BBMP Night School; ಬಡ ವಿದ್ಯಾರ್ಥಿಗಳ ಅನುಕೂಲಕ್ಕೆ ಬಿಬಿಎಂಪಿ ತೆರೆಯಲಿದೆ ಸಂಜೆ ಶಾಲೆ

By Suvarna NewsFirst Published Jun 17, 2022, 1:43 PM IST
Highlights
  •  ಸಂಜೆ ಮನೆಯಲ್ಲಿ ಓದಲು ಅವಕಾಶ ಇಲ್ಲದ ಬಡ ಮಕ್ಕಳಿಗೆ ಅನುಕೂಲ
  •  ದಾಸರಹಳ್ಳಿಯಲ್ಲಿ ಮೊದಲ ಸಂಜೆ ಶಾಲೆ ಆರಂಭಕ್ಕೆ ಸಿದ್ಧತೆ
  • ಸಂಜೆ 6ರಿಂದ ರಾತ್ರಿ 8ರವರೆಗೆ ಓದಲು ಸ್ಥಳದ ವ್ಯವಸ್ಥೆ
  •  8ರಿಂದ 10ನೇ ತರಗತಿಯ ಮಕ್ಕಳಿಗೆ ಮಾತ್ರ
  • ಗ್ರಂಥಾಲಯ, ಶಿಕ್ಷಕರು, ಸೆಕ್ಯೂರಿಟಿ ವ್ಯವಸ್ಥೆ
  • ಪ್ರತಿ ಶಾಲೆಗೆ .2 ಲಕ್ಷ ವೆಚ್ಚದಲ್ಲಿ ಅನುಕೂಲ

ಬೆಂಗಳೂರು (ಜೂನ್.17): ಜನದಟ್ಟಣೆಯ ಪ್ರದೇಶದಲ್ಲಿ ಚಿಕ್ಕ ಮನೆಗಳಲ್ಲಿ ವಾಸವಿರುವ ಬಡ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿ ಎಂಬ ಮಹತ್ವಾಕಾಂಕ್ಷೆಯ ಉದ್ದೇಶದಿಂದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಸಂಜೆ ಶಾಲೆ ಆರಂಭಿಸಲು ಸಿದ್ಧತೆæ ನಡೆಸಿದೆ.

ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ದಾಸರಹಳ್ಳಿ ವಲಯದಲ್ಲಿ ಮೊದಲ ಸಂಜೆ ಶಾಲೆ ಪ್ರಾರಂಭಿಸಲು ಮುಂದಾಗಿದ್ದು, ಈ ಕುರಿತು ಅನುಮೋದನೆಗಾಗಿ ಪಾಲಿಕೆ ಶಿಕ್ಷಣ ವಿಭಾಗವು ಮುಖ್ಯ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದೆ.

ಸಾಮಾನ್ಯವಾಗಿ ಸಂಜೆ 6ರಿಂದ 8ರವರೆಗೆ ಮಕ್ಕಳಿಗೆ ಓದುವ ಸಮಯ. ಸೌಲಭ್ಯವಿದ್ದವರು ಮಕ್ಕಳನ್ನು ಮನೆ ಪಾಠಗಳಿಗೆ(ಟ್ಯೂಷನ್‌) ಕಳುಹಿಸುತ್ತಾರೆ. ಅಂತಹ ಸೌಲಭ್ಯ ಇಲ್ಲದ ಜನದಟ್ಟಣೆ ಪ್ರದೇಶಗಳಲ್ಲಿ ಓದುವ ಮಕ್ಕಳಿಗೆ ಕಿರಿಕಿರಿಯಾಗದ ವಾತಾವರಣ ಒದಗಿಸುವುದು ಬಿಬಿಎಂಪಿಯ ಮುಖ್ಯ ಉದ್ದೇಶ. ಅದಕ್ಕಾಗಿ 8ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಸಂಜೆ ಶಾಲೆ ಆರಂಭಿಸುತ್ತಿದೆ.

10ಕ್ಕಿಂತ ಹೆಚ್ಚು ಮಕ್ಕಳಿಗೆ ಕೋವಿಡ್‌ ಬಂದರೆ ಶಾಲೆಗೆ ರಜೆ!

ಯಾವುದೇ ಗಲಾಟೆ, ಗದ್ದಲವಿಲ್ಲದ ಜಾಗದಲ್ಲಿ ಓದಲು ಅನುಕೂಲವಾಗುವಂತೆ ಸಕಲ ಸೌಲಭ್ಯಗಳು ಇರುವ ಕಟ್ಟಡದಲ್ಲಿ ಶಾಲೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಓದಲು ಅನುಕೂಲ ವಾತಾವರಣ ನಿರ್ಮಿಸಿ, ಅವರಿಗೆ ಅಗತ್ಯವಾದ ಪರಾಮರ್ಶೆ ಕೃತಿಗಳನ್ನು ಒಳಗೊಂಡ ಗ್ರಂಥಾಲಯ ವ್ಯವಸ್ಥೆ ಮಾಡುವ ಚಿಂತನೆ ಬಿಬಿಎಂಪಿಯದ್ದು.

ಶಿಕ್ಷಕರ ನೇಮಕ: ಈ ಸಂಜೆ ಶಾಲೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲೀ ಎಂಬ ಕಾರಣಕ್ಕೆ ಓರ್ವ ಶಿಕ್ಷಕರನ್ನು ನಿಯೋಜಿಸುವ ಯೋಜನೆ ಪಾಲಿಕೆಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಗಣಿತ, ಸಮಾಜ, ವಿಜ್ಞಾನ, ಇಂಗ್ಲಿಷ್‌ ಸೇರಿದಂತೆ ಕಷ್ಟಕರವಾದ ವಿಷಯವನ್ನು ಸರಳೀಕರಿಸಿ ಮಾಹಿತಿ ಒದಗಿಸುವ ಕಾರ್ಯವನ್ನು ನಿರ್ವಹಿಸಲಿದ್ದಾರೆ. ಅಂತೆಯೇ ಶಾಲೆಗೆ ಓರ್ವ ಸೆಕ್ಯುರಿಟಿ ಗಾರ್ಡ್‌ನನ್ನು ನೇಮಕ ಮಾಡಲಿದ್ದು, ರಾತ್ರಿ ಯಾವುದೇ ಸಮಸ್ಯೆಗಳಾಗದಂತೆ ಭದ್ರತಾ ಸಿಬ್ಬಂದಿ ಎಚ್ಚರಿಕೆ ವಹಿಸಲಿದ್ದಾರೆ.

ಮೂಲಸೌಕರ್ಯ: ಸಂಜೆ ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಅಂತಾರ್ಜಾಲ ವ್ಯವಸ್ಥೆ ಇರುವ ಕಂಪ್ಯೂಟರ್‌, ಶಿಕ್ಷಣಕ್ಕೆ ಸಂಬಂಧಪಟ್ಟಪುಸ್ತಕಗಳು, ಪರಮಾರ್ಶೆ ಪುಸ್ತಕಗಳು, ಟೇಬಲ್‌, ಕುರ್ಚಿ ಸೇರಿದಂತೆ ವಿವಿಧ ಪೀಠೋಪಕರಣಗಳು, ವಿದ್ಯುತ್‌ ವ್ಯವಸ್ಥೆ ಸೌಲಭ್ಯಗಳನ್ನು ಬಿಬಿಎಂಪಿ ಒದಗಿಸಲಿದೆ. ಅದಕ್ಕಾಗಿ ಒಂದು ಶಾಲೆಗೆ .2 ಲಕ್ಷಗಳನ್ನು ಖರ್ಚು ಮಾಡಲಿದೆ. ಇದರಲ್ಲಿ ಶಿಕ್ಷಕರ ವೇತನ, ಭದ್ರತಾ ಸಿಬ್ಬಂದಿ ವೇತನವೂ ಒಳಗೊಂಡಿರಲಿದೆ.

ಹಿಂದಿ ಬಂದರಷ್ಟೇ ಪ್ರವಾಸ ಆದೇಶದ ಹಿಂದೆ ಡಿಡಿಪಿಐ ಕೈವಾಡ ಖಚಿತ!

ಆನ್‌ಲೈನ್‌ ನೋಂದಣಿ: ಪಾಲಿಕೆ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಒದಗಿಸುತ್ತಿರುವ ಸೌಲಭ್ಯ ದುರುಪಯೋಗ ಆಗಬಾರದು. ಅದಕ್ಕಾಗಿ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯಲಿದೆ. ಮನೆಗಳಲ್ಲಿ ಓದಲು ಅಗತ್ಯ ಸೌಕರ್ಯ ಇಲ್ಲದವರು ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಂಡು ಸಂಜೆ ಶಾಲೆಯ ಅನುಕೂಲತೆ ಬಳಸಿಕೊಳ್ಳಬಹುದಾಗಿದೆ.

ಸಾಧ್ಯವಾದರೆ ಪೋಷಕರು ತಮ್ಮ ಮಕ್ಕಳನ್ನು ಸಂಜೆ ಶಾಲೆಗೆ ಕರೆ ತಂದು ಓದಿನ ಅವಧಿ ಮುಗಿದ ಬಳಿಕ ಕರೆದುಕೊಂಡು ಹೋಗಬಹುದು. ಮಕ್ಕಳು ಸಂಜೆ 6ರಿಂದ 8 ರವರೆಗೆ ಓದಿನ ಕಡೆಗೆ ಹೆಚ್ಚಿನ ಆದ್ಯತೆ ಕೊಟ್ಟು ಶಿಕ್ಷಣದಲ್ಲಿ ಮುಂದೆ ಬರಬೇಕೆಂಬುದು ಪಾಲಿಕೆ ಮತ್ತು ಬಿಬಿಎಂಪಿ ವಿಶೇಷ ಆಯುಕ್ತ(ಶಿಕ್ಷಣ) ರಾಮಪ್ರಸಾದ್‌ ಮನೋಹರ್‌ ಅವರ ಆಶಯ ಎಂದು ಬಿಬಿಎಂಪಿ ಸಹಾಯಕ ಆಯುಕ್ತ(ಶಿಕ್ಷಣ) ಉಮೇಶ್‌ ತಿಳಿಸಿದರು.

 ವಾರ್ಡ್‌ಗೊಂದು ಶಾಲೆ: ದಾಸರಹಳ್ಳಿ ವಲಯದಲ್ಲಿ ಪ್ರಾಯೋಗಿಕವಾಗಿ ಈ ಸಂಜೆ ಶಾಲೆಯನ್ನು ಪ್ರಾರಂಭಿಸಲಾಗುತ್ತಿದೆ. ಈ ಪ್ರಯೋಗ ಯಶಸ್ವಿಯಾದರೆ ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಒಂದರಂತೆ ಸಂಜೆ ಶಾಲೆ ಆರಂಭಿಸುವ ಗುರಿಯನ್ನು ಪಾಲಿಕೆ ಹೊಂದಿದೆ. ಸದ್ಯ ದಾಸರಹಳ್ಳಿಯಲ್ಲಿ ಶಾಲೆಗಾಗಿ ಬಿಬಿಎಂಪಿಯ ಕಟ್ಟಡವನ್ನು (20/30 ಅಥವಾ 30/40 ಚದರ ಅಡಿ ಸುತ್ತಳತೆ) ಗುರುತಿಸುವ ಕಾರ್ಯ ನಡೆಯುತ್ತಿದೆ. ಒಂದೆರಡು ವಾರಗಳಲ್ಲಿ ಅನುಮೋದನೆ ಪಡೆದು ಶಾಲೆಯನ್ನು ಆರಂಭಿಸುವ ಪ್ರಕ್ರಿಯೆಗೆ ಚಾಲನೆ ನೀಡಲಿದ್ದೇವೆ ಎಂದು ಬಿಬಿಎಂಪಿ ಸಹಾಯಕ ಆಯುಕ್ತ(ಶಿಕ್ಷಣ) ಉಮೇಶ್‌ ಅವರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

click me!