JEE Main 2025: ಬೆಂಗಳೂರಿನ ಕುಶಾಗ್ರ ಶೇ.100 ಅಂಕ ಗಳಿಸಿ ಮಿಂಚು!

Published : Apr 20, 2025, 05:09 PM ISTUpdated : Apr 20, 2025, 05:12 PM IST
JEE Main 2025: ಬೆಂಗಳೂರಿನ ಕುಶಾಗ್ರ ಶೇ.100 ಅಂಕ ಗಳಿಸಿ ಮಿಂಚು!

ಸಾರಾಂಶ

ಜೆಇಇ-2025ರ ಎರಡನೇ ಅವಧಿಯ ಫಲಿತಾಂಶ ಪ್ರಕಟವಾಗಿದ್ದು, ಬೆಂಗಳೂರಿನ ಕುಶಾಗ್ರ ಗುಪ್ತಾ ಶೇ.100 ಅಂಕ ಗಳಿಸಿ ದೇಶದ 24 ಟಾಪರ್‌ಗಳಲ್ಲಿ ಒಬ್ಬರಾಗಿದ್ದಾರೆ. ಭಾವೇಶ್ ಜಯಂತಿ 32ನೇ, ಮಾತಂಗಿ ಪಾರ್ಥಸಾರಥಿ 81ನೇ, ರತನ್ ಭಗವತಿ 84ನೇ ಹಾಗೂ ಧನುಷ್ ಕುಮಾರ್ 143ನೇ ರ‍್ಯಾಂಕ್ ಪಡೆದಿದ್ದಾರೆ. ಒಟ್ಟು 9.92 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.

ಬೆಂಗಳೂರು:  ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ದೇಶದ ಪ್ರತಿಷ್ಠಿತ ಐಐಟಿಗಳು ಸೇರಿ ವಿವಿಧ ತಾಂತ್ರಿಕ ಸಂಸ್ಥೆಗಳ ಪ್ರವೇಶಕ್ಕೆ ನಡೆಯುವ ಜಂಟಿ ಪ್ರವೇಶ ಪರೀಕ್ಷೆ-2025 (ಜೆಇಇ) ಸೆಷನ್-2ರ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಬೆಂಗಳೂರಿನ ಕಸನವಹಳ್ಳಿಯ ನಾರಾಯಣ ಕೋ-ಕಾವೇರಿ ಭವನ ಶಿಕ್ಷಣ ಸಂಸ್ಥೆಯ ಕುಶಾಗ್ರ ಗುಪ್ತಾ ಶೇ.100ರಷ್ಟು ಅಂಕ ಸಾಧನೆ ಮಾಡಿದ್ದಾರೆ. ದೇಶಾದ್ಯಂತ ಒಟ್ಟು 24 ಅಭ್ಯರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದು, ಇವರಲ್ಲಿ ಕುಶಾಗ್ರ ಕೂಡ ಒಬ್ಬರು.

ಅಲ್ಲದೆ, ಶ್ರೀ ಚೈತನ್ಯ ಎಜುಕೇಷನ್ ಇನ್ಸ್‌ಟಿಟ್ಯೂಷನ್‌ನ ಭಾವೇಶ್ ಜಯಂತಿಯವರು ಅಖಿಲ ಭಾರತ ಮಟ್ಟದಲ್ಲಿ 32ನೇ ರ್‍ಯಾಂಕ್ ಪಡೆದರೆ ಸಹಕಾರ ನಗರದ ನಾರಾಯಣ ಒಲಂಪಿಯಾಡ್‌ ಶಾಲೆಯ ಮಾತಂಗಿ ಪಾರ್ಥಸಾರಥಿ ಮತ್ತು ರತನ್‌ ಎಸ್‌.ಭಗವತಿ ಕ್ರಮವಾಗಿ 81 ಮತ್ತು 84ನೇ ರ್‍ಯಾಂಕ್ ಮತ್ತು ವೇದಾಂತು ಕಾಲೇಜಿನ ಎ.ಧನುಷ್‌ ಕುಮಾರ್‌ 143ನೇ ರ್‍ಯಾಂಕ್ ಗಳಿಸಿದ್ದಾರೆ.

ಐಐಟಿ-ಜೆಇಇಯಲ್ಲಿ ಟಾಪರ್ ಆದ ವೇದ್ ಲಹೋಟಿ ಮತ್ತು ಅಂಬಾನಿ ನಂಟಿನ ಕಥೆ!

ದಿನಕ್ಕೆ 12 ತಾಸು ಅಧ್ಯಯನ:
ಕಾನ್ಪುರ ಮೂಲದ ಕುಶಾಗ್ರ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಐಸಿಎಸ್‌ಸಿ ಪಠ್ಯಕ್ರಮದ 10ನೇ ತರಗತಿ ಪರೀಕ್ಷೆಯಲ್ಲಿ ಶೇ.99.93 ಅಂಕಗಳಿಸಿ ರಾಜ್ಯದ 3ನೇ ಟಾಪರ್‌ ಆಗಿದ್ದರು. ಇವರ ತಂದೆ ಅಮಿತ್‌ ಕುಮಾರ್‌ ಗುಪ್ತಾ ವೃತ್ತಿಯಲ್ಲಿ ಎಂಜಿನಿಯರ್‌ ಆಗಿದ್ದು, ತಾಯಿ ಮಧುಮಿತ ಗುಪ್ತಾ ವೈದ್ಯರಾಗಿದ್ದಾರೆ.ಫಲಿತಾಂಶ ಕುರಿತು ಪ್ರತಿಕ್ರಿಯಿಸಿರುವ ಕುಶಾಗ್ರ, ದಿನಕ್ಕೆ 12-13 ತಾಸು ವ್ಯಾಸಂಗ ಮಾಡುತ್ತಿದ್ದೆ. ಮೊದಲ ಪ್ರಯತ್ನದಲ್ಲಿ ಶೇ.99.93 ಅಂಕ ಬಂದಿದ್ದ ಕಾರಣ 2ನೇ ಪ್ರಯತ್ನ ಮಾಡಿದೆ. ಪತ್ರಿಕೆ ಸವಾಲಿನದ್ದಾಗಿದ್ದು ಗಣಿತ ಕಷ್ಟಕರವಾಗಿತ್ತು. ಆದರೂ, ಉತ್ತಮ ಫಲಿತಾಂಶ ಬಂದಿದೆ ಎಂದಿದ್ದಾರೆ.

ನಿರಂತರ ಅಧ್ಯಯನ ಮತ್ತು ಅಭ್ಯಾಸದಿಂದ ಉತ್ತಮ ಅಂಕ ಸಾಧನೆ ಸಾಧ್ಯ. ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್‌ಗೆ ಪ್ರವೇಶ ಪಡೆಯುವ ಉದ್ದೇಶವಿದೆ. ಅಲ್ಲದೆ, ಜೆಇಇ ಅಡ್ವಾನ್ಸ್‌ಡ್‌ ಪರೀಕ್ಷೆಯನ್ನು ಬರೆಯುತ್ತೇನೆ ಎಂದರು.

ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿ (ಎನ್‌ಟಿಎ) ಇದೇ ತಿಂಗಳು ನಡೆಸಿದ್ದ ಜೆಇಇ ಮೇನ್ಸ್‌ ಸೆಷನ್‌-2ರ ಪರೀಕ್ಷೆಗೆ 9,92,350 ಅಭ್ಯರ್ಥಿಗಳು ಹಾಜರಾಗಿದ್ದರು. ದೇಶದ ವಿವಿಧ 300 ನಗರಗಳ 531 ಪರೀಕ್ಷಾ ಕೇಂದ್ರಗಳು, ದುಬೈ, ಸಿಂಗಾಪುರ ಸೇರಿ ಹೊರ ದೇಶದ 15 ನಗರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಕನ್ನಡವೂ ಸೇರಿ ದೇಶದ 13 ಭಾಷೆಗಳಲ್ಲಿ ಪರೀಕ್ಷೆ ನಡೆಯಿತು.

ಐಐಟಿ ಜೆಇಇಯಲ್ಲಿ ಫೇಲ್ ಆದ್ರೂ ಛಲ ಬಿಡದ ಯುವಕ, ಕೊನೆಗೂ ಗೂಗಲ್‌ ನಿಂದ 39 ಲಕ್ಷ ಪ್ಯಾಕೇಜ್‌ ಉದ್ಯೋಗ!

9.92 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಹಾಜರ್‌:
2ನೇ ಆವೃತ್ತಿಯ ಜೆಇಇ ಪರೀಕ್ಷೆಗೆ 9.92 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಹಾಜರಾಗಿದ್ದರು. ಕನ್ನಡ ಸೇರಿ 13 ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ರಾಜಸ್ಥಾನದ 7, ತೆಲಂಗಾಣ, ಉತ್ತರಪ್ರದೇಶ, ಮಹಾರಾಷ್ಟ್ರದ 3, ದೆಹಲಿ ಮತ್ತು ಪಶ್ಚಿಮ ಬಂಗಾಳ, ಗುಜರಾತ್‌ನ 2, ಕರ್ನಾಟಕ ಮತ್ತು ಆಂಧ್ರಪ್ರದೇಶದ ಒಬ್ಬರು ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಇವರ ಪೈಕಿ ಇಬ್ಬರು ಮಹಿಳೆಯರು. ಅತ್ತ ಪರಿಕ್ಷಾರ್ಥಿಗಳ ಪೈಕಿ 110 ಮಂದಿ ಪರೀಕ್ಷಾ ಅಕ್ರಮಗಳಲ್ಲಿ ತೊಡಗಿದ್ದು, ಅವರ ಫಲಿತಾಂಶಗಳನ್ನು ತಡೆಹಿಡಿಯಲಾಗಿದೆ.

ಪೇಪರ್ 1 (ಬಿಇ/ಬಿ.ಟೆಕ್.)ನಲ್ಲಿ 100 ಪರ್ಸೆಂಟೈಲ್ ಪಡೆದ ವಿದ್ಯಾರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ:
ಎಂ.ಡಿ. ಅನಸ್ (ರಾಜಸ್ಥಾನ)
ಆಯುಷ್ ಸಿಂಘಾಲ್ (ರಾಜಸ್ಥಾನ)
ಆರ್ಕಿಸ್ಮನ್ ನಂದಿ (ಪಶ್ಚಿಮ ಬಂಗಾಳ)
ದೇವದತ್ತ ಮಾಝಿ (ಪಶ್ಚಿಮ ಬಂಗಾಳ -ಹೆಣ್ಣು)
ಆಯುಷ್ ರವಿ ಚೌಧರಿ (ಮಹಾರಾಷ್ಟ್ರ)
ಲಕ್ಷ್ಯ ಶರ್ಮಾ (ರಾಜಸ್ಥಾನ)
ಕುಶಾಗ್ರ ಗುಪ್ತಾ (ಕರ್ನಾಟಕ)
ಹರ್ಷ್ ಎ ಗುಪ್ತಾ (ತೆಲಂಗಾಣ)
ಆದಿತ್ ಪ್ರಕಾಶ್ ಭಾಗಡೆ (ಗುಜರಾತ್)
ದಕ್ಷ (ದೆಹಲಿ)
ಹರ್ಷ್ ಝಾ (ದೆಹಲಿ)
ರಜಿತ್ ಗುಪ್ತಾ (ರಾಜಸ್ಥಾನ)
ಶ್ರೇಯಸ್ ಲೋಹಿಯಾ (ಉತ್ತರ ಪ್ರದೇಶ)
ಸಕ್ಷಮ್ ಜಿಂದಾಲ್ (ರಾಜಸ್ಥಾನ)
ಸೌರವ್ (ಉತ್ತರ ಪ್ರದೇಶ)
ವಂಗಲ ಅಜಯ್ ರೆಡ್ಡಿ  (ತೆಲಂಗಾಣ)
ಸಾನಿಧ್ಯ ಸರಾಫ್ (ಮಹಾರಾಷ್ಟ್ರ)
ವಿಶಾದ್ ಜೈನ್ (ಮಹಾರಾಷ್ಟ್ರ)
ಅರ್ನವ್ ಸಿಂಗ್ (ರಾಜಸ್ಥಾನ)
ಶಿವೇನ್ ವಿಕಾಸ್ ತೋಷ್ನಿವಾಲ್ (ಗುಜರಾತ್)
ಕುಶಾಗ್ರ ಬೈಂಗಹ (ಉತ್ತರ ಪ್ರದೇಶ)
ಸಾಯಿ ಮನೋಜ್ಞ ಗುತ್ತಿಕೊಂಡ  (ಆಂಧ್ರ ಪ್ರದೇಶ -ಹೆಣ್ಣು)
ಓಂ ಪ್ರಕಾಶ್ ಬೆಹೆರಾ (ರಾಜಸ್ಥಾನ)
ಬನಿ ಬ್ರಾತಾ ಮಜೀ (ತೆಲಂಗಾಣ)
 

PREV
Read more Articles on
click me!

Recommended Stories

ದೇಶದ ನಂಬರ್ 1 ಶಿಕ್ಷಣ ಸಂಸ್ಥೆ IISc ನಲ್ಲಿ ಭದ್ರತಾ ಹುದ್ದೆ, SSLC ಪಾಸಾದವರಿಗೆ ಸುವರ್ಣಾವಕಾಶ!
ಒಳ್ಳೆ ರಿಸಲ್ಟ್‌ಗಾಗಿ ಶಿಕ್ಷಕರಿಂದ್ಲೇ ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಲೀಕ್