ಒಂದೇ ಮನೆಯಲ್ಲಿ ನಾಲ್ವರು ಪೊಲೀಸ್‌ರು; ಆ ಊರಿನಲ್ಲಿ ವಾತಾವರಣವನ್ನಷ್ಟೇ ಅಲ್ಲ ಹೊಸ ಇತಿಹಾಸ ಸೃಷ್ಟಿಸಿದ ರೈತನ ಮಕ್ಕಳು!

Published : Jul 17, 2026, 04:42 PM IST
Police

ಸಾರಾಂಶ

ತೀವ್ರ ಬಡತನದ ನಡುವೆಯೂ, ವೃದ್ಧ ರೈತನೊಬ್ಬ ತನ್ನ ನಾಲ್ವರು ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ತಂದೆಯ ಕಷ್ಟವನ್ನು ಅರಿತ ಮಕ್ಕಳು, ಸ್ವಂತ ಪರಿಶ್ರಮದಿಂದ ಓದಿ, ನಾಲ್ವರೂ ಪೊಲೀಸ್ ಇಲಾಖೆಗೆ ಸೇರಿ ಇತಿಹಾಸ ಸೃಷ್ಟಿಸಿದ್ದಾರೆ.

ಒಂದು ಪುಟ್ಟ ಹಳ್ಳಿ. ಅಲ್ಲಿನ ಮುರಿದು ಬಿದ್ದ ಹಳೇ ಮನೆಯೊಂದರ ಮುಂದೆ ಅಂದು ಇಡೀ ಗ್ರಾಮವೇ ನೆರೆದಿತ್ತು. ಸದಾ ಸಾಲದ ಸುಳಿಗೆ ಸಿಲುಕಿ, ಹರಿದ ಅಂಗಿ, ತೇಪೆ ಹಾಕಿದ ಚಪ್ಪಲಿ ಧರಿಸಿ ತಲೆ ತಗ್ಗಿಸಿ ನಡೆಯುತ್ತಿದ್ದ ವೃದ್ಧ ರೈತನ ಕಣ್ಣುಗಳಿಂದ ಅಂದು ನೀರು ನಿಲ್ಲುತ್ತಿರಲಿಲ್ಲ. ಆದರೆ ಆ ಕಣ್ಣೀರಿನಲ್ಲಿ ಅಂದು ಹತಾಶೆ ಇರಲಿಲ್ಲ, ಬದಲಿಗೆ ಜಗತ್ತನ್ನೇ ಗೆದ್ದ ಹೆಮ್ಮೆಯಿತ್ತು! ಏಕೆಂದರೆ, ಬಡತನದ ಕಾರಣಕ್ಕೆ ಸಮಾಜ ಯಾರನ್ನು ಕಡೆಗಣಿಸಿತ್ತೋ, ಅದೇ ಒಂದೇ ಮನೆಯಲ್ಲಿ ನಾಲ್ವರು ಪೊಲೀಸ್‌ರು ಒಟ್ಟಿಗೆ ಖಾಕಿ ಉಡುಪು ಧರಿಸಿ ಆ ವೃದ್ಧ ತಂದೆಯ ಮುಂದೆ ತಲೆ ಎತ್ತಿ ನಿಂತಿದ್ದರು.

ಬಡತನದ ಕತ್ತಲಲ್ಲಿ ಬೆಂದ ಬಾಲ್ಯ!

ಅತ್ತರ್ ಸಿಂಗ್ ಮತ್ತು ಅವರ ಪತ್ನಿ ರಾಜ್ವಂತಿ ದೇವಿಗೆ ದುಬಾರಿ ಶಿಕ್ಷಣದ ಅರಿವಿರಲಿಲ್ಲ. ಹೊಲದಲ್ಲಿ ಹಗಲಿರುಳು ಕಷ್ಟಪಟ್ಟರೂ ದಿನದ ಕೊನೆಯಲ್ಲಿ ಕೈಗೆ ಸಿಗುತ್ತಿದ್ದುದು ಕೇವಲ ಕೆಲವು ರೂಪಾಯಿಗಳು ಮಾತ್ರ. ಮೂವರು ಹೆಣ್ಣುಮಕ್ಕಳು ಹುಟ್ಟಿದಾಗ, ಇವರ ಮದುವೆ ಮಾಡುವುದು ಹೇಗೆ? ಈ ಬಡತನದಲ್ಲಿ ಇವರನ್ನು ಸಾಕುವುದು ಹೇಗೆ? ಎಂದು ಸಮಾಜ ನಿಟ್ಟುಸಿರು ಬಿಟ್ಟಿತ್ತು. ಆದರೆ ಆ ವೃದ್ಧ ತಂದೆ ತನ್ನ ಹೊಟ್ಟೆಗೆ ಬಟ್ಟೆ ಕಟ್ಟಿಯಾದರೂ ಮಕ್ಕಳ ಕೈಗೆ ಪುಸ್ತಕ ನೀಡಿದರು. ತಂದೆಯ ಪಾದದ ಬಿರುಕುಗಳು ಮತ್ತು ತಾಯಿಯ ಕಣ್ಣೀರನ್ನು ಕಂಡ ಮಕ್ಕಳಿಗೆ ಒಂದೇ ಹಠವಿತ್ತು. ಅದೇನೆಂದರೆ, ನಮ್ಮ ತಂದೆಯ ಹೆಗಲ ಮೇಲಿರುವ ಬಡತನದ ಈ ನೊಗ ನಾವೇ ಮುರಿಯಬೇಕು.

ಕೋಚಿಂಗ್‌ಗೆ ಇರಲಿಲ್ಲ ಹಣ!

ಕೋಚಿಂಗ್ ಸೆಂಟರ್‌ಗೆ ಹೋಗಲು ಹಣವಿರಲಿಲ್ಲ, ಸರಿಯಾದ ಸ್ಟಡಿ ಮೆಟೀರಿಯಲ್ ಇರಲಿಲ್ಲ. ಆದರೆ ಅವರ ಬಳಿ ಬೆಂಕಿಯಂತಹ ಛಲವಿತ್ತು. ಹಳ್ಳಿಯ ಕತ್ತಲ ರಾತ್ರಿಯಲ್ಲಿ ಒಂದೇ ದೀಪದ ಬೆಳಕಿನಲ್ಲಿ ಹಳೆಯ ಪುಸ್ತಕಗಳನ್ನು ನಾಲ್ವರೂ ಒಟ್ಟಿಗೆ ಹಂಚಿಕೊಂಡು ಓದಿದರು. ಪೊಲೀಸ್ ನೇಮಕಾತಿಯ ದೈಹಿಕ ಪರೀಕ್ಷೆಗಾಗಿ ಬೆಳಗಿನ ಜಾವ 4 ಗಂಟೆಗೆ ಬರಿಗಾಲಿನಲ್ಲೇ ಹಳ್ಳಿಯ ಮಣ್ಣಿನ ರಸ್ತೆಯಲ್ಲಿ ಓಡಿ ರಕ್ತ ಮತ್ತು ಬೆವರನ್ನು ಒಂದಾಗಿಸಿದರು.

ಸಮಾಜದ ಬಡತನ ಮಂಡಿಯೂರಿದ ಕ್ಷಣ!

ಇವರ ಕಠಿಣ ಪರಿಶ್ರಮದ ಮುಂದೆ ವಿಧಿ ಕೂಡ ಸೋಲಲೇಬೇಕಾಯಿತು. ಮೊದಲಿಗೆ ಹಿರಿಯ ಮಗಳು ಸುದೇಶ್ ಚಂಡೀಗಢ ಪೊಲೀಸ್‌ ಕಾನ್‌ಸ್ಟೆಬಲ್ ಆಗಿ ಆಯ್ಕೆಯಾಗಿ ಇತಿಹಾಸ ಬರೆದರು. ಅವಳ ಹಾದಿಯನ್ನೇ ಹಿಡಿದು ಎರಡನೇ ಮಗಳು ಊರ್ಮಿಳಾ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) ಸೇರಿಕೊಂಡರೆ, ಮೂರನೇ ಮಗಳು ಮೋನಿಕಾ ದೆಹಲಿ ಪೊಲೀಸ್‌ ಇಲಾಖೆಗೆ ಸಿಂಹಿಣಿಯಂತೆ ಹೆಜ್ಜೆ ಇಟ್ಟರು. ಕೊನೆಯಲ್ಲಿ ಕಿರಿಯ ಮಗ ಅಂಕಿತ್ ಹರಿಯಾಣ ಪೊಲೀಸ್ ಪಡೆಗೆ ಸೇರ್ಪಡೆಯಾದರು. ಇಡೀ ದೇಶದ ಇತಿಹಾಸದಲ್ಲೇ ಒಂದೇ ಮನೆಯಲ್ಲಿ ನಾಲ್ವರು ಪೊಲೀಸ್‌ರು ಒಟ್ಟಿಗೆ ದೇಶಸೇವೆಗೆ ನಿಂತ ಅತ್ಯಂತ ಅಪರೂಪದ ಘಟನೆ ಇದಾಯಿತು.

ಕಣ್ಣೀರ ಧಾರೆ ಹರಿದ ಆ ಮಹಾ ಕ್ಷಣ!

ನಾಲ್ವರೂ ಒಟ್ಟಿಗೆ ತರಬೇತಿ ಮುಗಿಸಿ, ತಲೆಯ ಮೇಲೊಂದು ಖಾಕಿ ಕ್ಯಾಪ್, ಮೈಮೇಲೆ ಖಡಕ್ ಯೂನಿಫಾರ್ಮ್ ಧರಿಸಿ ತಮ್ಮ ಹಳ್ಳಿಯ ಮನೆಗೆ ಬಂದಾಗ ಇಡೀ ಗ್ರಾಮವೇ ಕಣ್ಣೀರು ಹಾಕಿತು. ಸದಾ ಬಡತನದಿಂದ ತಲೆ ತಗ್ಗಿಸಿ ನಡೆಯುತ್ತಿದ್ದ ಆ ವೃದ್ಧ ತಂದೆಯ ಮುಂದೆ ನಿಂತು, ಈ ನಾಲ್ಕು ಜನ ಮಕ್ಕಳು ಒಟ್ಟಿಗೆ ಹಸ್ತ ಎತ್ತಿ 'ಸೆಲ್ಯೂಟ್' ಹೊಡೆದಾಗ ಆ ತಂದೆಯ ಎದೆ ಹೆಮ್ಮೆಯಿಂದ ಉಬ್ಬಿತು. ತನ್ನ ಹರಿದ ಅಂಗಿಯ ಹೆಗಲ ಮೇಲೆ ಮುಖ ಮುಚ್ಚಿಕೊಂಡು, ಆನಂದಬಾಷ್ಪ ಸುರಿಸುತ್ತಾ ಆ ತಂದೆ ಬಿಕ್ಕಿ ಬಿಕ್ಕಿ ಅತ್ತರು. ನನ್ನ ಮಕ್ಕಳು ಕೇವಲ ನನ್ನ ಸಾಲ ತೀರಿಸಲಿಲ್ಲ, ನನ್ನ ಜನ್ಮವನ್ನೇ ಸಾರ್ಥಕಗೊಳಿಸಿದರು. ಇಡೀ ದೇಶ ಕಾಯುವ ಜವಾಬ್ದಾರಿ ಇಂದು ನನ್ನ ಮಕ್ಕಳ ಮೇಲಿದೆ," ಎಂದು ತಂದೆ ಅತ್ತಾಗ ಅಲ್ಲಿ ನೆರೆದಿದ್ದ ಇಡೀ ಹಳ್ಳಿಯ ಕಣ್ಣುಗಳು ತೇವವಾಗಿದ್ದವು.

PREV
Read more Articles on
click me!

Recommended Stories

IIT Delhi ವಿದ್ಯಾರ್ಥಿ ಸಾವು ಪ್ರಕರಣ: ನಮ್ಮ ಹೋರಾಟಕ್ಕೆ ರಾಜಕೀಯ ಬಣ್ಣ ಬೇಡ! JNU ಪ್ರಭಾವ ವಿರೋಧಿಸಿ ವಿದ್ಯಾರ್ಥಿಗಳ ಆಕ್ರೋಶ
UPSC interview: ಎತ್ತರ ಇರೋರು ಹೆಚ್ಚು ಊಟ ಮಾಡ್ತಾರಾ? ಈ ವಿಚಿತ್ರ ಪ್ರಶ್ನೆಗೆ ಜಾಣ್ಮೆಯ ಉತ್ತರ