
ಪಾಟ್ನಾ: ಪ್ರತಿಭೆಗೆ ಬಡತನ ಅಡ್ಡಿಯಾಗದು ಎಂಬ ಮಾತನ್ನು ಬಿಹಾರದ 18 ವರ್ಷದ ವಿದ್ಯಾರ್ಥಿನಿ ಶ್ರೇಯಾ ಕೌಶಿಕ್ ಸಾಬೀತುಪಡಿಸಿದ್ದಾರೆ. ಬಿಹಾರದ ಸಿವಾನ್ ಮೂಲದ ಶ್ರೇಯಾ, ಅಮೆರಿಕದ ಪ್ರತಿಷ್ಠಿತ 'ಲಿಂಕನ್ ಸ್ಕಾಲರ್‌ಶಿಪ್' (Lincoln Scholarship)ಗೆ ಆಯ್ಕೆಯಾಗುವ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಈ ಪ್ರತಿಷ್ಠಿತ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ಏಕೈಕ ಭಾರತೀಯ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.
ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಈ ವಿದ್ಯಾರ್ಥಿವೇತನವು ಶ್ರೇಯಾ ಅವರ ಅಮೆರಿಕದ ಉನ್ನತ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸಲಿದೆ. ಅಮೆರಿಕದ ಕೆಂಟುಕಿಯಲ್ಲಿರುವ 'ಸೆಂಟರ್ ಕಾಲೇಜ್'ನಲ್ಲಿ (Centre College) ಪದವಿ ಶಿಕ್ಷಣ ಪಡೆಯಲು ಈ ಹಣ ಬಳಕೆಯಾಗಲಿದೆ.
ಅಮೆರಿಕದ 16ನೇ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರ ಗೌರವಾರ್ಥವಾಗಿ ಈ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಇದು ಜಗತ್ತಿನಾದ್ಯಂತ ಅತ್ಯಂತ ಕಠಿಣ ಮತ್ತು ಪ್ರತಿಷ್ಠಿತ ಸ್ಕಾಲರ್‌ಶಿಪ್‌ಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಇಡೀ ವಿಶ್ವದಾದ್ಯಂತ ಕೇವಲ 10 ವಿದ್ಯಾರ್ಥಿಗಳನ್ನು ಮಾತ್ರ ಈ ಪ್ರೋಗ್ರಾಂಗೆ ಆಯ್ಕೆ ಮಾಡಲಾಗುತ್ತದೆ. ಶೈಕ್ಷಣಿಕ ಸಾಧನೆ, ನಾಯಕತ್ವದ ಗುಣಗಳು ಮತ್ತು ಸಮಾಜ ಸೇವೆಗೆ ಬದ್ಧತೆ ಹೊಂದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಈ ಗೌರವ ನೀಡಲಾಗುತ್ತದೆ. ಈ ಸ್ಕಾಲರ್‌ಶಿಪ್ ವಿದ್ಯಾರ್ಥಿಯ ಬೋಧನಾ ಶುಲ್ಕ (Tuition fees), ವಸತಿ, ಊಟ, ಪುಸ್ತಕಗಳು, ಆರೋಗ್ಯ ವಿಮೆ, ಪ್ರಯಾಣ ವೆಚ್ಚ ಹಾಗೂ ಇತರ ವೈಯಕ್ತಿಕ ವೆಚ್ಚಗಳನ್ನು ಸಂಪೂರ್ಣವಾಗಿ ಭರಿಸುತ್ತದೆ.
ಬಿಹಾರದ ಸಿವಾನ್‌ನಲ್ಲಿ ಜನಿಸಿದ ಶ್ರೇಯಾ, ನಂತರ ದೆಹಲಿಗೆ ತೆರಳಿ ಅಲ್ಲಿನ ಆಯಾ ನಗರದ 'ಸರ್ವೋದಯ ಕನ್ಯಾ ವಿದ್ಯಾಲಯ'ದಲ್ಲಿ ಶಾಲಾ ಶಿಕ್ಷಣವನ್ನು ಪೂರೈಸಿದರು. 13ನೇ ವಯಸ್ಸಿನಲ್ಲೇ ಅವರು 'ಡೆಕ್ಸ್ಟೆರಿಟಿ ಗ್ಲೋಬಲ್' (Dexterity Global) ಎಂಬ ಸಂಸ್ಥೆಯನ್ನು ಸೇರಿದರು. ಈ ಸಂಸ್ಥೆಯು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಾಯಕತ್ವ ತರಬೇತಿ ಮತ್ತು ಶೈಕ್ಷಣಿಕ ಮಾರ್ಗದರ್ಶನ ನೀಡುತ್ತದೆ. ಈ ತರಬೇತಿಯೇ ಶ್ರೇಯಾ ಅವರಿಗೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಯಿತು.
ತನ್ನ ಈ ಸಾಧನೆಯ ಬಗ್ಗೆ ಮಾತನಾಡಿದ ಶ್ರೇಯಾ, ಅಬ್ರಹಾಂ ಲಿಂಕನ್ ಅವರ ಹೆಸರಿನಲ್ಲಿರುವ ಈ ವಿದ್ಯಾರ್ಥಿವೇತನ ಪಡೆಯುವುದು ನನಗೆ ದೊರೆತ ದೊಡ್ಡ ಗೌರವ. ನನ್ನ ಪರಿಸ್ಥಿತಿಯನ್ನು ಮೀರಿ ಬೆಳೆಯಲು ನನಗೆ ಸಿಕ್ಕ ಮಾರ್ಗದರ್ಶನ ಮತ್ತು ತರಬೇತಿ ಕಾರಣ. ನನ್ನ ಶಿಕ್ಷಣ ಮುಗಿದ ನಂತರ ಸಮಾಜದ ಏಳಿಗೆಗಾಗಿ ಶ್ರಮಿಸುತ್ತೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಡೆಕ್ಸ್ಟೆರಿಟಿ ಗ್ಲೋಬಲ್ ಸಂಸ್ಥೆಯ ಸಿಇಒ ಶರದ್ ವಿವೇಕ್ ಸಾಗರ್ ಅವರು ಶ್ರೇಯಾ ಅವರನ್ನು ಅಭಿನಂದಿಸಿದ್ದು, ಸರಿಯಾದ ಮಾರ್ಗದರ್ಶನ ಸಿಕ್ಕರೆ ಪ್ರತಿಭಾವಂತ ವಿದ್ಯಾರ್ಥಿಗಳು ಜಾಗತಿಕ ಮಟ್ಟದ ಸಂಸ್ಥೆಗಳನ್ನು ತಲುಪಬಲ್ಲರು ಎಂಬುದಕ್ಕೆ ಶ್ರೇಯಾ ಅವರೇ ಸಾಕ್ಷಿ ಎಂದು ಶ್ಲಾಘಿಸಿದ್ದಾರೆ.