ಉನ್ನತ ಶಿಕ್ಷಣ ಅಕಾಡೆಮಿಯಿಂದ ಪ್ರಾಧ್ಯಾಪಕರ ಮೌಲ್ಯಮಾಪನ

By Suvarna News  |  First Published Nov 19, 2022, 6:12 PM IST

 ಉನ್ನತ ಶಿಕ್ಷಣ ಅಕಾಡೆಮಿಯಿಂದ ಪ್ರಾಧ್ಯಾಪಕರ ಮೌಲ್ಯಮಾಪನ. ಸ್ಪೇನ್‌ ದೇಶದ ವಿವಿಗಳೊಂದಿಗೆ ಒಡಂಬಡಿಕೆಗೆ ಸಿದ್ಧವಾಗಿರುವ ಅಕಾಡೆಮಿ. 


ವರದಿ: ಬಸವರಾಜ ಹಿರೇಮಠ

ಧಾರವಾಡ (ನ.19): ಪದವಿ ಕಾಲೇಜುಗಳ ಪ್ರಾಧ್ಯಾಪಕರು ತಾವು ಪಡೆದ ತರಬೇತಿಯ ಪ್ರಯೋಜನವನ್ನು ವರ್ಗದ ಕೋಣೆಗಳಲ್ಲಿ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ವರ್ಗಾಯಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಇದೀಗ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನೂತನ ಮೌಲ್ಯಮಾಪನಕ್ಕೆ ಮುಂದಾಗಿದೆ. ವಿದ್ಯಾರ್ಥಿಗಳು ತಾವು ಶಾಲೆಯಲ್ಲಿ ಕಲಿತಿರುವುದನ್ನು ಎಷ್ಟರ ಮಟ್ಟಿಗೆ ಅರಗಿಸಿಕೊಂಡಿದ್ದಾರೆ ಎಂಬುದರ ಮೌಲ್ಯಮಾಪನದ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ, ಲಕ್ಷಾಂತರ ರುಪಾಯಿ ಸಂಬಳ ಪಡೆಯುವ ಪದವಿ ಕಾಲೇಜುಗಳ ಪ್ರಾಧ್ಯಾಪಕರು ಎಷ್ಟರ ಮಟ್ಟಿಗೆ ದಕ್ಷತೆಯಿಂದ ಪಾಠ-ಪ್ರವಚನ ಮಾಡುತ್ತಾರೆ ಎಂಬುದರ ಮೌಲ್ಯಮಾಪನ ನಡೆಯುವುದು ತೀರಾ ಕಡಿಮೆ. ಈ ಕಾರಣದಿಂದ ಧಾರವಾಡದಲ್ಲಿರುವ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ಕಳೆದ ಹಲವು ವರ್ಷಗಳಿಂದ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಪ್ರಾಧ್ಯಾಪಕರು, ಪ್ರಾಚಾರ್ಯರು, ಗ್ರಂಥಪಾಲಕರು, ದೈಹಿಕ ಶಿಕ್ಷಕರು ಮುಂತಾದವರಿಗೆ ಶೈಕ್ಷಣಿಕ ಕಲಿಕೆ ಮತ್ತು ಕಲಿಸುವಿಕೆ, ಆಡಳಿತ ಮತ್ತು ಸಂಶೋಧನೆ ಬಗ್ಗೆ ನಿರಂತರವಾಗಿ ತರಬೇತಿಯನ್ನು ನೀಡುತ್ತಿದೆ. ಈ ತರಬೇತಿ ಎಷ್ಟರ ಮಟ್ಟಿಗೆ ಪ್ರಾಧ್ಯಾಪಕರ ದೈನಂದಿನ ಪಾಠ-ಪ್ರವಚನ ಹಾಗೂ ಆಡಳಿತದಲ್ಲಿ ಜಾರಿಗೆ ಬಂದಿದೆ ಎಂಬುದರ ಮೌಲ್ಯಮಾಪನಕ್ಕೆ ಮುಂದಾಗಿದೆ.

Tap to resize

Latest Videos

ಪ್ರಾಧ್ಯಾಪಕರು ವರ್ಗದ ಕೋಣೆಗಳಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನವನ್ನು ವರ್ಗಾಯಿಸುತ್ತಿದ್ದಾರೆಯೇ? ಇಲ್ಲವಾದರೆ, ಇದಕ್ಕೆ ಕಾರಣವೇನು? ತರಬೇತಿ ಪದ್ಧತಿಯಲ್ಲಿ ಏನಾದರೂ ಬದಲಾವಣೆ ಅವಶ್ಯಕತೆ ಇದೆಯೇ? ಇದೇ ಮುಂತಾದ ಅಂಶಗಳನ್ನು ಪರಿಶೀಲಿಸಲು ಅಕಾಡೆಮಿ ಕಾರ್ಯೋನ್ಮುಖವಾಗಿದೆ.

ಸ್ಪೇನ್‌ ದೇಶದ ಎರಡು ಅಂತಾರಾಷ್ಟ್ರೀಯ ಖ್ಯಾತಿಯ ವಿಶ್ವವಿದ್ಯಾಲಯ ಹಾಗೂ ಬೆಂಗಳೂರಿನ ಸಿಎಂಆರ್‌ ವಿಶ್ವವಿದ್ಯಾಲಯದ ಜೊತೆಗೆ ಶೀಘ್ರದಲ್ಲಿ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಿರುವ ಅಕಾಡೆಮಿ, ಈ ವಿವಿಗಳು ರೂಪಿಸಿರುವ ಮೌಲ್ಯಮಾಪನ ತಂತ್ರಗಾರಿಕೆಯನ್ನು ಅಳವಡಿಸಿಕೊಂಡು ಪ್ರಾಧ್ಯಾಪಕರ ಮೌಲ್ಯಮಾಪನಕ್ಕೆ ಮುಂದಾಗಲಿದೆ. ಸ್ಪೇನ್‌ ದೇಶದ ಆಟಾನಮಸ್‌ ಯುನಿವರ್ಸಿಟಿ ಆಫ್‌ ಬಾರ್ಸಿಲೋನಾ, ಮ್ಯಾಡ್ರಿಡ್‌ ಓಪನ್‌ ಯುನಿವರ್ಸಿಟಿ ಹಾಗೂ ಬೆಂಗಳೂರಿನ ಸಿಎಂಆರ್‌ ವಿವಿ ಜೊತೆಗೆ ಒಡಂಬಡಿಕೆ ಮಾಡಲು ಸಿದ್ಧತೆಯಾಗಿದ್ದು, ಇದಕ್ಕೆ ಔಪಚಾರಿಕವಾಗಿ ಸಂಬಂಧಿಸಿದ ಪ್ರಾಧಿಕಾರದಿಂದ ಅನುಮೋದನೆಗಾಗಿ ಪ್ರಸ್ತಾವನೆ ಕಳುಹಿಸಲಾಗಿದೆ. ಅನುಮೋದನೆ ಶೀಘ್ರದಲ್ಲಿ ದೊರೆಯಲಿದ್ದು, ನಂತರ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಗುವುದು. ಭಾರತೀಯ ಸ್ಥಿತಿ-ಗತಿಗಳಿಗೆ ಹೊಂದಾಣಿಕೆ ಆಗುವಂತೆ ಅಗತ್ಯ ಬಿದ್ದರೆ, ಮೌಲ್ಯಮಾಪನ ತಂತ್ರಜ್ಞಾನದಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳಲಾಗುವುದು. ಈಗಾಗಲೇ ಅಕಾಡೆಮಿ ಮ್ಯಾಡ್ರಿಡ್‌ ವಿವಿ ಪ್ರಾಧ್ಯಾಪಕರೊಂದಿಗೆ ಮಾತುಕತೆ ನಡೆಸಿದೆ ಎಂದು ಅಕಾಡೆಮಿ ನಿರ್ದೇಶಕ ಡಾ.ಎಸ್‌.ಎಂ. ಶಿವಪ್ರಸಾದ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

 ಯುಬಿಡಿಟಿ ಬಗ್ಗೆ ವಿಟಿಯು ಅಸಡ್ಡೆ ವಿರುದ್ಧ ಎಬಿವಿಪಿ ಪ್ರತಿಭಟನೆ

ರಾಷ್ಟ್ರೀಯ ಅಭಿವೃದ್ಧಿಗಾಗಿ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟಸುಧಾರಣೆ ಮಾಡಿ ಭಾರತೀಯ ಜ್ಞಾನ ಪರಂಪರೆ, ಸಂಸ್ಕೃತಿಗೆ ಪೂರಕವಾಗುವಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವುದು. ಇದಕ್ಕಾಗಿ ಅತ್ಯಾಧುನಿಕ ರೀತಿಯ ತರಬೇತಿ ಕಾರ್ಯಕ್ರಮ ರೂಪಿಸುವುದು, ಸಂಶೋಧನೆ ಮತ್ತು ನೂತನ ಪ್ರಯೋಗಗಳನ್ನು ಕೈಗೊಂಡು ರಾಜ್ಯದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಸಾಮಾಜಿಕ ಜವಾಬ್ದಾರಿಯಿಂದ ಕಾರ್ಯ ಮಾಡುವಂತೆ ಅವುಗಳನ್ನು ಉತ್ತೇಜಿಸುವುದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ಮೂಲ ಉದ್ದೇಶ.

ಮಕ್ಕಳಿಗಿನ್ನೂ ಇಲ್ಲ ಶೂ-ಸಾಕ್ಸ್‌ ಭಾಗ್ಯ: ಬರಿಗಾಲಲ್ಲಿ ಶಾಲೆಗೆ ಬರುತ್ತಿದ್ದಾರೆ ಬಡವರ ಮಕ್ಕಳು..!

ಪ್ರಸ್ತುತ, ಇದುವರೆಗೆ ಅಕಾಡೆಮಿ ಮೂರು ಸಾವಿರ ಪ್ರಾಧ್ಯಾಪಕರಿಗೆ ತರಬೇತಿ ನೀಡಿದೆ. ಅಕಾಡೆಮಿ ಕರ್ನಾಟಕ ವಿವಿ ಸುವರ್ಣ ಮಹೋತ್ಸವ ಕಟ್ಟಡದ ಒಂದು ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಹೊಯ್ಸಳ ನಗರದಲ್ಲಿ ಅತ್ಯಾಧುನಿಕ ಸೌಕರ್ಯಗಳುಳ್ಳ ಬೃಹತ್‌ ಕ್ಯಾಂಪಸ್‌ ಸಿದ್ಧಗೊಳ್ಳುತ್ತಿದ್ದು ಶೀಘ್ರದಲ್ಲಿ ಅಲ್ಲಿಗೆ ಸ್ಥಳಾಂತರಗೊಳ್ಳಲಿದೆ ಎಂದರು.

click me!