ಡಾ.ಶಿಯಾಳಿ ರಾಮಾಮೃತ ರಂಗನಾಥನ್. ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ. ಡಾ.ಎಸ್.ಆರ್.ರಂಗನಾಥನ್ ಎಂಬ ನಾಮದಿಂದಲೇ ದೇಶಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಚಿರಪರಿಚಿತರಾದವರು. ಗ್ರಂಥಾಲಯದಲ್ಲಿ ಅಸಾಧ್ಯವಾದುದನ್ನು ಸಾಧ್ಯವಾಗಿಸಿದ, ಇಂದಿನ ಸಾವಿರಾರು ಗ್ರಂಥಪಾಲಕರಿಗೆ ಬೆಳಕಾದವರು. ಇಂದಿನ ಡಿಜಿಟಲ್ ಯುಗದಲ್ಲಿಯೂ ಗ್ರಂಥಾಲಯಗಳ ಉಳಿಯುವಲ್ಲಿ ಡಾ.ರಂಗನಾಥನ್ ಅವರ ಪಾತ್ರ ಮತ್ತು ಕೊಡುಗೆಯನ್ನು ನಾವು ಸ್ಮರಿಸಲೇಬೇಕು
ಗ್ರಂಥಾಲಯದ ಬದುಕಿನ ಹಾದಿಯನ್ನೇ ಬದಲಿಸಿ, ವಿಶ್ವಕ್ಕೆ ಮಾದರಿ ಗ್ರಂಥಾಲಯ ತೋರಿಸಿದ ಮಹಾನ್ ವ್ಯಕ್ತಿ
ಡಾ.ಶಿಯಾಳಿ ರಾಮಾಮೃತ ರಂಗನಾಥನ್. ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ. ಡಾ.ಎಸ್.ಆರ್.ರಂಗನಾಥನ್ ಎಂಬ ನಾಮದಿಂದಲೇ ದೇಶಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಚಿರಪರಿಚಿತರಾದವರು. ಗ್ರಂಥಾಲಯದಲ್ಲಿ ಅಸಾಧ್ಯವಾದುದನ್ನು ಸಾಧ್ಯವಾಗಿಸಿದ, ಇಂದಿನ ಸಾವಿರಾರು ಗ್ರಂಥಪಾಲಕರಿಗೆ ಬೆಳಕಾದವರು. ಇಂದಿನ ಡಿಜಿಟಲ್ ಯುಗದಲ್ಲಿಯೂ ಗ್ರಂಥಾಲಯಗಳ ಉಳಿಯುವಲ್ಲಿ ಡಾ.ರಂಗನಾಥನ್ ಅವರ ಪಾತ್ರ ಮತ್ತು ಕೊಡುಗೆಯನ್ನು ನಾವು ಸ್ಮರಿಸಲೇಬೇಕು. ದೇಶದ ಗ್ರಂಥಾಲಯದಲ್ಲಿ ಇವರಷ್ಟು ಕೃಷಿ ಮಾಡಿದವರು ಮತ್ತೊಬ್ಬರಿಲ್ಲ.
undefined
ಗ್ರಂಥಾಲಯ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಓರಣಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಡಾ.ಎಸ್.ಆರ್.ರಂಗನಾಥನ್(S.R. Ranganathan) ಅವರು ಅಂದಿನ ಮದ್ರಾಸ ಪ್ರಾಂತ್ಯದ ಒಂದು ಪುಟ್ಟ ಹಳ್ಳಿ ಶಿಯಾಳಿ ಎಂಬಲ್ಲಿ ೧೮೯೨, ಆ.೧೨ರಂದು ಜನಿಸಿದರು. ಬಾಲ್ಯದಿಂದಲೂ ಶಿಸ್ತಿನ ಸಿಪಾಯಿ, ಚುರುಕು ಬುದ್ಧಿಯಳ್ಳವರು. ೧೯೦೯ರಲ್ಲಿ ಮದ್ರಾಸ್‌ನ ಕ್ರಿಶ್ಚಿಯನ್ ಕಾಲೇಜಿಗೆ ಸೇರಿ ಇಂಗ್ಲಿಷ್ ವಿಷಯವನ್ನು ಐಚ್ಛಿಕವಾಗಿ ಪಡೆದು ಅದರಲ್ಲಿಯೇ ಸ್ನಾತಕೋತ್ತರ ಪದವಿ ಮುಗಿಸಿದರು. ನಂತರ ಅಧ್ಯಾಪನ ಶಾಸ್ತ್ರದಲ್ಲಿ ಎಲ್.ಟಿ ಪರೀಕ್ಷೆಯಲ್ಲಿ ಸಹ ಪ್ರಥಮ ದರ್ಜೆಯಲ್ಲಿ ಪಾಸಾದರು. ತದನಂತರ ಮದ್ರಾಸ್‌ನ ಸರ್ಕಾರಿ ಕಾಲೇಜಿನಲ್ಲಿ ಹಾಗೂ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಗಣಿತದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಂತರ ಮಂಗಳೂರು ಸರ್ಕಾರಿ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿದ್ದರು. ಮದ್ರಾಸ್ ವಿವಿಯ ಗ್ರಂಥಾಲಯಕ್ಕೆ ಪ್ರಥಮ ಗ್ರಂಥಪಾಲಕರಾಗಿ ನೇಮಕವಾದರು.
ಡಿಜಿಟಲ್ ಕ್ರಾಂತಿಗೆ ಹೊಸ ಮುನ್ನುಡಿ ಬರೆದ ಸಾರ್ವಜನಿಕ ಗ್ರಂಥಾಲಯ
ಬದುಕಿನ ದಿಕ್ಕು ಬದಲಿಸಿದ ಲಂಡನ್ ಪ್ರವಾಸ:
೧೯೨೪ರಲ್ಲಿ ಇವರ ಅನುಭವ, ಶಿಸ್ತು, ಕ್ರಿಯಾಶೀಲ ವ್ಯಕ್ತಿತ್ವದಿಂದಾಗಿ ಲಂಡನ್ನಿನ ಬ್ರಿಟಿಷ್ ವಸ್ತು ಸಂಗ್ರಹಾಲಯದ ಗ್ರಂಥ ಭಂಡಾರದಲ್ಲಿ ನಡೆಯುವ ಗ್ರಂಥ ಪರಿಚಲನೆ, ಆಡಳಿತ ಪರಿಶೀಲನೆಗಾಗಿ ಅವರನ್ನು ಇಂಗ್ಲೆಂಡ್‌ಗೆ ಕಳಿಸಲಾಗಿತ್ತು. ಈ ಒಂದು ಅವಕಾಶ ಅವರ ಬದುಕಿನ ದಿಕ್ಕನ್ನೇ ಬದಲಿಸಿತು. ಮಾತ್ರವಲ್ಲ, ಭಾರತೀಯ ಗ್ರಂಥಾಲಯಕ್ಕೆ ಒಂದು ಬುನಾದಿಯನ್ನೂ ಒದಗಿಸಿತು ಎಂಬುವುದರಲ್ಲಿ ಎರಡು ಮಾತಿಲ್ಲ. ಡಾ.ರಂಗನಾಥನ್ ಅವರು ಲಂಡನ್‌ನಲ್ಲಿಯೇ ಉನ್ನತ ಶಿಕ್ಷಣ ಪಡೆಯಲು ಉಳಿದುಕೊಂಡರು. ಗ್ರಂಥಾಲಯ ಮಹತ್ವದ ಬಗ್ಗೆ ಮಾಹಿತಿ ಕಲೆಹಾಕಿ ತಮ್ಮ ಗುರುಗಳಾದ ಬರ್ವಿಕ್ ಸೇಯರ್ಸ್(Berwick Sayers) ಅವರ ಮಾರ್ಗದರ್ಶನದಲ್ಲಿ ಗ್ರಂಥಾಲಯ ವಿಜ್ಞಾನದಲ್ಲಿ ಪರಿಣತಿ ಹೊಂದಿದರು.
ಲಂಡನ್‌ನಲ್ಲಿದ್ದಾಗ ಅವರ ಗುರು ಸೇಯರ್ಸ್ ಸಹಾಯದಿಂದ ವರ್ಗೀಕರಣ ಪದ್ಧತಿಗಳನ್ನು ವಿಮರ್ಶಾತ್ಮಕ ದೃಷ್ಟಿಯಿಂದ ಆಳವಾಗಿ ಅಭ್ಯಸಿಸಿದರು. ಅಲ್ಲಿಯ ಹಲವಾರು ಪದ್ಧತಿಗಳು ನಮ್ಮ ದೇಶದಲ್ಲಿ ಅನ್ವಯವಾಗುವುದಿಲ್ಲ ಎಂದರಿತ ಮೇಲೆ ತಾವೇ ದ್ವಿಬಿಂದು ವರ್ಗೀಕರಣ ಪದ್ಧತಿಯ ರೂಪುರೇಷೆ ಹುಟ್ಟುಹಾಕಿದರು. ನಂತರ ಮದ್ರಾಸ್ ವಿವಿಯ ಗ್ರಂಥಾಲಯದ ಗ್ರಂಥಗಳನ್ನು ವರ್ಗಿಕರಿಸಲಾರಂಭಿಸಿದರು. ಮದ್ರಾಸ್ ಗ್ರಂಥಾಲಯ ಸಂಘದಿಂದ ದ್ವಿಬಿಂದು ಪ್ರಥಮ ಮುದ್ರಣ ಕಂಡಿತು. ಮುಂದೆ ಅದು ಜಗದ್ವಿಖ್ಯಾತವಾಯಿತು. ಈಗ ಏಳನೇ ಆವೃತ್ತಿ ಪರಿಷ್ಕೃತಗೊಂಡು ಡಾ.ಎಂ.ಎ.ಗೋಪಿನಾಥ ಅವರು ೧೯೮೭ರಲ್ಲಿ ಸಂಪಾದಿಸಿ ಕೊಟ್ಟಿದ್ದಾರೆ.
ಸ್ನಾತಕೋತ್ತರ ಮಟ್ಟದ ಗ್ರಂಥಾಲಯ ವಿಜ್ಞಾನ ರೂಪಿಸುವಲ್ಲಿ ಡಾ.ರಂಗನಾಥನ್ ಪಾತ್ರ ಅವಿಸ್ಮರಣೀಯ. ಗ್ರಂಥಾಲಯ ವಿಭಾಗದಲ್ಲಿನ ಅವರ ಪ್ರಖರತೆ ಜ್ಞಾನ ಇಂದಿಗೂ ಬೆಳಗುತ್ತಿದೆ. ಡಾ.ಎಸ್.ಆರ್.ರಂಗನಾಥನ್ ಅವರು ಗ್ರಂಥಾಲಯ, ಗ್ರಂಥಾಲಯ ವಿಜ್ಞಾನ ಕುರಿತು ೬೦ಕ್ಕೂ ಹೆಚ್ಚು ಗ್ರಂಥಗಳು ಹಾಗೂ ಸುಮಾರು ೨೫೦೦ ಲೇಖನಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಗ್ರಂಥಾಲಯದ ಪಂಚ ಸೂತ್ರಗಳು, ರಾಮಾನುಜನ್-ದ ಮ್ಯಾನ್ ಆ್ಯಂಡ್ ಮೆತಮಟೀಷಿಯನ್, ಕ್ಲಾಸಿಫೈಡ್ ಕೆಟ್ಲಾಗ್, ಡಿಕ್ಷನರಿ ಕೆಟ್ಲಾಗ್, ಲೈಬ್ರರಿ ಅಡ್ಮಿನಿಸ್ಟ್ರೇಷನ್, ಇಂಡಿಯನ್ ಲೈಬ್ರರಿ ಮ್ಯಾನಿಫೆಸ್ಟೋ, ಲೈಬ್ರರಿ ಮ್ಯಾನುವಲ್ ಫಾರ್ ಲೈಬ್ರರಿ ಅಥಾರಿಟೀಸ್, ಲೈಬ್ರರಿಯನ್ಸ್ ಆ್ಯಂಡ್ ಲೈಬ್ರರಿ ವರ್ಕರ್ಸ್, ಕ್ಲಾಸಿಫಿಕೇಷನ್-ಕಮ್ಯುನಿಕೇಶನ್, ಕಂಪ್ಯಾರಿಟಿವ್ ಸ್ಟಡಿ ಆಫ್ ಫೈವ್ ಕ್ಯಾಟಲಾಗ್ಸ್ ಹೀಗೆ ಹತ್ತು ಹಲವಾರು ಗ್ರಂಥಗಳು ಅವರಿಗಿದ್ದ ಆಳವಾದ ವಿದ್ವತ್ತನ್ನು ಮತ್ತು ಅನುಭವ ಎತ್ತಿ ತೋರಿಸುತ್ತವೆ.
ಗ್ರಂಥಾಲಯದ ಮಹತ್ವ, ಉಪಯೋಗ, ಜತೆಗೆ ಗ್ರಂಥಾಲಯದ ಕೋರ್ಸ್, ಎರಡು ವರ್ಷಗಳ ಲೈಬ್ರರಿ ಸೈ ಆರಂಭದಲ್ಲಿಯೂ ಇವರ ಪಾತ್ರ ಮಹತ್ವದ್ದು. ಬನಾರಸ್ ವಿವಿ, ದೆಹಲಿ ವಿವಿ ಸೇರಿದಂತೆ ದೇಶ, ವಿದೇಶಗಳಲ್ಲಿನ ಹಲವಾರು ವಿವಿಗಳಲ್ಲಿ ಡಾ.ರಂಗನಾಥನ್ ಅವರ ವೈಜ್ಞಾನಿಕ ವರ್ಗೀಕರಣ ಮಾಡಿದ್ದಾರೆ. ಇಂದಿಗೂ ಈ ವರ್ಗೀಕರಣ ಹಲವರಿಗೆ ದಾರಿದೀಪವಾಗಿವೆ. ಡಾ.ರಂಗನಾಥನ್ ಅವರ ಪಂಚಸೂತ್ರಗಳಾದ ಗ್ರಂಥ ಓದಲು, ಗ್ರಂಥಕ್ಕೊಬ್ಬರು, ಎಲ್ಲರಿಗೂ ಗ್ರಂಥಗಳು, ಓದುಗರ ಸಮಯವನ್ನು ಉಳಿಸಿರಿ, ಗ್ರಂಥಾಲಯ ಬೆಳೆಯುವ ಶಿಶು ಇವು ಗ್ರಂಥಪಾಲಕರಿಗೆ ದಾರಿದೀಪವಾಗಿವೆ. ಡಾ.ಎಸ್.ಆರ್. ರಂಗನಾಥನ್ ಹಾಕಿಕೊಟ್ಟ ಹಾದಿಯಲ್ಲಿ ಪ್ರತಿಯೊಬ್ಬ ಗ್ರಂಥಪಾಲಕರೂ ನಡೆಯುತ್ತಾ ಬರುತ್ತಿರುವುದು ಶ್ಲಾಘನೀಯ.
ಗ್ರಂಥಪಾಲಕರಿಗೆ ಮಾರ್ಗದರ್ಶಿಗಳು:
ಗ್ರಂಥಾಲಯಗಳು ಎಂದರೆ ಜ್ಞಾನದ ಸಾಗರ, ಪುರಾಣ, ಇತಿಹಾಸ ಕಾಲದಿಂದಲೂ ಇಂದಿನ ಡಿಜಿಟಲ್ ಯುಗದ ವರೆಗೂ ಅನೇಕ ಪಂಡಿತರು, ಸಂಶೋಧಕರು, ಅನುಭಾವಿಗಳು ತಮ್ಮ ಶ್ರಮ, ಸಮಯ, ಜ್ಞಾನ ಉಪಯೋಗಿಸಿ ಮುಂದಿನ ಪೀಳಿಗೆಗೆ ಗ್ರಂಥಸ್ಥವಾಗಿ ಬರೆದಿಟ್ಟಿದ್ದಾರೆ. ಇಂತಹ ಜ್ಞಾನ ದೇಗುಲವೇ ಗ್ರಂಥಾಲಯ. ಗ್ರಂಥಾಲಯಕ್ಕೆ ಜ್ಞಾನದ ಕಣಜ ಎಂದು ಕರೆಯಲಾಗುತ್ತದೆ. ಇದರಲ್ಲಿ ಗ್ರಂಥಪಾಲಕರ ಶ್ರಮ ಬಹಳವಿದೆ. ಓದುಗನಿಗೆ ಜ್ಞಾನದ ಊಟವನ್ನು ಉಣಬಡಿಸಲು ಸದಾ ಸಿದ್ದನಾಗಿರುತ್ತಾನೆ. ಹಾಗಾಗಿ ಪ್ರತಿಯೊಬ್ಬ ಗ್ರಂಥಪಾಲಕನಿಗೆ ಡಾ.ಎಸ್.ಆರ್.ರಂಗನಾಥನ್ ಮಾರ್ಗದರ್ಶಿಯಾಗಿ, ದಾರಿದೀಪವಾಗಿ ಮಾತ್ರವಲ್ಲ ಜ್ಞಾನದೀವಿಗೆಯಾಗಿ ನಿಲ್ಲುತ್ತಾರೆ.
ಇಂತಹ ಶ್ರೇಷ್ಠ ಗ್ರಂಥಪಾಲಕರ ನೆನಪಿಗಾಗಿ ಗ್ರಂಥಾಲಯ ದಿನಾಚರಣೆ ಮಾಡುತ್ತಿರುವುದು ನಮಗೆಲ್ಲ ಹೆಮ್ಮೆ ಮಾತ್ರವಲ್ಲ, ಔಚಿತ್ಯ ಕೂಡ. ಎಲ್ಲಿಯವರೆಗೆ ಗ್ರಂಥಾಲಯದಲ್ಲಿ ಪುಸ್ತಕಗಳು ಇರುತ್ತವೆಯೋ ಅಲ್ಲಿಯವರೆಗೂ ಜ್ಞಾನ ಹಂಚಿಕೆಯಾಗುತ್ತಲೇ ಇರುತ್ತದೆ. ಅದಕ್ಕೆ ತಳಸ್ಪರ್ಶಿಯಾದವರು ಡಾ.ರಂಗನಾಥನ್.
ಕರ್ನಾಟಕದಲ್ಲಿ ಗ್ರಂಥಾಲಯದ ವಸ್ತುಸ್ಥಿತಿ:
ಕರ್ನಾಟಕದಲ್ಲಿ ಸಾರ್ವಜನಿಕ ಗ್ರಂಥಾಲಯ ವಿಭಾಗದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಕೇವಲ ಪುಸ್ತಕಗಳು ಮಾತ್ರವಲ್ಲ, ಡಿಜಿಟಲ್ ಗ್ರಂಥಾಲಯಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಡಿಜಿಟಲ್ ಗ್ರಂಥಾಲಯ ಜನರಿಗೆ ಹೆಚ್ಚು ಉಪಯುಕ್ತವಾಯಿತು. ಪ್ರಸ್ತುತ ಸಾರ್ವಜನಿಕ ಗ್ರಂಥಾಲಯ ಇಲಾಖೆಯಡಿಯಲ್ಲಿ ೬೮೯೦ ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯಾದ್ಯಂತ ೨೬ ನಗರ ಕೇಂದ್ರ ಗ್ರಂಥಾಲಯಗಳು ೩೦ ಜಿಲ್ಲಾ ಕೇಂದ್ರ ಗ್ರಂಥಾಲಯಗಳು, ೨೧೬ ತಾಲೂಕು ಗ್ರಂಥಾಲಯಗಳು ಸೇರಿ ಒಟ್ಟು ೨೭೨ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಪ್ರಥಮ ಹಂತವಾಗಿ ಡಿಜಿಟಲ್ ಗ್ರಂಥಾಲಯ ಸೌಲಭ್ಯವನ್ನು ಒದಗಿಸಲಾಗಿದೆ. ಎರಡನೇ ಹಂತದಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ೧೦೦ ಶಾಖಾ ಗ್ರಂಥಾಲಯಗಳು ಸೇರಿ ಒಟ್ಟು ೩೭೨ ಗ್ರಂಥಾಲಯಗಳಿಗೆ ಡಿಜಿಟಲ್ ಗ್ರಂಥಾಲಯ ಸೌಲಭ್ಯ ಒದಗಿಸಲಾಗಿದೆ.
ಸರ್ಕಾರದ ಡಿಜಿಟಲ್ ಲೈಬ್ರರಿಗೆ 1 ಕೋಟಿ ಓದುಗರು!
ಕರ್ನಾಟಕ ಡಿಜಿಟಲ್ ಸಾರ್ವಜನಿಕ ಗ್ರಂಥಾಲಯ(Karnataka Digital Public Library)ದ ಜಾಲತಾಣದ ಕುರಿತಂತೆ ಇಲಾಖೆ ಕೈಗೊಂಡ ಯೋಜನೆ ಬಗ್ಗೆ ಹಾಗೂ ಓದುಗರು ಪಡೆಯುತ್ತಿರುವ ಉಪಯೋಗದ ಕುರಿತಂತೆ ಕೇಂದ್ರ ಪಂಚಾಯತ್ ರಾಜ್ ಮಂತ್ರಾಲಯ ಪ್ರಶಂಸನಾ ಪತ್ರ ಕಳುಹಿಸಿದೆ. ಮಾತ್ರವಲ್ಲ, ಇದೇ ರೀತಿ ಭಾರತದ ಎಲ್ಲ ರಾಜ್ಯಗಳಲ್ಲೂ ಸಾರ್ವಜನಿಕ ಗ್ರಂಥಾಲಯ ಮಾದರಿ ಅಳವಡಿಸಿಕೊಳ್ಳುವಂತೆ ಸೂಚಿಸಿದ್ದು, ಕರ್ನಾಟಕಕ್ಕೆ ಸಿಕ್ಕ ಗೌರವವೇ ಸರಿ. ಜತೆಗೆ ಸರ್ಕಾರ, ಸಂಘ ಸಂಸ್ಥೆಗಳಿಂದ ಹತ್ತು ಹಲವಾರು ಪ್ರಶಸ್ತಿಗಳು, ಗೌರವ ಸನ್ಮಾನಗಳು ಕೂಡ ದೊರೆತಿದ್ದು ಇಲಾಖೆಯ ಕಾರ್ಯಪ್ರವೃತ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಪ್ರಸ್ತುತ ಓದುಗರಿಗೆ ಪುಸ್ತಕಗಳನ್ನು ಮಾತ್ರವಲ್ಲ, ಡಿಜಿಟಲ್ ಗ್ರಂಥಾಲಯ(Digital library)ಗಳತ್ತಲೂ ಹೆಚ್ಚು ಒಲವು ಹೊಂದುವಂತೆ ಮಾಡಲಾಗುತ್ತಿದೆ. ಇದರಿಂದ ಡಿಜಿಟಲ್ ಯುಗದಲ್ಲಿ ಸಾರ್ವಜನಿಕ ಗ್ರಂಥಾಲಯ ವಿಭಾಗವು ಹೆಚ್ಚು ಓದುಗರನ್ನು ಪಡೆಯುವಲ್ಲಿ ಶಕ್ತವಾಗುವುದರಲ್ಲಿ ಎರಡು ಮಾತಿಲ್ಲ.
- ಡಾ.ಸತೀಶಕುಮಾರ ಎಸ್. ಹೊಸಮನಿ
ನಿರ್ದೇಶಕರು
ಸಾರ್ವಜನಿಕ ಗ್ರಂಥಾಲಯ ಇಲಾಖೆ
ಬೆಂಗಳೂರು.