40 ವರ್ಷಗಳಿಂದ ಸುಮ್ಮನೆ ಇದ್ದು ಇದೀಗ ಜಾಗಕ್ಕಾಗಿ ಕ್ಯಾತೆ. ಜಾಗ ನಮಗೆ ಸೇರಿದ್ದು ಎನ್ನುವ ವಾದ ಮಂಡಿಸುತ್ತಿರುವ ಗ್ರಾಮದ ಮೂವರು. ಸರ್ಕಾರದ ಅನುದಾನದಲ್ಲಿ ನಿರ್ಮಾಣವಾಗಿದ್ದ ಕಾಂಪೌಂಡ್ ನೆಲಸಮ. ಮೂವರ ವಿರುದ್ಧ ಎನ್ಆರ್ ಪುರ ಪೊಲೀಸ್ ಠಾಣೆಗೆ ದೂರು ನೀಡಿದ ಎಸ್ ಡಿ ಎಮ್ ಸಿ .
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಆ.26): ಮಲೆನಾಡಿನ ಕುಗ್ರಾಮದ ಸರ್ಕಾರಿ ಶಾಲೆಯ ಅದು, ಇಲ್ಲಿ ಓದಿದ ವಿದ್ಯಾರ್ಥಿಗಳು ರಾಜ್ಯವಲ್ಲ ಹೊರ ರಾಜ್ಯದಲ್ಲಿ ಕೂಡ ಪ್ರಖ್ಯಾತಿಗಳಿಸಿದ್ದಾರೆ. ಕಳೆದ 40 ವರ್ಷಗಳಿಂದಲೂ ಕೂಡ ಈ ಶಾಲೆಯಲ್ಲಿ ಎಲ್ಲಾವೂ ಸರಿಯಾಗಿತ್ತು. ಆದರೆ ಕಳೆದ ಒಂದು ವರ್ಷಗಳಿಂದ ಶಾಲೆಗೆ ಕೆಲವರು ತೊಂದರೆ ನೀಡುತ್ತಿರುವ ಪರಿಣಾಮ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಪ್ರತಿಕೂಲ ಪರಿಣಾಮ ಬೀರಲು ಆರಂಭಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ನಾಗರಮಕ್ಕಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಜಾಗ ನಮಗೆ ಸೇರಿದ್ದು ಎನ್ನವ ವಾದವನ್ನು ಮುಂದಿಟ್ಟು ವಿನಾಕಾರಣ ತೊಂದರೆ ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ಗ್ರಾಮದ ಮೂವರು ಜಾಗ ನಮಗೆ ಸೇರಿದ್ದು ಎಂದು ಶಾಲೆಯ ಕಾಂಪೌಂಡ್ ಕೆಡವಿ ತಂತಿ ಬೇಲಿಯನ್ನು ಹಾಕಿದ್ದಾರೆ. ಇದರಿಂದ ಪ್ರತನಿತ್ಯ ಶಾಲಾ ಮಕ್ಕಳು ಹರಸಾಹಸಪಟ್ಟು ಶಾಲೆಗೆ ಬರುತ್ತಿದ್ದಾರೆ. 1980ರಲ್ಲಿ ನಾಗಮಕ್ಕಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಆರಂಭವಾಯಿತು. 1983ರಲ್ಲಿ ಅಂದಿನ ಕ್ಷೇತ್ರದ ಶಾಸಕರು ಶಿಕ್ಷಣ ಸಚಿವರಾಗಿದ್ದ ಗೋವಿಂದಗೌಡರು ಶಾಲೆಯ ಹೆಚ್ಚುವರಿ ಕೊಠಡಿಗಳನ್ನು ಉದ್ಘಾಟನೆ ಮಾಡಿದ್ದಾರೆ.1ರಿಂದ 5ನೇ ತರಗತಿಯ ವರೆಗೂ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸದ್ಯ ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಗೆ ಸರ್ಕಾರವೇ ಮೂಲಭೂತಸೌಲಭ್ಯಗಳನ್ನು ನೀಡಿದೆ. ಐದು ಕೊಠಡಿ, ಆಟ ಮೈದಾನ, ರಂಗಮಂದಿರ, ಶಾಲೆಗೆ ಕಾಂಪೌಂಡ್ ಕೂಡ ಸರ್ಕಾರದ ಅನುದಾನದಲ್ಲಿ ನಿರ್ಮಾಣವಾಗಿದೆ.
ಒಂದು ಎಕರೆ 28 ಕುಂಟೆ ಶಾಲೆಯ ಪಹಣಿ ಹೊಂದಿದ್ದು ಉಳಿದ ಜಾಗ ಸರ್ಕಾರಿ ಭೂಮಿ ಎಂದು ನಮೂದಾಗಿದೆ.1983ರಲ್ಲಿ ಶಾಲೆಗೆ ಕಾಂಪೌಂಡ್ ಕಟ್ಟುವ ವೇಳೆಯಲ್ಲಿ ಗ್ರಾಮದ ಜನರು ಕೂಡ ಸಹಕಾರ ಕೊಟ್ಟಿದ್ದರು. ಯಾರು ಕೂಡ ಅಂದು ಚಕಾರವನ್ನು ಎತ್ತಿರಲಿಲ್ಲ.ಆದ್ರೆ ಕಳೆದ ಒಂದು ವರ್ಷಗಳಿಂದ ಗ್ರಾಮದಲ್ಲಿ ಇರುವ ವ್ಯಕ್ತಿಗಳು ಶಾಲೆಯ ಜಾಗ ನಮಗೆ ಸೇರಿದ್ದು ಎಂದು ಕಾಂಪೌಂಡ್ ಕೂಡ ಕೆಡುವಿಸಿ ಸುತ್ತಲೂ ತಂತಿ ಬೇಲಿಯನ್ನು ಹಾಕಿದ್ದಾರೆ.
40 ವರ್ಷಗಳಿಂದ ಸುಮ್ಮನೆ ಇದ್ದು ಇದೀಗ ಜಾಗಕ್ಕಾಗಿ ಕ್ಯಾತೆ
ಗ್ರಾಮದ ರಮೇಶ್ , ಪುಟ್ಟಸ್ವಾಮಿ, ಬಾಲಕೃಷ್ಣ ಎನ್ನುವರು ಶಾಲೆಯ ಜಾಗ ನಮಗೆ ಸೇರಿದ್ದು ಎಂದು ವಾದ ಮಂಡಿಸಿದ್ದಾರೆ. ಪ್ರತಿಯೊಬ್ಬರಿಗೆ 4 ಕುಂಟೆ ಜಾಗದ ದಾಖೆಲೆಗಳು ಇದ್ದು 1970ರಲ್ಲೇ ಇವರಿಗೆ ಸರ್ಕಾರಿದಿಂದಲೇ ಭೂಮಿ ಮುಂಜಾರಾಗಿದೆ. ಜಾಗದಲ್ಲಿ ಶಾಲೆಯ ಕಾಂಪೌಂಡ್ ಕಟ್ಟುವಾಗ ಸುಮ್ಮನಿದ್ದ ಈ ಮೂವರು ಇದೀಗ ಆಕ್ಷೇಪ , ಚಕಾರ ಎತ್ತಿರುವುದು ಸಾರ್ವಜನಿಕರ ಆಕ್ರೋಶ ಕಾರಣವಾಗಿದೆ. ಆಕ್ಷೇಪವನ್ನು ಎತ್ತಿರುವ ಮೂವರು ಮನೆಯುವರು ಶಾಲೆಗಾಗಿ ಜಾಗವನ್ನು ಬಿಟ್ಟುಕೊಟ್ಟಿದ್ದರು. 41 ವರ್ಷಗಳ ಹಿಂದೆ ಕಟ್ಟಿದ ಶಾಲೆಯ ಕಾಂಪೌಂಡ್ , ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ವರು ಇಂದಿಗೂ ಇದ್ದಾರೆ. ಅಂದು ಕಾಂಪೌಂಡ್ ಕಟ್ಟುವಾಗ ಚಕಾರ ಎತ್ತಿದೇ ಇರುವ ಈ ಮೂವರು ಇಂದು ಏಕಾಏಕಿ ಕಳೆದ ಶಾಲೆಯ ಜಾಗ ನಮಗೆ ಸೇರಿದೆ ಎಂದು ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ ಎಂದು ಶಾಲೆಯ ಎಸ್ ಡಿ ಎಮ್ ಸಿ ಸದಸ್ಯರು ಆರೋಪಿಸುತ್ತಿದ್ದಾರೆ.
ಶಾಲೆ ದಾಖಲೆಯ ಸಮಸ್ಯೆ ಇದ್ದು ಅದನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ, ಇದರ ನಡುವೆ ಏಕಾಏಕಿ ಮೂವರು ಶಾಲೆಯ ಕಾಂಪೌಂಡ್ ಕೆಡುವಿಸಿದ್ದು ಕಾನೂನು ಪ್ರಕಾರ ಅಪರಾಧವೇ ಸರಿ. ಈ ಬಗ್ಗೆ ಎಸ್ ಡಿ ಎಮ್ ಸಿ ಅಧ್ಯಕ್ಷರು ,ಸದಸ್ಯರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಒಟ್ಟಾರೆ 40 ವರ್ಷಗಳಿಂದ ಇಲ್ಲದ ಸಮಸ್ಯೆ ಈಗ ಏಕೆ ಹಾಕಿ ಉದ್ಭವಾಗಿದೆ ಎನ್ನುವ ಪ್ರಶ್ನೆ ಇಲ್ಲಿ ಮೂಡಿದೆ. ಇಡೀ ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿಗಳ ಸಮಸ್ಯೆ ಇದ್ದು ಅದರ ಸಾಲಿಗೆ ಈ ಶಾಲೆಯು ಕೂಡ ಸೇರಿಕೊಂಡಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.