
ವರದಿ: ಪುಟ್ಟರಾಜು. ಆರ್.ಸಿ ಏಷಿಯಾನೆಟ್, ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ಜು.02): ಚಾಮರಾಜನಗರ ಜಿಲ್ಲೆಯಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಇದರ ಪರಿಣಾಮ ಸರ್ಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುವ ಸ್ಥಿತಿಗೆ ತಲುಪಿವೆ. ಈ ವರ್ಷ 11 ಸರ್ಕಾರಿ ಶಾಲೆಗಳು ಶೂನ್ಯ ದಾಖಲಾತಿಯಿಂದ ಬೀಗ ಹಾಕಿವೆ. ಖಾಸಗಿ ಶಾಲೆಗಳಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 811 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿವೆ. ಆದರೆ ಈ ಶೈಕ್ಷಣಿಕ ವರ್ಷದಲ್ಲಿ 11 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದೇ ಮಗುವೂ ದಾಖಲಾತಿಯಾಗದ ಕಾರಣ ಈ ಹನ್ನೊಂದು ಶಾಲೆಗಳನ್ನು ಮುಚ್ಚಲಾಗಿದೆ. ಕಳೆದ ವರ್ಷ 50,800 ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯಾಗಿದ್ದರೆ, ಈ ವರ್ಷ ಅದು 46,130ಕ್ಕೆ ಇಳಿದಿದೆ. ಅಂದರೆ ನಾಲ್ಕು ಸಾವಿರಕ್ಕೂ ಹೆಚ್ಚು ಮಕ್ಕಳ ಸಂಖ್ಯೆ ಕಡಿಮೆಯಾಗಿದೆ.
ಸರ್ಕಾರಿ ಮಾತ್ರವಲ್ಲ, ಖಾಸಗಿ ಹಾಗೂ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿಯೂ ಮಕ್ಕಳ ಸಂಖ್ಯೆ ಕುಸಿತವಾಗಿದೆ. ಕಳೆದ ವರ್ಷ ಒಟ್ಟಾರೆ 1.10 ಲಕ್ಷ ಮಕ್ಕಳು ಶಾಲೆಗಳಲ್ಲಿ ದಾಖಲಾಗಿದ್ದರೆ, ಈ ವರ್ಷ ಅದು 99 ಸಾವಿರಕ್ಕೆ ಇಳಿದಿದೆ. ಅಂದರೆ ಸುಮಾರು 11 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಡಿತವಾಗಿದೆ ಗ್ರಾಮೀಣ ಭಾಗಗಳಲ್ಲಿ ಒಂದನೇ ತರಗತಿಗೆ ಮಕ್ಕಳೇ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಜನನ ಪ್ರಮಾಣ ಕುಸಿತ, ನಗರ ವಲಸೆ ಹಾಗೂ ‘ಒಂದೇ ಮಗು ಸಾಕು’ ಎಂಬ ಪೋಷಕರ ಮನೋಭಾವ ಇದಕ್ಕೆ ಪ್ರಮುಖ ಕಾರಣವೆಂದು ಡಿಡಿಪಿಐ ಚಂದ್ರಕಾಂತ ಪಾಟೀಲ್ ಹೇಳುತ್ತಿದ್ದಾರೆ. ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ ಚಾಮರಾಜನಗರ ಜಿಲ್ಲೆಯಲ್ಲಿ ಜನನ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ಇಳಿಯುತ್ತಿದೆ.
2016: 12.23
2017: 11.91
2018: 11.51
2019: 11.12
2020: 10.92
2021: 10.52
2022: 10.33
2023: 10.28
2024: 9.93
ಈ ಅಂಕಿಅಂಶಗಳು ಜನನ ಪ್ರಮಾಣ ನಿರಂತರವಾಗಿ ಕುಸಿಯುತ್ತಿರುವುದನ್ನು ಸ್ಪಷ್ಟಪಡಿಸುತ್ತವೆ. ಮುಂದಿನ ದಿನಗಳಲ್ಲಿ ಜನನ ಪ್ರಮಾಣದಲ್ಲಿ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಗಳು ಇದೆ. ಮಕ್ಕಳ ಕೊರತೆ ಈಗ ಕೇವಲ ಶಿಕ್ಷಣ ಕ್ಷೇತ್ರದ ಸಮಸ್ಯೆಯಾಗಿರದೆ, ಗ್ರಾಮೀಣ ಜನಸಂಖ್ಯೆ ಮತ್ತು ಸಾಮಾಜಿಕ ಬದಲಾವಣೆಯ ಸೂಚಕವಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಗಂಭೀರವಾಗುವ ಸಾದ್ಯತೆಯು ಇದೆ.