ಬೆಂ.ಕೃಷಿ ವಿವಿ ಇತಿಹಾಸದಲ್ಲೇ ಮೊದಲ ಬಾರಿಗೆ ರೈತನಿಗೆ ಗೌರವ ಡಾಕ್ಟರೆಟ್‌!

By Kannadaprabha News  |  First Published Sep 9, 2022, 9:43 AM IST
  • ಬೆಂ.ಕೃಷಿ ವಿವಿ ಇತಿಹಾಸದಲ್ಲೇ ಮೊದಲ ಬಾರಿಗೆ ರೈತನಿಗೆ ಗೌರವ ಡಾಕ್ಟರೆಟ್‌!
  • ಉತ್ತರ ತಾಲೂಕಿನ ನಾಗದಾಸನಹಳ್ಳಿಯ ಪಟೇಲ್‌ಗೆ ಡಾಕ್ಟರೆಟ್‌
  • ಇಂದು ಜಿಕೆವಿಕೆಯಲ್ಲಿ ಗೌಡಾ ಪ್ರದಾನ -1,144 ವಿದ್ಯಾರ್ಥಿಗೆ ಪ್ರದವಿ
  • 128 ಚಿನ್ನ ಪದಕ ಬಾಚಿದ 47 ವಿದ್ಯಾರ್ಥಿನಿಯರು: ಕುಲಪತಿ ರಾಜೇಂದ್ರ

 ಬೆಂಗಳೂರು (ಸೆ.9) : ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ 56ನೇ ಘಟಿಕೋತ್ಸವ ಸಮಾರಂಭ ಶುಕ್ರವಾರ (ಸೆ.9) ಬೆಳಗ್ಗೆ 11ಕ್ಕೆ ಜಿ.ಕೆ.ವಿ.ಕೆ ಆವರಣದ ಡಾ ಬಾಬು ರಾಜೇಂದ್ರ ಪ್ರಸಾದ್‌ ಅಂತಾರಾಷ್ಟ್ರೀಯ ಸಮಾವೇಶ ಭವನದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌, ಕೃಷಿ ಸಚಿವ ಬಿ.ಸಿ.ಪಾಟೀಲ್‌, ಕೃಷಿ ವಿಜ್ಞಾನ ಪ್ರಗತಿ ಟ್ರಸ್ಟ್‌ನ ಡಾ ಆರ್‌.ಎಸ್‌.ಪರೋಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೇ ಮೊದಲ ಬಾರಿಗೆ ಪ್ರಗತಿಪರ ರೈತರೊಬ್ಬರಿಗೆ ವಿವಿಯು ಡಾಕ್ಟರೇಟ್‌ ಪ್ರದಾನ ಮಾಡುತ್ತಿದೆ. 2020-21ರ ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆಯಾದ 90 ಡಾಕ್ಟರೇಟ್‌, 751 ಸ್ನಾತಕ ಮತ್ತು 304 ಸ್ನಾತಕೋತ್ತರ ಸೇರಿ ಒಟ್ಟಾರೆ 1,144 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ.

Education: ಬೆಂಗಳೂರು ಕೃಷಿ ವಿವಿಗೆ ದೇಶದಲ್ಲೇ 3ನೇ ಸ್ಥಾನ

Tap to resize

Latest Videos

ಒಟ್ಟಾರೆ 156 ಚಿನ್ನದ ಪದಕ ಹಾಗೂ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಗುತ್ತದೆ. ಚಿನ್ನದ ಪದಕದಲ್ಲಿ ಹುಡುಗಿಯರು ಪಾರಮ್ಯ ಮೆರೆದಿದ್ದು, 47 ವಿದ್ಯಾರ್ಥಿನಿಯರು ವಿವಿಯ 41 ಚಿನ್ನದ ಪದಕ, 68 ದಾನಿಗಳ ಚಿನ್ನದ ಪದಕ, 19 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರವನ್ನು ಪಡೆದಿದ್ದಾರೆ. 18 ವಿದ್ಯಾರ್ಥಿಗಳಿಗೆ ವಿವಿಯ 11 ಚಿನ್ನದ ಪದಕ, 13 ದಾನಿಗಳ ಚಿನ್ನದ ಪದಕ ಹಾಗೂ 4 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆ.

ಡಾಕ್ಟರೇಟ್‌ ವಿಭಾಗದಲ್ಲಿ 30 ಚಿನ್ನದ ಪದಕಗಳನ್ನು ಒಟ್ಟು 20 ಮಂದಿ ವಿದ್ಯಾರ್ಥಿಗಳು ಪಡೆಯಲಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ ಒಟ್ಟು 54 ಚಿನ್ನದ ಪದಕಗಳನ್ನು ಒಟ್ಟು 30 ವಿದ್ಯಾರ್ಥಿಗಳು ಹಂಚಿಕೊಳ್ಳಲಿದ್ದಾರೆ. ಸ್ನಾತಕ ಪದವಿಯಲ್ಲಿ 54 ಚಿನ್ನದ ಪದಕಗಳನ್ನು 15 ವಿದ್ಯಾರ್ಥಿಗಳು ಪಡೆಯಲಿದ್ದಾರೆ. ಘಟಿಕೋತ್ಸವದ ಪೂರ್ವಭಾವಿಯಾಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷಿ ವಿವಿ ಕುಲಪತಿ ಡಾ ಎಸ್‌.ರಾಜೇಂದ್ರ ಪ್ರಸಾದ್‌, ಇದೇ ಮೊದಲ ಬಾರಿಗೆ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಮಾದರಿ ಕೃಷಿ ಮಾಡುತ್ತಿರುವ ಪ್ರಗತಿಪರ ರೈತರಿಗೆ ಗೌರವ ಡಾಕ್ಟರೇಟ್‌ ನೀಡಲಾಗುತ್ತಿದೆ. ಬೆಂಗಳೂರು ಉತ್ತರ ತಾಲೂಕಿನ ನಾಗದಾಸನಹಳ್ಳಿಯ ಎನ್‌.ಸಿ.ಪಟೇಲ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

ಪಟೇಲ್‌ ಅವರು ತಮ್ಮ 75 ಎಕರೆ ಜಮೀನಿನಲ್ಲಿ ಖುಷ್ಕಿ, ಆಧುನಿಕ ನೀರಾವರಿ ಮತ್ತು ಸುಧಾರಿತ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಂಡು ವಿವಿಧ ಆಹಾರ ಹಾಗೂ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಿದ್ದಾರೆ. ತೆರೆಮರೆಯಲ್ಲಿದ್ದ ರೆಡ್‌ ಗ್ಲೋಬ್‌ ದ್ರಾಕ್ಷಿ, ಸೀಬೆ, ಹಲಸು ಸೇರಿದಂತೆ ಹತ್ತಾರು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇವರ ಮಾದರಿಯನ್ನು ತೆಲಂಗಾಣ, ಮಹಾರಾಷ್ಟ್ರ, ಗುಜರಾತ್‌ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಳವಡಿಸಿಕೊಂಡಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಡಾ ಬಸವೇಗೌಡ ಮತ್ತು ಶಿಕ್ಷಣ ನಿರ್ದೇಶಕ ಡಾ ಕೆ.ಸಿ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ಚಂದನಾಗೆ 16 ಚಿನ್ನದ ಪದಕ:

ತುಮಕೂರಿನ ಗೂಳೂರಿನ ಎಚ್‌.ಎಸ್‌.ಚಂದನ ಅವರು ಬಿಎಸ್ಸಿ ಕೃಷಿ ಆನರ್ಸ್‌ನಲ್ಲಿ ಕೃಷಿ ವಿವಿಯ ಒಂದು ಚಿನ್ನದ ಪದಕ ಸೇರಿದಂತೆ 16 ಚಿನ್ನದ ಪದಕ ಗಳಿಸಿದ್ದಾರೆ. ಹಾಸನ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯಾದ ಚಂದನ ಪ್ರಸ್ತುತ ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ತಳಿ ಮತ್ತು ಸಸಿ ತಳಿ ಅಭಿವೃದ್ಧಿ ವಿಷಯದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ. ‘16 ಚಿನ್ನದ ಪದಕ ಗೆದ್ದಿರುವುದು ಖುಷಿ ಆಗಿದೆ. ನನಗೆ ಎಂಜಿನಿಯರಿಂಗ್‌, ಮೆಡಿಕಲ್‌ ಓದಲು ಇಷ್ಟಇರಲಿಲ್ಲ. ಆ ಕಾರಣಕ್ಕಾಗಿ ದೇಶದಲ್ಲಿ ಅತಿ ಹೆಚ್ಚು ಮಂದಿ ಜೀವನೋಪಾಯಕ್ಕಾಗಿ ಅವಲಂಬಿಸಿರುವ ಕೃಷಿಯನ್ನು ಆಯ್ದುಕೊಂಡೆ. ಕೃಷಿ ವಿಜ್ಞಾನಿಯಾಗಿ ರೈತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂಬುದು ನನ್ನ ಗುರಿ’ ಎಂದು ಹೇಳುತ್ತಾರೆ.

ಎಂ.ಎನ್‌.ರೂಪಾಗೆ 8 ಚಿನ್ನದ ಗೌರವ: ಮಂಡ್ಯದ ಮಳವಳ್ಳಿಯ ಎಂ.ಎನ್‌.ರೂಪಾ ಅವರು ಬಿಎಸ್ಸಿ ಆನರ್ಸ್‌ ವಿದ್ಯಾರ್ಥಿನಿಯಾಗಿದ್ದು, ಒಟ್ಟು ಎಂಟು ಚಿನ್ನದ ಪದಕ ಪಡೆದಿದ್ದಾರೆ. ಮಂಡ್ಯ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯಾದ ರೂಪಾ ಪ್ರಸ್ತುತ ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ತಳಿ ಮತ್ತು ಸಸಿ ತಳಿ ಅಭಿವೃದ್ಧಿ ವಿಷಯದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ. ‘ನಾನು ಪಿಯುಸಿ ಮುಗಿಯುತ್ತಿದ್ದಂತೆ ಕೃಷಿ ವಿಷಯದ ಅಧ್ಯಯನ ಮಾಡಬೇಕು ಎಂಬ ಉದ್ದೇಶ ಹೊಂದಿದ್ದೆ. ಸಸಿಗಳಿಗೆ ಬರುವ ರೋಗಗಳನ್ನು ನಿಯಂತ್ರಿಸಿ ರೈತರಿಗೆ ನೆರವಾಗಬೇಕು ಎಂಬುದು ನನ್ನ ಉದ್ದೇಶ’ ಎಂದು ಹೇಳುತ್ತಾರೆ.

-ಕೆ.ಪಿ.ಲಾವಣ್ಯ 6 ಚಿನ್ನದ ಪದಕ ಬೇಟೆ: ಅದೇ ರೀತಿ ರಾಮನಗರದ ಚನ್ನಪಟ್ಟಣದ ಕೆ.ಪಿ.ಲಾವಣ್ಯ ಅವರು ಬಿಎಸ್ಸಿ ಕೃಷಿ ಆನರ್ಸ್‌ ಒಟ್ಟು 6 ಚಿನ್ನದ ಪದಕಗಳಿಗೆ ಭಾಜನರಾಗಿದ್ದಾರೆ. ಚಿಂತಾಮಣಿಯ ರೇಷ್ಮೆ ಕೃಷಿ ಮಹಾವಿದ್ಯಾಲಯದಲ್ಲಿ ಪದವಿ ಓದಿರುವ ಲಾವಣ್ಯ ಈಗ ಜಿಕೆವಿಕೆಯಲ್ಲಿ ಸಸಿ ರೋಗಶಾಸ್ತ್ರದಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸುತ್ತಿದ್ದಾರೆ. ‘ನಾನು ವೈದ್ಯಳಾಗಬೇಕು ಎಂಬ ಆಸೆ ಹೊತ್ತಿದ್ದೆ. ಆದರೆ ಮೆಡಿಕಲ್‌ ಸೀಟ್‌ ಸಿಗಲಿಲ್ಲ. ಆದ್ದರಿಂದ ಕೃಷಿ ವಿಷಯವನ್ನು ಆಯ್ದುಕೊಂಡೆ. ಸಸಿಗೂ ಜೀವ ಇದೆ ತಾನೇ? ಸಸ್ಯಗಳ ರೋಗಗಳಿಗೆ ಔಷಧಿ ಪತ್ತೆ ಹಚ್ಚಿ ರೈತರಿಗೆ ನೆರವಾಗಬೇಕು ಎಂಬುದು ನನ್ನ ಆಸೆ’ ಎಂದು ಹೇಳಿದರು.

Inauguration of RV University: ವಿವಿಗಳು ಸಂಶೋಧನೆಗೆ ಆದ್ಯತೆ ನೀಡಬೇಕು: ಸಿಎಂ ಬೊಮ್ಮಾಯಿ

ಬಿಂದು, ಪ್ರವಳಿಕಾ, ವಿನುತಾ ಸಾಧನೆ: ತುಮಕೂರಿನ ಬಿಂದು ರಾಜಶೇಖರ್‌ ಕೃಷಿ ಮಾರಾಟ ಮತ್ತು ಸಹಕಾರ ವಿಷಯದ ಬಿಎಸ್ಸಿ ಆನರ್ಸ್‌ ವಿಭಾಗದಲ್ಲಿ ಆರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಅದೇ ರೀತಿ ಬೇಸಾಯ ಶಾಸ್ತ್ರ ವಿಭಾಗದಲ್ಲಿ ಕೃಷಿ ವಿವಿಯ ಕೆ.ಎಂ.ಪ್ರವಳಿಕಾ, ಕೃಷಿ ಅರ್ಥಶಾಸ್ತ್ರದಲ್ಲಿ ಜಿ.ಎನ್‌.ವಿನುತಾ ಅವರಿಗೆ ಏಳು ಚಿನ್ನದ ಪದಕ ದಕ್ಕಿದೆ.

click me!