ಹೂವಿನಹಡಗಲಿ: 632 ಸರ್ಕಾರಿ ಶಾಲೆಗಳ ದುಸ್ಥಿತಿ, ಅಪಾಯದಲ್ಲಿ ಮಕ್ಕಳ ಅಕ್ಷರಾಭ್ಯಾಸ!

Kannadaprabha News   | Kannada Prabha
Published : Jul 18, 2026, 08:07 AM IST
Vijayanaar Government school

ಸಾರಾಂಶ

ಹೂವಿನಹಡಗಲಿ ತಾಲೂಕಿನ ಸರ್ಕಾರಿ ಶಾಲೆಗಳ ಸುರಕ್ಷತೆಯ ಕುರಿತು ನಡೆಸಿದ ಪರಿಶೀಲನೆಯಲ್ಲಿ ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ. ತಾಲೂಕಿನ 166 ಶಾಲೆಗಳ ಪೈಕಿ 183 ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಮಕ್ಕಳ ಜೀವಕ್ಕೆ ಅಪಾಯವನ್ನುಂಟುಮಾಡುವ ಸ್ಥಿತಿಯಲ್ಲಿವೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ (ಜು.18): ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಪ್ರತಿ ಸರ್ಕಾರಿ ಶಾಲೆ ಸುರಕ್ಷಿತ ಎಂಬ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಪಡೆದು ಸರ್ಕಾರಕ್ಕೆ ವರದಿ ನೀಡಬೇಕೆಂಬ ಸೂಚನೆ ನೀಡಿತ್ತು. ತಾಲೂಕಿನಲ್ಲಿ 166 ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿದ್ದು, 1466 ಕೊಠಡಿಗಳಿವೆ. ಇದರಲ್ಲಿ 811 ಗುಣಮಟ್ಟದ ಕೊಠಡಿಗಳಿವೆ. ಉಳಿದಂತೆ 65 ಕೊಠಡಿಗಳು ದೊಡ್ಡ ಪ್ರಮಾಣದಲ್ಲಿ ದುರಸ್ತಿಯಾಗಬೇಕಿದೆ. 384 ಸಣ್ಣ ಪುಟ್ಟ ದುರಸ್ತಿ ಆಗಬೇಕಿದೆ. 183 ಸಂಪೂರ್ಣ ಶಿಥಿಲಾವಸ್ಥೆಯಲ್ಲಿವೆ. ಇಂತಹ ಅಪಾಯದಡಿ ಮಕ್ಕಳು ಅಕ್ಷರಾಭ್ಯಾಸ ಮಾಡುವ ಪರಿಸ್ಥಿತಿ ತಲೆದೋರಿದೆ.

ತಾಲೂಕಿನ 1466 ಶಾಲಾ ಕೊಠಡಿಗಳಲ್ಲಿ 1443 ಕೋಣೆಗಳಿಗೆ ಸುರಕ್ಷಿತ ಎಂಬ ಪ್ರಮಾಣಪತ್ರ ಸಿಕ್ಕಿದೆ. ಇನ್ನು ಹಿರೇಮಲ್ಲನಕೆರೆ ಕ್ಲಸ್ಟರ್‌ನ 23 ಕೋಣೆಗಳ ಸುರಕ್ಷಿತ ಪ್ರಮಾಣಪತ್ರ ಬರಬೇಕಿದೆ. ಈ ಸುರಕ್ಷಿತ ಪ್ರಮಾಣಪತ್ರಗಳನ್ನು ನೀಡಲು ಜಿಪಂ ಎಂಜಿನಿಯರಿಂಗ್‌ ಇಲಾಖೆ, ಲೋಕೋಪಯೋಗಿ ಮತ್ತು ಕೆಆರ್‌ಐಡಿಎಲ್‌ಗೆ ನೀಡಲಾಗಿತ್ತು.

ಪಟ್ಟಣದ ಷಾ ಪೂಜಾಜಿ ವನೇಚಂದ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ 1ರಿಂದ 7ನೇ ತರಗತಿ ವರೆಗಿನ ಮೊದಲ ಸರ್ಕಾರಿ ಶಾಲೆಯಾಗಿತ್ತು. ಆರಂಭದಲ್ಲೇ ನೂರಾರು ವಿದ್ಯಾರ್ಥಿಗಳ ದಾಖಲಾತಿ ಹೊಂದಿತ್ತು. ಈಗ ಕೇವಲ ಬೆರಳೆಣಿಕೆಯಷ್ಟು ಮಾತ್ರ ಮಕ್ಕಳಿದ್ದಾರೆ. ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಈ ಸರ್ಕಾರಿ ಶಾಲೆಗೆ ಮಕ್ಕಳ ದಾಖಲಾತಿ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಈ ಶಾಲೆಯಲ್ಲಿ ಕೇವಲ 19 ಮಕ್ಕಳು ಮಾತ್ರ ದಾಖಲಾಗಿದ್ದಾರೆ. ಜತೆಗೆ ಈ ಶಾಲೆಯಲ್ಲಿ 20ಕ್ಕೂ ಹೆಚ್ಚು ಕೋಣೆಗಳಿದ್ದರೂ ಯಾವ ಕೋಣೆಯೂ ಸುರಕ್ಷಿತವಾಗಿಲ್ಲ.

ಆರ್‌ಸಿಸಿಯ ಸಿಮೆಂಟ್‌ ಚಕ್ಕೆಗಳು ಮಕ್ಕಳ ಮೇಲೆ ಕಳಚಿ ಬೀಳುತ್ತಿವೆ. ಸುರಕ್ಷಿತ ಪ್ರಮಾಣಪತ್ರದಲ್ಲಿ ಯಾವ ಕೋಣೆಯೂ ಸುರಕ್ಷಿತವಾಗಿಲ್ಲ ಎಂಬ ವರದಿ ಬಂದಿದೆ. ಈ ಶಾಲೆಯ ಮಕ್ಕಳನ್ನು ಪಟ್ಟಣದಲ್ಲಿರುವ ಸೊಪ್ಪಿನ ವೀರಮ್ಮ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿಸುವ ಚಿಂತನೆ ನಡೆದಿದೆ.

ತಾಲೂಕಿನ ಬೂದನೂರು, ಉತ್ತಂಗಿ ಸೇರಿದಂತೆ ಇತರೆ ಸರ್ಕಾರಿ ಪ್ರೌಢ ಶಾಲೆಗಳ ಕೋಣೆಗಳು ಸುರಕ್ಷಿತವಾಗಿಲ್ಲ. ಮಳೆ ಬಂದಾಗ ಸೋರುತ್ತಿವೆ. ಇದಕ್ಕೆ ಅಕ್ಷರ ಆವಿಷ್ಕಾರ ಯೋಜನೆಯಲ್ಲಿ ಚಾವಣಿಗೆ ತಗಡು ಹಾಕಿದ್ದಾರೆ. ಆದರೆ ಕೆಳಗಿನ ಸಿಮೆಂಟ್‌ ತುಂಡುಗಳು ಮಕ್ಕಳ ಮೈ ಮೇಲೆ ಬೀಳುವ ಅಪಾಯ ಎದುರಾಗಿದೆ.

ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಗಣಿ ಬಾಧಿತ ಪ್ರದೇಶಕ್ಕೆ ಒಳ ಪಟ್ಟಿರುವ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳ ದುರಸ್ತಿ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ, ಗ್ರಾಮೀಣ ಭಾಗದ ಬಡ ಮಕ್ಕಳ ಅಕ್ಷರ ಕಲಿಕೆಗೆ ಆಸರೆಯಾಗಬೇಕೆಂಬ ಆಶಯವನ್ನು ಶಿಕ್ಷಣ ಪ್ರೇಮಿಗಳ ಹೊಂದಿದ್ದಾರೆ.

ಸರ್ಕಾರದ ನಿರ್ದೇಶನದಂತೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಕೊಠಡಿಗಳು ಸುರಕ್ಷಿತ ಪ್ರಮಾಣಪತ್ರ ಪಡೆಯಬೇಕೆಂಬ ಸೂಚನೆ ಮೇರೆಗೆ ಕೋಣೆಗಳ ಸುಸ್ಥಿತಿ ಕುರಿತು ವರದಿ ಕೇಳಿದಾಗ ಜಿಪಂ ಎಂಜಿನಿಯರಿಂಗ್‌, ಕೆಆರ್‌ಐಡಿಎಲ್‌ ಹಾಗೂ ಲೋಕೋಪಯೋಗಿ ಇಲಾಖೆಗಳ ಎಂಜಿನಿಯರ್‌ಗಳ ವರದಿ ಪ್ರಕಾರ 183 ಶಾಲೆ ಕೋಣೆಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿವೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಕಳಿಸುತ್ತೇವೆ ಎನ್ನುತ್ತಾರೆ ಹೂವಿನಹಡಗಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಂಗಳಾ.

PREV
Read more Articles on
click me!

Recommended Stories

ದೇಶದ ಗಮನ ಸೆಳೀತಿರೋ ಉಪವಾಸ ನಿರತ ವಾಂಗ್‌ಚುಕ್ ಮನೆ: ಬಗೆದಷ್ಟೂ ಕೌತುಕಗಳ ಕೇಂದ್ರ
ಒಂದೇ ಮನೆಯಲ್ಲಿ ನಾಲ್ವರು ಪೊಲೀಸ್‌ರು; ಆ ಊರಿನಲ್ಲಿ ವಾತಾವರಣವನ್ನಷ್ಟೇ ಅಲ್ಲ ಹೊಸ ಇತಿಹಾಸ ಸೃಷ್ಟಿಸಿದ ರೈತನ ಮಕ್ಕಳು!