ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಘೋಷಣೆ ಮಾಡಿದ ಬಳಿಕ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆ ಎದುರಾಗಿದೆ. ಬಹುತೇಕ ಬಸ್‌ಗಳು ತುಂಬಿ ಬರುತ್ತಿದ್ದು, ವಿದ್ಯಾರ್ಥಿಗಳು ಬಾಗಿಲಲ್ಲೇ ನಿಂತು, ಜೋತು ಬಿದ್ದು ಪ್ರಯಾಣ ಮಾಡುವ ಅನಿವಾರ್ಯ ಎದುರಾಗಿದೆ.
ಕೊಪ್ಪಳ (ಜೂ.16) : ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಘೋಷಣೆ ಮಾಡಿದ ಬಳಿಕ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆ ಎದುರಾಗಿದೆ. ಬಹುತೇಕ ಬಸ್‌ಗಳು ತುಂಬಿ ಬರುತ್ತಿದ್ದು, ವಿದ್ಯಾರ್ಥಿಗಳು ಬಾಗಿಲಲ್ಲೇ ನಿಂತು, ಜೋತು ಬಿದ್ದು ಪ್ರಯಾಣ ಮಾಡುವ ಅನಿವಾರ್ಯ ಎದುರಾಗಿದೆ. ಅಷ್ಟೇ ಅಲ್ಲ, ಹಲವೆಡೆ ಗ್ರಾಮಾಂತರ ಪ್ರದೇಶದಲ್ಲಿ ಬಸ್ ಕೊರತೆ ಸಹ ಬಹುವಾಗಿ ಕಾಡುತ್ತಿದೆ. ವಿದ್ಯಾರ್ಥಿಗಳು ಪ್ರಾಣ ಪಣಕ್ಕಿಟ್ಟು ಬಸ್ ಏರುವಂತಾಗಿದೆ.
ವಿದ್ಯಾರ್ಥಿಗಳಿಗೆ ಮೊದಲಿನಿಂದಲೂ ಇಂತಹ ಸಮಸ್ಯೆ ಇತ್ತು. ಈಗ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಜಾರಿಯಾದ ಬಳಿಕ ಮತ್ತಷ್ಟುಹೆಚ್ಚಿದೆ.
undefined
ಮಹಿಳೆಯರಿಗೆ ಉಚಿತ ಪ್ರಯಾಣ : ಈಗ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ ಬಸ್!
ಸರಿಯಾದ ವೇಳೆಗೆ ಶಾಲಾ, ಕಾಲೇಜಿಗೆ ವಿದ್ಯಾರ್ಥಿಗಳು ತೆರಳಬೇಕು. ವಿದ್ಯಾರ್ಥಿಗಳ ಪ್ರಯಾಣಕ್ಕೆಂದೇ ಪ್ರತ್ಯೇಕ ಬಸ್‌ಗಳಿರುವುದಿಲ್ಲ. ಬರುವ ಬಸ್‌ನ್ನು ವಿದ್ಯಾರ್ಥಿಗಳು ಸಾರ್ವಜನಿಕರ ಜೊತೆ ಹತ್ತಬೇಕು. ನಿತ್ಯ ಕೊಪ್ಪಳಕ್ಕೆ ನೂರಾರು ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ಬರುತ್ತಾರೆ. ವಿವಿಧೆಡೆಯಿಂದ ಬರುವ ವಿದ್ಯಾರ್ಥಿಗಳ ಮಾಹಿತಿ, ಎಷ್ಟುವಿದ್ಯಾರ್ಥಿಗಳು ಎಲ್ಲಿಂದ ಬರುತ್ತಾರೆ ಎಂಬ ಮಾಹಿತಿ ಸಹ ಸಾರಿಗೆ ಸಂಸ್ಥೆ ಬಳಿ ಇರುತ್ತದೆ. ಆದರೆ ಜನದಟ್ಟಣೆಗೆ ತಕ್ಕಂತೆ ಬಸ್ ವ್ಯವಸ್ಥೆ ಕಲ್ಪಿಸಲು ಸಾರಿಗೆ ಸಂಸ್ಥೆಗೆ ಸಾಧ್ಯವಾಗುತ್ತಿಲ್ಲ.
ಶಾಲಾ, ಕಾಲೇಜಿಗೆ ಹೋಗುವ ಅವಸರದಲ್ಲಿ ವಿದ್ಯಾರ್ಥಿಗಳು ಫುಟ್‌ಬೋರ್ಡ್ ಮೇಲೆ, ಬಾಗಿಲಿಗೆ ಜೋತುಬಿದ್ದು ಪ್ರಯಾಣಿಸುವ ಸಂದರ್ಭ ಎದುರಾಗುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿಗಳಿಗಾಗಿ ವಿಶೇಷ ಬಸ್ ವ್ಯವಸ್ಥೆ ಮಾಡಬೇಕು ಎಂಬ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಆದರೆ ಸ್ಪಂದನೆ ಸಿಗುತ್ತಿಲ್ಲ. ಈಗ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಜಾರಿಯಾದ ಹಿನ್ನೆಲೆಯಲ್ಲಿ ಬಸ್‌ಗಳು ಮಹಿಳಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ಮಹಿಳೆಯರ ಪ್ರಯಾಣ ಹೆಚ್ಚಾಗಿದೆ. ವಿದ್ಯಾರ್ಥಿಗಳಿಗೆ ಕೆಲವೆಡೆ ಬಸ್ ಹತ್ತಲು ಅವಕಾಶವೇ ಸಿಗುತ್ತಿಲ್ಲ.
ಶೈಕ್ಷಣಿಕ ಅಭಿವೃದ್ಧಿಗೆ ಹಿನ್ನಡೆ:
ಬಸ್‌ಗಳ ಕೊರತೆಯಿಂದ ಸರಿಯಾದ ವೇಳೆಗೆ ಶಾಲಾ, ಕಾಲೇಜಿಗೆ ವಿದ್ಯಾರ್ಥಿಗಳು ತಲುಪಲು ಸಾಧ್ಯವಾಗುತ್ತಿಲ್ಲ. ತಡವಾಗಿ ಹೋಗುವುದರಿಂದ ತರಗತಿಗಳು ಆಗಲೇ ಆರಂಭವಾಗಿ ಬಿಟ್ಟಿರುತ್ತವೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸಹ ಹಿನ್ನಡೆ ಆಗುತ್ತಿದೆ.
ಕುಸನೂರು ಘಟನೆ ಮರೆಯುವಂತಿಲ್ಲ:
ಜೂ. 12ರಂದು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಕುಸನೂರು ಗ್ರಾಮದಲ್ಲಿ ಮಧು ಕುಂಬಾರ ಎಂಬ ವಿದ್ಯಾರ್ಥಿ ಬಸ್ ಬಾಗಿಲಲ್ಲಿ ನಿಂತು ಪ್ರಯಾಣ ಮಾಡುವ ಸಂದರ್ಭದಲ್ಲಿ ಕೆಳಗೆ ಬಿದ್ದು ಮೃತಪಟ್ಟಿದ್ದು, ಈ ಘಟನೆಯನ್ನು ಯಾರೂ ಮರೆಯುವಂತಿಲ್ಲ. ಈ ಘಟನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಸ್ ಬಾಗಿಲು ಹಾಕಿದ ಬಳಿಕವೇ ಬಸ್ ಚಲಾಯಿಸಬೇಕು ಎಂದು ನಿರ್ದೇಶನ ನೀಡಿತು. ಆದರೂ ಕೆಲವೆಡೆ ಈ ನಿರ್ದೇಶನ ನಿರ್ಲಕ್ಷಿಸಲಾಗುತ್ತಿದೆ.
ಕೊಪ್ಪಳ ತಾಲೂಕಿನ ಹೊಸೂರು ಗ್ರಾಮದ ವಿದ್ಯಾರ್ಥಿಗಳು ಕನಕಗಿರಿ ಮಾರ್ಗದಿಂದ ಹೊಸೂರು, ಇರಕಲ್ಲಗಡಾದಿಂದ ಕೊಪ್ಪಳಕ್ಕೆ ಬರುವ ಬಸ್‌ಗಳನ್ನು ಅವಲಂಬಿಸುತ್ತಿದ್ದು, ಬಸ್ ಹೊಸೂರು ಗ್ರಾಮಕ್ಕೆ ಬರುವ ವೇಳೆಗೆ ರಶ್ ಆಗಿರುತ್ತದೆ. ಶಾಲಾ, ಕಾಲೇಜಿಗೆ ಹೋಗುವ ಒತ್ತಡದಲ್ಲಿ ಬಸ್‌ಗೆ ವಿದ್ಯಾರ್ಥಿಗಳು ಜೋತು ಬಿದ್ದು ಹೋಗುತ್ತಿದ್ದಾರೆ. ಹಾಗೆ ಯಲಬುರ್ಗಾ ತಾಲೂಕಿನ ಬೇವೂರಿನಲ್ಲಿ ನಿತ್ಯ ನೂರಾರು ವಿದ್ಯಾರ್ಥಿಗಳು ಸಹ ಬಸ್‌ಗಳ ಕೊರತೆಯಿಂದ ಅಟೋ, ಲಾರಿ ಏರಿ ತೆರಳಬೇಕಿದೆ.
Transport in Karnataka: ನೂರಾರು ಮಕ್ಕಳಿಗೆ ಒಂದೇ ಬಸ್: ವಿದ್ಯಾರ್ಥಿಗಳ ಪರದಾಟ
ವಿಶೇಷ ಬಸ್ ಒಂದೇ ಪರಿಹಾರ:
ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಬಸ್‌ಪಾಸ್ ಸೌಲಭ್ಯ ಪಡೆದಿರುತ್ತಾರೆ. ಆದರೆ ಬಹುತೇಕ ಮಾರ್ಗಗಳಲ್ಲಿ ಬಸ್ ಕೊರತೆ ಇರುತ್ತದೆ. ಸಾರಿಗೆ ಸಂಸ್ಥೆ ಅಧಿಕಾರಿಗಳು ವಿದ್ಯಾರ್ಥಿಗಳ ಸಂಖ್ಯೆ ಆಧಾರದಲ್ಲಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಪಾಲಕರು ಒತ್ತಾಯಿಸುತ್ತಿದ್ದಾರೆ.
ನಾವು ನಿತ್ಯ ಶಾಲಾ, ಕಾಲೇಜಿಗೆ ಹೋಗಬೇಕೆಂದರೆ ಬಸ್‌ನ್ನೆ ಅವಲಂಬಿಸಿದ್ದೇವೆ. ಆದರೆ ಬಸ್ ನಮ್ಮೂರಿಗೆ ಬರುವಷ್ಟರಲ್ಲಿ ಜನರಿಂದ ತುಂಬಿರುತ್ತದೆ. ಬಸ್‌ನಲ್ಲಿ, ಕೆಲವೊಮ್ಮೆ ಬಾಗಿಲ ಬಳಿಯೇ ನಿಂತುಕೊಳ್ಳುತ್ತೇವೆ. ಶಾಲಾ, ಕಾಲೇಜಿಗೆ ಸರಿಯಾದ ಸಮಯಕ್ಕೆ ಹೋಗಬೇಕೆಂಬ ಅವಸರ ಸಹ ಇರುತ್ತದೆ. ಇನ್ನು ಹೆಚ್ಚಿನ ಬಸ್ ವ್ಯವಸ್ಥೆ ಮಾಡಿದರೆ ಅನುಕೂಲ ಆಗುತ್ತದೆ.
ಬಸ್‌ನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳು, ಹೊಸೂರು ಗ್ರಾಮ