ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ನವೆಂಬರ್‌ 23 ಕೊನೆಯ ದಿನ

By Kannadaprabha NewsFirst Published Nov 12, 2023, 9:13 AM IST
Highlights

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಮುಂದಿನ ಜನವರಿ 21ರಂದು ಸಿಟಿಇಟಿ ಪರೀಕ್ಷೆ ನಡೆಸಲಿದೆ. ಪರೀಕ್ಷೆಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಗೆ ನವೆಂಬರ್‌ 23 ಕೊನೆಯ ದಿನಾಂಕ ಆಗಿರುತ್ತದೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ 21-01-2024 ರಂದು ಭಾನುವಾರ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ (ಸಿಟಿಇಟಿ) 18 ನೇ ಆವೃತ್ತಿಯನ್ನು ನಡೆಸುತ್ತಿದ್ದು. ದೇಶದಾದ್ಯಂತ 135 ನಗರಗಳಲ್ಲಿ ಇಪ್ಪತ್ತು ಭಾಷೆಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಅರ್ಹ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಏನಿದು ಸಿಟಿಇಟಿ ಪರೀಕ್ಷೆ?

ಆರ್‌ಟಿಇ ಕಾಯಿದೆಯ ಸೆಕ್ಷನ್ 23 ರ ಉಪ-ವಿಭಾಗ (1) ರ ನಿಬಂಧನೆಗಳಿಗೆ ಅನುಸಾರವಾಗಿ, ಶಿಕ್ಷಕರ ಶಿಕ್ಷಣಕ್ಕಾಗಿ ರಾಷ್ಟ್ರೀಯ ಕೌನ್ಸಿಲ್ (ಎನ್‌ಸಿಟಿಇ) 2010 ರ ಅಧಿಸೂಚನೆಯ ಪ್ರಕಾರ ಒಬ್ಬ ವ್ಯಕ್ತಿ 1ರಿಂದ 8ನೇ ತರಗತಿಗೆ ಶಿಕ್ಷಕರ ನೇಮಕಾತಿಗೆ ಅರ್ಹರಾಗಲು ಕನಿಷ್ಠ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. ಆರ್‌ಟಿಇ ಕಾಯಿದೆಯ ಸೆಕ್ಷನ್ 2 ರ (ಎನ್) ಕಲಂನಲ್ಲಿ ಉಲ್ಲೇಖಿಸಲಾದ ಯಾವುದೇ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಾತಿಗೆ ಅರ್ಹರಾಗಲು ಒಬ್ಬ ವ್ಯಕ್ತಿಗೆ ಅಗತ್ಯವಾದ ಅರ್ಹತೆಗಳಲ್ಲಿ ಒಂದೆಂದರೆ ಅವನು/ಅವಳು ಶಿಕ್ಷಕರ ಅರ್ಹತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಎನ್‌ಸಿಟಿಇ ರೂಪಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸರ್ಕಾರವು (ಟಿಇಟಿ) ಪರೀಕ್ಷೆಯನ್ನು ನಡೆಸುತ್ತದೆ.

ನ.26ರಂದು ನಡೆಯಬೇಕಿದ್ದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ಮುಂದೂಡಿಕೆ

ಉದ್ದೇಶಗಳೇನು?

ಒಬ್ಬ ವ್ಯಕ್ತಿಗೆ ಶಿಕ್ಷಕರ ನೇಮಕಾತಿಗೆ ಅರ್ಹತೆ ಹೊಂದಲು ಟಿಇಟಿ ಅನ್ನು ಕನಿಷ್ಠ ವಿದ್ಯಾರ್ಹತೆಯಾಗಿ ಸೇರಿಸುವ ಉದ್ದೇಶಗಳು ಈ ಕೆಳಗಿನಂತಿದೆ.

1. ಇದು ನೇಮಕಾತಿ ಪ್ರಕ್ರಿಯೆಯಲ್ಲಿ ರಾಷ್ಟ್ರೀಯ ಮಾನದಂಡಗಳು ಮತ್ತು ಶಿಕ್ಷಕರ ಗುಣಮಟ್ಟದ ಮಾನದಂಡವನ್ನು ತರುತ್ತದೆ.

2. ಇದು ಶಿಕ್ಷಕರ ಶಿಕ್ಷಣ ಸಂಸ್ಥೆಗಳು ಮತ್ತು ಈ ಸಂಸ್ಥೆಗಳ ವಿದ್ಯಾರ್ಥಿಗಳನ್ನುತಮ್ಮ ಕಾರ್ಯಕ್ಷಮತೆಯ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸಲು ಪ್ರೇರೇಪಿಸುತ್ತದೆ.

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಮತ್ತು ಶುಲ್ಕ ಪಾವತಿ: 03-11-2023

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಗೆ ಕೊನೆಯ ದಿನಾಂಕ: 23-11-2023

ಬ್ಯಾಂಕ್‌ನಿಂದ ಶುಲ್ಕ ಪಾವತಿಯ ಅಂತಿಮ ಪರಿಶೀಲನೆ: 28-11-2023

ಅಭ್ಯರ್ಥಿಯು ಆನ್‌ಲೈನ್ ಅಪ್‌ಲೋಡ್ ಮಾಡಿದ ವಿವರಗಳಲ್ಲಿ ಯಾವುದಾದರೂ ತಿದ್ದುಪಡಿಗಳು ಇದ್ದರೆ 28-11-2023 ರಿಂದ 02-12-2023ರೊಳಗೆ ಮಾಡಬೇಕು.

ಪರೀಕ್ಷೆಯ ದಿನಾಂಕ: 21-01-2024

ಪ್ರವೇಶ ಕಾರ್ಡ್ ಡೌನ್‌ಲೋಡ್ ಮಾಡಲು ದಿನಾಂಕ: 19-01-2024

ಫಲಿತಾಂಶದ ಘೋಷಣೆಯ ದಿನಾಂಕ: ಫೆಬ್ರವರಿ 2024 ರ ಅಂತ್ಯದ ವೇಳೆಗೆ (ತಾತ್ಕಾಲಿಕವಾಗಿ)

ಹಿರಿಯ ಪ್ರಾಥಮಿಕ ಶಾಲೆಗಳಿಗೆ ಆಯ್ಕೆಯಾಗಿರುವ ಸಾವಿರಾರು ಶಿಕ್ಷಕರಿಗೀಗ ಸಿಂಧುತ್ವ ಪ್ರಮಾಣ ಪತ್ರದ ಸಂಕಟ

ಅರ್ಜಿ ಶುಲ್ಕ ಎಷ್ಟು?

1. ಸಾಮಾನ್ಯ/ ಓಬಿಸಿ(ಎನ್‌ ಸಿ ಎಲ್)‌ ಅಭ್ಯರ್ಥಿಗಳಿಗೆ (ಕೇವಲ ಪೇಪರ್ 1 ಅಥವಾ 2): ರೂ. 1000

2. ಸಾಮಾನ್ಯ/ ಓಬಿಸಿ(ಎನ್‌ ಸಿ ಎಲ್)‌ ಅಭ್ಯರ್ಥಿಗಳಿಗೆ (ಪೇಪರ್ 1 ಮತ್ತು 2 ಎರಡು): ರೂ. 1200

3. ಎಸ್‌ ಸಿ/ ಎಸ್‌ ಟಿ/ವಿಕಲಚೇತನ ‌ ಅಭ್ಯರ್ಥಿಗಳಿಗೆ (ಕೇವಲ ಪೇಪರ್ 1 ಅಥವಾ 2 ): ರೂ. 500

4. ಎಸ್‌ ಸಿ/ ಎಸ್‌ ಟಿ/ವಿಕಲಚೇತನ ‌ ಅಭ್ಯರ್ಥಿಗಳಿಗೆ (ಪತ್ರಿಕೆ 1 ಮತ್ತು 2 ಎರಡೂ): ರೂ. 600

ಪರೀಕ್ಷೆಯ ವೇಳಾಪಟ್ಟಿ

1. ಈ ಅರ್ಹತಾ ಪರೀಕ್ಷೆಯು ಪೇಪರ್ 1 (1 ರಿಂದ 5 ತರಗತಿಗಳಿಗೆ) ಮಕ್ಕಳ ಅಭಿವೃದ್ಧಿ ಮತ್ತು ಶಿಕ್ಷಣಶಾಸ್ತ್ರ, ಭಾಷೆ -1 , ಭಾಷೆ -2 , ಗಣಿತಶಾಸ್ತ್ರ ಪರಿಸರ ವಿಜ್ಞಾನದ ವಿಷಯಕ್ಕೆ ಸಂಬಂಧಿಸಿದಂತೆ 150 ಪ್ರಶ್ನೆಗಳಿದ್ದು 150 ಅಂಕಗಳಿಗೆ ಎರಡೂವರೆ ಗಂಟೆಗಳ ಅವಧಿಯಲ್ಲಿ ನಡೆಸಲಾಗುತ್ತದೆ.

2. ಪೇಪರ್ 2 (6 ರಿಂದ 8 ತರಗತಿಗಳಿಗೆ) ) ಮಕ್ಕಳ ಅಭಿವೃದ್ಧಿ ಮತ್ತು ಶಿಕ್ಷಣಶಾಸ್ತ್ರ ಭಾಷೆ-1, ಭಾಷೆ -2 , ಗಣಿತ ಮತ್ತು ವಿಜ್ಞಾನ, ಸಮಾಜ ಅಧ್ಯಯನ/ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ 150 ಪ್ರಶ್ನೆಗಳಿದ್ದು 150 ಅಂಕಗಳಿಗೆ ಎರಡೂವರೆ ಗಂಟೆಗಳ ಅವಧಿಯಲ್ಲಿ ನಡೆಸಲಾಗುತ್ತದೆ.

ಪರೀಕ್ಷೆಯ ಸಮಯ

ಪೇಪರ್ 2- ಬೆಳಗ್ಗೆ 09:30 ರಿಂದ ಮಧ್ಯಾಹ್ನ 12:00 ರ ಅವಧಿಗೆ ನಡೆಯಲಿದೆ.

ಪೇಪರ್‌ 1 : ಮಧ್ಯಾಹ್ನ 2:00 ರಿಂದ ಮಧ್ಯಾಹ್ನ 04:30 ರ ಅವಧಿಗೆ ನಡೆಯಲಿದೆ.

ಅರ್ಹತಾ ಅಂಕಗಳು ಎಷ್ಟಿರಬೇಕು?

ಈ ಪರೀಕ್ಷೆಯಲ್ಲಿ ಶೇಕಡಾ 60 ಅಂಕ ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳನ್ನು ಮಾತ್ರ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ (ಸಿಟಿಇಟಿ)ಯಲ್ಲಿ ಅರ್ಹರು ಎಂದು ಪರಿಗಣಿಸಲಾಗುತ್ತದೆ.

ಪರೀಕ್ಷಾ ಕೇಂದ್ರ

ಭಾರತದಾದ್ಯಂತ ವಿವಿಧ ರಾಜ್ಯಗಳ ಆಯ್ದ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು ಕರ್ನಾಟಕದಲ್ಲಿ ಬೆಂಗಳೂರು, ಹುಬ್ಬಳ್ಳಿ ಕೇಂದ್ರಗಳಲ್ಲಿ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ವೆಬ್‌ಸೈಟ್‌ ವೀಕ್ಷಿಸಬಹುದು.

click me!