ಭಗತ್ ಸಿಂಗ್ ಅವರ ಪಠ್ಯ ‌ಬಿಟ್ಟಿಲ್ಲ: ವಿವಾದಕ್ಕೆ ಸ್ಪಷ್ಟನೆ ನೀಡಿದ ಸಚಿವ ನಾಗೇಶ್‌

By Govindaraj SFirst Published May 17, 2022, 3:15 AM IST
Highlights

ಭಗತ್‌ ಸಿಂಗ್‌ ಅವರ ಪಠ್ಯವನ್ನು ಬಿಟ್ಟು ಹೆಡಗೇವಾರ್‌ ಬಗ್ಗೆ ಪಠ್ಯ ಪುಸ್ತಕದಲ್ಲಿ ಸೇರಿಸಿಲ್ಲ. ಹೆಡಗೇವಾರ್‌ ಅವರ ಭಾಷಣದ ಒಂದು ತುಣುಕನ್ನು ಪಠ್ಯದಲ್ಲಿ ಸೇರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು/ತುಮಕೂರು (ಮೇ.17): ಟಿಪ್ಪು ಸುಲ್ತಾನ್‌ (Tipu Sultan) ಕುರಿತ ಒಂದಷ್ಟು ವಿಚಾರಗಳನ್ನು ಪಠ್ಯ ಪುಸ್ತಕದಿಂದ (Syllabus) ಕೈ ಬಿಟ್ಟ ವಿವಾದದ ಬೆನ್ನಲ್ಲೇ ಇದೀಗ 10ನೇ ತರಗತಿ ಪಠ್ಯ ಪುಸ್ತಕದಿಂದ ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ (Bhagath Singh) ಪಠ್ಯವನ್ನೂ ತೆಗೆದು ಆರೆಸ್ಸೆಸ್‌ ಸಂಸ್ಥಾಪಕ ಕೆ.ಬಿ.ಹೆಡಗೇವಾರ್‌ (KB Hedgewar) ಭಾಷಣ (Speech) ಸೇರಿಸಿರುವ ಆರೋಪ ಕೇಳಿಬಂದಿದ್ದು, ಇದಕ್ಕೆ ವಿವಿಧ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಆದರೆ ಈ ಆರೋಪವನ್ನು ಅಲ್ಲಗೆಳೆದಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ (BC Nagesh), ಭಗತ್‌ ಸಿಂಗ್‌ ಅವರ ಪಠ್ಯವನ್ನು ಬಿಟ್ಟು ಹೆಡಗೇವಾರ್‌ ಬಗ್ಗೆ ಪಠ್ಯ ಪುಸ್ತಕದಲ್ಲಿ ಸೇರಿಸಿಲ್ಲ. ಹೆಡಗೇವಾರ್‌ ಅವರ ಭಾಷಣದ ಒಂದು ತುಣುಕನ್ನು ಪಠ್ಯದಲ್ಲಿ ಸೇರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಮುಖವಾಗಿ ಕ್ರಾಂತಿಕಾರಿ ಭಗತ್‌ಸಿಂಗ್‌ ಅವರ ಪಠ್ಯವನ್ನು ಕೈಬಿಟ್ಟು ಹೆಡಗೇವಾರ್‌ ಅವರ ಭಾಷಣವನ್ನು ಪಠ್ಯಕ್ಕೆ ಸೇರಿಸಲಾಗಿದೆ ಎಂದು ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ, ಕೆಲ ಸಾಮಾಜಿಕ ಚಿಂತಕರು, ಇತಿಹಾಸ ತಜ್ಞರು ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಪಠ್ಯ ಕೇಸರೀಕರಣ ಪ್ರಕ್ರಿಯೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಕೇಳಿಬರುತ್ತಿವೆ. ಕೂಡಲೇ ಸರ್ಕಾರ ಪರಿಷ್ಕರಿಸಿರುವ ಪಠ್ಯ ಕೈಬಿಟ್ಟು ಹಳೆಯ ಪಠ್ಯವನ್ನೇ ಮುಂದುವರೆಸಬೇಕು ಎಂದು ಆಗ್ರಹಿಸಲಾಗುತ್ತಿದೆ.

ಮೇ 19ರಂದು SSLC Result, ಶಿಕ್ಷಣ ಸಚಿವರಿಂದ ಟ್ವೀಟ್ ಸ್ಪಷ್ಟನೆ

ಈ ಬಗ್ಗೆ ತುಮಕೂರಿನಲ್ಲಿ ಸ್ಪಷ್ಟನೆ ನೀಡಿರುವ ಸಚಿವ ನಾಗೇಶ್‌, ಖಂಡಿತವಾಗಿ ಭಗತ್‌ಸಿಂಗ್‌ ಅವರನ್ನು ಪಠ್ಯದಿಂದ ಕೈ ಬಿಟ್ಟಲ್ಲ. ಅವರ ಯಾವುದೇ ವಿಚಾರವನ್ನೂ ಕೈಬಿಟ್ಟಿಲ್ಲ. ಇದೊಂದು ಸುಳ್ಳು ಆಪಾದನೆ ಎಂದರು. ಪಠ್ಯದಲ್ಲಿ ಮೊದಲನೇ ಪಾಠದಲ್ಲಿ ಭಗತ್‌ ಸಿಂಗ್‌ರ ಬಗ್ಗೆ ಸೇರಿಸಲಾಗಿದೆ ಎಂದರು. ಜೊತೆಗೆ ಹೆಡಗೇವಾರ್‌ ಬಗ್ಗೆ ಪಠ್ಯ ಪುಸ್ತಕದಲ್ಲಿ ಸೇರಿಸಿಲ್ಲ. ಅವರ ಭಾಷಣದ ಒಂದು ತುಣುಕನ್ನು ಮಾತ್ರ ಪಠ್ಯದಲ್ಲಿ ಸೇರಿಸಲಾಗಿದೆ. ಮಕ್ಕಳಿಗೆ ಹೇಳಬಾರದ ಒಂದೇ ಒಂದು ಲೈನ್‌ ಪಠ್ಯ ಪುಸ್ತಕದಲ್ಲಿ ಇಲ್ಲ ಅನ್ನುವ ವಿಶ್ವಾಸವಿದೆ ಎಂದರು.

ನೈತಿಕ ಅನ್ನಿಸಿದರೆ ಪಠ್ಯಕ್ಕೆ ‘ಬಲ’: ಕೆಲವೇ ಮಕ್ಕಳಿಗೋಸ್ಕರ ಸರ್ಕಾರಿ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಪಠ್ಯದಲ್ಲಿ ನೈತಿಕ ವಿಚಾರವನ್ನು ತರುವಂತಹ ಪ್ರಯತ್ನ ಮಾಡುತ್ತಿದ್ದೇವೆ. ಬಲಪಂಥಿಯ ವಿಚಾರ ನೈತಿಕ ವಿಚಾರ ಅನ್ನಿಸಿದರೆ ಖಂಡಿತ ನೈತಿಕ ವಿಚಾರ ಬಲವಂತ ವಿಚಾರವಾದರೂ ಪಠ್ಯದಲ್ಲಿ ತರುವುದಾಗಿ ತಿಳಿಸಿದರು. ನೈತಿಕ ಶಿಕ್ಷಣದಲ್ಲಿ ಪಂಚ ತಂತ್ರದ ಕಥೆಗಳು, ರಾಮಾಯಣ, ಮಹಾಭಾರತ , ಭಗವದ್ಗೀತೆ ವಿಚಾರಗಳನ್ನು ತರುತ್ತಿದ್ದೇವೆ. ಅವರ ಪ್ರಕಾರದಲ್ಲಿ ಇವು ಬಲಪಂಥೀಯ ವಿಚಾರ ಅನ್ನಿಸಿದರೂ ತರುತ್ತೇವೆ ಎಂದು ತಿಳಿಸಿದರು.

ಆರೋಪ ಏನು?: ಜನಾಂಗೀಯ ದ್ವೇಷ ಖಂಡಿಸುವ ಪಿ.ಲಂಕೇಶ್‌ ಅವರ ‘ಮೃಗ ಮತ್ತು ಸುಂದರಿ’, ಸಾ.ರಾ. ಅಬೂಬಕ್ಕರ್‌ ಅವರ ‘ಯುದ್ಧ’, ಎ.ಎನ್‌. ಮೂರ್ತಿರಾಯರ ‘ವ್ಯಾಘ್ರಗೀತೆ’ ಹೀಗೆ ಇನ್ನೂ ಹಲವು ಪಾಠಗಳನ್ನು ಪಠ್ಯದಿಂದ ತೆಗೆದುಹಾಕಲಾಗಿದೆ. ಹೊಸದಾಗಿ ಕೇಶವ ಬಲಿರಾಮ ಹೆಡಗೇವಾರ್‌ ಅವರ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು?’, ಶತಾವಧಾನಿ ಡಾ.ಆರ್‌.ಗಣೇಶ್‌ ಅವರ ‘ಶ್ರೇಷ್ಠ ಭಾರತೀಯ ಚಿಂತನೆಗಳು’, ‘ಉದಾತ್ತ ಚಿಂತನೆಗಳು’ (ಸಂಗ್ರಹ), ಮತ್ತಿತರರ ಬರಹಗಳನ್ನು 10ನೇ ತರಗತಿ ಗದ್ಯಭಾಗಕ್ಕೆ ಸೇರಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ.

ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಮೇಲೆ ಹದ್ದಿನ ಕಣ್ಣು

ಆರೋಪ ಮಾಡಿರುವವರು ಮುಂದೆ ಪಠ್ಯಪುಸ್ತಕ ನೋಡಲಿ. ದೇಶವನ್ನು ಪ್ರೀತಿಸಬೇಕು ಎಂಬುದನ್ನು ತಿಳಿಸುವ ಅವರ ಭಾಷಣವನ್ನು ಪಠ್ಯಕ್ಕೆ ಸೇರಿಸಿದರೆ ಕೇಸರೀಕರಣ ಹೇಗಾಗುತ್ತದೆ?
-ರೋಹಿತ್‌ ಚಕ್ರತೀರ್ಥ, ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ

click me!