ಶಿಕ್ಷಣದಲ್ಲಿ ಕೇಸರಿಕರಣಕ್ಕೆ ಮುಂದಾಯ್ತಾ ಕರ್ನಾಟಕ ಶಿಕ್ಷಣ ಇಲಾಖೆ!?
ಪಠ್ಯ ಪುಸ್ತಕದಲ್ಲಿ ಟಿಪ್ಪು ವಿವಾದದ ಬಳಿಕ ಈಗ ಹೆಡ್ಗೆವಾರ್ ವಿವಾದ ಆರಂಭವಾಗಿದೆ. ಪ್ರಸಕ್ತ ಸಾಲಿನಲ್ಲಿ ಹೆಡ್ಗೆವಾರ್ ಭಾಷಣ ಸೇರ್ಪಡೆಗೆ ಮುಂದಾದ ಶಿಕ್ಷಣ ಇಲಾಖೆ ನಿರ್ಧಾರಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರು (ಮೇ.19): ಪಠ್ಯ ಪುಸ್ತಕದಲ್ಲಿ ಟಿಪ್ಪು ವಿವಾದದ ಬಳಿಕ ಈಗ ಹೆಡ್ಗೆವಾರ್ ವಿವಾದ ಆರಂಭವಾಗಿದೆ. 10ನೇ ತರಗತಿ ಪಠ್ಯ ಪುಸ್ತಕದಲ್ಲಿ ಈಗ ಆರ್ ಎಸ್ ಎಸ್ (Rashtriya Swayamsevak Sangh) ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ (Keshav Baliram Hedgewar) ಅವರ ಭಾಷಣ ಸೇರ್ಪಡೆಗೆ ಯೋಜನೆ ಸಿದ್ದವಾಗುತ್ತಿದೆ. ಭಗತ್ ಸಿಂಗ್ (bhagat singh) ಪಾಠವನ್ನು ಕೈಬಿಟ್ಟು ಕೇಶವ ಬಲಿರಾಮ್ ಹೆಡ್ಗೆವಾರ್ ಬಗೆಗಿನ ಪಠ್ಯ ಕ್ರಮ ಅಳವಡಿಸುವುದಕ್ಕೆ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗಿದೆ.
2022-23 ನೇ ಶೈಕ್ಷಣಿಕ ವರ್ಷದಿಂದ 10ನೇ ತರಗತಿ ಪಠ್ಯಪುಸ್ತಕದಲ್ಲಿ (Text book) ಹೆಡ್ಗೆವಾರ್ ಅವರ ಭಾಷಣವನ್ನು ಪಠ್ಯವಾಗಿ ಮಾರ್ಪಾಡು ಮಾಡುವ ಮೂಲಕ ಶಿಕ್ಷಣದಲ್ಲಿ ಕೇಸರಿಕರಣಕ್ಕೆ ಶಿಕ್ಷಣ ಇಲಾಖೆ ಮುಂದಾಗಿದ್ದು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇಷ್ಟು ಮಾತ್ರವಲ್ಲದೆ ಪ್ರಸಿದ್ಧ ಬರಹಗಾರ ಮತ್ತು ಪತ್ರಕರ್ತ ಪಿ.ಲಂಕೇಶ್ ಅವರ ಜನಾಂಗೀಯ ದ್ವೇಷವನ್ನು ಖಂಡಿಸುವ " ಮೃಗ ಮತ್ತು ಸುಂದರಿ", ಪ್ರಸಿದ್ಧ ಲೇಖಕಿ ಸಾರಾ ಅಬೂಬಕರ್ ಅವರ "ಯುದ್ಧ", ಲೇಖಕ ಎ.ಎನ್.ಮೂರ್ತಿರಾಯರ " ವ್ಯಾಘ್ರಗೀತೆ" ಎಡಪಂಥೀಯ ಚಿಂತಕ ಜಿ. ರಾಮಕೃಷ್ಣ ಅವರ "ಭಗತ್ ಸಿಂಗ್" ಹೀಗೆ ಹಲವು ಪಾಠಗಳನ್ನು ಪಠ್ಯಪುಸ್ತಕ ಪರಿಶೀಲನಾ ಸಮಿತಿ ಕೈ ಬಿಟ್ಟಿದೆ.
ಬದಲಿಗೆ, ಬರಹಗಾರ ಶಿವಾನಂದ ಕಳವೆ ಅವರ “ಸ್ವದೇಶಿ ಸೂತ್ರದ ಸರಳ ಹಬ್ಬ” ಮತ್ತು ಎಂ. ಗೋವಿಂದ ಪೈ ಅವರ “ನಾನು ಪ್ರಾಸ ಬಿಟ್ಟ ಕಥೆ” ಜೊತೆಗೆ ವೇದ ವಿದ್ವಾಂಸರಾದ ದಿವಂಗತ ಬನ್ನಂಜೆ ಗೋವಿಂದಾಚಾರ್ಯರ "ಸುಕನಾಶನ ಉಪದೇಶ" ಮತ್ತು ಶತಾವಧಾನಿ ಆರ್. ಗಣೇಶ್ ಅವರ "ಶ್ರೇಷ್ಠ ಭಾರತೀಯ ಚಿಂತನೆಗಳು" ಸೇರಿಸಲಾಗಿದೆ.
ತರಕಾರಿ ವ್ಯಾಪಾರಿಗಳಿಗಾಗಿ MOBILE REFRIGERATOR ಕಂಡುಹಿಡಿದ ಮೈಸೂರು ವಿದ್ಯಾರ್ಥಿಗಳು!
ಬರಹಗಾರ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಹೆಡ್ಗೆವಾರ್ ಅವರ ಭಾಷಣದ ಪಠ್ಯವನ್ನು ಪಠ್ಯಕ್ರಮದಲ್ಲಿ ಸೇರಿಸಲು ಶಿಫಾರಸು ಮಾಡಿದೆ. ಪಾಠದ ತಲೆ ಬರಹವನ್ನು "ನಿಜವಾದ ಆದರ್ಶ ಪುರುಷ ಯಾರಾಗಬೇಕು?" (Who should be the real role model?) ಎಂದು ಕೊಡಲಾಗಿದೆ. ಇದೀಗ ಮುದ್ರಣ ಹಂತದಲ್ಲಿರುವ ಕನ್ನಡ ಗದ್ಯ ಪಠ್ಯಪುಸ್ತಕದಲ್ಲಿ 5ನೇ ಸ್ಥಾನ ಈ ಪಾಠವಿದೆ. ಸಮಿತಿಯು ಈ ಬಗ್ಗೆ ಮಾರ್ಚ್‌ನಲ್ಲಿ ತನ್ನ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.
ಇದು ಸೈದ್ಧಾಂತಿಕ ಹೇರಿಕೆ ಅಲ್ಲ ಎಂದು ಬರಹಗಾರ ರೋಹಿತ್ ಚಕ್ರತೀರ್ಥ (rohith chakrathirtha) ಸಮರ್ಥಿಸಿಕೊಂಡಿದ್ದು, " ನಮಗೆ ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಯ ಒತ್ತಡ ಇರಲಿಲ್ಲ. ಇದು ಯಾವುದೇ ಸಂಘಟನೆಯ ಸಿದ್ಧಾಂತವನ್ನು ವಿದ್ಯಾರ್ಥಿಗಳ ಮೇಲೆ ಹೇರಿದಂತಾಗುವುದಿಲ್ಲ. ನಾವು ಹೆಡ್ಗೆವಾರ್ ಅವರನ್ನು ಬರಹಗಾರರಾಗಿ ಆಯ್ಕೆ ಮಾಡಿದ್ದೇವೆ ಹೊರತು ಅವರ ಸಿದ್ಧಾಂತ ಅಥವಾ ಸಂಘಟನೆಯ ಆಧಾರದ ಮೇಲೆ ಅಲ್ಲ ಎಂದಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್ ಅವರು ಪಠ್ಯಪುಸ್ತಕಗಳಿಗೆ ಸೇರಿಸಿರುವ ಮತ್ತು ತೆಗೆದು ಹಾಕಿರುವ ವಿಚಾರದ ಬಗ್ಗೆ ಮಾತನಾಡಿ, ಇದರಲ್ಲಿ ಆಕ್ಷೇಪಾರ್ಹವಾದುದೇನು ಇಲ್ಲ. ಅನೇಕ ಪ್ರಗತಿಪರ ಲೇಖಕರು ಮತ್ತು ಹೋರಾಟಗಾರರು ವಿದ್ಯಾರ್ಥಿಗಳಲ್ಲಿ ಹಿಂದುತ್ವ ಸಿದ್ಧಾಂತವನ್ನು ತುಂಬುವ ಪ್ರಯತ್ನಗಳ ಬಗ್ಗೆ ಆಕ್ಷೇಪಿಸಿದ್ದಾರೆ.
ಇನ್ಮುಂದೆ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪಠ್ಯದ ಭಾಗವಾಗಿ ವೇದ, ಪುರಾಣ, ಪ್ರಾಚೀನ ವಿಜ್ಞಾನ
ವಿದ್ಯಾರ್ಥಿ ಸಂಘಟನೆಗಳ ಖಂಡನೆ: ಹತ್ತನೇ ತರಗತಿಯ ಕನ್ನಡ ಪರಿಷ್ಕೃತ ಪಠ್ಯಪುಸ್ತಕದಲ್ಲಿ ಭಗತ್ ಸಿಂಗ್ ಕುರಿತ ಪಾಠವನ್ನು ಕೈಬಿಟ್ಟು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಂಸ್ಥಾಪಕ ಕೇಶವ ಬಲಿರಾಮ್ ಹೆಡ್ಗೆವಾರ್ ಅವರ ಭಾಷಣವನ್ನು ಸೇರಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿದ್ಯಾರ್ಥಿ ಸಂಘಟನೆಗಳಾದ ಅಖಿಲ ಭಾರತ ಪ್ರಜಾಸತಾತ್ಮಕ ವಿದ್ಯಾರ್ಥಿ ಸಂಘಟನೆ -ಎಐಡಿಎಸ್‌ಒ (All-India Democratic Students Organisation -AIDSO) ಮತ್ತು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ -ಎಐಎಸ್‌ಇಸಿ ( All-India Save Education Committee-AISEC) ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿವೆ.
ನವೋದಯ ಚಳುವಳಿಯ ಸ್ಥಾಪಕರು ಮತ್ತು ಅನೇಕ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ಪ್ರಜಾಪ್ರಭುತ್ವ, ವೈಜ್ಞಾನಿಕ ಮತ್ತು ಜಾತ್ಯತೀತ ಶಿಕ್ಷಣವನ್ನು ಆಶಿಸಿದರು. ಆದರೆ ಇಲ್ಲಿಯವರೆಗೆ ಆಡಳಿತ ನಡೆಸಿದ ಎಲ್ಲಾ ರಾಜಕೀಯ ಪಕ್ಷಗಳು ಪಠ್ಯಪುಸ್ತಕಗಳಲ್ಲಿ ತಮ್ಮದೇ ಆದ ಅಜೆಂಡಾಗಳನ್ನು ರೂಪಿಸುತ್ತಿವೆ ಎಂದು ಆರೋಪಿಸಿದರು.