ಎಂಜಿನಿಯರಿಂಗ್ ಕೋರ್ಸುಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನ ಸಿಇಟಿ ಪರಿಷ್ಕೃತ ರ್ಯಾಂಕಿಂಗ್ ಪಟ್ಟಿ ಪ್ರಕಟಣೆ ಇನ್ನೂ ಎರಡು ದಿನ ತಡವಾಗಲಿದೆ. ಸೆ.29ರ ಗುರುವಾರ ಪ್ರಕಟಿಸಬೇಕಿದ್ದ ಪಟ್ಟಿಯನ್ನು ಅಕ್ಟೋಬರ್ 1ರಂದು ಪ್ರಕಟಿಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಬೆಂಗಳೂರು (ಸೆ.29): ಎಂಜಿನಿಯರಿಂಗ್ ಕೋರ್ಸುಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನ ಸಿಇಟಿ ಪರಿಷ್ಕೃತ ರ್ಯಾಂಕಿಂಗ್ ಪಟ್ಟಿ ಪ್ರಕಟಣೆ ಇನ್ನೂ ಎರಡು ದಿನ ತಡವಾಗಲಿದೆ. ಸೆ.29ರ ಗುರುವಾರ ಪ್ರಕಟಿಸಬೇಕಿದ್ದ ಪಟ್ಟಿಯನ್ನು ಅಕ್ಟೋಬರ್ 1ರಂದು ಪ್ರಕಟಿಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಈಗಾಗಲೇ ಪರಿಷ್ಕೃತ ರ್ಯಾಂಕಿಂಗ್‌ನಿಂದ ತಮ್ಮ ರ್ಯಾಂಕಿಂಗ್‌ನಲ್ಲಿ ಏರುಪೇರಾಗುವ ಹಾಗೂ ಸೀಟು ಕೈತಪ್ಪುವ ಆತಂಕಕ್ಕೀಡಾಗಿರುವ ಸಾವಿರಾರು ವಿದ್ಯಾರ್ಥಿಗಳಲ್ಲಿ ಪಟ್ಟಿ ಪ್ರಕಟಣೆ ಮುಂದೂಡಿಕೆ ಮತ್ತಷ್ಟು ಆತಂಕ ಹೆಚ್ಚಿಸಿದೆ. ಈ ಮಧ್ಯೆ, ಪರಿಷ್ಕೃತ ರ್ಯಾಂಕ್ ಪಟ್ಟಿಪ್ರಕಟಿಸಿದ ಬೆನ್ನಲ್ಲೇ ಅ.3ರಿಂದ ಕೌನ್ಸೆಲಿಂಗ್ ಕೂಡ ಆರಂಭವಾಗಲಿದೆ. ಈ ಬಗ್ಗೆ ಪಟ್ಟಿ ಪ್ರಕಟವಾದ ಬಳಿಕ ಅಧಿಕೃತ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
CET: ಪೂರ್ಣ ಇಲ್ಲ, ಶೇ.60ರಷ್ಟು ಮಾತ್ರ ಪರಿಹಾರ: ತಜ್ಞರು
ಈ ಮಧ್ಯೆ, ಬಿಎಸ್ಸಿ ಕೃಷಿ ಮತ್ತು ಪಶು ವೈದ್ಯಕೀಯ ಸೀಟುಗಳಿಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ತಜ್ಞರ ಸಮಿತಿ ವರದಿಯಲ್ಲಿ ಯಾವುದೇ ಉಲ್ಲೇಖವಿಲ್ಲ ಎಂಬುದು ಕುತೂಹಲಕಾರಿಯಾಗಿದೆ. ಅವರಿಗೂ ಕೆಇಎ ರ್ಯಾಂಕ್ ನೀಡುವಾಗ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸಿರಲಿಲ್ಲ ಎಂಬುದು ಗಮನಾರ್ಹ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಆ ಮಕ್ಕಳಿಗೆ ಸಮಸ್ಯೆಯಾಗುವುದಿಲ್ಲ. ಅವರ ಸಂಖ್ಯೆ ಕಡಿಮೆ ಇರುವುದರಿಂದ ಎಲ್ಲರಿಗೂ ಸೀಟು ಲಭ್ಯವಾಗುತ್ತವೆ ಎನ್ನುತ್ತಾರೆ.
ಈ ಬಾರಿ ಪುನರಾವರ್ತಿತ ಅಭ್ಯರ್ಥಿಗಳಾಗಿ ಸಿಇಟಿ ಬರೆದಿದ್ದ 2021ನೇ ಸಾಲಿನ ಕೋವಿಡ್ ಬ್ಯಾಚ್‌ನಲ್ಲಿ ಪರೀಕ್ಷೆ ಇಲ್ಲದೆ ದ್ವಿತೀಯ ಪಿಯುಸಿ ಪಾಸಾಗಿದ್ದ ಸುಮಾರು 24 ಸಾವಿರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಅಂಕಗಳನ್ನು ಸಿಇಟಿ ರ್ಯಾಂಕಿಂಗ್‌ಗೆ ಸರ್ಕಾರ ಪರಿಗಣಿಸಿರಲಿಲ್ಲ. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದಾಗ ಆ ಮಕ್ಕಳಿಗೂ ಪಿಯು ಫಲಿತಾಂಶ ಪರಿಗಣಿಸಿ ರ್ಯಾಂಕಿಂಗ್ ನೀಡಲು ನ್ಯಾಯಾಲಯ ಆದೇಶಿಸಿತ್ತು. ಆದರೆ, ಸರ್ಕಾರ ಪುನರಾವರ್ತಿತರು, ಹೊಸಬರು ಯಾರಿಗೂ ಅನ್ಯಾಯವಾಗದಂತೆ ಸಮನ್ವಯ ಸೂತ್ರ ರಚಿಸಿ ಇದಕ್ಕೆ ಹೈಕೋರ್ಟ್‌ನ ಒಪ್ಪಿಗೆಯನ್ನೂ ಪಡೆದಿದೆ.
ಪುನರಾವರ್ತಿತ ವಿದ್ಯಾರ್ಥಿಗಳ ಪಿಯು ಪರೀಕ್ಷೆಯ ಮೂರು ವಿಷಯಗಳಲ್ಲಿ ಶೇ.6ರಷ್ಟುಅಂಕ ಕಡಿತಗೊಳಿಸುವ ಸಮನ್ವಯ ಸೂತ್ರವನ್ನು ಪಾಲಿಸಿ ಸೆ.29ರಂದು ಪರಿಷ್ಕೃತ ರ್ಯಾಂಕಿಂಗ್ ಪಟ್ಟಿ ಪ್ರಕಟಿಸುವುದಾಗಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹೇಳಿಕೆ ನೀಡಿದ್ದರು. ಆದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅ.1ರಂದು ಪಟ್ಟಿಪ್ರಕಟಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಸಿಇಟಿ ಕೌನ್ಸೆಲಿಂಗ್‌ಗೂ ಮೊದಲೇ ತರಗತಿಗೆ ತೀವ್ರ ವಿರೋಧ: ಸಿಇಟಿ ಕೌನ್ಸೆಲಿಂಗ್ ಮುಗಿಯುವವರೆಗೂ ಎಂಜಿನಿಯರಿಂಗ್ ಸೇರಿದಂತೆ ಯಾವುದೇ ವೃತ್ತಿಪರ ಕೋರ್ಸುಗಳ ತರಗತಿ ಚಟುವಟಿಕೆಗಳನ್ನು ಆರಂಭಿಸದಂತೆ ರಾಜ್ಯದ 22 ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಎಲ್ಲಾ ಖಾಸಗಿ ಕಾಲೇಜುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಭಾರತೀಯ ವಿದ್ಯಾರ್ಥಿ ದಳ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಸಿಇಟಿ ರ‍್ಯಾಂಕ್ ಸೂತ್ರ: ರಿಪೀಟರ್ಸ್‌ಗೆ 6% ಕಡಿತ, ರ‍್ಯಾಂಕಿಂಗ್ ಪಟ್ಟಿ ಪ್ರಕಟಕ್ಕೆ ಹೈಕೋರ್ಟ್ ಆದೇಶ
ಈ ಸಂಬಂಧ ಬುಧವಾರ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರನ್ನು ನಗರದಲ್ಲಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಸಂಘಟನೆಯ ಪ್ರಮುಖರು, ಈ ಬಾರಿ ಸಿಇಟಿ ಬಿಕ್ಕಟ್ಟು ಹಿನ್ನೆಲೆಯಲ್ಲಿ ಸಿಇಟಿ ಪರಿಷ್ಕೃತ ರಾರಯಂಕಿಂಗ್ ಪಟ್ಟಿ ಪ್ರಕಟಿಸಿ ಕೌನ್ಸೆಲಿಂಗ್ ನಡೆಸುವುದು ತಡವಾಗುತ್ತಿದೆ. ಆದರೆ, ರಾಜ್ಯದ ಖಾಸಗಿ ವಿವಿಗಳು ಮತ್ತು ಕಾಲೇಜುಗಳು ಸರ್ಕಾರ ಸಿಇಟಿ ಕೌನ್ಸೆಲಿಂಗ್ ಮುಗಿಸುವವರೆಗೂ ತರಗತಿ ಚಟುವಟಿಕೆ ಆರಂಭಿಸದಿರಲು ಆಗುವುದಿಲ್ಲ ಎಂದು ಹೇಳಿದೆ. ಈಗಾಗಲೇ ವಿವಿಧ ಕಾಲೇಜು, ವಿವಿಗಳು ತರಗತಿ ಆರಂಭಿಸಿವೆ.
ಇದರಿಂದ ಸಿಇಟಿ ಅರ್ಹತೆ ಮೂಲಕ ಆ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಬಡ ವರ್ಗದ ವಿದ್ಯಾರ್ಥಿಗಳಿಗೆ ಭಾಗಶಃ ತರಗತಿಗಳ ಬೋಧನಾ ಚಟುವಟಿಕೆಯಿಂದ ವಂಚಿತರಾಗುತ್ತಾರೆ. ಹಾಗಾಗಿ ಸಿಇಟಿ ಕೌನ್ಸೆಲಿಂಗ್ ಮುಗಿದ ಬಳಿಕ ತರಗತಿ ಆರಂಭಿಸಲು ಸ್ಪಷ್ಟ ಸೂಚನೆ ನೀಡಬೇಕೆಂದು. ತಕ್ಷಣ ಕೌನ್ಸೆಲಿಂಗ್ ಆರಂಭಿಸಲು ಕ್ರಮ ವಹಿಸಬೇಕು ಆಗ್ರಹಿಸಿದರು. ಸಂಘಟನೆಯ ರಾಜ್ಯ ಸಂಚಾಲಕ ಯಲ್ಲಪ್ಪ ಹೆಗಡೆ, ಕೋಳಘಟ್ಟಯೋಗೇಶ್, ಸಂಸ್ಥಾಪಕ ಮಾರ್ಗದರ್ಶಕ ರಾಯಸಂದ್ರ ರವಿಕುಮಾರ್ ಇದ್ದರು.