‘ಮಹಿಳೆ ಕಾಮೋತ್ತೇಜಕ ವಸ್ತು’ ಬಗ್ಗೆ ಪ್ರಬಂಧ ಬರೆಯಿರಿ: ಪ್ರಶ್ನೆ ನೋಡಿ ವಿದ್ಯಾರ್ಥಿಗಳು ಶಾಕ್!

By Kannadaprabha NewsFirst Published Jun 17, 2022, 7:09 AM IST
Highlights

* ಆಯುರ್ವೇದ ಕೋರ್ಸ್‌ ಪರೀಕ್ಷೆಯಲ್ಲಿ ಪ್ರಶ್ನೆ

‘ಮಹಿಳೆ ಕಾಮೋತ್ತೇಜಕ ವಸ್ತು’ ಬಗ್ಗೆ ಪ್ರಬಂಧ ಬರೆಯಿರಿ!

* - ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ

ಕ* ನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು(ಜೂ,17): ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು (ಆರ್‌ಜಿಯುಎಚ್‌ಎಸ್‌) ಬುಧವಾರ ನಡೆಸಿದ ಬ್ಯಾಚುಲರ್‌ ಆಫ್‌ ಆಯುರ್ವೇದ, ಮೆಡಿಸಿನ್‌ ಮತ್ತು ಸರ್ಜರಿ (ಬಿಎಎಂಎಸ್‌)’ ಕೋರ್ಸಿನ ಅಂತಿಮ ವರ್ಷದ ಪರೀಕ್ಷೆಯಲ್ಲಿ ‘ಮಹಿಳೆ ಕಾಮೋತ್ತೇಜಕ ವಸ್ತು’ ವಿಷಯ ಕುರಿತು ಕಿರು ಪ್ರಬಂಧ ಬರೆಯುವಂತೆ ಕೇಳಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ಹಾಗೂ ವಿವಾದಕ್ಕೀಡಲಾಗಿದೆ.

ಮಹಿಳೆಯನ್ನು ಭೋಗ ವಸ್ತುವಾಗಿ ವಿಶ್ವವಿದ್ಯಾಲಯ ಚಿತ್ರಿಸುತ್ತಿದೆ. ವಿದ್ಯಾರ್ಥಿಗಳಿಗೂ ಇದನ್ನೇ ಬೋಧಿಸುತ್ತಿರುವುದು ಮಹಿಳೆಯರಿಗೆ ಮಾಡಿರುವ ಅವಮಾನ ಎಂದು ಸಾಮಾಜಿಕ ಜಾಲತಾಣದಲ್ಲಿ ಈ ಪ್ರಶ್ನೆ ಪತ್ರಿಕೆಯನ್ನು ಟ್ವೀಟ್‌ ಮಾಡಿ ಸಾರ್ವಜನಿಕರು ವಿವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest Videos

ಬಿಎಎಂಸ್‌ ಕೋರ್ಸಿನ 4ನೇ ವರ್ಷದ ವಿದ್ಯಾರ್ಥಿಗಳಿಗೆ ಬುಧವಾರ ನಡೆದ ‘ಕಾಯ ಚಿಕಿತ್ಸಾ: ಪತ್ರಿಕೆ-2’ರ ಪರೀಕ್ಷೆಯಲ್ಲಿ ಆಯುರ್ವೇದ ಭಾಷೆಯಲ್ಲೇ ‘ಸ್ತ್ರೀ ಆಸ್‌ ಎ ವಜೀಕರಣ ದ್ರವ್ಯ’ (ಕಾಮೋತ್ತೇಜಕ ವಸ್ತುವಾಗಿ ಮಹಿಳೆ) ಎಂಬ ವಿಷಯ ಕುರಿತು ಕಿರು ಪ್ರಬಂಧ ಬರೆಯುವಂತೆ 5 ಅಂಕಗಳ ಪ್ರಶ್ನೆ ಕೇಳಲಾಗಿದೆ.

ಪರೀಕ್ಷೆಗೆ ಈ ಪ್ರಶ್ನೆಯನ್ನು ಕೇಳಲು ಶಸ್ತ್ರಚಿಕಿತ್ಸೆಯ ಪಿತಾಮಹ ಎಂದೇ ಕರೆಯಲ್ಪಡುವ ಋುಷಿ ಸುಶ್ರುತ ಬರೆದ ಶಾಸ್ತ್ರೀಯ ಆಯುರ್ವೇದ ಗ್ರಂಥದ ಅಧ್ಯಾಯವೊಂದರಲ್ಲಿ ಮಹಿಳೆಯು ಕಾಮೋತ್ತೇಜಕ ವಸ್ತು ಮತ್ತು ಮಕ್ಕಳನ್ನು ಹೆರುವ ವಸ್ತುವಾಗಿ ಉಲ್ಲೇಖಿಸಲಾಗಿದೆ. ಇದೇ ಪಾಠವನ್ನು ಆಕರ ಗ್ರಂಥವಾಗಿ ಪರಿಗಣಿಸಲಾಗಿದೆ ಎನ್ನಲಾಗಿದೆ. ಈ ಪಾಠದ ಪ್ರತಿಯೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮಹಿಳೆಯರನ್ನು ಭೋಗ ವಸ್ತುವಿನಂತೆ ಭಾವಿಸುವ ಮೂಲಕ ಅತ್ಯಾಚಾರ ಸಂಸ್ಕೃತಿ ಮಾರ್ಗವನ್ನು ಕಲಿಸಲಾಗುತ್ತಿದೆಯೇ? ಕೂಡಲೇ ಇಂತಹ ಪಠ್ಯವನ್ನು ಪರಿಷ್ಕರಿಸಬೇಕು ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.

ವಿವಿ ಅಧಿಕಾರಿಗಳು ಹೇಳುವುದೇನು?

ಬಿಎಎಂಎಸ್‌ 4ನೇ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕೇಳಿಸಿರುವ ಯಾವ ಪ್ರಶ್ನೆಯೂ ಪಠ್ಯದಿಂದ ಹೊರತಾಗಿಲ್ಲ. ಪಠ್ಯದಲ್ಲಿರುವ ಪ್ರಶ್ನೆಯನ್ನು ವಿವಿ ಕೇಳಿದೆ. ಮಹಿಳೆಯನ್ನು ಅವಹೇಳನ ಮಾಡುವ ಯಾವುದೇ ಉದ್ದೇಶದಿಂದ ಈ ಪ್ರಶ್ನೆ ಕೇಳಿಲ್ಲ ಎಂದು ಆರ್‌ಜಿಯುಎಚ್‌ಎಸ್‌ ಮೌಲ್ಯಮಾಪನ ಕುಲಸಚಿವ ಡಾ.ಎನ್‌.ರಾಮಕೃಷ್ಣ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಪಠ್ಯದಲ್ಲೇ ಮಹಿಳೆಯ ಕುರಿತು ಇರುವ ವಿಚಾರಗಳಲ್ಲಿ ಯಾವುದೇ ಲೋಪಗಳಿದ್ದರೆ ಅದನ್ನು ನಾವು ಸರಿಪಡಿಸಲಾಗುವುದಿಲ್ಲ. ಪಠ್ಯ ಬದಲಾವಣೆಯನ್ನು ವಿವಿ ಮಾಡಲಾಗುವುದಿಲ್ಲ. ಆಯುರ್ವೇದ ಆಯುಕ್ತಾಲಯವೇ ಮಾಡಬೇಕು. ಪಠ್ಯದಲ್ಲಿರುವ ಪ್ರಶ್ನೆ ಕೇಳಿರುವುದು ಬಿಟ್ಟರೆ ಮಹಿಳೆಯರಿಗೆ ಅವಹೇಳನ ಮಾಡುವ ಯಾವುದೇ ದೃಷ್ಟಿಯಿಂದ ಇಂತಹ ಪ್ರಶ್ನೆಯನ್ನು ಪ್ರಶ್ನೆಪತ್ರಿಕೆಯಲ್ಲಿ ಸೇರಿಲ್ಲ ಎಂದು ಅವರು ಹೇಳಿದ್ದಾರೆ.

click me!