ವಿದೇಶಾಂಗ ನೀತಿಯಲ್ಲಿ ದೇಶ ತೆಗೆದುಕೊಳ್ಳುವ ನಿರ್ಧಾರಗಳು ಕೆಲವರ ಪರವಾಗಿರದೆ, ಪ್ರತಿಯೊಬ್ಬ ಪ್ರಜೆಯ ಹಿತ ಕಾಯುವುದೇ ಆಗಿರುತ್ತದೆ ಎಂದು ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಹೇಳಿದರು.
ಧಾರವಾಡ (ಏ.3) : ವಿದೇಶಾಂಗ ನೀತಿಯಲ್ಲಿ ದೇಶ ತೆಗೆದುಕೊಳ್ಳುವ ನಿರ್ಧಾರಗಳು ಕೆಲವರ ಪರವಾಗಿರದೆ, ಪ್ರತಿಯೊಬ್ಬ ಪ್ರಜೆಯ ಹಿತ ಕಾಯುವುದೇ ಆಗಿರುತ್ತದೆ ಎಂದು ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ(Jaishankar) ಹೇಳಿದರು.
ನಗರದ ಜೆಎಸ್‌ಎಸ್ ಕಾಲೇಜಿನ ಸನ್ನಿಧಿ ಕಲಾಕ್ಷೇತ್ರದಲ್ಲಿ ಭಾನುವಾರ ಏರ್ಪಡಿಸಿದ್ದ ವಿವಿಧ ತಜ್ಞರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರಿಕೆಟ್ ಟೀಂ ಸ್ಟೈಲಲ್ಲಿ ಕ್ಯಾಪ್ಟನ್ ಮೋದಿ ಕೆಲಸ: ವಿದೇಶಾಂಗ ಸಚಿವ ಜೈಶಂಕರ್ ವಿವರಿಸಿದ್ದು ಹೀಗೆ..
ವಿದೇಶಾಂಗ ನೀತಿ(Foreign policy) ಜನರ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತದೆ ಎಂಬುದು ಕೋವಿಡ್(Covid)ಸಮಯದಲ್ಲಿ ಅರಿವಾಗಿದೆ. ವಿದೇಶಗಳಲ್ಲಿನ ಸಂಗತಿಗಳನ್ನು ಪ್ರತಿಯೊಬ್ಬರೂ ಅರಿಯಬೇಕು. 3.5 ಕೋಟಿ ಜನ ಭಾರತೀಯರು ವಿದೇಶಗಳಲ್ಲಿದ್ದಾರೆ. ಭಾರತೀಯರು ಇಲ್ಲದ ಒಂದೇ ಒಂದು ದೇಶವಿಲ್ಲ. ಯಾವುದೇ ದೇಶಕ್ಕೆ ಹೋದರೂ ಭಾರತೀಯ ಸಿಗುತ್ತಾನೆ. ಇತ್ತೀಚೆಗೆ ಇಡೀ ಜಗತ್ತಿನ ದೇಶಗಳಲ್ಲಿ ಭಾರತ ಬದಲಾಗಿದೆ ಎಂಬ ಭಾವನೆ ಮೂಡಿದೆ. ಅನೇಕ ದೇಶಗಳಿಗೆ ಹೋದಾಗ ಈ ಬದಲಾವಣೆಗೆ ಕಾರಣ ಕೇಳುತ್ತಾರೆ. ಆಗ ನಾನು ಅವರಿಗೆ ಕೊಡುವ ಒಂದೇ ಉತ್ತರ ಮೋದಿ(Narendra Modi) ಎಂದರು.
ಡಿಜಿಟಲೀಕರಣದತ್ತ ಹೆಜ್ಜೆ ಇಡುತ್ತಿರುವ ಭಾರತದತ್ತ ಎಲ್ಲರೂ ತಿರುಗಿ ನೋಡುತ್ತಿದ್ದಾರೆ. ಮುಂದಿನ 25 ವರ್ಷಗಳಲ್ಲಿ ಶಿಕ್ಷಣ, ನಾವೀನ್ಯತೆ ಹಾಗೂ ಸೃಜನಶೀಲತೆಗೆ ಆದ್ಯತೆ ನೀಡುವ ಮೂಲಕ ಜಾಗತೀಕರಣವಾಗಿ ಬೆಳೆಯುವ ದೃಷ್ಟಿಯಲ್ಲಿ ಸಾಗುತ್ತಿದ್ದೇವೆ. ಇಂದಿನ ದಿನಗಳಲ್ಲಿ ಇಲೆಕ್ಟ್ರಾನಿಕ್ಸ್ ಇಡೀ ಜಗತ್ತನ್ನೇ ಆಳುತ್ತಿದೆ. ಅಭಿವೃದ್ಧಿ ಹೊಂದಿದ ಹಲವು ರಾಷ್ಟ್ರಗಳಲ್ಲಿ ಕೌಶಲ್ಯ ಮತ್ತು ಪ್ರತಿಭೆ ಕೊರತೆ ಇದೆ. ಅಂತಹ ರಾಷ್ಟ್ರಗಳು ಶಿಕ್ಷಣ, ಪ್ರತಿಭೆ, ನಾವೀನ್ಯತೆ ಇರುವ ದೇಶದತ್ತ ನೋಡುತ್ತಿವೆ. ಇದರ ಲಾಭ ನಮ್ಮ ದೇಶದ ಜನರಿಗೆ ಆಗಲಿದೆ. ಇದಕ್ಕೆ ಪೂರಕವಾಗಿ ಚೀನಾ ಮತ್ತು ಅಮೆರಿಕ ನಡುವಿನ ಬಿಕ್ಕಟ್ಟಿನ ಲಾಭ ಭಾರತದಂತಹ ಪ್ರತಿಭಾವಂತ ರಾಷ್ಟ್ರಕ್ಕೆ ಆಗಲಿದೆ ಎಂದರು.
ದೇಶದ ಭವಿಷ್ಯದ ದೃಷ್ಟಿಯಲ್ಲಿ ಕರ್ನಾಟಕವು ತಂತ್ರಜ್ಞರ ಉತ್ಪಾದನೆ, ಸ್ಟಾರ್ಚ್‌ಅಫ್ಸ್, ವಿದೇಶಿ ಬಂಡವಾಳ ಸೇರಿ ಹಲವು ಕ್ಷೇತ್ರಗಳಲ್ಲಿ ಅಗ್ರಸ್ಥಾನದಲ್ಲಿದೆ. ಇದು ಭಾರತದ ಆರ್ಥಿಕತೆ ಮತ್ತು ಜನಪ್ರಿಯತೆ ಇನ್ನಷ್ಟುಎತ್ತರಕ್ಕೆ ಕೊಂಡೊಯ್ಯಲಿದೆ ಎಂದರು.
ಕೆನ್ನೆಗೆ ಬಾರಿಸಿದ ಕೈ ತೆಗೆಯುವ ಸ್ಥಿತಿ:
ಶಾಸಕ ಅರವಿಂದ ಬೆಲ್ಲದ(Arvind bellad MLA) ಮಾತನಾಡಿ, ದೇಶದಲ್ಲಿ ಸಾಕಷ್ಟುತಪ್ಪು ಕಲ್ಪನೆಗಳು ಇದ್ದವು. ವಿದೇಶದವರು ಹೇಳಿದ್ದನ್ನು ನಮ್ಮಲ್ಲಿ ಪಾಲಿಸುವಂತಾಗಿತ್ತು. ಮೊದಲಿನ ದಿನಗಳಲ್ಲಿ ಒಂದು ಕೆನ್ನೆಗೆ ಬಾರಿಸಿದರೆ ಇನ್ನೊಂದು ಕೆನ್ನೆ ನೀಡಬೇಕಿತ್ತು. ಆದರೆ, ಈಗ ಕೆನ್ನೆಗೆ ಬಾರಿಸಿದ ಕೈ ತೆಗೆಯುವ ಸ್ಥಿತಿ ಬಂದಿದೆ. ನರೇಂದ್ರ ಮೋದಿ ಪ್ರಧಾನಮಂತ್ರಿ ಆದ ಮೇಲೆ ದೇಶದ ಚಿತ್ರಣವೇ ಬದಲಾಗಿದೆ ಎಂದರು.
ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಬಿಜೆಪಿ ಮುಖಂಡರಾದ ಮೋಹನ ರಾಮದುರ್ಗ, ವಿಷ್ಣುತೀರ್ಥ ಕೊರ್ಲಹಳ್ಳಿ, ಜೆಎಸ್‌ಎಸ್‌ನ ಮಹಾವೀರ ಉಪಾಧ್ಯೆ, ಜಿನೇಂದ್ರ ಕುಂದಗೋಳ, ಸಾಧನಾ ಎಸ್., ಇದ್ದರು.
ಭಾರತದ ಕಾನೂನಿಗೆ ಬದ್ಧವಾಗಿರಿ: ಬಿಬಿಸಿ ವಿಷಯ ಪ್ರಸ್ತಾಪಿಸಿದ ಬ್ರಿಟನ್ ಸಚಿವಗೆ ಜೈಶಂಕರ್ ನೀತಿ ಪಾಠ
ಮೊದಲು ನಾವು ಸೈನ್ಯದ ಶಸ್ತ್ರಾಸ್ತ್ರಗಳ ಆಮದಿನಲ್ಲಿ ಮುಂದಿದ್ದೆವು. ಇದೀಗ ಶೇ. 36ರಷ್ಟುಆಮದು ಕಡಿಮೆ ಮಾಡಿ ದೇಶದಲ್ಲೇ ಸೈನ್ಯಕ್ಕೆ ಬೇಕಾದ ಶಸ್ತ್ರಾಸ್ತ್ರ ತಯಾರಿಸುತ್ತಿದ್ದೇವೆ. 2014ರ ಪೂರ್ವದಲ್ಲಿದ್ದ 460 ಬಿಲಿಯನ್ ಡಾಲರ್ ರಪ್ತು ಇದೀಗ 720 ಬಿಲಿಯನ್ ಡಾಲರ್ ತಲುಪಿದೆ. ಭಾರತ ಶಕ್ತಿಯುತ ದೇಶವಾಗಿದೆ ಎಂಬುದಕ್ಕೆ ಇದೇ ಸಾಕ್ಷಿ. ಕಳೆದ 3 ವರ್ಷಗಳಲ್ಲಿ ಚೀನಾ ಗಡಿಯನ್ನು ನಿಯಂತ್ರಣದಲ್ಲಿ ಇಟ್ಟಿದ್ದೇವೆ. ಗಡಿಯಾಚೆಗಿನ ಭಯೋತ್ಪಾದನೆ ನಿಯಂತ್ರಣಕ್ಕೆ ಮುಂದಾಗಿದ್ದು, ಇಂತಹ ಕೃತ್ಯಗಳಿಗೆ ಮುಂದಾಗುವ ರಾಷ್ಟ್ರಗಳಿಗೆ ಖಡಕ್ ಎಚ್ಚರಿಕೆ ಸಹ ನೀಡಿದ್ದೇವೆ.
ಡಾ. ಎಸ್. ಜೈಶಂಕರ, ವಿದೇಶಾಂಗ ಸಚಿವರು