Education in Karnataka: ಇನ್ಮುಂದೆ 6-8 ಕ್ಲಾಸ್‌ ಶಿಕ್ಷಕ ಹುದ್ದೆಗೆ ಪದವಿ ಕಡ್ಡಾಯ

Kannadaprabha News   | Asianet News
Published : Jan 22, 2022, 06:06 AM IST
Education in Karnataka: ಇನ್ಮುಂದೆ 6-8 ಕ್ಲಾಸ್‌ ಶಿಕ್ಷಕ ಹುದ್ದೆಗೆ ಪದವಿ ಕಡ್ಡಾಯ

ಸಾರಾಂಶ

*  50% ಅಂಕದೊಂದಿಗೆ ಪಾಸಾಗಿರಬೇಕು *  ಬಿಎಡ್‌, ಡಿಎಡ್‌, ಪಿಯುಸಿ ಸಾಲದು *  15000 ಶಿಕ್ಷಕರ ನೇಮಕಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಕರಡು ನಿಯಮ ಪ್ರಕಟ  

ಬೆಂಗಳೂರು(ಜ.22):  ರಾಜ್ಯ ಸರ್ಕಾರಿ ಶಾಲೆಗಳಲ್ಲಿನ(Government Schools) 6ರಿಂದ 8ನೇ ತರಗತಿ ಬೋಧನೆಗೆ 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧ ರಾಷ್ಟ್ರೀಯ ಶಿಕ್ಷಣ ನೀತಿಗೆ(National Education Policy) ಪೂರಕವಾಗಿ ಶಿಕ್ಷಕರ ನೇಮಕಾತಿ ನಿಯಮಗಳಲ್ಲಿ ಅನೇಕ ಬದಲಾವಣೆ ಮಾಡಿ ಸರ್ಕಾರ ಕರಡು ನಿಯಮಾವಳಿ ಪ್ರಕಟಿಸಿದೆ.

ಪ್ರಮುಖವಾಗಿ ಪ್ರತಿಯೊಂದು ವಿಷಯಕ್ಕೂ ಆಯಾ ವಿಷಯಗಳನ್ನು ಪದವಿಯಲ್ಲಿ(Degree) ಅಧ್ಯಯನ ಮಾಡಿರುವವರನ್ನು ನೇಮಿಸುವುದು, ನೇಮಕಾತಿಗೆ(Recruitment) ಸ್ಪರ್ಧಾತ್ಮಕ ಪರೀಕ್ಷೆ ಫಲಿತಾಂಶದ ಶೇ.50ರಷ್ಟು ಅಂಕ, ಅರ್ಜಿ ಸಲ್ಲಿಸಲು ಅರ್ಹತೆಗಾಗಿ ಪ್ರತಿ ವರ್ಷ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷಾ (TET) ಫಲಿತಾಂಶದ ಶೇ.20ರಷ್ಟುಅಂಕ, ಪದವಿಯ ಶೇ.20 ಮತ್ತು ಬಿ.ಇಡಿ, ಡಿ.ಎಡ್‌ ಸೇರಿದಂತೆ ಅರ್ಹ ಶಿಕ್ಷಕರ ಶಿಕ್ಷಣದ ಶೇ.10ರಷ್ಟು ಅಂಕಗಳನ್ನು ಪರಿಗಣಿಸಲಾಗುತ್ತದೆ. ನೇಮಕಗೊಂಡವರಿಗೆ 14,550 ರಿಂದ 26,700 ರು.ವರೆಗೆ ಮೂಲ ವೇತನ ಶ್ರೇಣಿ ನಿಗದಿಪಡಿಸಲಾಗಿದೆ.

Guest Lecturers: ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿಗಳ ಮಹಾಪೂರ

ಈ ಸಂಬಂಧ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು(ಸಾರ್ವಜನಿಕ ಶಿಕ್ಷಣ ಇಲಾಖೆ)(ನೇಮಕಾತಿ)(ವಿಶೇಷ) ನಿಯಮ 2022 ಕರಡು ಪ್ರತಿಯನ್ನು ಶುಕ್ರವಾರ ಪ್ರಕಟಿಸಿದೆ.

ಕರಡು ವಿವರ:

6ರಿಂದ 8ನೇ ತರಗತಿ ಶಿಕ್ಷಕರಾಗಲು ಇನ್ನು ಮುಂದೆ ಡಿ.ಎಡ್‌(D.ed) ಅಥವಾ ಬಿ.ಎಡ್‌.(B.ed) ಜತೆಗೆ ದ್ವಿತೀಯ ಪಿಯುಸಿ ತೇರ್ಗಡೆಯಾಗಿದ್ದರೆ ಸಾಲದು. ಪದವಿಯಲ್ಲಿ ಕಡ್ಡಾಯವಾಗಿ ಶೇ.50ಕ್ಕಿಂತ ಹೆಚ್ಚು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಕನ್ನಡ, ಇಂಗ್ಲೀಷ್‌, ಹಿಂದಿ ಸೇರಿದಂತೆ ಯಾವುದೇ ಭಾಷಾ ವಿಷಯದ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು ಆ ಭಾಷಾ ವಿಷಯವನ್ನು ಪದವಿಯಲ್ಲಿ ಐಚ್ಛಿಕ ವಿಷಯವಾಗಿ ಅಭ್ಯಾಸ ಮಾಡಿರಬೇಕು. ಜತೆಗೆ ಇತಿಹಾಸ, ಸಮಾಜ ಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ , ಭೂಗೋಳಶಾಸ್ತ್ರ ಈ ಯಾವುದಾದರೂ ಒಂದು ವಿಷಯವನ್ನು ಮತ್ತೊಂದು ಐಚ್ಛಿಕ ವಿಷಯವಾಗಿ ಓದಿರಬೇಕು. ವ್ಯಾಸಂಗ ಸಂಬಂಧಿಸಿದ ಭಾಷೆಯಲ್ಲೇ ಆಗಿರಬೇಕು. ಈ ಎರಡೂ ವಿಷಯಗಳಲ್ಲಿ ಶೇ.50ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

ಅದೇ ರೀತಿ ಗಣಿತ ಮತ್ತು ವಿಜ್ಞಾನ ವಿಷಯದ ಶಿಕ್ಷಕ ಹುದ್ದೆಗೆ ಪದವಿಯಲ್ಲಿ ಕಡ್ಡಾಯವಾಗಿ ಗಣಿತ, ಭೌತಶಾಸ್ತ್ರ ವಿಷಯವನ್ನು ಅಧ್ಯಯನ ಮಾಡಿರಬೇಕು. ಇವುಗಳ ಜತೆಗೆ ರಸಾಯನಶಾಸ್ತ್ರ, ಕಂಪ್ಯೂಟರ್‌ ವಿಜ್ಞಾನ, ಎಲೆಕ್ಟ್ರಾನಿಕ್ಸ್‌, ಲೆಕ್ಕಶಾಸ್ತ್ರ, ಭೂಗೋಳಶಾಸ್ತ್ರ, ಭೂವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇವುಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ವ್ಯಾಸಂಗ ಮಾಡಿರಬೇಕು. ಸಂಬಂಧಿಸಿದ ವಿಷಯಗಳಲ್ಲಿ ಶೇ.50ರಷ್ಟುಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಎಂದು ತಿಳಿಸಲಾಗಿದೆ.

ಎಂಜಿನಿಯರಿಂಗ್‌ಗೂ ಅವಕಾಶ:

ಎಂಜಿನಿಯರಿಂಗ್‌(Engineering) ವ್ಯಾಸಂಗದಲ್ಲಿ ಆರ್ಕಿಟೆಕ್ಚರ್‌ ವಿಭಾಗದಲ್ಲಿ ಮೊದಲ ಮೂರು ಅಥವಾ ನಾಲ್ಕು ಸೆಮಿಸ್ಟರ್‌ನಲ್ಲಿ ಗಣಿತ ಮತ್ತು ಉಳಿದ ಸೆಮಿಸ್ಟರ್‌ನಲ್ಲಿ ಅಪ್ಲೈಡ್ಸ್‌ ಮ್ಯಾಥಮೆಟಿಕ್ಸ್‌ ಓದಿರುವ ಅಭ್ಯರ್ಥಿಗಳಿಗೂ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇಂತಹ ಅಭ್ಯರ್ಥಿಗಳು ಈ ಎರಡೂ ವಿಷಯಗಳಲ್ಲಿ ಶೇ.50ರಷ್ಟುಅಂಕ ಗಳಿರಬೇಕು. ಬಿ.ಎಡ್‌, ಡಿ.ಎಡ್‌ನಲ್ಲಿ ಕನಿಷ್ಠ ಎರಡರಲ್ಲಿ ಒಂದು ವಿಷಯವನ್ನಾದರೂ ಶಿಕ್ಷಕರ ಶಿಕ್ಷಣದಲ್ಲಿ ವ್ಯಾಸಂಗ ಮಾಡಿರಬೇಕು.

Covid 19: ಜನವರಿ 24 ರಿಂದಲೇ ಶಾಲೆಗಳು ಆರಂಭ ಸಾಧ್ಯತೆ, ಮುಖ್ಯಮಂತ್ರಿ ನೇತೃತ್ವದ ಸಭೆಯ ಬಳಿಕ ನಿರ್ಧಾರ

ಗರಿಷ್ಠ 40 ವರ್ಷ ವಯೋಮಿತಿ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಇದರಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ, ದಿವ್ಯಾಂಗ ಅಭ್ಯರ್ಥಿಗಳಿಗೆ 45 ವರ್ಷದವರೆಗೆ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 43 ವರ್ಷಗಳ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಆಕ್ಷೇಪಣೆಗೆ 15 ದಿನ ಕಾಲಾವಕಾಶ

ಈ ಕರಡು ನಿಯಮಾವಳಿಗೆ ಯಾವುದೇ ಸಲಹೆ, ಆಕ್ಷೇಪಗಳಿದ್ದರೆ ಸಾರ್ವಜನಿಕರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಎಂ.ಎಸ್‌.ಬಿಲ್ಡಿಂಗ್‌, ಡಾ.ಬಿ.ಆರ್‌.ಅಂಬೇಡ್ಕರ್‌ ವೀದಿ, ಬೆಂಗಳೂರು 560001 ಇಲ್ಲಿಗೆ ಕಳುಹಿಸಬಹುದು. ಈ ಕರಡು ನಿಯಮ ಪ್ರಕಟವಾದ ಮುಂದಿನ 15 ದಿನಗಳ ಅವಧಿಯೊಳಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಇಲಾಖೆ ತಿಳಿಸಿದೆ.
 

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ