ಸರ್ಕಾರದ ಅವೈಜ್ಞಾನಿಕ ನಿರ್ಧಾರ: ಕೆಲಸವಿಲ್ಲದೆ ಬೀದಿಗೆ ಬಂದ ಅತಿಥಿ ಉಪನ್ಯಾಸಕರು..!

By Kannadaprabha NewsFirst Published Jan 29, 2021, 2:58 PM IST
Highlights

ಅತಿಥಿ ಉಪನ್ಯಾಸಕರಿಲ್ಲದೆ ಕಾಲೇಜು ವಿದ್ಯಾರ್ಥಿಗಳ ಬೋಧನೆಗೆ ಬ್ರೇಕ್‌| ಬಳ್ಳಾರಿ ಜಿಲ್ಲೆಯ 341 ಅತಿಥಿ ಉಪನ್ಯಾಸಕರು ಅತಂತ್ರ| ಕೆಲಸವಿಲ್ಲದೆ ಆಟೋ ಓಡಿಸುತ್ತಾರೆ, ಕಟ್ಟಡ ಕಾರ್ಮಿಕರಾದ ಅತಿಥಿ ಉಪನ್ಯಾಸಕರು| 

ಕೆ..ಎಂ. ಮಂಜುನಾಥ್‌

ಬಳ್ಳಾರಿ(ಜ.29): ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಭರ್ತಿ ಸಂಬಂಧ ರಾಜ್ಯ ಸರ್ಕಾರ ಕೈಗೊಂಡಿರುವ ಅವೈಜ್ಞಾನಿಕ ನಿರ್ಧಾರ, ಜಿಲ್ಲೆಯ ನೂರಾರು ಅತಿಥಿ ಉಪನ್ಯಾಸಕರ ಬದುಕನ್ನು ಅತಂತ್ರ ಸ್ಥಿತಿಗೆ ತಂದು ನಿಲ್ಲಿಸಿದೆ.
ಸೇವಾ ಹಿರಿತನ ಮೇಲೆ ಶೇ. 50ರಷ್ಟು ಮಾತ್ರ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡಿರುವುದು ಉಳಿದ ಉಪನ್ಯಾಸಕರು ಕೆಲಸವಿಲ್ಲದೆ ಒದ್ದಾಡುವಂತಾಗಿದ್ದು, ಕಾಯಂ ಉಪನ್ಯಾಸಕರು ಇಲ್ಲದೆ ಜಿಲ್ಲೆಯ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಉಲ್ಬಣವಾಗಿದೆ. ಕಾರ್ಯಭಾರಕ್ಕೆ ಅನುಗುಣವಾಗಿ ಅತಿಥಿ ಉಪನ್ಯಾಸಕರನ್ನು ಕಡಿಮೆ ಮಾಡಬೇಕು ಎಂಬ ಸರ್ಕಾರದ ವಿವೇಚನೆ ರಹಿತ ನಿರ್ಧಾರ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೂ ಪೆಟ್ಟು ನೀಡಿದೆ.

ಕೆಲಸವಿಲ್ಲದೆ ಬೀದಿಗೆ ಬಂದ ಅತಿಥಿ ಉಪನ್ಯಾಸಕರು...

ಬಳ್ಳಾರಿ ಜಿಲ್ಲೆಯಲ್ಲಿ 14 ಸರ್ಕಾರಿ ಪದವಿ ಕಾಲೇಜುಗಳು ಇವೆ. 682 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಶೇ. 50ರಷ್ಟು ಮಾತ್ರ ನೇಮಿಸಿಕೊಂಡಿರುವುದರಿಂದ ಉಳಿದ 341 ಅತಿಥಿ ಉಪನ್ಯಾಸಕರು ಕೆಲಸವಿಲ್ಲದೆ ಬೀದಿಗೆ ಬಂದಿದ್ದಾರೆ.

ಜಿಲ್ಲೆಯ ಬಹುತೇಕ ಪದವಿ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಕೊರತೆ ಇದೆ. ಖಾಲಿ ಇರುವ ಕಾಯಂ ಉಪನ್ಯಾಸಕರ ಕೊರತೆಯನ್ನು ನೀಗಿಸಲು ಸರ್ಕಾರ ಕ್ರಮ ಕೈಗೊಂಡಿಲ್ಲ. ಹೀಗಾಗಿ ಎಲ್ಲ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರನ್ನು ಹೆಚ್ಚು ಅವಲಂಬಿಸಿವೆ. ಇದೀಗ ಸರ್ಕಾರ ಶೇ.50ರಷ್ಟುಉಪನ್ಯಾಸಕರನ್ನು ನೇಮಿಸಿಕೊಳ್ಳುವ ನಿಲುವು ತೆಗೆದುಕೊಂಡಿರುವುದರಿಂದ ವಿದ್ಯಾರ್ಥಿಗಳು ನಿಗದಿತ ಬೋಧನೆಯಿಂದ ವಂಚಿತರಾಗುತ್ತಿದ್ದಾರೆ.

ಪೋಷಕರ ಗಮನಕ್ಕೆ: ಶಾಲಾ ಶುಲ್ಕದ ಬಗ್ಗೆ ಸಚಿವ ಸುರೇಶ್‌ ಕುಮಾರ್‌ ಕೊಟ್ರು ಮಹತ್ವದ ಮಾಹಿತಿ

ತರಗತಿಗಳು ನಡೆಯುತ್ತಿಲ್ಲ ಎಂಬ ಅಳಲು...

ಕೋವಿಡ್‌ ಸಂದರ್ಭದಲ್ಲಿ ಭೌತಿಕ ತರಗತಿಗಳಿಂದ ದೂರ ಉಳಿದಿದ್ದೆವು. ಕಾಲೇಜುಗಳು ಶುರುವಾಗಿವೆ ಎಂದು ಉತ್ಸುಕದಿಂದ ಬರುತ್ತೇವೆ. ಆದರೆ, ಉಪನ್ಯಾಸಕರ ಕೊರತೆಯಿಂದ ಎಲ್ಲ ತರಗತಿಗಳು ನಡೆಯುತ್ತಿಲ್ಲ. ದೂರದ ಊರುಗಳಿಂದ ಬರುವ ನಮಗೆ ತೀವ್ರ ನಿರಾಸೆಯಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ನಗರದ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ಕೆ. ಭಾಗ್ಯ, ಕವಿತಾ, ಪುಷ್ಪಾ ಹಾಗೂ ವಿಜಯಕುಮಾರ್‌.

ಅತಿಥಿ ಉಪನ್ಯಾಸಕರ ಕೊರತೆಯಿಂದ ಬೋಧನೆಗೆ ಸಮಸ್ಯೆಯಾಗಿರುವುದು ನಿಜ. ಸರ್ಕಾರದ ನಿರ್ಧಾರ ನಾವು ಪ್ರಶ್ನಿಸಲು ಬರೋದಿಲ್ಲ. ಇರುವ ಉಪನ್ಯಾಸಕರನ್ನಿಟ್ಟುಕೊಂಡೇ ಕೊರತೆ ನೀಗಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಕಾಲೇಜಿನ ಪ್ರಾಂಶುಪಾಲ ಪೊ›. ಹೇಮಣ್ಣ.

ಆಟೋ ಓಡಿಸುವ ಉಪನ್ಯಾಸಕರು...

ಅತಿಥಿ ಉಪನ್ಯಾಸಕರನ್ನು ಪೂರ್ಣ ಪ್ರಮಾಣದಲ್ಲಿ ನೇಮಿಸಿಕೊಳ್ಳದ ಹಿನ್ನೆಲೆಯಲ್ಲಿ ಅನೇಕ ಉಪನ್ಯಾಸಕರು ಹೊಟ್ಟೆಪಾಡಿಗಾಗಿ ವಿವಿಧ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವರು ಆಟೋ ಓಡಿಸಿ ತುತ್ತಿನಚೀಲ ತುಂಬಿಸಿಕೊಂಡರೆ ಮತ್ತೆ ಕೆಲವರು ಹೊಲ-ಗದ್ದೆಗಳ ಕೆಲಸಕ್ಕೆ ಹಳ್ಳಿಗೆ ಮರಳಿದ್ದಾರೆ. ಕಟ್ಟಡ ಕಾರ್ಮಿಕರಾಗಿ, ದಿನಗೂಲಿ ನೌಕರರಾಗಿ, ಕಾಯಿಪಲ್ಯೆ ವ್ಯಾಪಾರಕ್ಕಾಗಿ ತೆರಳಿದವರೂ ಇದ್ದಾರೆ ಎನ್ನುತ್ತಾರೆ ಸರಳಾದೇವಿ ಕಾಲೇಜಿನ ಇತಿಹಾಸ ವಿಷಯದ ಅತಿಥಿ ಉಪನ್ಯಾಸಕ ರಫೀಕ್‌.

ಫೆ. 1ರಿಂದ ಈ ಕ್ಲಾಸ್‌ಗಳು ಪೂರ್ತಿ ದಿನ; ಸುರೇಶ್ ಕುಮಾರ್

ಸರಳಾದೇವಿ ಕಾಲೇಜಿನಲ್ಲಿ 75 ಅತಿಥಿಗಳ ಉಪ​ನ್ಯಾ​ಸ​ಕ​ರ ಕೊರತೆ...

ರಾಜ್ಯದ ಅತಿ ಹೆಚ್ಚು ವಿದ್ಯಾರ್ಥಿಗಳು (4220) ಇರುವ ಕಾಲೇಜು ಎಂಬ ಹೆಗ್ಗಳಿಕೆ ಹೊಂದಿರುವ ನಗರದ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 75 ಅತಿಥಿ ಉಪನ್ಯಾಸಕರ ಕೊರತೆ ಇದೆ. ಶಿಕ್ಷಣ ಇಲಾಖೆ ಮೊದಲು 66 ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವಂತೆ ಆದೇಶ ನೀಡಿತು. ಬಳಿಕ ಮತ್ತೊಂದು ಆದೇಶದಲ್ಲಿ 57 ಜನರನ್ನು ಮಾತ್ರ ನೇಮಿಸಿಕೊಳ್ಳುವಂತೆ ತಿಳಿಸಿತು. ಉಪನ್ಯಾಸಕರ ಕೊರತೆಯಿಂದಾಗಿ ಕಾಲೇಜಿನ ವಿದ್ಯಾರ್ಥಿಗಳನ್ನು ನಿಯಂತ್ರಿಸುವುದು ಪ್ರಾಂಶುಪಾಲರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ತರಗತಿ ನಡೆಯದೆ ತರಗತಿ ಕೋಣೆಯ ಪ್ರಾಂಗಣದಲ್ಲಿ ವಿದ್ಯಾರ್ಥಿಗಳು ಓಡಾಡಿಕೊಂಡಿರುತ್ತಾರೆ. ಇದರಿಂದ ಪಕ್ಕದ ತರಗತಿಗಳಿಗೆ ತೊಂದರೆಯಾಗುತ್ತಿದೆ ಎಂಬುದು ಉಪನ್ಯಾಸಕರ ಅಳಲು.

ನಮ್ಮ ಕಾಲೇಜಿನಲ್ಲಿ 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಅತಿಥಿ ಉಪನ್ಯಾಸಕರ ಕೊರತೆಯಿಂದ ಬೋಧನೆಗೆ ತೀವ್ರ ಸಮಸ್ಯೆಯಾಗಿದೆ. ಸಂಬಂಧಿಸಿದ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಇಲ್ಲಿನ ಸಮಸ್ಯೆ ವಿವರಿಸಿದ್ದೇವೆ ಎಂದು ಬಳ್ಳಾರಿ ನಗರದ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪೊ.ಹೇಮಣ್ಣ ತಿಳಿಸಿದ್ದಾರೆ. 

ನಾವು ಹಳ್ಳಿಯಿಂದ ಬೆಳಗ್ಗೆಯೇ ಎದ್ದು ಕಾಲೇಜಿಗೆ ಬರುತ್ತೇವೆ. ಆದರೆ, ಉಪನ್ಯಾಸಕರ ಕೊರತೆಯಿಂದ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ಸರ್ಕಾರ ಅಗತ್ಯ ಉಪನ್ಯಾಸಕರನ್ನು ಒದಗಿಸಬೇಕು ಎಂದು ಬಳ್ಳಾರಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ರಮೀಜಾ, ಮೋಹನ್‌, ವಿಜಯಶಾಂತಿ ಹೇಳಿದ್ದಾರೆ. 

click me!