ಕೊಡಗು ಜಿಲ್ಲೆಯಲ್ಲಿ ಬರೋಬ್ಬರಿ 46 ಶಾಲೆಗಳಲ್ಲಿ ವಿದ್ಯಾರ್ಥಿಗಳ ತೀವ್ರ ಕೊರತೆಯಿಂದಾಗಿ ಅವುಗಳು ಮುಚ್ಚುವ ಹಂತಕ್ಕೆ ತಲುಪಿವೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜು.21): ಕೊಡಗು ಜಿಲ್ಲೆ ಪ್ರವಾಸೋದ್ಯಮಕ್ಕೆ ಪ್ರಸಿದ್ಧ ಎನ್ನುವುದೇನೋ ನಿಜ. ಆದರೆ ಇಲ್ಲಿನ ಸರ್ಕಾರಿ ಶಾಲೆಗಳ ಸ್ಥಿತಿ ಮಾತ್ರ ಅಯೋಮಯ. ಸರ್ಕಾರಿ ಶಾಲೆಗಳತ್ತ ಸೆಳೆಯಬೇಕೆಂಬ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಆದರೂ ಜಿಲ್ಲೆಯಲ್ಲಿ ಬರೋಬ್ಬರಿ 46 ಶಾಲೆಗಳಲ್ಲಿ ವಿದ್ಯಾರ್ಥಿಗಳ ತೀವ್ರ ಕೊರತೆಯಿಂದಾಗಿ ಅವುಗಳು ಮುಚ್ಚುವ ಹಂತಕ್ಕೆ ತಲುಪಿವೆ.
undefined
ಜಿಲ್ಲೆಯಲ್ಲಿ 381 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಅವುಗಳ ಪೈಕಿ ಈ ಬಾರಿ 46 ಶಾಲೆಗಳಲ್ಲಿ ಒಂದನೆ ತರಗತಿಗೆ ಒಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ. ಮಡಿಕೇರಿ ತಾಲ್ಲೂಕಿನಲ್ಲಿ 11, ಸೋಮವಾರಪೇಟೆ ತಾಲ್ಲೂಕಿನ 25 ಹಾಗೂ ವಿರಾಜಪೇಟೆ ತಾಲ್ಲೂಕಿನ 10 ಶಾಲೆಗಳಲ್ಲಿ ಒಂದನೇ ತರಗತಿಗೆ ಒಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ. ಮಡಿಕೇರಿ ತಾಲ್ಲೂಕಿನ ನೀರುಕೊಲ್ಲಿ, ಅಜ್ಜಿಮುಟ್ಟ, ನೆಲಜಿ ಅಂಬಲ, ತಣ್ಣಿಮಾನಿ, ಹೆರವನಾಡು, ಬಿಳಿಗೇರಿ ಸೇರಿದಂತೆ 11 ಶಾಲೆಗಳ ಒಂದನೇ ತರಗತಿಗೆ ಒಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ.
ಕೋಲಾರದ ಸರ್ಕಾರಿ ಪಿಯೂ ಕಾಲೇಜುಗಳಲ್ಲಿ ಸೌರಶಕ್ತಿ ವಿದ್ಯುತ್ ಸಂಪರ್ಕ
ನೀರುಕೊಲ್ಲಿ ಶಾಲೆಯಲ್ಲಿ ಏಳನೇ ತರಗತಿವರೆಗೆ ಕೇವಲ 6 ವಿದ್ಯಾರ್ಥಿಗಳಿದ್ದು, 1,5 ಮತ್ತು 6 ನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿಯೂ ಇಲ್ಲ. ಈ ಶೈಕ್ಷಣಿಕ ವರ್ಷದಲ್ಲಿ 7 ನೇ ತರಗತಿಯಲ್ಲಿ ಇಬ್ಬರು ವಿದ್ಯಾರ್ಥಿಗಳಿದ್ದು ಈ ವಿದ್ಯಾರ್ಥಿಗಳು ಪಾಸಾಗಿ 8 ನೇತರಗತಿಗೆ ಹೋದಲ್ಲಿ ಇಡೀ ಶಾಲೆಗೆ 4 ವಿದ್ಯಾರ್ಥಿಗಳಷ್ಟೇ ಉಳಿಯುತ್ತಾರೆ.
ಬಿಳಿಗೇರಿ ಶಾಲೆಯ ಸ್ಥಿತಿಯೂ ಇದೇ. ಹಿರಿಯ ಪ್ರಾಥಮಿಕ ಶಾಲೆಯಾಗಿರುವ ಇಲ್ಲಿಯೂ 11 ವಿದ್ಯಾರ್ಥಿಗಳಷ್ಟೇ ಇದ್ದಾರೆ. ವಿರಾಜಪೇಟೆ ತಾಲ್ಲೂಕಿನ ಇಂಜಿಲಗೇರಿ, ಹೊಸಕೋಟೆ,ಹುಂಡಿ, ಮೂರ್ಕಲ್ಲು ಸೇರಿದಂತೆ 10 ಶಾಲೆಗಳ ಸ್ಥಿತಿ ಹೀಗೆಯೇ ಇದೆ. ಅತೀ ಹೆಚ್ಚು ಎಂದರೆ ಸೋಮವಾರಪೇಟೆ ತಾಲ್ಲೂಕಿನಲ್ಲಿ ಶಾಂತಳ್ಳಿ, ಬೆಟ್ಟದಳ್ಳಿ, ಹರಗ ತಲ್ತರೆ ಶೆಟ್ಟಳ್ಳಿ ಸೇರಿದಂತೆ 25 ಶಾಲೆಗಳಲ್ಲಿ ಈ ಶೈಕ್ಷಣಿಕ ಸಾಲಿನಲ್ಲಿ ಒಂದನೇ ತರಗತಿಗೆ ಒಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ. ಜೊತೆಗೆ ಈ ಶಾಲೆಗಳಲ್ಲಿ ಬಹುತೇಕ 10 ರಿಂದ 15 ವಿದ್ಯಾರ್ಥಿಗಳಷ್ಟೇ ಇದ್ದು ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ.
ಶಾಲೆಗಳು ಈ ಸ್ಥಿತಿ ತಲುಪುವುದಕ್ಕೆ ಕಾರಣವೇನು ಎಂದು ಕೊಡಗು ಡಿಡಿಪಿಐ ರಂಗಧಾಮಯ್ಯ ಅವರನ್ನು ಕೇಳಿದರೆ 26 ಶಾಲೆಗಳಿಗೆ ಒಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ ಎನ್ನುವ ಮಾಹಿತಿ ಇದೆ. ಆದರೆ ಜುಲೈ ಅಂತ್ಯದವರೆಗೆ ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶವಿದೆ ಎನ್ನುತ್ತಿದ್ದಾರೆ. ಅಷ್ಟಕ್ಕೂ ಇತ್ತೀಚೆಗೆ ಜನನ ಪ್ರಮಾಣ ಕಡಿಮೆ ಇರುವುದರಿಂದ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎನ್ನುತ್ತಿದ್ದಾರೆ. ಜೊತೆಗೆ ಹೊರ ಜಿಲ್ಲೆಯಿಂದ ವಲಸೆ ಬರುವ ವಿದ್ಯಾರ್ಥಿಗಳ ಪೋಷಕರು ಮತ್ತೆ ಇಲ್ಲಿಂದಲೂ ವಲಸೆ ಹೋಗುವುದರಿಂದ ದಾಖಲಾತಿ ಕಡಿಮೆ ಆಗುತ್ತಿದೆ ಎನ್ನುತ್ತಾರೆ.
ನೀಟ್ ತೇರ್ಗಡೆಯಾಗಿ ವೃತ್ತಿಪರ ಕೋರ್ಸುಗಳ ಪ್ರವೇಶಾತಿ ಬಯಸಿರುವವರ ದಾಖಲೆ
ಆದರೆ ಖಾಸಗಿ ಶಾಲೆಗಳತ್ತ ಬಹುತೇಕ ವಿದ್ಯಾರ್ಥಿಗಳು ಮುಖ ಮಾಡಿದ್ದಾರೆ ಎನ್ನುವುದನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಕೋವಿಡ್ ಸಂದರ್ಭದಲ್ಲಿ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಖಾಸಗಿ ಶಾಲೆಗಳನ್ನು ಬಿಟ್ಟು ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದರು. ಆದರೆ ಕೋವಿಡ್ ಮುಗಿಯುತ್ತಿದ್ದಂತೆ ಮತ್ತೆ ಖಾಸಗಿ ಶಾಲೆಗಳತ್ತಲೇ ಹೋಗುತ್ತಿದ್ದಾರೆ. ಈ ಕುರಿತು ಶಿಕ್ಷಕರನ್ನು ಕೇಳಿದರೆ, ಅಂಗನವಾಡಿಗಳಲ್ಲೇ 5 ವರ್ಷ ತುಂಬಿದ ವಿದ್ಯಾರ್ಥಿಗಳು ಸಿಗುತ್ತಿಲ್ಲ. ಬಹುತೇಕ ಜನರು 4 ವರ್ಷ ಇರುವಾಗಲೇ ಖಾಸಗಿ ಕಾನ್ವೆಂಟ್ಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ.
ಹೀಗಾಗಿ ನಾವು ಎಷ್ಟೇ ಪ್ರಯತ್ನಿಸಿದರು ನಮ್ಮ ಶಾಲೆಗಳಿಗೆ ವಿದ್ಯಾರ್ಥಿಗಳು ದಾಖಲಾಗುತ್ತಿಲ್ಲ ಎನ್ನುತ್ತಿದ್ದಾರೆ ಮಡಿಕೇರಿ ತಾಲ್ಲೂಕಿನ ನೀರುಕೊಲ್ಲಿ ಶಾಲೆಯ ಮುಖ್ಯ ಶಿಕ್ಷಕಿ. ಒಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ಕೊಡಗಿನ ಶಿಕ್ಷಣ ಇಲಾಖೆ ಸೋಲುತ್ತಿದೆ ಎನ್ನುವುದನ್ನು, ಒಬ್ಬ ವಿದ್ಯಾರ್ಥಿಯೂ ಒಂದನೇ ತರಗತಿಗೆ ದಾಖಲಾಗದಿರುವ 46 ಶಾಲೆಗಳು ಸಾರಿ ಹೇಳುತ್ತಿವೆ.