ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 49 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಅಪ್ಪನದೊಡ್ಡಿ ಗ್ರಾಮದಲ್ಲಿ ಶನಿವಾರ ನಡೆಸಿದ್ದು, ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೊಳಪಡಿಸಿದೆ.
ರಾಯಚೂರು (ಜು.2) : ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 49 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಅಪ್ಪನದೊಡ್ಡಿ ಗ್ರಾಮದಲ್ಲಿ ಶನಿವಾರ ನಡೆಸಿದ್ದು, ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೊಳಪಡಿಸಿದೆ. ಘಟನೆಯಿಂದ ಪಾಲಕರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದ್ದು, ಸ್ಥಳಕ್ಕೆ ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಘಟನೆ ಮಾಹಿತಿ ಪಡೆದ ಸಚಿವ ಎನ್.ಎಸ್. ಬೋಸರಾಜು ಜಿಲ್ಲಾಡಳಿತಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.
ಒಟ್ಟು 188 ವಿದ್ಯಾರ್ಥಿಗಳಿರುವ ಅಪ್ಪನದೊಡ್ಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಂದಿನಂತೆ ಶನಿವಾರ ಮಧ್ಯಾಹ್ನ ಬಿಸಿಯೂಟಕ್ಕೆ ಉಪ್ಪಿಟ್ಟು ಮಾಡಿದ್ದು, 1ನೇ ತರಗತಿಯಿಂದ 5ನೇ ತರಗತಿಯವರೆಗಿನ ಒಟ್ಟು 123 ವಿದ್ಯಾರ್ಥಿಗಳು ಉಪ್ಪಿಟ್ಟು ಸೇವನೆ ಮಾಡಿದ್ದಾರೆ. ಈ ವೇಳೆ ಮಕ್ಕಳಲ್ಲಿ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ರಾಯಚೂರು ನಗರದ ರಿಮ್ಸ್ ಬೋಧಕ ಆಸ್ಪತ್ರೆಗೆ ದಾಖಸಲಾಗಿದೆ. 37 ವಿದ್ಯಾರ್ಥಿಗಳಿಗೆ ಸಮೀಪದ ಯಾಪಲದಿನ್ನಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
undefined
ಸರ್ಕಾರಿ ಶಾಲಾ ಆವರಣದಲ್ಲಿ ಬೆಳೆದ ವಿಷಕಾರಿ ಬೀಜ ತಿಂದು, ಅಸ್ವಸ್ಥರಾದ ಮಕ್ಕಳು
ಇನ್ನೂ 30 ಜನ ವಿದ್ಯಾರ್ಥಿಗಳಿಗೆ ಅಪ್ಪನದೊಡ್ಡಿ ಶಾಲೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆರೋಗ್ಯ ಇಲಾಖೆಯ ವೈದ್ಯರ ತಂಡ ಗ್ರಾಮದಲ್ಲಿ ಬೀಡುಬಿಟ್ಟಿದ್ದು, ಎಲ್ಲ ವಿದ್ಯಾರ್ಥಿಗಳು ಆರಾಮವಾಗಿದ್ದಾರೆ. ಯಾವುದೇ ಆತಂಕಪಡುವಂತಿಲ್ಲ. ಎಲ್ಲ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಿ ನಿಗಾವಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುರೇಂದ್ರ ಬಾಬು ತಿಳಿಸಿದ್ದಾರೆ.
ಗ್ರಾಮೀಣ ಶಾಸಕರ ಭೇಟಿ:
ಘಟನೆ ಮಾಹಿತಿ ಪಡೆದ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಕೂಡಲೇ ಅಪ್ಪನದೊಡ್ಡಿದ ಶಾಲೆ, ಯಾಪಲದಿನ್ನಿ ಪಿಎಚ್ಸಿ ಹಾಗೂ ರಿಮ್ಸ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಶಾಲೆ ಶಿಕ್ಷಕರು, ಎಸ್ಡಿಎಂಸಿ, ಪಾಲಕರು, ಗ್ರಾಮಸ್ಥರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಆತಂಕಗೊಂಡ ಮಕ್ಕಳು ಮತ್ತು ಪಾಲಕರಿಗೆ ಆತ್ಮಸ್ಥೈರ್ಯವನ್ನು ತುಂಬಿದರು.
ಬೆಂಗಳೂರು: ಕಲುಷಿತ ನೀರು ಕುಡಿದು 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ
ವಿದ್ಯಾರ್ಥಿಗಳ ಆರೋಗ್ಯದ ಮೇಲೆ ನಿಗಾವಹಿಸಲು ಸಚಿವ ಬೋಸರಾಜು ಸೂಚನೆ
ರಾಯಚೂರು: ತಾಲೂಕಿನ ಅಪ್ಪನದೊಡ್ಡಿ ಗ್ರಾಮದಲ್ಲಿ ಬಿಸಿಯೂಟ ಸೇವಿಸಿ ಅಸ್ವಸ್ಥರಾದ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗೆ ಸೂಚನೆ ನೀಡಿರುವುದಾಗಿ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.
ಅಪ್ಪನದೊಡ್ಡಿ ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಸಿಯೂಟದ ಬಗ್ಗೆ ಆಯಾ ಶಾಲಾ ಮುಖ್ಯಸ್ಥರು ಮತ್ತು ಬಿಟಿಯೂಟ ಅಡುಗೆ ಸಿಬ್ಬಂದಿ ಸ್ವಚ್ಛತೆಗೆ ಮುಂದಾಗಿ, ಅಗತ್ಯ ಮುಂಜಾಗ್ರತಾ ಕ್ರಮವನ್ನು ವಹಿಸಬೇಕು, ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು.
ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಬಿಸಿಯೂಟಕ್ಕೆ ಅಗತ್ಯ ವ್ಯವಸ್ಥೆ ಮತ್ತು ಅಡುಗೆ ಮಾಡಲು ಶುದ್ಧ ನೀರು, ಅಡುಗೆ ಕೊಠಡಿಯಲ್ಲಿ ಕ್ರಿಮಿ ಕೀಟಗಳು ಇರದಂತೆ ಅಗತ್ಯ ಕ್ರಮ ವಹಿಸಲು ಆಯಾ ಶಾಲಾ ಮುಖ್ಯೋಪಾಧ್ಯಾಯರಿಗೆ ನಿರ್ದೇಶನ ನೀಡಬೇಕು. ಪ್ರತಿದಿನ ಅಡುಗೆ ಮಾಡಿದ ತಕ್ಷಣ ಸಂಬಂಧಿಸಿದ ಅಡುಗೆ ಸಿಬ್ಬಂದಿ, ಶಾಲೆ ಮುಖ್ಯಸ್ಥರು ತಪಾಸಣೆ ಮಾಡಲು ಜಿಲ್ಲಾಡಳಿತಕ್ಕೆ ನಿರ್ದೇಶಿಸಲಾಗಿದೆ.
ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 55 ಮಕ್ಕಳು ಅಸ್ವಸ್ಥ
ಇಷ್ಟೇ ಅಲ್ಲದೇ ಅಸ್ವಸ್ಥರಾದ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ನಿಗಾ ವಹಿಸಲು ರಿಮ್ಸ್ ಬೋಧಕ ಆಸ್ಪತ್ರೆಯ ಮುಖ್ಯಸ್ಥರಿಗೆ ಅಗತ್ಯ ಚಿಕಿತ್ಸೆಗೆ ಸೂಚಿಸಬೇಕು ಮತ್ತು ಗ್ರಾಮದಲ್ಲಿರುವ ಕೆಲ ವಿದ್ಯಾರ್ಥಿಗಳು ಅಲ್ಪ ಪ್ರಮಾಣದಲ್ಲಿ ಅಸ್ವಸ್ಥಗೊಂಡವರ ತಪಾಸಣೆಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆದೇಶಿಸಿರುವುದಾಗಿ ಸಚಿವರು ಹೇಳಿಕೆ ನೀಡಿದ್ದಾರೆ.