ಚುನಾವಣಾ ಕಾರ್ಯಕ್ಕೆ 30% ಉಪನ್ಯಾಸಕರ ನೇಮಕ, ಖಾಸಗಿ ಉಪನ್ಯಾಸಕರ ಬಳಕೆಗೆ ಸರ್ಕಾರ ಚಿಂತನೆ, ಮೌಲ್ಯಮಾಪನದಿಂದ ವಿನಾಯಿತಿ ಕೇಳಲು ಚುನಾವಣೆ ಕಾರ‍್ಯಕ್ಕೆ ನಿಯೋಜಿತರಾದ ಉಪನ್ಯಾಸಕರ ನಿರ್ಧಾರ, ಚುನಾವಣಾ ತರಬೇತಿ ಒಂದು ಜಿಲ್ಲೆಯಲ್ಲಿ, ಮೌಲ್ಯಮಾಪನ ಮತ್ತೊಂದು ಜಿಲ್ಲೆಯಲ್ಲಿ ಇರುವುದರಿಂದ ಸಮಸ್ಯೆ.
ಬೆಂಗಳೂರು(ಏ.01): ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷಾ ಮೌಲ್ಯಮಾನ ಪ್ರಕ್ರಿಯೆ ಕೊಂಚ ತಡವಾಗುವ ಸಾಧ್ಯತೆ ಇದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (ಕೆಎಸ್‌ಇಎಬಿ) ಏಪ್ರಿಲ್ 5ರಿಂದ ಮೌಲ್ಯಮಾಪನ ಆರಂಭಿಸಲು ಸಿದ್ಧತೆ ನಡೆಸಿತ್ತು. ಆದರೆ, ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗಬೇಕಿದ್ದ ಉಪನ್ಯಾಸಕರ ಪೈಕಿ ಶೇ.30ರಷ್ಟು ಮೌಲ್ಯಮಾಪಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವುದರಿಂದ ಮೌಲ್ಯಮಾಪನ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಬೇಸಿಗೆಯ ಅಗ್ನಿ ಪರೀಕ್ಷೆ... ಮಕ್ಕಳ ಒತ್ತಡ ನಿವಾರಿಸುವುದು ಹೇಗೆ..?
ಮಂಡಳಿಯು ಅಂದಾಜು 23 ಸಾವಿರ ಮೌಲ್ಯಮಾಪಕರಿಗೆ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗಲು ಆದೇಶ ನೀಡಿದೆ. ಇದರಲ್ಲಿ ಶೇ.30ರಷ್ಟುಮಂದಿ ಚುನಾವಣಾ ತರಬೇತಿಗೆ ಹೋಗಬೇಕಿದೆ. ತರಬೇತಿ ಒಂದು ಜಿಲ್ಲೆಯಲ್ಲಿ ಮತ್ತು ಮೌಲ್ಯಮಾಪನ ಕಾರ್ಯಕ್ಕೆ ಮತ್ತೊಂದು ಜಿಲ್ಲೆಗೆ ಹೋಗಬೇಕಿರುವುದರಿಂದ ಎರಡಕ್ಕೂ ಹಾಜರಾಗಲು ಕಷ್ಟವಾಗಲಿದೆ ಎನ್ನುತ್ತಾರೆ ಪಿಯು ಉಪನ್ಯಾಸಕರ ಸಂಘದ ಪದಾಧಿಕಾರಿಗಳು. ಚುನಾವಣಾ ಕಾರ್ಯಕ್ಕೆ ನಿಯೋಜಿಸಿರುವ ಬಹುತೇಕ ಮೌಲ್ಯಮಾಪಕರು ಮೌಲ್ಯಮಾಪನ ಕೆಲಸದಿಂದ ವಿನಾಯಿತಿ ಕೇಳಲು ನಿರ್ಧರಿಸಿದ್ದು, ಇದು ಮೌಲ್ಯಮಾಪಕರ ಕೊರತೆಯಿಂದ ಮೌಲ್ಯಮಾಪನ ಕಾರ್ಯ ವಿಳಂಬವಾಗಬಹುದು ಎಂದು ಹೇಳಿದ್ದಾರೆ.
ಈ ಮಧ್ಯೆ, ಮೌಲ್ಯಮಾಪನ ಕಾರ್ಯ ವಿಳಂಬವಾಗುವುದನ್ನು ತಪ್ಪಿಸಲು ಮಂಡಳಿಯು ಖಾಸಗಿ ಉಪನ್ಯಾಸಕರನ್ನು ಮೌಲ್ಯಮಾಪನ ಕಾರ್ಯಕ್ಕೆ ತೆಗೆದುಕೊಳ್ಳಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.