ಬೆಂಗಳೂರು (ಸೆ.28) : ಸ್ವಾತಂತ್ರ್ಯದ ಅಮೃತೋತ್ಸವ ಪೂರೈಸಿರುವ ಭಾರತದ ಪ್ರತಿಯೊಬ್ಬ ಪ್ರಜೆಗೆ, ವಿಶೇಷವಾಗಿ ನಮ್ಮ ಯುವಜನರ ಪಾಲಿಗೆ ಮುಂದಿನ 25 ವರ್ಷಗಳು ಬಹಳ ಮುಖ್ಯವಾದವು. ಈ ಅವಧಿಯಲ್ಲಿ ಭಾರತದ ಅಭಿವೃದ್ಧಿ ವಿಚಾರ ನಮ್ಮೆಲ್ಲರ ರಾಷ್ಟ್ರೀಯ ಗುರಿಯಾಗಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕರೆ ನೀಡಿದ್ದಾರೆ. ನಗರದ ಲ್ಯಾಂಗ್‌ಫೋರ್ಡ್ ರಸ್ತೆಯ ‘ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ’ದ ಆವರಣದಲ್ಲಿ ಮಂಗಳವಾರ ಅಧಿಕೃತವಾಗಿ ವಿಶ್ವವಿದ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Mysuru Dasara 2022: ಇಂದಿನಿಂದ ದಸರಾ ವೈಭವ: ಮೈಸೂರಿನಲ್ಲಿ 413ನೇ ನಾಡಹಬ್ಬ
ಭಾರತ ಮುಂದಿನ ದಶಕಗಳಲ್ಲಿ ಅತಿ ಹೆಚ್ಚು ಯುವಜನಾಂಗವನ್ನು ಹೊಂದಿರಲಿದೆ. ಅವರಿಗೆ ನಾವು ಎಷ್ಟುಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸಬಲ್ಲೆವು ಎಂಬ ಸಾಮರ್ಥ್ಯದ ಮೇಲೆ ನಮ್ಮ ಯುವ ಜನರ ಹಾಗೂ ದೇಶದ ಭವಿಷ್ಯ ನಿರ್ಧಾರವಾಗಲಿದೆ. ಹಾಗಾಗಿ ಈ ಅವಧಿಯಲ್ಲಿ ದೇಶದ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಗಳಾಗಿ ಬೆಳೆಯುವ ಗುರಿ ಇಟ್ಟುಕೊಂಡು ಸಾಗಬೇಕು. ಇದರಿಂದ ಭಾರತ ಭವಿಷ್ಯದಲ್ಲಿ ಜ್ಞಾನದ ಮಹಾಶಕ್ತಿಯಾಗಿ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ ಎಂದರು.
ದೇಶದ ಅಭಿವೃದ್ಧಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿ ಬಹಳ ಮುಖ್ಯ. ಈ ಕ್ಷೇತ್ರದಲ್ಲಿ ಸಾಧನೆಗೆ ಕೊನೆ ಇಲ್ಲ. ನಮ್ಮ ವಿದ್ಯಾರ್ಥಿಗಳು ಹೊಸ ಸಂಶೋಧನೆ, ನಾವೀನ್ಯತೆ, ಆವಿಷ್ಕಾರಗಳನ್ನು ನಡೆಸಬೇಕು. ಭಾರತವನ್ನು ಪ್ರತಿ ಕ್ಷೇತ್ರದಲ್ಲೂ ಅಭಿವೃದ್ಧಿಯೊಂದಿಗೆ ಸ್ವಾವಲಂಬಿ ರಾಷ್ಟ್ರವಾಗಿಸುವುದು ನಮ್ಮ ರಾಷ್ಟ್ರೀಯ ಗುರಿಯಾಗಬೇಕು ಎಂದು ಹೇಳಿದರು.
ಸಾಮಾಜಿಕ ಪಾರದರ್ಶಕತೆಗೆ ಶಿಕ್ಷಣ ಬಹಳ ಮುಖ್ಯ. ದೇಶದ ಬೇಡಿಕೆಗಳನ್ನು ಈಡೇರಿಸುವ, ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ. ವಿದ್ಯಾರ್ಥಿಗಳು ಮಹತ್ವಾಕಾಂಕ್ಷಿಗಳಾಗಿರುತ್ತಾರೆ. ವಿಶ್ವವಿದ್ಯಾಲಯಗಳು ಅವರ ಆಕಾಂಕ್ಷಿಗಳಿಗೆ ಪೂರಕವಾದ ಶೈಕ್ಷಣಿಕ ವಾತಾವರಣ ನಿರ್ಮಿಸಬೇಕು. ಪ್ರಸ್ತುತ ದೇಶದಲ್ಲಿ ಜಾರಿಗೆ ತರಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ ಇದಕ್ಕೆ ಪೂರಕವಾಗಿದೆ. ಇದರಲ್ಲಿ ಅಳವಡಿಸಲಾಗಿರುವ ಬಹುಶಿಸ್ತೀಯ ಕಲಿಕಾ ವ್ಯವಸ್ಥೆ ವಿಮರ್ಶಾತ್ಮಕ ಪ್ರಬಂಧ, ಸಂಶೋಧನೆ, ನಾವೀನ್ಯತೆಗೆ ಒತ್ತು ನೀಡುತ್ತದೆ. ಪ್ರತಿ ವಿದ್ಯಾರ್ಥಿಯನ್ನೂ ಪರಿಪೂರ್ಣ ವ್ಯಕ್ತಿಯಾಗಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಎಸ್‌ಜೆಯು ಸೇವೆ ಶ್ಲಾಘನೀಯ:
ಕಳೆದ 140 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ಸೇವೆ ಮಾಡುತ್ತಾ ಬೆಳೆದಿರುವ ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯು ಇಂದು ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿರುವುದು ಶ್ಲಾಘನೀಯ. ಈ ಸಂಸ್ಥೆಯಲ್ಲಿ ಓದಿದ ಅನೇಕ ಮಂದಿ ಇಂದು ಕಲೆ, ವಿಜ್ಞಾನ, ಕ್ರೀಡೆ, ತಂತ್ರಜ್ಞಾನ, ಸಾರ್ವಜನಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳ ಸಾಧನೆಯಲ್ಲಿ ಶಿಕ್ಷಣ ಸಂಸ್ಥೆಯ ಸಾಧನೆ ಪ್ರತಿಬಿಂಬಿಸುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ರಾಷ್ಟ್ರಪತಿ ಹೇಳಿದರು. ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್.ಅಶ್ವತ್ಥ ನಾರಾಯಣ, ಬೆಂಗಳೂರು ಆಚ್‌ರ್ ಬಿಷಪ್ ಡಾ ಪೀಟರ್ ಮಚಾದೋ, ಸೇಂಟ್ ಜೋಸೆಫ್ ವಿವಿಯ ಕುಲಾಧಿಪತಿ ಡಿಯೋನೈಸಿಯಸ್ ವಾಜ್ ಉಪಸ್ಥಿತರಿದ್ದರು.
Dasara Flower Show 2022: ಗಾಜಿನ ಮನೆಯಲ್ಲಿ ರಾಷ್ಟ್ರಪತಿ ಭವನ ನಿರ್ಮಾಣ
ಇದು ಜ್ಞಾನದ ಶತಮಾನ: ಸಿಎಂ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಶತಮಾನದ ಇತಿಹಾಸವಿರುವ ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯು ರಾಜ್ಯ, ದೇಶದಲ್ಲೂ ಹೆಸರು ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ಸೇವೆ ಮೂಲಕ ರಾಜ್ಯ ಹಾಗೂ ಬೆಂಗಳೂರಿನ ಅಭಿವೃದ್ಧಿಗೆ ತನ್ನದೇ ಕೊಡುಗೆ ನೀಡಿದೆ. ರಾಜ್ಯದ ಇಂತಹ ಶಿಕ್ಷಣ ಸಂಸ್ಥೆಗಳ ಫಲವಾಗಿ ದೇಶದ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳ ಜೊತೆಗೆ ವಿದೇಶಿಯರ ಮಕ್ಕಳು ಕೂಡ ಇಂದು ತಮ್ಮ ಶಿಕ್ಷಣಕ್ಕೆ ಬೆಂಗಳೂರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಗಣ್ಯಾತಿ ಗಣ್ಯರು ಬೆಂಗಳೂರಿಗೆ ಬಂದರೂ ವಿಧಾನಸೌಧಕ್ಕೆ ಬರುತ್ತಿಲ್ಲ. ಬದಲಿಗೆ ಪ್ರಖ್ಯಾತ ಇಸ್ರೋ, ಇಸ್ಫೋಸಿಸ್‌ನಂತಹ ಸಂಸ್ಥೆಗಳಿಗೆ ಭೇಟಿ ನೀಡುತ್ತಿದ್ದಾರೆ. 21ನೇ ಶತಮಾನ ಜ್ಞಾನದ ಶತಮಾನವಾಗಿದೆ. ಇದಕ್ಕೆ ಪೂರಕವಾಗಿ ನಮ್ಮ ಶಿಕ್ಷಣ ಸಂಸ್ಥೆಗಳು ನಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದರು.