ಜಿಲ್ಲೆಗೊಂದು 'ಸೂಪರ್‌ 30' ಎಂಜಿನಿಯರಿಂಗ್‌ ಕಾಲೇಜು: ಅಶ್ವತ್ಥ ನಾರಾಯಣ

By Kannadaprabha News  |  First Published Jul 20, 2022, 5:30 AM IST

ಈ ಕಾಲೇಜುಗಳು ಅತ್ಯುನ್ನತ ಗುಣಮಟ್ಟದ ಶಿಕ್ಷಣ ನೀಡಲು ಪೂರಕವಾಗಿ ಮೂರನೇ ಒಂದರಷ್ಟು ಮೊತ್ತವನ್ನು ಕ್ರಮವಾಗಿ ಸರ್ಕಾರ, ವಿಟಿಯು ಹಾಗೂ ಉದ್ಯಮಗಳು ಭರಿಸಲಿವೆ.


ಬೆಂಗಳೂರು(ಜು.20): ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿರುವ ಅತ್ಯುತ್ತಮ ಗುಣಮಟ್ಟದ ಎಂಜಿನಿಯರಿಂಗ್‌ ಶಿಕ್ಷಣ, ರಾಜ್ಯದ ಎಲ್ಲ ಜಿಲ್ಲೆಗಳ ಮಕ್ಕಳಿಗೂ ದೊರಕಬೇಕು ಎಂಬ ಉದ್ದೇಶದಿಂದ ಪ್ರತಿ ಜಿಲ್ಲೆಯ ಒಂದು ಎಂಜಿನಿಯರಿಂಗ್‌ ಕಾಲೇಜನ್ನು ‘ಸೂಪರ್‌ 30’ ಯೋಜನೆಯಡಿ ಆಯ್ಕೆ ಮಾಡಿದ್ದು, ಅಗತ್ಯ ಹಣಕಾಸು ಸೇರಿದಂತೆ ಎಲ್ಲ ಸೌಲಭ್ಯ ನೀಡಲು ಉದ್ದೇಶಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. ಮಂಗಳವಾರ ವಿಕಾಸಸೌಧದಲ್ಲಿ ಯೋಜನೆ ಸಂಬಂಧ ಉನ್ನತ ಮಟ್ಟದ ಸಮಿತಿ ಅಧ್ಯಕ್ಷ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ (ವಿಟಿಯು) ಕುಲಪತಿ ಪ್ರೊ. ಕರಿಸಿದ್ದಪ್ಪ ಅವರು ಸಲ್ಲಿಸಿದ ವರದಿ ಸ್ವೀಕರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯಡಿ (ರೀಜನಲ್‌ ಎಕೋ ಸಿಸ್ಟಂ ಫಾರ್‌ ಟೆಕ್ನಿಕಲ್‌ ಎಕ್ಸ್‌ಲೆನ್ಸ್‌) 14 ಸರ್ಕಾರಿ ಹಾಗೂ 16 ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳನ್ನು ಆಯ್ಕೆ ಮಾಡಲಾಗಿದೆ. ಈ ಕಾಲೇಜುಗಳು ಅತ್ಯುನ್ನತ ಗುಣಮಟ್ಟದ ಶಿಕ್ಷಣ ನೀಲು ಪೂರಕವಾಗಿ ಮೂರನೇ ಒಂದರಷ್ಟು ಮೊತ್ತವನ್ನು ಕ್ರಮವಾಗಿ ಸರ್ಕಾರ, ವಿಟಿಯು ಹಾಗೂ ಉದ್ಯಮಗಳು ಭರಿಸಲಿವೆ. ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಸರ್ಕಾರದ ಪಾಲಿನ ನೆರವು ನೀಡುವುದಿಲ್ಲ. ಬದಲಾಗಿ ಆಯಾ ಕಾಲೇಜುಗಳೇ ಭರಿಸಬೇಕಾಗುತ್ತದೆ ಎಂದರು.

ಎಲ್ಲೆಡೆ ಉತ್ತಮ ಶಿಕ್ಷಣ:

Tap to resize

Latest Videos

ಪ್ರಸ್ತುತ ಬೆಂಗಳೂರು, ಮಂಗಳೂರು ಸೇರಿದಂತೆ ಏಳೆಂಟು ಜಿಲ್ಲೆಗಳಲ್ಲಿ ಮಾತ್ರ ಉತ್ತಮವಾದ ಎಂಜಿನಿಯರಿಂಗ್‌ ಶಿಕ್ಷಣ ದೊರೆಯುತ್ತದೆ. ಬಹುತೇಕ ಕಾಲೇಜುಗಳು ಬೆಂಗಳೂರಿನಲ್ಲಿ ಇವೆ. ಹೀಗಾಗಿ 2 ಮತ್ತು 3ನೇ ಸ್ತರದಲ್ಲಿ ಇರುವ ಎಂಜಿನಿಯರಿಂಗ್‌ ಕಾಲೇಜುಗಳನ್ನು ಯೋಜನೆಯಡಿ ಉನ್ನತೀಕರಿಸಲಾಗುವುದು. ಈ ಕಾಲೇಜುಗಳನ್ನು ಪರಿಪೋಷಣೆ, (ಇನ್‌ಕ್ಯುಬೇಷನ್‌) ‘ಆಕ್ಸ್‌ಲೇಟರ್‌’ ಹಾಗೂ ‘ಸೂಪರ್‌-30’ ವಿಭಾಗದಡಿ ಪರಿಗಣಿಸಲಾಗುವುದು. ವಿದ್ಯಾರ್ಥಿ ಕೇಂದ್ರಿತ ಮತ್ತು ಸಂಶೋಧನಾ ಬಹು ಶಿಸ್ತೀಯ ಶಿಕ್ಷಣ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.

ಮಹಾರಾಷ್ಟ್ರದ ಶಿವಾಜಿ ಪಾಠದಲ್ಲಿ ಬಂದ ಬೆಳವಡಿ ಮಲ್ಲಮ್ಮ..!

ಹಲವು ಗುರಿ:

ಆಯ್ಕೆಯಾಗಿರುವ ಕಾಲೇಜುಗಳು ಪ್ರಮುಖವಾಗಿ ಮೂರು ವರ್ಷಗಳಲ್ಲಿ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ, ಐದು ವರ್ಷಗಳಲ್ಲಿ ಜಾಗತಿಕ ಸಂಸ್ಥೆಯೊಂದರಿಂದ ಮನ್ನಣೆ ಪಡೆಯಬೇಕು. ಆಯಾ ಜಿಲ್ಲೆಗಳಿಗೆ ಅನುಕೂಲವಾಗುವಂತಹ 10 ಯೋಜನೆ ರೂಪಿಸಬೇಕು, ಪ್ರತಿ ವರ್ಷ 50 ವಿದೇಶಿ ವಿದ್ಯಾರ್ಥಿಗಳು ಈ ಕಾಲೇಜಿಗೆ ಪ್ರವೇಶಾತಿ ಪಡೆಯಬೇಕು, 5 ವರ್ಷದಲ್ಲಿ ಶೇ.100 ರಷ್ಟುವಿದ್ಯಾರ್ಥಿಗಳು ಉದ್ಯೋಗ ಪಡೆಯುವಂತಹ ಸಾಮರ್ಥ್ಯ ಪಡೆಯಬೇಕು. ಯೋಜನೆಯ ಅವಧಿಯಾದ 5 ವರ್ಷಗಳ ಕೊನೆಯ ವೇಳೆಗೆ ಈ ಕಾಲೇಜುಗಳು ತಮ್ಮ ಶೈಕ್ಷಣಿಕ ಕಾರ್ಯಕ್ರಮಗಳ ಪೈಕಿ ಶೇ.80 ರಷ್ಟಾದರೂ ಎನ್‌ಬಿಎ ಮಾನ್ಯತೆ ಹೊಂದಿರಬೇಕು. 25 ಉದ್ಯಮಿಗಳನ್ನು ಸೃಷ್ಟಿಸುವಂತಹ ಮಟ್ಟಕ್ಕೆ ಈ ಕಾಲೇಜುಗಳು ಶಿಕ್ಷಣ ನೀಡಬೇಕಾಗುತ್ತದೆ ಎಂದು ಸಚಿವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್‌, ಸ್ಟಾರ್ಚ್‌ಅಪ್‌ ವಿಷನ್‌ ಗ್ರೂಪ್‌ ಮುಖ್ಯಸ್ಥ ಪ್ರಶಾಂತ್‌ ಪ್ರಕಾಶ್‌, ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ, ಉದ್ಯಮಿ ನಾರಾಯಣನ್‌ ರಾಮಸ್ವಾಮಿ, ಕರ್ನಾಟಕ ಡಿಜಿಟಲ್‌ ಎಕಾನಮಿ ಮಿಷನ್‌ ಸಲಹೆಗಾರ ಕಾರ್ತಿಕ್‌ ಕಿಟ್ಟು, ವಿಟಿಯು ಕುಲಸಚಿವ ಆನಂದ್‌ ದೇಶಪಾಂಡೆ ಉಪಸ್ಥಿತರಿದ್ದರು.

ಆಯ್ಕೆಯಾದ ಸರ್ಕಾರಿ ಕಾಲೇಜುಗಳು

ಚಾಮರಾಜನಗರ, ಚಳ್ಳಕೆರೆ, ಹಾಸನ, ಹಾವೇರಿ, ಕುಶಾಲನಗರ, ತಲಕಾಡು, ಕೃಷ್ಣರಾಜಪೇಟೆ, ರಾಯಚೂರು, ರಾಮನಗರ, ಕಾರವಾರ, ಹೂವಿನಹಡಗಲಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜ್‌, ಬೆಂಗಳೂರಿನ ಎಸ್‌ಕೆಎಸ್‌ಜೆಟಿಐ, ದಾವಣಗೆರೆಯ ಯೂನಿವರ್ಸಿಟಿ ಬಿಡಿಟಿ ಕಾಲೇಜು ಮತ್ತು ಕಲಬುರಗಿಯ ವಿಟಿಯು ಪಿಜಿ ಸೆಂಟರ್‌.

1500 ಮಾದರಿ ಸರ್ಕಾರಿ ಶಾಲೆಗಳ ಅಭಿವೃದ್ಧಿ: ಸಚಿವ ನಾಗೇಶ್‌

ಆಯ್ಕೆಯಾದ ಖಾಸಗಿ ಕಾಲೇಜುಗಳು

ಅಂಗಡಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಅಂಡ್‌ ಮ್ಯಾನೇಜ್‌ಮೆಂಟ್‌, ಬೆಳಗಾವಿ, ಚನ್ನಬಸವೇಶ್ವರ ಎಂಜಿನಿಯರಿಂಗ್‌ ಕಾಲೇಜ್‌ ಗುಬ್ಬಿ, ತುಮಕೂರು. ಶ್ರೀ ಮಧ್ವ ವಾದಿರಾಜ್‌ ಎಂಜಿನಿಯರಿಂಗ್‌ ಅಂಡ್‌ ಮ್ಯಾನೇಜ್‌ಮೆಂಟ್‌ ಕಾಲೇಜ್‌, ಉಡುಪಿ, ಜೆಎಸ್‌ಎಸ್‌ ಎಸ್‌ ಮಹಿಳಾ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿ ಇನ್‌ಸ್ಟಿಟ್ಯೂಟ್‌ ಮೈಸೂರು. ಡಾ. ಟಿ. ತಿಮ್ಮಯ್ಯ ತಾಂತ್ರಿಕ ಶಿಕ್ಷಣ ಕಾಲೇಜು, ಕೆಜಿಎಫ್‌, ಕೋಲಾರ. ಬಿಳುಗೂರು ಗುರುಬಸವ ಮಹಾಸ್ವಾಮೀಜಿ ಇನ್‌ಸ್ಟಿಟ್ಯೂಟ್‌ ಮುಧೋಳ, ಬಾಗಲಕೋಟೆ. ಪಿ.ಜಿ. ಹಳಕಟ್ಟಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿ, ವಿಜಯಪುರ. ಆದಿಚುಂಚನಗಿರಿ ತಾಂತ್ರಿಕ ಕಾಲೇಜ್‌, ಚಿಕ್ಕಮಗಳೂರು. ಎಸ್‌ಜೆಸಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಚಿಕ್ಕಬಳ್ಳಾಪುರ. ರಾವ್‌ ಬಹದ್ದೂರು ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್‌ ಕಾಲೇಜ್‌, ಬಳ್ಳಾರಿ. ಪಿಇಎಸ್‌ ತಾಂತ್ರಿಕ ಮತ್ತು ಮ್ಯಾನೇಜ್‌ಮೆಂಟ್‌ ಸಂಸ್ಥೆ, ಶಿವಮೊಗ್ಗ. ಭೀಮಣ್ಣ ಖಂಡ್ರೆ ತಾಂತ್ರಿಕ ಕಾಲೇಜ್‌, ಭಾಲ್ಕಿ, ಬೀದರ್‌. ತೋಂಟದಾರ್ಯ ಎಂಜಿನಿಯರಿಂಗ್‌ ಕಾಲೇಜ್‌ ಗದಗ. ವಿವೇಕಾನಂದ ಎಂಜಿನಿಯರಿಂಗ್‌ ಮತ್ತು ತಾಂತ್ರಿಕ ಕಾಲೇಜ್‌. ಪುತ್ತೂರು, ದಕ್ಷಿಣ ಕನ್ನಡ. ಜೈನ್‌ ಎಂಜಿನಿಯರಿಂಗ್‌ ಕಾಲೇಜ್‌ ಹುಬ್ಬಳ್ಳಿ. ವೀರಪ್ಪ ನಿಷ್ಠಿ ಎಂಜಿನಿಯರಿಂಗ್‌ ಕಾಲೇಜ್‌, ಶೋರಾಪುರ. ಯಾದಗಿರಿ.

ಏನಿದು ‘ರೀತಿ’?

- ರೀಜನಲ್‌ ಎಕೋ ಸಿಸ್ಟಂ ಫಾರ್‌ ಟೆಕ್ನಿಕಲ್‌ ಎಕ್ಸ್‌ಲೆನ್ಸ್‌ ಯೋಜನೆ
- ಇದರಡಿ ತಾಂತ್ರಿಕ ಶಿಕ್ಷಣದ ಗುಣಮಟ್ಟಹೆಚ್ಚಿಸುವ ಉದ್ದೇಶ
- 1/3 ವೆಚ್ಚ ಭರಿಸಲಿರುವ ಸರ್ಕಾರ, ವಿಟಿಯು, ಉದ್ಯಮಗಳು
- 3 ವರ್ಷದಲ್ಲಿ ಎನ್‌ಬಿಎ, 5 ವರ್ಷದಲ್ಲಿ ಜಾಗತಿಕ ಮಾನ್ಯತೆ ಗುರಿ
 

click me!