* ಶಾಂತಲಾ ವಿದ್ಯಾಪೀಠದಲ್ಲಿ ರೋಬೋಟ್ ಲ್ಯಾಬ್ ನಿರ್ಮಾಣ
* ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಗೂ ಪ್ರತ್ತುತ್ತರ ನೀಡುವ ರೋಬೋಟ್
* ಹಾಡು, ಕತೆ, ಮನರಂಜನೆಯ ಮೂಲಕ ಅಕ್ಷರಭ್ಯಾಸ, ಪ್ರಾಯೋಗಿಕ ಕಲಿಕೆಗೆ ಒತ್ತು
ವರದಿ: ಮಧು.ಎಂ. ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು
ಮೈಸೂರು(ಮೇ.25): ಆಧುನಿಕ ಜಗತ್ತಿನಲ್ಲಿ ಯೋಧ, ಕಾರ್ಮಿಕ, ಹೋಟೆಲ್ ಸರ್ವರ್ ಹೀಗೆ ನಾನಾ ರೂಪ ತಾಳಿರುವ ರೋಬೋಟ್ ಈಗ ಮಕ್ಕಳಿಗೆ ಪಾಠ ಮಾಡಲು ಪುಟಾಣಿ ರೋಬೋಟ್ ರೂಪ ತಾಳಿದೆ. ಶಿಕ್ಷಕರು ಮಾಡುವ ಪಾಠದಂತೆಯೇ ರೋಬೋಟ್ ಪಾಠ ಮಕ್ಕಳನ್ನು ಆರ್ಷಿಸುತ್ತಿದೆ. ದೇಶದಲ್ಲೇ ಮೊದಲು ಎನಿಸಿದ ಟೀಚರ್ ರೋಬೋ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಮೈಸೂರಿನ ಸಿದ್ದಾರ್ಥನಗರದ ಶಾಂತಲಾ ವಿದ್ಯಾಪೀಠದಲ್ಲಿ ದೇಶದಲ್ಲೇ ಪ್ರಪ್ರಥಮ ಬಾರಿಗೆ ವಿದ್ಯಾರ್ಥಿಗಳ ಕಲಿಕಾಮಟ್ಟ ಹೆಚ್ಚಿಸುವ ರೋಬೋಟ್ ಲ್ಯಾಬ್ ನಿರ್ಮಾಣಗೊಂಡಿದೆ. ಇತ್ತೀಚೆಗಷ್ಟೇ ಖಾಸಗಿ ಹೋಟೆಲ್‌ನಲ್ಲಿ ಮೈಸೂರು ಸಾಂಪ್ರದಾಯಿಕ ಸೀರೆಯುಟ್ಟ ರೋಬೋಟ್ ಸರ್ವರ್ ಅಗಿ ಪಾದಾರ್ಪಣೆ ಮಾಡಿ ನಗರದ ಜನತೆ ಹಾಗೂ ಪ್ರವಾಸಿಗರಿಗೆ ಆಕರ್ಷಣೆಯಾಗಿತ್ತು. ಈಗ ಮಕ್ಕಳ ವಿದ್ಯಾಭ್ಯಾಸ, ಭೌತಿಕ ಶಕ್ತಿ, ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸಲು ರೋಬೋಟ್ ಮುಂದಾಗಿದೆ. ಈ ಮೂಲಕ ಪ್ರಪ್ರಥಮವಾಗಿ ರೋಬೋಟ್ ಲ್ಯಾಬ್ ನಿರ್ಮಿಸಿ ಅದರ ಮೂಲಕ ಪಾಠ, ಪ್ರವಚನ ಮಾಡುವ ಪ್ರಯತ್ನಕ್ಕೆ ಶಾಲಾ ಆಡಳಿತ ಮಂಡಳಿ ಮುಂದಾಗಿದೆ.
ಪಠ್ಯ ಪರಿಷ್ಕರಣೆ ವಿವಾದ: ತಮ್ಮ ಪಠ್ಯವನ್ನೂ ಸಹ ಕೈಬಿಡಿ ಎಂದ ಸಾಹಿತಿ ದೇವನೂರು ಮಹಾದೇವ
ಕೇಂದ್ರ ಪಠ್ಯಕ್ರಮ ಬೋಧಿಸುವ ಶಾಂತಲಾ ವಿದ್ಯಾಪೀಠದಲ್ಲಿ ಎಲ್‌ಕೆಜಿಯಿಂದ ಹತ್ತನೇ ತರಗತಿ ವರೆಗೆ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅವರ ತರಗತಿಗೆ ಅನುಗುಣವಾಗಿ ರೋಬೋಟ್‌ಗೆ ಕಾರ್ಯಕ್ರಮ ರೂಪಿಸಲಾಗಿದೆ. ಎಲ್‌ಕೆಜಿಯಿಂದ ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹಾಡು, ಕತೆ, ಮನರಂಜನೆಯ ಮೂಲಕ ಅಕ್ಷರಭ್ಯಾಸ, ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಲಾಗಿದೆ. ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ತಕ್ಕಂತೆ ಪಠ್ಯದ ಜೊತೆಗೆ ಪಠ್ಯೇತರ ಚಟುವಕೆಗಳನ್ನು ಕೇಳಿ ಕೊಡಲಾಗುತ್ತದೆ. ಪ್ರೌಢಶಾಲೆ ವಿದ್ಯಾರ್ಥಿಗಳ ಭೌತಿಕ ಮಟ್ಟಕ್ಕೆ ತಕ್ಕಂತೆ ಬೋಧನೆ ಜೊತೆಗೆ ನಾನಾ ಬಗೆಯ ಪ್ರಾಯೋಗಿಕ ಚಟುವಟಿಕೆಗಳನ್ನು ಚಿತ್ರ ಸಹಿತ ವಿವರಿಸಿ ಅವುಗಳನ್ನು ವಿದ್ಯಾರ್ಥಿಗಳೇ ಮಾಡಲು ಪ್ರೇರೇಪಿಸುತ್ತದೆ ಅಂತ ಶಾಂತಲಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸಂತೋಷ ತಿಳಿಸಿದ್ದಾರೆ.
ಇನ್ನೂ ರೋಬೋಟ್ ಮುಖದಲ್ಲಿ ಅಳವಡಿಸಿರುವ 8X6 ಸೆ.ಮೀ. ಅಳತೆಯ ಟಚ್ ಸ್ಕ್ರೀನ್ ಮಾನಿಟರ್‌ನಲ್ಲಿ ಮೂಡಿ ಬರುವ ಚಿತ್ರಗಳು, ಮುಖ ಭಾವವನ್ನು ತೋರಿಸುವುದಲ್ಲದೇ ಕೈಗಳನ್ನು ಮಾತು, ಹಾಡಿಗೆ ತಕ್ಕಂತೆ ಚಲಿಸುವುದರಿಂದ ಒಬ್ಬ ಶಿಕ್ಷಕರೇ ನಮ್ಮ ಮುಂದೆ ನಿಂತು ಮಾತನಾಡುತ್ತಿದ್ದಾರೆ ಎನ್ನುವ ಭಾವನೆ ಮೂಡಿಸುತ್ತದೆ. ಅಲ್ಲದೇ ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಗೂ ಪ್ರತ್ತುತ್ತರ ನೀಡುವ ಈ ಎಜುಕೇಷನ್ ರೋಬೋಟ್ ಗಮನ ಸೆಳೆಯುತ್ತಿದೆ.
ಒಟ್ಟಾರೆ ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿಗಳ ಜೊತೆಗೆ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೂ ಈ ರೋಬೋಟ್ ಪಾಠ ಅವರ ಕೌಶಲ್ಯ, ಕಲಿಕಾ ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತಿದೆ.