್ಲಿ ಹಾಕುತ್ತಿದ್ದರು. ಸಾವರ್ಕರ್ ಅವರನ್ನೂ ಅಲ್ಲಿಗೇ ಕಳುಹಿಸಿದ್ದರು. ಅಲ್ಲಿ ಮೊದಲ ಆರು ತಿಂಗಳು ಹಗಲು ರಾತ್ರಿ ತಿಳಿಯದ ಕತ್ತಲ ಕೋಣೆಯಲ್ಲಿ ಏಕಾಂತವಾಗಿ ಶಿಕ್ಷೆ ಅನುಭವಿಸಿದರು. ನಂತರ ಅವರನ್ನು ಎತ್ತುಗಳಿಂದ ಗಾಣದ ಎಣ್ಣೆ ತೆಗೆಯುವ, ತೆಂಗಿನ ನಾರು ಹೊಡೆದು ಹಗ್ಗ ಮಾಡುವುದು ಸೇರಿದಂತೆ ಕಠಿಣ ಶ್ರಮದ ದುಡಿಮೆಗೆ ತಳ್ಳಲಾಯಿತು. ಚರ್ಮ ಕಿತ್ತು ಹೋದರೂ ದುಡಿಮೆಗೆ ವಿರಾಮ ಹೇಳುವಂತಿರಲಿಲ್ಲ’ ಎಂದು ಪಾಠದಲ್ಲಿ ಮಾಹಿತಿ ನೀಡಲಾಗಿದೆ.
Savarkar War; ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ
ಲೇಖಕರು ತಾವು ಅಂಡಮಾನ್ ಜೈಲಿಗೆ ಬೇಟಿ ನೀಡಿದಾಗ ಅಲ್ಲಿ ಸಾವರ್ಕರ್ ಅವರನ್ನು ಕೂಡಿಟ್ಟಿದ್ದ ಕೋಣೆಯ ಚಿತ್ರಣ, ಅಲ್ಲಿರುವ ಬರಹ ಮತ್ತಿತರ ಅಂಶಗಳನ್ನು ದಾಖಲಿಸಿದ್ದಾರೆ. ‘ಕೋಣೆಯೊಂದರಲ್ಲಿ ಹಿಂಬದಿ ಗೋಡೆಯಲ್ಲಿ ಎತ್ತರದಲ್ಲಿ ಆಕಾಶ ಕೂಡ ಕಾಣಿಸದ ಕಿಂಡಿ. ಸಾವರ್ಕರ್ ಕೋಣೆಯಲ್ಲಿ ಆ ಕಿಂಡಿ ಕೂಡ ಇಲ್ಲ. ಆದರೂ, ಎಲ್ಲಿಂದಲೋ ಬುಲ್‌ಬುಲ್ ಹಕ್ಕಿಗಳು ಹಾರಿ ಸೆಲ್‌ನೊಳಗೆ ಬರುತ್ತಿದ್ದವು. ಅವುಗಳ ರೆಕ್ಕೆಯ ಮೇಲೆ ಕುಳಿತು ಸಾವರ್ಕರ್ ಪ್ರತಿದಿನ ತಾಯ್ನಾಡಿನ ನೆಲವನ್ನು ಸಂಪರ್ಕಿಸಿ ಬರುತ್ತಿದ್ದರು’ ಎಂಬ ಸಾಲುಗಳು ಪಠ್ಯದಲಿವೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ವಿಜಯಪುರ ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋ ಅಂಟಿಸಿದ ಬಿಜೆಪಿಗ!
ಸಾವರ್ಕರ್ ಚಿತ್ರವಿರುವ ಫ್ಲೆಕ್ಸ್ ತೆರವು
ತುಮಕೂರು: ಗಣೇಶೋತ್ಸವದ ಅಂಗವಾಗಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಕಿದ್ದ ಸಾವರ್ಕರ್ ಚಿತ್ರವಿರುವ ಫ್ಲೆಕ್ಸ್‌ಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಹಿಂದೂ ಏಕತಾ ಗಣೇಶೋತ್ಸವದ ಅಂಗವಾಗಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಜಯನಗರ ಅನ್ನಪೂರ್ಣೇಶ್ವರ ದೇವಾಲಯದ ಬಳಿ ಗುರುವಾರ ರಾತ್ರಿ ಫ್ಲೆಕ್ಸ್ ಹಾಕಿದ್ದರು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಅನುಮತಿ ಇಲ್ಲದೆ ಫ್ಲೆಕ್ಸ್ ಅಳವಡಿಸಿದ್ದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡು ಬಳಿಕ ಫ್ಲೆಕ್ಸ್ ತೆರವುಗೊಳಿಸಿದರು. ಸಾವರ್ಕರ್ ಫ್ಲೆಕ್ಸ್ ತೆರವು ಮಾಡುವುದಾದರೆ ಅನುಮತಿಯಿಲ್ಲದ ಇತರೆ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ ಎಂದು ಆಗ್ರಹಿಸಿದರು.