ಯಾದಗಿರಿ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ 3000 ಶಿಕ್ಷಕರ ‘ಬರ’!

By Kannadaprabha News  |  First Published Aug 12, 2023, 8:52 PM IST

8 ಪ್ರೌಢಶಾಲೆಗಳಲ್ಲಿ ಶೂನ್ಯ ಶಿಕ್ಷಕರು, ಮಂಜೂರಾದ ಹುದ್ದೆಗಳ ಪೈಕಿ ಅರ್ಧದಷ್ಟು ಹುದ್ದೆ ಖಾಲಿಖಾಲಿ, ಯಾದಗಿರಿ ಜಿಲ್ಲೆಯಲ್ಲಿ ನೀಗಬೇಕಿದೆ ಶಿಕ್ಷಕರ ಕೊರತೆ, ಜಿಲ್ಲಾ ಉಸ್ತುವಾರಿ ಸಚಿವರ ತವರು ತಾಲೂಕಲ್ಲೇ ಹೆಚ್ಚಿದ ಶಿಕ್ಷಕರ ಕೊರತೆ
 


ಆನಂದ್‌ ಎಂ. ಸೌದಿ

ಯಾದಗಿರಿ(ಆ.12): ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರ ‘ಬರ’ದಿಂದಾಗಿ ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೆ ಪೆಟ್ಟು ಬೀಳುತ್ತಿದೆ. ಮಂಜೂರಾದ ಹುದ್ದೆಯ ಅರ್ಧಕ್ಕಿಂತ ಹೆಚ್ಚು ಖಾಲಿಯಿರುವುದು ಜಿಲ್ಲೆಯ ಮಕ್ಕಳ ಶೈಕ್ಷಣಿಕ ಭವಿಷ್ಯ ಕುಂಠಿತಕ್ಕೆ ಕಾರಣವಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಮಟ್ಟದ ಸುಧಾರಣೆ ಕುರಿತು ಹತ್ತು ಹಲವಾರು ಯೋಜನೆಗಳನ್ನು ಸರ್ಕಾರ ಹಾಕಿಕೊಳ್ಳುತ್ತದೆಯಾದರೂ, ಶಿಕ್ಷಕರ ಕೊರತೆ ಯಾದಗಿರಿ ಜಿಲ್ಲೆಯಲ್ಲಿ ಕಲಿಕಾ ಮಟ್ಟದ ಹಿನ್ನೆಡೆಗೆ ಕಾರಣವಾಗುತ್ತಿದೆ ಅನ್ನೋದು ಶಿಕ್ಷಣತಜ್ಞರ ಅಭಿಮತ.

Tap to resize

Latest Videos

undefined

ಜಿಲ್ಲೆಯ 98 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾಯಂ ಶಿಕ್ಷಕರೇ ಇಲ್ಲ, 161 ಶಾಲೆಗಳಲ್ಲಿ ಏಕೋಪಾಧ್ಯಾಯ ವ್ಯವಸ್ಥೆ ಶಿಕ್ಷಣದ ಗುಣಮಟ್ಟಕುಸಿತಕ್ಕೆ ಕಾರಣವಾಗುವ ಆತಂಕ ಮೂಡಿಸಿದ್ದರೆ, 8 ಸರ್ಕಾರಿ ಪ್ರೌಢಶಾಲೆಗಳಲ್ಲಿ ‘ಶೂನ್ಯ’ ಶಿಕ್ಷಕರು. ಅಂದರೆ, ಅತಿಥಿ ಶಿಕ್ಷಕರನ್ನು ಹೊರತುಪಡಿಸಿರೆ, ಇಲ್ಲಿ ಸರ್ಕಾರದಿಂದ ನೇಮಕಗೊಂಡ ಕಾಯಂ ಶಿಕ್ಷಕರೇ ಇಲ್ಲ!

ಸ್ವಯಂ ಉದ್ಯೋಗದಲ್ಲಿ ಸಕ್ಸಸ್ ಆದ ಮಹಿಳೆ: ವರದಾನವಾದ ಕೇಂದ್ರ ಸರ್ಕಾರದ PMEGP ಸ್ಟಾರ್ಟ್ ಅಪ್ !

ಯಾದಗಿರಿ ಜಿಲ್ಲೆ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 5625 ಮಂಜೂರಾದ ಹುದ್ದೆಗಳಿವೆ. ಆದರೆ ಇದರಲ್ಲಿ 2466ಕ್ಕಿಂತಲೂ ಹೆಚ್ಚು ಹುದ್ದೆಗಳು ಖಾಲಿಯಿವೆ. ಇತ್ತೀಚೆಗೆ ನಡೆದ ಅಂತರ್‌ ಜಿಲ್ಲಾ ಹಾಗೂ ವಿಭಾಗದ ಮಟ್ಟದ ವರ್ಗಾವಣೆ ಪ್ರಕ್ರಿಯೆಯಿಂದಾಗಿ ಮತ್ತೆ 200ಕ್ಕೂ ಹೆಚ್ಚು ಶಿಕ್ಷಕರ ಕೊರತೆ ಕಾಡಲಿದೆ.

ಹಾಗೆಯೇ ಪ್ರೌಢಶಾಲೆಗಳಿಗೆ ಮಂಜೂರಾದ ಒಟ್ಟು 1434 ಹುದ್ದೆ ಪೈಕಿ 562 ಹುದ್ದೆ ಖಾಲಿಯಿವೆ. ಮೊನ್ನೆಯ ವರ್ಗಾವಣೆಯಿಂದಾಗಿ ಮತ್ತೆ 30ಕ್ಕೂ ಹೆಚ್ಚು ಶಿಕ್ಷಕರ ಕೊರತೆ ಕಾಡಲಿದೆ. ಅದರಲ್ಲೂ, ಗಣಿತ, ವಿಜ್ಞಾನ ಹಾಗೂ ಆಂಗ್ಲ ಭಾಷೆ ವಿಷಯ ಶಿಕ್ಷಕರ ಕೊರತೆ ಇಲ್ಲಿನ ಮಕ್ಕಳ ಶಿಕ್ಷಣಕ್ಕೆ ಹಿನ್ನ​ಡೆಗೆ ಕಾರ​ಣ​ವಾ​ಗಿದೆ.

ಇನ್ನು, ಈ ಮಧ್ಯೆ ಇಲಾಖೆಯೇ ಗುರುತಿಸಿದಂತೆ 609 ಪ್ರಾಥಮಿಕ ಶಾಲೆಗಳು ಹಾಗೂ 94 ಪ್ರೌಢಶಾಲೆಗಳ ಕಟ್ಟಡಗಳು ಪಾಠಕ್ಕೆ ಯೋಗ್ಯವಲ್ಲವಾಗಿದ್ದು, ಕುಸಿಯುವ ಆತಂಕ ಎದುರಿಸುತ್ತಿವೆ. ಶಿಕ್ಷಕರ ಕೊರತೆ ಜೊತೆಗೆ ಮೂಲಸೌಲಭ್ಯ ಅವ್ಯವಸ್ಥೆ ಜಿಲ್ಲೆಯ ಶಿಕ್ಷಣದ ಪ್ರಗತಿಗೆ ಮಾರಕವಾಗುತ್ತಿದೆ ಅನ್ನುವುದರಲ್ಲಿ ಸಂಶಯವಿಲ್ಲ.

ಇಲ್ಲಗಳ ಮಧ್ಯೆಯೂ ಸಾಧನೆ:

ಹಾಗೆ ನೋಡಿದರೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಯಾದಗಿರಿ ಜಿಲ್ಲೆ ಸ್ಥಾನ ಕೊನೆಯಲ್ಲಿ ಕಂಡುಬರುತ್ತಾದರೂ, ಇತ್ತೀಚಿನ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಉತ್ತೀರ್ಣರಾದವರ ಶೇಕಡಾವಾರು ಫಲಿತಾಂಶ ತುಸು ಹೆಚ್ಚಳಗೊಂಡಿರುವುದು ಸಮಾಧಾನ ಮೂಡಿಸಿದೆ. ಹತ್ತು ಹಲವಾರು ಇಲ್ಲಗಳ ಮಧ್ಯೆಯೂ ಈ ಫಲಿತಾಂಶ ಗಮನಾರ್ಹ.

ಅತಿಥಿ ಶಿಕ್ಷಕರ ನೇಮಕಕ್ಕೆ ಇಲಾಖೆ ಸರ್ಕಾರಕ್ಕೆ ಪತ್ರ ಬರೆದಿದೆ. 2466 ಪ್ರಾಥಮಿಕ ಶಾಲಾ ಶಿಕ್ಷಕರ ಕೊರತೆ ನೀಗಿಸಲು 1364 ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗಿದ್ದು, ಇನ್ನೂ 625 ಅತಿಥಿ ಶಿಕ್ಷಕರ ನೇಮಕಕ್ಕೆ ಸರ್ಕಾರದ ಅನುಮತಿ ಕೋರಲಾಗಿದೆ. ಇನ್ನು, ಜಿಲ್ಲೆಯಲ್ಲಿ ಮೂರು ತಾಲೂಕುಗಳ ರಚನೆ ನಂತರ ಅಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇಮಕವೂ ಈವರೆಗೆ ಆಗದಿರುವುದು ಈಗಿನ ಅಧಿ​ಕಾ​ರಿ​ಗ​ಳಿ​ಗೆ ಹೆಚ್ಚಿನ ಒತ್ತಡಕ್ಕೂ ಕಾರಣವಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರ ತವರು ತಾಲೂಕು ಶಹಾಪುರ ಹಾಗೂ ಸುರಪುರ ತಾಲೂಕಿನಲ್ಲಿ ಶಿಕ್ಷಕರ ಕೊರತೆ ಹೆಚ್ಚಿಗೆ ಕಾಣುತ್ತಿದೆ.

ಶಿಕ್ಷಕರ ನೇಮಕದಿಂದ ಗುಣಮಟ್ಟ ಸುಧಾರಣೆ ಸಾಧ್ಯ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಕ್ರಮಗಳ ತಡೆಗಟ್ಟುವ ಕುರಿತು ಇಲಾಖೆಯ ಪರೀಕ್ಷಾ ಮಂಡಳಿ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ಕಳೆದ ತಿಂಗಳು ನಡೆದ ವಿಡಿಯೋ ಕಾನ್ಫರೆ​ನ್ಸ್‌ ಸಭೆಯಲ್ಲಿ ಯಾದಗಿರಿ ಸೇರಿ ಕೆಲವು ಜಿಲ್ಲೆಗಳಲ್ಲಿ ನಕಲು ಕುರಿತು ಪ್ರಸ್ತಾಪವಾಗಿತ್ತು. ನಕಲು ತಡೆಗಟ್ಟುವ ಸಲುವಾಗಿ ಡ್ರೋಣ್‌ ಕ್ಯಾಮೆರಾ, ಸಿಸಿಟಿವಿ, ಮಫ್ತಿ ಪೊಲೀಸರ ನಿಯೋಜನೆ, ನೆಲಮಹಡಿ ಬಿಟ್ಟು ಮೊದಲ ಮಹಡಿಯಲ್ಲಿ ಪರೀಕ್ಷೆ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಆದರೆ, ಇಷ್ಟೆಲ್ಲ ಹರಸಾಹಸದ ಬದಲು ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ನೀಗಿಸಿ ಮಂಜೂರಾದ ಹುದ್ದೆಗಳ ಭರ್ತಿ ಮಾಡಿ ವ್ಯವಸ್ಥೆ ಕಲ್ಪಿಸಿದರೆ ಮಕ್ಕಳ ಶಿಕ್ಷಣದ ಗುಣಮಟ್ಟಸುಧಾರಿಸುತ್ತದೆಯೆಲ್ಲ ಎಂದು ಪ್ರಶ್ನಿಸುವ ನಿವೃತ್ತ ಶಿಕ್ಷಕ ಶರಣಪ್ಪ, ಸರ್ಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತನೆ ನಡೆಸಲಿ ಎಂದು ಕನ್ನಡಪ್ರಭದೆದುರು ತಮ್ಮ ಅಭಿಮತ ವ್ಯಕ್ತಪಡಿಸಿದರು.

ಪೊಲೀಸ್‌ ಆಯ್ತು, ಈಗ ಸಾರಿಗೆ ನೌಕರರ ಸಂಬಳ ವಿಳಂಬ..!

ಜಿಲ್ಲೆಯಲ್ಲಿ ಕಾಯಂ ಶಿಕ್ಷಕರಿಲ್ಲದ ಪ್ರೌಢಶಾಲೆಗಳು. ಸರ್ಕಾರದಿಂದ ಕಾಯಂ ಶಿಕ್ಷಕರ ನೇಮಕಾತಿಯಾಗದ ಹಿನ್ನೆಲೆಯಲ್ಲಿ, ಇಲ್ಲಿ ಅತಿಥಿ ಶಿಕ್ಷಕರ ನೇಮಿಸಲಾಗಿದೆ.

- ಯಾದಗಿರಿ ತಾಲೂಕಿನ ಬಾಡಿಯಾಳದ ಸರ್ಕಾರಿ ಶಾಲೆ.
- ಸುರಪುರ ತಾಲೂಕಿನ ಯಡಹಳ್ಳಿ ಸರ್ಕಾರಿ ಶಾಲೆ.
- ಸುರಪುರ ತಾಲೂಕಿನ ಮಂಜಲಾಪುರ ಸರ್ಕಾರಿ ಶಾಲೆ.
- ಶಹಾಪುರ ತಾಲೂಕಿನ ಕಾಡಂಗೇರಾ (ಬಿ) ಸರ್ಕಾರಿ ಶಾಲೆ.
- ಶಹಾಪುರ ತಾಲೂಕಿನ ತುಮಕೂರು ಸರ್ಕಾರಿ ಶಾಲೆ.
- ಶಹಾಪುರ ತಾಲೂಕಿನ ಗಂಗನಾಳ ಸರ್ಕಾರಿ ಶಾಲೆ.
- ಶಹಾಪುರ ತಾಲೂಕಿನ ಬೀರನೂರ ಹಾಗೂ ಐಕೂರು ಸರ್ಕಾರಿ ಶಾಲೆಗಳು.
ಯಾದಗಿರಿ ಜಿಲ್ಲೆಯಲ್ಲಿ ಖಾಲಿಯಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಖ್ಯೆ.
- ಯಾದಗಿರಿ - 556
- ಶಹಾಪುರ - 779
- ಸುರಪುರ - 923
- ಒಟ್ಟು 2258 ಹುದ್ದೆಗಳು ಖಾಲಿಯಿದ್ದು, ಇದರಲ್ಲಿ 1364 ಅತಿಥಿ ಶಿಕ್ಷಕರ ನೇಮಿಸಲಾಗಿದೆ. ಇನ್ನೂ 625 ಅತಿಥಿ ಶಿಕ್ಷಕರ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಏಕೋಪಾಧ್ಯಾಯ ಶಾಲೆಗಳು :
- ಯಾದಗಿರಿ:38
- ಶಹಾಪುರ: 49
- ಸುರಪುರ: 74

ಯಾದಗಿರಿ ಜಿಲ್ಲೆಯಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅತಿಥಿ ಶಿಕ್ಷಕರ ನೇಮಕಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಡಿಡಿಪಿಐ ಮಂಜುನಾಥ್‌ ಹೇಳಿದ್ದಾರೆ. 

ಜಿಲ್ಲೆಯಲ್ಲಿ ಅರ್ಧದಷ್ಟುಶಿಕ್ಷಕರ ಕೊರತೆ ಕಾಡುತ್ತಿದೆಯೆಂದರೆ ಇದು ನಿಜಕ್ಕೂ ಗಂಭೀರ ವಿಷಯ. ಮಕ್ಕಳ ಶೈಕ್ಷಣಿಕ ಮಟ್ಟಕುಸಿತಕ್ಕೆ ಇದೇ ಕಾರಣ. ನಕಲು ಅಥವಾ ಕೊನೆ ಸ್ಥಾನ ಎಂದು ಟೀಕಿಸುವ ಬದಲು ಸರ್ಕಾರ ಹುದ್ದೆಗಳ ಭರ್ತಿ ಮಾಡಲಿ ಎಂದು ಹಿರಿಯ ನ್ಯಾಯವಾದಿಗಳು ಹಾಗೂ ಶಿಕ್ಷಣತಜ್ಞ ಭಾಸ್ಕರರಾವ್‌ ಮುಡಬೂಳ್‌ ತಿಳಿಸಿದ್ದಾರೆ. 

click me!