ನಿಗಮ ಮಂಡಳಿ ನೇಮಕಾತಿ 2ನೇ ಪರೀಕ್ಷೆಗೆ ವಸ್ತ್ರ ಸಂಹಿತೆ ಬಿಡುಗಡೆ, ಹಿಜಾಬ್‌ ಧರಿಸಬಹುದೇ?

By Kannadaprabha NewsFirst Published Nov 12, 2023, 12:28 PM IST
Highlights

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ನಿಗಮ ಮಂಡಳಿ ನೇಮಕಾತಿಗೆ ನ.18 ಮತ್ತು 19ರಂದು ನಡೆಯುವ 2ನೇ ಹಂತದ ಸ್ಪರ್ಧಾತ್ಮಕ ಪರೀಕ್ಷೆಗೆ ವಸ್ತ್ರ ಸಂಹಿತೆ ಬಿಡುಗಡೆ ಮಾಡಿದೆ.

 ಬೆಂಗಳೂರು (ನ.12): ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ನಿಗಮ ಮಂಡಳಿ ನೇಮಕಾತಿಗೆ ನ.18 ಮತ್ತು 19ರಂದು ನಡೆಯುವ 2ನೇ ಹಂತದ ಸ್ಪರ್ಧಾತ್ಮಕ ಪರೀಕ್ಷೆಗೆ ವಸ್ತ್ರ ಸಂಹಿತೆ ಬಿಡುಗಡೆ ಮಾಡಿದ್ದು, ಹಿಜಾಬ್‌ ಧರಿಸಿ ಬರುವರು ಒಂದು ಗಂಟೆ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಬರಬೇಕೆಂಬ ಅಂಶ ಕೈಬಿಡಲಾಗಿದೆ.

ಅಧಿಕಾರಿಗಳು ಹೇಳುವ ಪ್ರಕಾರ, ಹಿಂದಿನಂತೆ ಪರೀಕ್ಷೆಗೆ ಹಿಜಾಬ್‌ ಧರಿಸಿ ಬರಲು ಅವಕಾಶವಿದೆ. ಆದರೆ, ಒಂದು ಗಂಟೆ ಮೊದಲೇ ಬರುವ ಅಗತ್ಯವಿಲ್ಲ. ತಪಾಸಣೆಗೆ ಒಂದು ಗಂಟೆ ಬೇಕಿಲ್ಲ. ಹಾಗಾಗಿ ಇತರೆ ವಿದ್ಯಾರ್ಥಿಗಳಂತೆ ನಿಗದಿತ ಸಮಯಕ್ಕೆ ಬಂದು ತಪಾಸಣೆಗೆ ಒಳಗಾದರೆ ಸಾಕು ಎಂದು ಹೇಳಲಾಗಿದೆ.

ಹಿಜಾಬ್ ಅವಕಾಶ ನೀಡುವ ಸರ್ಕಾರ, ಕಾಲುಂಗುರ, ತಾಳಿ ತೆಗೆಸಿದ್ಯಾಕೆ?: ಹೇಮಲತಾ ನಾಯಕ

ಮೊದಲ ಹಂತದ ಪರೀಕ್ಷೆ ವೇಳೆ ಹಿಜಾಬ್‌ ಧರಿಸಿ ಬರುವುದಾದರೆ ಅಂತಹ ಅಭ್ಯರ್ಥಿಗಳು ತಪಾಸಣೆ ದೃಷ್ಟಿಯಿಂದ ಒಂದು ಗಂಟೆ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಬರಬೇಕು ಎಂದು ಸೂಚಿಸಿತ್ತು. ಇದು ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಈಗ ಕೈಬಿಟ್ಟಿದೆ. ಉಳಿದಂತೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ತುಂಬುದೋಳಿನ ವಸ್ತ್ರ ತೊಡುವಂತಿಲ್ಲ, ಯಾವುದೇ ಆಭರಣ, ಎಲೆಕ್ಟ್ರಾನಿಕ್‌ ಉಪಕರಣಗಳನ್ನು ತರುವಂತಿಲ್ಲ ಎಂಬುದು ಸೇರಿದಂತೆ ಇತರೆ ಎಲ್ಲಾ ಅಂಶಗಳನ್ನು ಮಾರ್ಗಸೂಚಿಯಲ್ಲಿ ಕೆಇಎ ಪ್ರಕಟಿಸಿದೆ.

 ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ; ಸಿಡಿದೆದ್ದ ಹಿಂದೂಪರ ಸಂಘಟನೆಗಳಿಂದ ಇಂದು ಪ್ರತಿಭಟನೆ 

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮಹಿಳಾ ಅಭ್ಯರ್ಥಿಗಳಿಂದ ಮಾಂಗಲ್ಯ ತೆಗೆಸಿದ ಪ್ರಕರಣ
ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗವು ಇತ್ತೀಚೆಗೆ ನಡೆಸಿದ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ವಿವಾಹಿತ ಮಹಿಳೆಯರ ತಾಳಿ, ಕಾಲುಂಗುರ, ಕಿವಿಯೋಲೆ ತೆಗೆಸಿದ್ದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಶಶಿಕಲಾ ಟೆಂಗಳಿ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷಾ ಅಭ್ಯರ್ಥಿಗಳಿಗೆ ಯಾವುದೇ ರೀತಿಯಲ್ಲಿ ಮುನ್ಸೂಚನೆ ನೀಡದೇ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಹಿಂದೂ ಮಹಿಳೆಯರ ತಾಳಿ, ಕಾಲುಂಗುರ ಹಾಗೂ ಕಿವಿಯೋಲೆಗಳನ್ನು ದ್ವಾರದ ಮುಂದೆಯೇ ತೆಗೆಯುವ ಮೂಲಕ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಹಿಂದೂ ಧರ್ಮದಲ್ಲಿ ತಾಳಿ, ಕಾಲುಂಗುರ, ಕಿವಿಯೋಲೆಗಳಿಗೆ ಅದರದ್ದೇ ಆದ ಪಾವಿತ್ರ್ಯತೆ ಹೊಂದಿದೆ. ಅಂತಹ ಪಾವಿತ್ರ್ಯತೆ ಸಂಕೇತಗಳನ್ನು ತೆಗೆಸಿ ಪತಿ ಸತ್ತ ವಿಧವೆಯ ರೀತಿಯಲ್ಲಿ ಪರೀಕ್ಷಾ ಕೇಂದ್ರದೊಳಗೆ ಕಳಿಸಲು ಯತ್ನಿಸಿದ್ದು ಖಂಡನಾರ್ಹ ಎಂದು ಆಕ್ಷೇಪಿಸಿದರು.

ಪರೀಕ್ಷಾ ಅಭ್ಯರ್ಥಿಗಳಿಗೆ ತಾಳಿ, ಕಿವಿಯೋಲೆ, ಕಾಲುಂಗುರಗಳನ್ನು ತೆಗೆಯುವಂತೆ ಆದೇಶ ಕೊಟ್ಟವರಾರು?, ಆ ಕುರಿತು ಸೂಚನೆ ನೀಡಿದವರು ಯಾರು? ಎಂದು ಪ್ರಶ್ನಿಸಿದ ಅವರು, ಕೂಡಲೇ ರಾಜ್ಯ ಸರ್ಕಾರವು ಈ ಕುರಿತು ಉತ್ತರಿಸಬೇಕು ಹಾಗೂ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದಕ್ಕೆ ಅವಕಾಶ ಮಾಡಿಕೊಟ್ಟ ಸಿಬ್ಬಂದಿಗಳು ಹಾಗೂ ಮೇಲಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪರೀಕ್ಷಾ ಕೇಂದ್ರದಲ್ಲಿ ಇನ್ನೊಂದು ಕಡೆ ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸಿಕೊಂಡು ಹೋಗುವುದಕ್ಕೆ ಅವಕಾಶ ಕೊಡಲಾಗಿದೆ. ಪರೀಕ್ಷಾ ಕೇಂದ್ರದೊಳಗೆ ಅವರು ಹಿಜಾಬ್ ಧರಿಸಿಯೇ ಉತ್ತರಗಳನ್ನು ಬರೆಯಲು ಸಾಧ್ಯವಿಲ್ಲ. ಅಲ್ಲಿಯಾದರೂ ಹಿಜಾಬ್ ತೆಗೆಯಲೇಬೇಕು. ಆದಾಗ್ಯೂ, ಒಂದು ಸಮುದಾಯದ ಓಲೈಕೆಗಾಗಿ ಮುಸ್ಲಿಂ ಮಹಿಳೆಯರಿಗೆ ಅನುಮತಿ ಕೊಟ್ಟು, ಹಿಂದೂ ಮಹಿಳೆಯರಿಗೆ ಅವರ ಮುತೈದೆತನದ ಆಭರಣಗಳನ್ನು ತೆಗೆಸುವ ಮೂಲಕ ಮಹಿಳಾ ಸಮುದಾಯವನ್ನು ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಆಕ್ರೋಶ ಹೊರಹಾಕಿದರು.

click me!