ಪೋಷಕರ ಗಮನಕ್ಕೆ: ಶಾಲಾ ಶುಲ್ಕದ ಬಗ್ಗೆ ಸಚಿವ ಸುರೇಶ್‌ ಕುಮಾರ್‌ ಕೊಟ್ರು ಮಹತ್ವದ ಮಾಹಿತಿ

By Kannadaprabha News  |  First Published Jan 29, 2021, 8:32 AM IST

ಶುಲ್ಕ ಬಿಕ್ಕಟ್ಟು: ಮತ್ತೆ ಪೋಷಕರ ಪ್ರತಿಭಟನೆ?| ಸರ್ಕಾರಕ್ಕೆ ಶುಲ್ಕ ನಿಗದಿಗಾಗಿ ನೀಡಿದ್ದ ಸಮಯ ಮುಕ್ತಾಯ| ಸರ್ಕಾರದ ವಿಳಂಬ ನೀತಿ ಖಂಡಿಸಿ ಧರಣಿಗೆ ನಿರ್ಧಾರ| ಪೋಷಕರ ಹಿತರಕ್ಷಣೆಯ ಜೊತೆ ಖಾಸಗಿ ಶಾಲೆಗಳ ಹಿತವನ್ನೂ ನೋಡಬೇಕಿದೆ| ಪೋಷಕರು, ಶಿಕ್ಷಕ ವರ್ಗ ಇಬ್ಬರ ಹಿತರಕ್ಷಣೆಯನ್ನೂ ಗಮನದಲ್ಲಿಟ್ಟುಕೊಂಡು ತೀರ್ಮಾನಕ್ಕೆ ಬರಬೇಕಾಗಿದೆ: ಸುರೇಶ್‌ ಕುಮಾರ್‌| 


ಬೆಂಗಳೂರು(ಜ.29): ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಖಾಸಗಿ ಶಾಲಾ ಶುಲ್ಕ ಕಡಿತದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಹೇಳಿಕೆ ನೀಡಿರುವ ಬೆನ್ನಲ್ಲೇ ಶುಲ್ಕ ಬಿಕ್ಕಟ್ಟು ಬಗೆಹರಿಸಲು ವಿಳಂಬ ನೀತಿ ವಿರುದ್ಧ ಪೋಷಕರು ಮತ್ತೆ ಬೀದಿಗಿಳಿಯಲು ಮುಂದಾಗಿದ್ದಾರೆ.

ಖಾಸಗಿ ಶಾಲೆಗಳ ಶುಲ್ಕ ಕಡಿತದ ಬಗ್ಗೆ ಸರ್ಕಾರದ ವಿಳಂಬ ನೀತಿ ಹಾಗೂ ಇದನ್ನೇ ಬಂಡವಾಳ ಮಾಡಿಕೊಂಡು ಪೂರ್ಣ ಶುಲ್ಕ ವಸೂಲಿಗಿಳಿದಿರುವ ಖಾಸಗಿ ಶಾಲೆಗಳ ವಿರುದ್ಧ ಜ.31ರ ಭಾನುವಾರ ಮತ್ತೆ ಪ್ರತಿಭಟನೆ ನಡೆಸಲು ಪೋಷಕರ ಸಂಘಟನೆಗಳು ಮುಂದಾಗಿವೆ. ಈ ಸಂಬಂಧ ಈಗಾಗಲೇ ಪೊಲೀಸರಿಗೆ ಪೋಷಕ ಸಂಘಟನೆಗಳು ಮನವಿ ಸಲ್ಲಿಸಿದ್ದು, ಅನುಮತಿ ಸಿಕ್ಕ ಕೂಡಲೇ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ. ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಪೋಷಕ ಸಂಘಟನೆಗಳು ಚಿಂತನೆ ನಡೆಸಿವೆ.

Latest Videos

undefined

ಶಾಲೆಗಳು ಪೂರ್ಣ ಪ್ರಮಾಣದ ಶುಲ್ಕ ವಸೂಲಿಯನ್ನು ಬಿಟ್ಟಿಲ್ಲ. ಸರ್ಕಾರ ವಿಳಂಬ ನೀತಿ ಇಂತಹವರಿಗೆ ಅನುಕೂಲವಾಗಿದೆ. ಇದರ ವಿರುದ್ಧ ನಿತ್ಯ ಒಂದಿಲ್ಲೊಂದು ಶಾಲೆಗಳ ಪೋಷಕರು ಶಾಲೆಗಳ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಶುಲ್ಕ ಬಿಕ್ಕಟ್ಟು ಬಗೆಹರಿಸಲು ಸರ್ಕಾರಕ್ಕೆ ನೀಡಿದ್ದ ಜ.28ರ ಗಡುವೂ ಮುಗಿದಿದೆ. ಸರ್ಕಾರದ ವಿಳಂಬ ನೀತಿಯಿಂದ ಶುಲ್ಕ ಬಿಕ್ಕಟ್ಟು ಮುಂದುವರೆದಿದೆ. ಹಾಗಾಗಿ ಮತ್ತೆ ಪೋಷಕರು ಬೀದಿಗಿಳಿಯುವುದು ಅನಿವಾರ್ಯವಾಗಿದೆ. ಹಾಗಾಗಿ ಕರ್ನಾಟಕ ಖಾಸಗಿ ಶಾಲಾ ಪೋಷಕರ ಸಂಘಟನೆಗಳ ಸಮನ್ವಯ ವೇದಿಕೆಯಡಿ ಹತ್ತಕ್ಕೂ ಹೆಚ್ಚು ಪೋಷಕರ ಸಂಘಟನೆಗಳ ಪ್ರತಿನಿಧಿಗಳು ಶನಿವಾರ ಸಭೆ ನಡೆಸಿ ಮುಂದಿನ ಹೋರಾಟದ ರೂಪರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ವೇದಿಕೆ ಸದಸ್ಯ ಯೋಗಾನಂದ್‌ ಹೇಳಿದ್ದಾರೆ.

ಫೆ. 1ರಿಂದ ಈ ಕ್ಲಾಸ್‌ಗಳು ಪೂರ್ತಿ ದಿನ; ಸುರೇಶ್ ಕುಮಾರ್

ಸಿಎಂ ಜೊತೆ ಚರ್ಚಿಸಿ ಶುಲ್ಕ ನಿರ್ಧಾರ

ಖಾಸಗಿ ಶಾಲೆಗಳ ಶುಲ್ಕ ಕಡಿತದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಜೊತೆ ಚರ್ಚಿಸಿ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ವೇಳೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಪೋಷಕರ ಪರಿಸ್ಥಿತಿಯ ಅರಿವು ನಮಗಿದೆ. ಆದರೆ, ಅದೇ ಸಂದರ್ಭದಲ್ಲಿ, ಅನೇಕ ಖಾಸಗಿ ಶಾಲೆಗಳಲ್ಲಿ ಶಿಕ್ಷಕರು ವೇತನ ಇಲ್ಲದೆ, ಅರ್ಧ ಸಂಬಳಕ್ಕೆ ಕೆಲಸ ಮಾಡಿದ್ದಾರೆ. ಕೆಲಸವನ್ನೇ ಕಳೆದುಕೊಂಡವರೂ ಇದ್ದಾರೆ. ಪೋಷಕರ ಹಿತರಕ್ಷಣೆಯ ಜೊತೆ ಖಾಸಗಿ ಶಾಲೆಗಳ ಹಿತವನ್ನೂ ನೋಡಬೇಕಿದೆ. ಪೋಷಕರು, ಶಿಕ್ಷಕ ವರ್ಗ ಇಬ್ಬರ ಹಿತರಕ್ಷಣೆಯನ್ನೂ ಗಮನದಲ್ಲಿಟ್ಟುಕೊಂಡು ತೀರ್ಮಾನಕ್ಕೆ ಬರಬೇಕಾಗಿದೆ ಎಂದರು. ಶುಲ್ಕ ವಿಷಯದಲ್ಲಿ ಪೋಷಕರು ಭಾನುವಾರ ಪ್ರತಿಭಟನೆ ನಡೆಸಲು ಮುಂದಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಅದಕ್ಕೂ ಮೊದಲೇ ಸರ್ಕಾರ ಶುಲ್ಕ ಕಡಿತದ ತೀರ್ಮಾನಕ್ಕೆ ಬರಲಿದೆ ಎಂದರು.
 

click me!