ರಾಜ್ಯ ಸರ್ಕಾರದ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಜಾರಿಗೊಳಿಸಿದ್ದರಿಂದ ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿದೆ ಎಂದು ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಆತಂಕ ವ್ಯಕ್ತಪಡಿಸಿದರು.
ಭಟ್ಕಳ (ಜ.2) : ರಾಜ್ಯ ಸರ್ಕಾರದ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಜಾರಿಗೊಳಿಸಿದ್ದರಿಂದ ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿದೆ ಎಂದು ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಆತಂಕ ವ್ಯಕ್ತಪಡಿಸಿದರು. ಭಾನುವಾರ ಇಲ್ಲಿನ ಅಂಜುಮಾನ್ ಹಾಮಿ-ಏ-ಮುಸ್ಲಿಮೀನ್ ಸಂಸ್ಥೆಯ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ಎಲ್ಲ ಭಾಷೆ, ಸಂಸ್ಕೃತಿಗೆ ಗೌರವ ಕೊಡಬೇಕಾಗಿದೆ ಎಂದರು.
ಭಾರತ(India)ವು ವಲಸಿಗರ ದೇಶವಾಗಿದೆ. ಮೊದಲನೆಯದಾಗಿ ದ್ರಾವಿಡರು(Dravid) ಆಗಮಿಸಿದರೆ, ಶೇ. 94ರಷ್ಟುಈಶಾನ್ಯದಿಂದ ಆಗಮಿಸಿದ್ದಾರೆ. ಅಂದು ಭಾರತ ದೇಶ ವಲಸಿಗರಿಗೆ ಒಂದು ಉತ್ತಮ ನೆಲವಾಗಿತ್ತು. ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಉತ್ತಮ ಸಮತಟ್ಟಾದ, ಫಲವತ್ತಾದ ಭೂ ಪ್ರದೇಶ ಕೃಷಿಗೆ ತೀರಾ ಅನುಕೂಲವಾಗಿತ್ತು. ವಿಪುಲವಾದ ನೀರಿನಾಶ್ರಯ ನದಿಗಳಿಂದ ದೊರೆಯುತ್ತಿರುವುದು ವಲಸಿಗರಿಗೆ ಜೀವನಾಧಾರಕ್ಕೆ ಸಹಾಯಕವಾಗಿತ್ತು ಎಂದೂ ಅವರು ಹೇಳಿದರು.
ನಮ್ಮ ಹಿಜಾಬ್, ಗಡ್ಡ ಕೊನೆಗೆ ನಾವು ಆಡುವ ಕ್ರಿಕೆಟ್ ಬಗ್ಗೆಯೂ ನಿಮಗೆ ದ್ವೇಷವಿದೆ: ಓವೈಸಿ!
ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್(BK Hariprasad) ಮಾತನಾಡಿ, ಶಿಕ್ಷಣಕ್ಕೆ ಭಾರತದಲ್ಲಿ ಬಹುದೊಡ್ಡ ಇತಿಹಾಸ ಇಲ್ಲ. ಲಾರ್ಡ್ ಮೆಕಾಲೆ ಬರುವ ಮೊದಲು ಶೇ. 3ರಷ್ಟುಸಾಕ್ಷರತೆ ಇತ್ತು. 112 ವರ್ಷಗಳ ಆನಂತರ ಅದು ಶೇ. 11ರಿಂದ 13 ಆಯಿತು. ಅಂದು 11 ವಿಶ್ವವಿದ್ಯಾಲಗಳಿದ್ದವು. ಇಂದು 500ಕ್ಕೂ ಹೆಚ್ಚು ವಿಶ್ವವಿದ್ಯಾಲಗಳಿವೆ. ನಮ್ಮ ಸಾಕ್ಷರತೆ ಪ್ರಮಾಣ ಶೇ. 76 ಆಗಿದೆ ಎಂದ ಅವರು, ಭಾರತವು 22 ಅಧಿಕೃತ ಭಾಷೆಗಳನ್ನು ಹೊಂದಿದೆ. ಇನ್ನೂ 18 ಭಾಷೆಗಳು ಅಂಗೀಕಾರಕ್ಕಾಗಿ ಕಾಯುತ್ತಿವೆ ಎಂದರು.
ಉತ್ತರ ಪ್ರದೇಶ(Uttara pradesh)ದ ಜಮೀಯತ್ ಉಲೆಮಾದ ಅಧ್ಯಕ್ಷ ಮೌಲಾನಾ ಅಶಾದ್ ರಶೀದಿ ‘ಅಂಜುಮಾನ್ 1919ರಿಂದ 2019’, ‘ಅಂಜುಮಾನ್ ಶತಮಾನೋತ್ಸವ ಸಂಚಿಕೆ’ ಹಾಗೂ ‘ಮುಸ್ಲಿಂ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸವಾಲು ಹಾಗೂ ಪರಿಹಾರೋಪಾಯ’ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.
ಶಾಸಕ ಸುನೀಲ್ ನಾಯ್ಕ ಮಾತನಾಡಿ, ನಾನೋರ್ವ ಅಂಜುಮಾನ್ ವಿದ್ಯಾರ್ಥಿಯಾಗಿ ಈ ಸಂಸ್ಥೆಯ ಬೆಳವಣಿಗೆ ನನಗೆ ಹೆಮ್ಮೆ ತಂದಿದೆ. ಅಂಜುಮಾನ್ ಸಂಸ್ಥೆ ರಾಜ್ಯಕ್ಕೆ ಮಾದರಿಯಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮವಾದ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜ್ ನಿರ್ಮಿಸಲು ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಚುನಾವಾಣಾ ಆಯೋಗದ ಮಾಜಿ ಕಮಿಷನರ್ ಎಸ್.ವೈ. ಖುರೇಶಿ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಮಾತನಾಡಿದರು. ಅಂಜುಮಾನ್ ಹಾಮಿ-ಏ-ಮುಸ್ಲಿಮೀನ್ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಮುಝಮ್ಮಿಲ್ ಖಾಜಿಯಾ ಅಧ್ಯಕ್ಷತೆ ವಹಿಸಿದ್ದರು. ತಂಝೀಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಶತಮಾನೋತ್ಸವ ಆಚರಣೆಯ ಸಂಚಾಲಕ ತನ್ವೀರ್ ಕಾಸರಗೋಡು ಉಪಸ್ಥಿತರಿದ್ದರು.
Hijab Case: ಬಿಹಾರದಲ್ಲೂ ಶುರುವಾಯ್ತು ಹಿಜಾಬ್ ಗಲಾಟೆ, ಪರೀಕ್ಷೆ ವೇಳೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು!
ಹಫಿಜ್ ಉಮೈರ್ ಕಿರಾತ್ ಪಠಿಸಿದರು. ಅಂಜುಮಾನ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಸ್ಮಾಯಿಲ್ ಸಿದ್ಧಿಕ್ ಸ್ವಾಗತಿಸಿದರು. ಅಫ್ತಾಬ್ ಹುಸೇನ್ ಕೋಲಾ, ಮೊಹಮ್ಮದ್ ಮೌಸೀನ್ ಶಾಬಂದ್ರಿ ಕಾರ್ಯಕ್ರಮ ನಿರೂಪಿಸಿದರು. ಮೊಹಮ್ಮದ್ ಸಾಧಿಕ್ ಪಿಲ್ಲೂರ್ ವಂದಿಸಿದರು.