ವಿದ್ಯಾರ್ಥಿಗಳಿಗೆ ಆಗಸ್ಟ್‌ ಅಂತ್ಯದೊಳಗೆ ಸ್ವೆಟರ್‌ ವಿತರಣೆ: ಬಿಬಿಎಂಪಿ ನಿರ್ಧಾರ

By Govindaraj SFirst Published Jul 20, 2022, 2:53 PM IST
Highlights

ಬಿಬಿಎಂಪಿ ವ್ಯಾಪ್ತಿಯ ಶಾಲಾ-ಕಾಲೇಜುಗಳ ಸುಮಾರು 24 ಸಾವಿರ ವಿದ್ಯಾರ್ಥಿಗಳಿಗೆ ಆಗಸ್ಟ್‌ ಕೊನೆ ಅಥವಾ ಸೆಪ್ಟೆಂಬರ್‌ ಮೊದಲ ವಾರದೊಳಗೆ ಸ್ವೆಟರ್‌ ಹಂಚಿಕೆ ಮಾಡಲು ಬಿಬಿಎಂಪಿ ನಿರ್ಧರಿಸಿದ್ದು, ಈ ವಾರದೊಳಗೆ ಟೆಂಡರ್‌ ಪ್ರಕ್ರಿಯೆ ಆರಂಭಿಸಲಿದೆ.

ಸಂಪತ್‌ ತರೀಕೆರೆ

ಬೆಂಗಳೂರು (ಜು.20): ಬಿಬಿಎಂಪಿ ವ್ಯಾಪ್ತಿಯ ಶಾಲಾ-ಕಾಲೇಜುಗಳ ಸುಮಾರು 24 ಸಾವಿರ ವಿದ್ಯಾರ್ಥಿಗಳಿಗೆ ಆಗಸ್ಟ್‌ ಕೊನೆ ಅಥವಾ ಸೆಪ್ಟೆಂಬರ್‌ ಮೊದಲ ವಾರದೊಳಗೆ ಸ್ವೆಟರ್‌ ಹಂಚಿಕೆ ಮಾಡಲು ಬಿಬಿಎಂಪಿ ನಿರ್ಧರಿಸಿದ್ದು, ಈ ವಾರದೊಳಗೆ ಟೆಂಡರ್‌ ಪ್ರಕ್ರಿಯೆ ಆರಂಭಿಸಲಿದೆ. 2021-22ನೇ ಸಾಲಿನಲ್ಲಿ ನರ್ಸರಿಯಿಂದ ದ್ವಿತೀಯ ಪಿಯು ಕಾಲೇಜಿನವರೆಗೆ 23 ಸಾವಿರ ವಿದ್ಯಾರ್ಥಿಗಳು ದಾಖಲಾಗಿದ್ದರು. ಆದರೆ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಸ್ವೆಟರ್‌ ಹಂಚಿಕೆಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕಳೆದ ವರ್ಷ ವಿದ್ಯಾರ್ಥಿಗಳಿಗೆ ಸ್ವೆಟರ್‌ ವಿತರಿಸಿರಲಿಲ್ಲ.

2022-23ನೇ ಶೈಕ್ಷಣಿಕ ವರ್ಷದಲ್ಲಿ ಪಾಲಿಕೆಯ ವಿದ್ಯಾರ್ಥಿಗಳಿಗೆ ಸ್ವೆಟರ್‌ ಹಂಚಿಕೆ ಮಾಡಲು ತೀರ್ಮಾನ ಕೈಗೊಂಡಿದ್ದು, ಅದಕ್ಕಾಗಿ .2 ಕೋಟಿಗಳನ್ನು ಪಾಲಿಕೆ ಮೀಸಲಿಟ್ಟಿದೆ. ಪ್ರಸ್ತುತ ಟೆಂಡರ್‌ ಪ್ರಕ್ರಿಯೆ ಪ್ರಾರಂಭಿಸಲು ಮುಖ್ಯ ಆಯುಕ್ತರ ಅನುಮೋದನೆ ಮಾತ್ರ ಬಾಕಿ ಇದೆ. ಈ ವಾರದೊಳಗೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರಿಂದ ಟೆಂಡರ್‌ ಪ್ರಕ್ರಿಯೆಗೆ ಹಸಿರು ನಿಶಾನೆ ಸಿಗುವ ಸಾಧ್ಯತೆ ಇದ್ದು, ಅನುಮೋದನೆ ಸಿಕ್ಕಿದ ಕೂಡಲೇ ಟೆಂಡರ್‌ ಕರೆಯಲು ಪಾಲಿಕೆ ಶಿಕ್ಷಣ ವಿಭಾಗ ಸಿದ್ಧತೆ ಮಾಡಿಕೊಂಡಿದೆ ಎಂದು ಪಾಲಿಕೆ ಸಹಾಯಕ ಆಯುಕ್ತ(ಶಿಕ್ಷಣ) ಉಮೇಶ್‌ ಅವರು ಕನ್ನಡಪ್ರಭಕ್ಕೆ ತಿಳಿಸಿದರು.

ಸೈಟ್‌ ಸ್ವಚ್ಛವಾಗಿ ಇಟ್ಟುಕೊಳ್ಳದಿದ್ದರೆ ಬಿಬಿಎಂಪಿಯಿಂದ ಬೀಳುತ್ತೆ 1 ಲಕ್ಷ ದಂಡ

24 ಸಾವಿರಕ್ಕೂ ಅಧಿಕ ಸ್ವೆಟರ್‌ಗೆ ಟೆಂಡರ್‌: ಪಾಲಿಕೆ ವ್ಯಾಪ್ತಿಯಲ್ಲಿ 93 ನರ್ಸರಿ- 4556 ವಿದ್ಯಾರ್ಥಿಗಳು, 16 ಪ್ರಾಥಮಿಕ ಶಾಲೆಗಳಲ್ಲಿ 3900 ವಿದ್ಯಾರ್ಥಿಗಳು, 33 ಪ್ರೌಢಶಾಲೆಗಳಲ್ಲಿ 7175 ವಿದ್ಯಾರ್ಥಿಗಳು ಮತ್ತು 18 ಪಿಯು ಕಾಲೇಜುಗಳಲ್ಲಿ 6700 ಮತ್ತು 2 ಪದವಿ ಕಾಲೇಜುಗಳಲ್ಲಿ 1 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 23,275ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಸಪ್ಲಿಮೆಂಟರಿ ಪರೀಕ್ಷೆಗಳು ನಡೆದಿದ್ದು ಫಲಿತಾಂಶ ಪ್ರಕಟಗೊಂಡ ಬಳಿಕ ವಿದ್ಯಾರ್ಥಿಗಳು ಮುಂದಿನ ತರಗತಿಗಳಿಗೆ ದಾಖಲಾಗಲು ಅವಕಾಶವಿದೆ. ಹಾಗಾಗಿ ಅಂದಾಜು 24 ಸಾವಿರಕ್ಕೂ ಅಧಿಕ ಸ್ವೆಟರ್‌ಗಳನ್ನು ಪಾಲಿಕೆಗೆ ಟೆಂಡರ್‌ ಪಡೆದ ಸಂಸ್ಥೆ ಒದಗಿಸಬೇಕಿದ್ದು ಆಗಸ್ಟ್‌ ಅಂತ್ಯದೊಳಗೆ ವಿದ್ಯಾರ್ಥಿಗಳಿಗೆ ಸ್ವೆಟರ್‌ ಹಂಚಿಕೆ ಮಾಡಲು ಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಪಾರ್ಕ್‌ಗಳು ಇನ್ನು ಮಧ್ಯಾಹ್ನವೂ ತೆರೆದಿರುತ್ತೆ!

ಈ ವಾರ ಸಮವಸ್ತ್ರ ವಿತರಣೆ: ನರ್ಸರಿಯಿಂದ ಪಿಯು ಕಾಲೇಜಿನವರೆಗೆ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳಿಗೆ ತಲಾ ಎರಡು ಜೊತೆ ಮತ್ತು ಹಳೆ ವಿದ್ಯಾರ್ಥಿಗಳಿಗೆ ತಲಾ ಒಂದು ಜೊತೆಗೆ ಸಮವಸ್ತ್ರ ನೀಡಲು ತೀರ್ಮಾನಕೈಗೊಳ್ಳಲಾಗಿದೆ. ಈ ವಾರದಲ್ಲಿ ನರ್ಸರಿ ವಿದ್ಯಾರ್ಥಿಗಳಿಗೆ ಮೊದಲ ಹಂತದಲ್ಲಿ ಹೊಸ ಸಮವಸ್ತ್ರ ವಿತರಣೆ ನಡೆಯಲಿದೆ. ಈಗಾಗಲೇ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಜವಾಬ್ದಾರಿ ವಹಿಸಲಾಗಿದ್ದು ಸಮವಸ್ತ್ರಗಳ ಹೊಲಿಗೆಗೆ ವಿದ್ಯಾರ್ಥಿಗಳ ಮೈ ಅಳತೆ ಪಡೆಯುವ ಕಾರ್ಯ ಪೂರ್ಣಗೊಂಡಿದೆ. ಆ.15ರೊಳಗೆ ಎಲ್ಲ ವಿದ್ಯಾರ್ಥಿಗಳಿಗೂ ಸಮವಸ್ತ್ರ ವಿತರಣೆ ಮಾಡುವ ಗುರಿ ಇದೆ. ಇದರಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಆಗಸ್ಟ್‌ ಅಂತ್ಯದೊಳಗೆ ಎಲ್ಲರಿಗೂ ಸಮವಸ್ತ್ರ ಮತ್ತು ಸ್ವೆಟರ್‌ ಕೊಡಲಾಗುವುದು ಎಂದು ಪಾಲಿಕೆ ಸಹಾಯಕ ಆಯುಕ್ತ (ಶಿಕ್ಷಣ) ಉಮೇಶ್‌ ಮಾಹಿತಿ ನೀಡಿದರು.

click me!