20 ಲಕ್ಷ ಕೊಟ್ರೆ ನೀಟ್‌ ಪಾಸ್‌ ಮಾಡಿಸುವ ದಂಧೆ!

By Kannadaprabha NewsFirst Published Jul 20, 2022, 8:37 AM IST
Highlights

ನೀಟ್‌ ಪರೀಕ್ಷೆಯನ್ನು ಪಾಸು ಮಾಡಿಸುವ ಜಾಲವೊಂದನ್ನು ಮಂಗಳವಾರ ಸಿಬಿಐ ಭೇದಿಸಿ 8 ಮಂದಿಯನ್ನು ಬಂಧಿಸಿತ್ತು. ಈ ಜಾಲವು ವಿದ್ಯಾರ್ಥಿಗಳಿಂದ 20 ಲಕ್ಷ ರು. ಹಣ ಪಡೆದು, ಅವರ ಬದಲು ಬೇರೊಬ್ಬರನ್ನು ಪರೀಕ್ಷೆಗೆ ಕೂರಿಸುತ್ತಿತ್ತು. ಪರೀಕ್ಷೆಗೆ ಕೂತ ನಕಲಿ ಅಭ್ಯರ್ಥಿಗೆ ಆ ಹಣದಲ್ಲಿ 5 ಲಕ್ಷ ರು. ನೀಡುತ್ತಿತ್ತು ಎಂಬ ಮಾಹಿತಿ ತಿಳಿದುಬಂದಿದೆ

ನವದೆಹಲಿ(ಜು.20): ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಪಡೆಯಲು ಅಗತ್ಯವಾದ ನೀಟ್‌ ಪರೀಕ್ಷೆಯನ್ನು ಪಾಸು ಮಾಡಿಸುವ ಜಾಲವೊಂದನ್ನು ಮಂಗಳವಾರ ಸಿಬಿಐ ಭೇದಿಸಿ 8 ಮಂದಿಯನ್ನು ಬಂಧಿಸಿತ್ತು. ಈ ಜಾಲವು ವಿದ್ಯಾರ್ಥಿಗಳಿಂದ 20 ಲಕ್ಷ ರು. ಹಣ ಪಡೆದು, ಅವರ ಬದಲು ಬೇರೊಬ್ಬರನ್ನು ಪರೀಕ್ಷೆಗೆ ಕೂರಿಸುತ್ತಿತ್ತು. ಪರೀಕ್ಷೆಗೆ ಕೂತ ನಕಲಿ ಅಭ್ಯರ್ಥಿಗೆ ಆ ಹಣದಲ್ಲಿ 5 ಲಕ್ಷ ರು. ನೀಡುತ್ತಿತ್ತು ಎಂಬ ಮಾಹಿತಿ ತಿಳಿದುಬಂದಿದೆ. ಇದೇ ವೇಳೆ ದಂಧೆಯಲ್ಲಿ ಭಾಗಿಯಾಗಿರುವ ಇನ್ನೂ ಮೂವರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಬಿಹಾರ, ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ. ನೀಟ್‌ ಅಧಿಕಾರಿಗಳು ನಾನಾ ಭದ್ರತಾ ಕ್ರಮಗಳನ್ನು ಕೈಗೊಂಡಿರುವ ಹೊರತಾಗಿಯೂ, ಅತ್ಯುನ್ನತ ಭದ್ರತಾ ಕ್ರಮಗಳನ್ನೇ ಭೇದಿಸಿ ಈ ನಕಲಿ ಜಾಲ ಕೆಲಸ ಮಾಡುತ್ತಿದ್ದುದು ಅಚ್ಚರಿಗೆ ಕಾರಣವಾಗಿದೆ.

ಒಳಉಡುಪು ತೆಗೆದರೆ ಮಾತ್ರ ಪರೀಕ್ಷೆಗೆ ಅನುಮತಿ, ಭಾರಿ ವಿವಾದ ಸೃಷ್ಟಿಸಿದ NEET Exam!

ಅಕ್ರಮ ಹೀಗೆ ನಡೆಯುತ್ತಿತ್ತು:

ದೆಹಲಿಯ ಸಫ್ಧರ್‌ಜಂಗ್‌ನ ಸುಶೀಲ್‌ ರಂಜನ್‌ ಎಂಬ ವ್ಯಕ್ತಿ ಇಡೀ ಹಗರಣದ ಸೂತ್ರಧಾರಿ. ಈಗ ಮೆಡಿಕಲ್‌ ಸೀಟು ಪಡೆಯಲು ಆಸಕ್ತಿ ಹೊಂದಿದ್ದವರನ್ನು ಸಂಪರ್ಕಿಸುತ್ತಿದ್ದ. ಬಳಿಕ ಅವರ ಪರವಾಗಿ ನಕಲಿ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಿ ಪರೀಕ್ಷೆ ಬರೆಸುತ್ತಿದ್ದ. ಹೀಗೆ ಪರೀಕ್ಷೆ ಬರೆಯಲು ಹಲವು ಬುದ್ಧಿವಂತ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿದ್ದ. ಹೀಗೆ ಪ್ರತಿ ವಿದ್ಯಾರ್ಥಿಗೆ ನೀಟ್‌ ಪರೀಕ್ಷೆ ಬರೆದು, ಉತ್ತೀರ್ಣ ಮಾಡಿಕೊಡಲು ತಲಾ 20 ಲಕ್ಷ ರು. ಹಣ ಸಂಗ್ರಹಿಸುತ್ತಿದ್ದ. ಈ ಪೈಕಿ 5 ಲಕ್ಷ ರು.ಗಳನ್ನು ಪರೀಕ್ಷೆ ಬರೆದ ನಕಲಿ ಅಭ್ಯರ್ಥಿಗೆ ನೀಡುತ್ತಿದ್ದರೆ, ಉಳಿದ ಹಣವನ್ನು ಇತರೆ ಮಧ್ಯವರ್ತಿಗಳ ಜೊತೆ ಹಂಚಿಕೊಳ್ಳುತ್ತಿದ್ದ.

ವಂಚನೆ ಹೇಗೆ?:

ದಂಧೆಕೋರರು ಮೊದಲೇ ಅಭ್ಯರ್ಥಿಗಳ ಸಂಪೂರ್ಣ ಮಾಹಿತಿ, ಪಾಸ್‌ವರ್ಡ್‌ ಪಡೆದುಕೊಳ್ಳುತ್ತಿದ್ದರು. ಬಳಿಕ ತಮಗೆ ಬೇಕಾದ ಕೇಂದ್ರಗಳನ್ನು ಪರೀಕ್ಷೆ ಬರೆಯಲು ಆಯ್ದುಕೊಳ್ಳುತ್ತಿದ್ದರು. ಜೊತೆಗೆ ನೀಟ್‌ ಗುರುತಿನ ಚೀಟಿಯನ್ನೂ ತಿರುಚಿ, ಅದರಲ್ಲಿ ನಕಲಿ ಫೋಟೋ ಅಂಟಿಸಿ ಅದರ ಮೂಲಕ ಸುಲಭವಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದರು.

ಯಾರೆಲ್ಲರ ಪಾತ್ರ?

ಈ ಇಡೀ ದಂಧೆಯಲ್ಲಿ ಕೋಚಿಂಗ್‌ ಸೆಂಟರ್‌ಗಳು, ಅಭ್ಯರ್ಥಿಗಳು ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

ನೀಟ್‌ ವೇಳೆ ಒಳವಸ್ತ್ರಕ್ಕೆ ಕೊಕ್‌: ಕೇರಳದಲ್ಲಿ ಭಾರೀ ಕೋಲಾಹಲ

ಕಳೆದ ಭಾನುವಾರ ನಡೆದ ನೀಟ್‌ ಪರೀಕ್ಷೆ ವೇಳೆ ಕೇರಳದ ಕೊಲ್ಲಂನ ಅಯೂರ್‌ ಪರೀಕ್ಷಾ ಕೇಂದ್ರವೊಂದರಲ್ಲಿ ಅಧಿಕಾರಿಗಳು ಮಹಿಳೆಯರ ಒಳವಸ್ತ್ರವನ್ನು ಬಲವಂತವಾಗಿ ಬಿಚ್ಚಿಸಿದ್ದರು ಎಂಬ ಪ್ರಕರಣ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ.

ಒಳವಸ್ತ್ರ ಬಿಚ್ಚಿಸಿದ ಗಂಭೀರ ಆರೋಪ ಮಾಡಿದ್ದ 17 ವರ್ಷದ ಬಾಲಕಿ ನೀಡಿದ ಹೇಳಿಕೆ ಅಧರಿಸಿ ಕೊಲ್ಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದರಲ್ಲಿ ಒಳವಸ್ತ್ರ ಬಿಚ್ಚಿಸಿದ ಅಧಿಕಾರಿಗಳ ವಿರುದ್ಧ ಮಹಿಳೆಯ ಮಾನಭಂಗ (ಸೆಕ್ಷನ್‌ 354), ಮಹಿಳೆಯ ಮಾನಭಂಗ ಮಾಡುವ ಪದ ಬಳಕೆ (ಸೆಕ್ಷನ್‌ 509)ಯ ಗಂಭೀರ ಆರೋಪ ಹೊರಿಸಲಾಗಿದೆ. ವಿದ್ಯಾರ್ಥಿನಿ ಹೇಳಿಕೆ ಆಧರಿಸಿ ಈಗಾಗಲೇ ತನಿಖೆ ಆರಂಭಿಸಲಾಗಿದೆ. ಯುವತಿಯ ಜೊತೆ ಅನುಚಿತವಾಗಿ ನಡೆದುಕೊಂಡವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರದ ಮೇಲೆ ದಾಳಿ:

ಈ ನಡುವೆ ಮಹಿಳಾ ಪರೀಕ್ಷಾರ್ಥಿಗಳ ಜೊತೆಗಿನ ಅಧಿಕಾರಿಗಳ ವರ್ತನೆ ಖಂಡಿಸಿ ವಿದ್ಯಾರ್ಥಿಗಳ ಗುಂಪೊಂದು ಭಾನುವಾರ ಪರೀಕ್ಷೆ ನಡೆದ ಕೇಂದ್ರದ ಮೇಲೆ ದಾಳಿ ನಡೆಸಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದೆ. ಮತ್ತೊಂದೆಡೆ ಮಹಿಳಾ ಅಭ್ಯರ್ಥಿಗಳ ಜೊತೆ ಅನುಚಿತವಾಗಿ ನಡೆದುಕೊಂಡ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಕೇರಳದ ಉನ್ನತ ಶಿಕ್ಷಣ ಖಾತೆ ಸಚಿವೆ ಆರ್‌.ಬಿಂದು ಕೇಂದ್ರ ಶಿಕ್ಷಣ ಖಾತೆ ಸಚಿವ ಧಮೇಂದ್ರ ಪ್ರಧಾನ್‌ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಆರೋಪ ಸುಳ್ಳು- ಟೆಸ್ಟಿಂಗ್‌ ಏಜೆನ್ಸಿ:

‘ಆದರೆ ವಿದ್ಯಾರ್ಥಿನಿ ಮಾಡಿದ ಆರೋಪವನ್ನು ಕಪೋಲಕಲ್ಪಿತ. ಕೆಟ್ಟಉದ್ದೇಶದಿಂದ ಇಂಥದ್ದೊಂದು ಪ್ರಕರಣ ದಾಖಲಿಸಲಾಗಿದೆ. ಅಧಿಕಾರಿಗಳು ಹೀಗೆ ನಡೆದುಕೊಂಡಿದ್ದಾರೆ ಎಂಬ ಯಾವ ದೂರೂ ನಮ್ಮ ಬಳಿ ಸಲ್ಲಿಕೆಯಾಗಿಲ್ಲ’ ಎಂದು ನೀಟ್‌ ಪರೀಕ್ಷೆ ಆಯೋಜಿಸಿದ್ದ ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಏನಾಗಿತ್ತು:

ಭಾನುವಾರ ನಡೆದ ಪರೀಕ್ಷೆ ವೇಳೆ ಅಯೂರ್‌ ಕೇಂದ್ರದಲ್ಲಿ ಲೋಹಶೋಧಕ ಯಂತ್ರದಲ್ಲಿ ವಿದ್ಯಾರ್ಥಿಗಳು ಭದ್ರತಾ ತಪಾಸಣೆ ಭಾಗವಾಗಿ ಹಾದುಹೋಗುವಾಗ, 17 ವರ್ಷದ ವಿದ್ಯಾರ್ಥಿನಿ ಧರಿಸಿದ್ದ ಬ್ರಾದಲ್ಲಿದ್ದ ಸ್ಟೀಲ್‌ ಬಟನ್‌ ಇದ್ದ ಕಾರಣ, ಮಷಿನ್‌ ಸದ್ದು ಮಾಡಿತ್ತು. ಈ ವೇಳೆ ಅಧಿಕಾರಿಗಳು, ವಿದ್ಯಾರ್ಥಿನಿಗೆ ನಿನಗೆ ಪರೀಕ್ಷೆ ಮುಖ್ಯವೋ? ಒಳವಸ್ತ್ರವೋ? ಸುಮ್ಮನೆ ನಮ್ಮ ಸಮಯ ಹಾಳು ಮಾಡದೇ ಬ್ರಾ ತೆಗೆದಿಟ್ಟು ಒಳಗೆ ಹೋಗು ಎಂದು ಗದರಿಸಿದ್ದರು. ಇದೇ ರೀತಿ ನೂರಾರು ಮಹಿಳೆಯರ ಒಳವಸ್ತ್ರ ತೆಗೆದು ಹೊರಗಿನ ಕೊಠಡಿಯಲ್ಲಿ ಇರಿಸಲಾಗಿತ್ತು. ಇದರಿಂದ ಬಹುತೇಕರು ಅಘಾತಕ್ಕೆ ಒಳಗಾಗಿದ್ದರು ಎಂದು ವಿದ್ಯಾರ್ಥಿನಿಯ ಪೋಷಕರು ಭಾನುವಾರ ಸುದ್ದಿವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದರು.

click me!