ಪಠ್ಯಪುಸ್ತಕದಲ್ಲಿ ಹೆಡ್ಗೆವಾರ್ ಭಾಷಣ ವಿವಾದ, ಸಮರ್ಥಿಸಿಕೊಂಡ BC Nagesh

By Suvarna NewsFirst Published May 17, 2022, 9:44 AM IST
Highlights

ಆರ್‌ಎಸ್‌ಎಸ್ ಸಿದ್ಧಾಂತ ಉತ್ತೇಜಿಸುವುದರ ಮೇಲೆ ನಮ್ಮ ಗಮನ ಕೇಂದ್ರೀಕೃತವಾಗಿದೆ, ಇದರಿಂದ ವಿದ್ಯಾರ್ಥಿಗಳು ದೇಶಭಕ್ತಿ ಮತ್ತು ರಾಷ್ಟ್ರೀಯತೆಯಿಂದ ಸ್ಫೂರ್ತಿ ಪಡೆಯಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್  ಸಮರ್ಥಿಸಿಕೊಂಡಿದ್ದಾರೆ. 

ತುಮಕೂರು (ಮೇ.17): ರಾಜ್ಯದಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭವಾದ ಸೋಮವಾರದಂದು ಹತ್ತನೇ ತರಗತಿಯ ಕನ್ನಡ ಭಾಷಾ (Kannada language) ಪಠ್ಯಪುಸ್ತಕದಲ್ಲಿ ಆರ್‌ಎಸ್‌ಎಸ್ (Rashtriya Swayamsevak Sangh)  ಸಂಸ್ಥಾಪಕ ಕೇಶವ ಬಲಿರಾಮ್ ಹೆಡ್ಗೆವಾರ್ (Keshav Baliram Hedgewar) ಅವರ ಭಾಷಣವನ್ನು ಸೇರಿಸಿರುವುದನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ಸಮರ್ಥಿಸಿಕೊಂಡಿದ್ದಾರೆ. 

ಆರ್‌ಎಸ್‌ಎಸ್ ಸಿದ್ಧಾಂತ ಉತ್ತೇಜಿಸುವುದರ ಮೇಲೆ ನಮ್ಮ ಗಮನ ಕೇಂದ್ರೀಕೃತವಾಗಿದೆ, ಇದರಿಂದ ವಿದ್ಯಾರ್ಥಿಗಳು ದೇಶಭಕ್ತಿ ಮತ್ತು ರಾಷ್ಟ್ರೀಯತೆಯಿಂದ ಸ್ಫೂರ್ತಿ ಪಡೆಯಬಹುದು. ನಮ್ಮ ನಡೆಯನ್ನು ಟೀಕಿಸುವವರು ಮೊದಲು ವಿಷಯವನ್ನು ಪರಿಶೀಲಿಸಿ ನಂತರ ಚರ್ಚೆಗೆ ಬರಲಿ ಎಂದು ಅವರು ಹೇಳಿದರು.

ಪಠ್ಯಪುಸ್ತಕದಲ್ಲಿ ಹೆಡ್ಗೆವಾರ್ ಭಾಷಣ ಇರುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಅದನ್ನು ತೆಗೆಯುವ ಪ್ರಶ್ನೆಯೇ ಇಲ್ಲ. ಪುಸ್ತಕ ಈಗಾಗಲೇ ಮುದ್ರಣಕ್ಕೆ ಹೋಗಿದೆ. ಯುವ ಮನಸ್ಸುಗಳು ಕೇವಲ ವ್ಯಕ್ತಿಗಳನ್ನು ಆದರ್ಶವಾಗಿ ತೆಗೆದುಕೊಳ್ಳುವ ಬದಲು ಸ್ಫೂರ್ತಿದಾಯಕವಾದ ಸಿದ್ಧಾಂತವನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.

ಶಿಕ್ಷಣದಲ್ಲಿ ಕೇಸರಿಕರಣಕ್ಕೆ ಮುಂದಾಯ್ತಾ ಕರ್ನಾಟಕ ಶಿಕ್ಷಣ ಇಲಾಖೆ!? 

ಭಗತ್ ಸಿಂಗ್ ಕುರಿತ ವಿಷಯವನ್ನು ಪಠ್ಯಪುಸ್ತಕಗಳಿಂದ ತೆಗೆದುಹಾಕಲಾಗಿದೆ ಎಂಬುದು ಸುಳ್ಳು, ಕೆಲವರು ಪಠ್ಯಪುಸ್ತಕಗಳಲ್ಲಿ ತಮ್ಮದೇ ಆದ ಸಿದ್ಧಾಂತವನ್ನು ಸೇರಿಸಲು ಬಯಸುತ್ತಿರುವುದರಿಂದ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಪಠ್ಯದಲ್ಲಿ ಮೊದಲನೇ ಪಾಠದಲ್ಲಿ ಭಗತ್‌ ಸಿಂಗ್‌ರ ಬಗ್ಗೆ ಸೇರಿಸಲಾಗಿದೆ ಎಂದರು. ಜೊತೆಗೆ ಹೆಡ್ಗೆವಾರ್ ಬಗ್ಗೆ ಪಠ್ಯ ಪುಸ್ತಕದಲ್ಲಿ ಸೇರಿಸಿಲ್ಲ. ಅವರ ಭಾಷಣದ ಒಂದು ತುಣುಕನ್ನು ಮಾತ್ರ ಪಠ್ಯದಲ್ಲಿ ಸೇರಿಸಲಾಗಿದೆ. ಮಕ್ಕಳಿಗೆ ಹೇಳಬಾರದ ಒಂದೇ ಒಂದು ಲೈನ್‌ ಪಠ್ಯ ಪುಸ್ತಕದಲ್ಲಿ ಇಲ್ಲ ಅನ್ನುವ ವಿಶ್ವಾಸವಿದೆ ಎಂದರು.

ತರಕಾರಿ ವ್ಯಾಪಾರಿಗಳಿಗಾಗಿ Mobile Refrigerator ಕಂಡುಹಿಡಿದ ಮೈಸೂರು ವಿದ್ಯಾರ್ಥಿಗಳು!

ನೈತಿಕ ಅನ್ನಿಸಿದರೆ ಪಠ್ಯಕ್ಕೆ ‘ಬಲ’: ಕೆಲವೇ ಮಕ್ಕಳಿಗೋಸ್ಕರ ಸರ್ಕಾರಿ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಪಠ್ಯದಲ್ಲಿ ನೈತಿಕ ವಿಚಾರವನ್ನು ತರುವಂತಹ ಪ್ರಯತ್ನ ಮಾಡುತ್ತಿದ್ದೇವೆ. ಬಲಪಂಥಿಯ ವಿಚಾರ ನೈತಿಕ ವಿಚಾರ ಅನ್ನಿಸಿದರೆ ಖಂಡಿತ ನೈತಿಕ ವಿಚಾರ ಬಲವಂತ ವಿಚಾರವಾದರೂ ಪಠ್ಯದಲ್ಲಿ ತರುವುದಾಗಿ ತಿಳಿಸಿದರು. ನೈತಿಕ ಶಿಕ್ಷಣದಲ್ಲಿ ಪಂಚ ತಂತ್ರದ ಕಥೆಗಳು, ರಾಮಾಯಣ, ಮಹಾಭಾರತ , ಭಗವದ್ಗೀತೆ ವಿಚಾರಗಳನ್ನು ತರುತ್ತಿದ್ದೇವೆ. ಅವರ ಪ್ರಕಾರದಲ್ಲಿ ಇವು ಬಲಪಂಥೀಯ ವಿಚಾರ ಅನ್ನಿಸಿದರೂ ತರುತ್ತೇವೆ ಎಂದು ತಿಳಿಸಿದರು.

ಆರೋಪ ಏನು?: ಇಷ್ಟು ಮಾತ್ರವಲ್ಲದೆ   ಪ್ರಸಿದ್ಧ ಬರಹಗಾರ ಮತ್ತು ಪತ್ರಕರ್ತ ಪಿ.ಲಂಕೇಶ್ ಅವರ ಜನಾಂಗೀಯ ದ್ವೇಷವನ್ನು ಖಂಡಿಸುವ " ಮೃಗ ಮತ್ತು ಸುಂದರಿ",  ಪ್ರಸಿದ್ಧ ಲೇಖಕಿ ಸಾರಾ ಅಬೂಬಕರ್ ಅವರ "ಯುದ್ಧ", ಲೇಖಕ ಎ.ಎನ್.ಮೂರ್ತಿರಾಯರ " ವ್ಯಾಘ್ರಗೀತೆ" ಎಡಪಂಥೀಯ ಚಿಂತಕ ಜಿ. ರಾಮಕೃಷ್ಣ ಅವರ "ಭಗತ್ ಸಿಂಗ್"  ಹೀಗೆ ಹಲವು ಪಾಠಗಳನ್ನು ಪಠ್ಯಪುಸ್ತಕ ಪರಿಶೀಲನಾ ಸಮಿತಿ  ಕೈ ಬಿಟ್ಟಿದೆ. 

ಬದಲಿಗೆ, ಬರಹಗಾರ ಶಿವಾನಂದ ಕಳವೆ ಅವರ “ಸ್ವದೇಶಿ ಸೂತ್ರದ ಸರಳ ಹಬ್ಬ” ಮತ್ತು ಎಂ. ಗೋವಿಂದ ಪೈ ಅವರ “ನಾನು ಪ್ರಾಸ ಬಿಟ್ಟ ಕಥೆ” ಜೊತೆಗೆ ವೇದ ವಿದ್ವಾಂಸರಾದ ದಿವಂಗತ ಬನ್ನಂಜೆ ಗೋವಿಂದಾಚಾರ್ಯರ "ಸುಕನಾಶನ ಉಪದೇಶ" ಮತ್ತು ಶತಾವಧಾನಿ ಆರ್. ಗಣೇಶ್ ಅವರ "ಶ್ರೇಷ್ಠ ಭಾರತೀಯ ಚಿಂತನೆಗಳು" ಸೇರಿಸಲಾಗಿದೆ.

ಆರೋಪ ಮಾಡಿರುವವರು ಮುಂದೆ ಪಠ್ಯಪುಸ್ತಕ ನೋಡಲಿ. ದೇಶವನ್ನು ಪ್ರೀತಿಸಬೇಕು ಎಂಬುದನ್ನು ತಿಳಿಸುವ ಅವರ ಭಾಷಣವನ್ನು ಪಠ್ಯಕ್ಕೆ ಸೇರಿಸಿದರೆ ಕೇಸರೀಕರಣ ಹೇಗಾಗುತ್ತದೆ?
-ರೋಹಿತ್‌ ಚಕ್ರತೀರ್ಥ, ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ 

click me!