ಶಿಕ್ಷಣ ಸಾಲ ಪಡೆಯುವ ಮುನ್ನ ಈ ಸಂಗತಿಗಳ ಬಗ್ಗೆ ತಿಳಿದಿರಲಿ..!

By Suvarna NewsFirst Published May 20, 2021, 1:10 PM IST
Highlights

ಶಿಕ್ಷಣ ಅನ್ನೋದು ಈಗ ಕೈಗೆಟುಕದ ಕುಸುಮದಂತಾಗಿದೆ.ಶ್ರೀಮಂತರಿಗೆ ಶಿಕ್ಷಣ ತುಟ್ಟಿ ಎನಿಸಲಾರದು. ಪ್ರತಿಭಾನ್ವಿತರಾಗಿದ್ದೂ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದ ಬಡವರು ಮಧ್ಯಮ ವರ್ಗದವರು ಸಾಕಷ್ಟು ವಿದ್ಯಾರ್ಥಿಗಳಿದ್ದಾರೆ. ಅಂಥವರ ಶಿಕ್ಷಣ ಸಾಲದ ಮೊರೆ ಹೋಗುವುದು ಸಹಜ. ಆದರೆ, ಈ ಶಿಕ್ಷಣ ಸಾಲ ಪಡೆದುಕೊಳ್ಳುವ ಮುನ್ನ ಕೆಲವು ಸಂಗತಿಗಳ ಬಗ್ಗೆ ತಿಳಿದು ಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು.

ವರ್ಷ ವರ್ಷವೂ ಶಿಕ್ಷಣದ ವೆಚ್ಚ ಒಂದೇ ಸಮನೆ ಏರುತ್ತಿರೋದ್ರಿಂದ ಮತ್ತು ಕೊರೊನಾ ವೈರಸ್ ಸಾಂಕ್ರಾಮಿಕ ಪೀಡಿಗಿನಿಂದಾಗಿ ಸದ್ಯ ಪ್ರತಿ ಮನೆಯ ಆರ್ಥಿಕತೆ ಅಲ್ಲೋಲ ಕಲ್ಲೋಲವಾಗಿದೆ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಪೋಷಕರು ಒದ್ದಾಡುತ್ತಿದ್ದು, ವಿದ್ಯಾರ್ಥಿಗಳು ತಮ್ಮ ಬಜೆಟ್‌ಗೆ ಸರಿಹೊಂದುವಂತಹ ಶಿಕ್ಷಣ ಸಂಸ್ಥೆಗಳನ್ನು ಹುಡುಕಲು ಒಲವು ತೋರುತ್ತಾರೆ. ಆದ್ರೆ ಶಿಕ್ಷಣದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವ ಬದಲು, ಹಣಕಾಸಿನ ಅಂತರವನ್ನು ತುಂಬಲು ಅವರು ಶೈಕ್ಷಣಿಕ ಸಾಲದಂತಹ ಪರ್ಯಾಯ ಮಾರ್ಗಗಳನ್ನ ಹುಡುಕಿಕೊಳ್ಳಬೇಕು. ಲೋನ್ ಪಡೆಯೋ ಮೂಲಕ ತಮಗೆ ಬೇಕಾದ ಶಿಕ್ಷಣವನ್ನ ಪಡೆಯಬಹುದು. ಮುಂದೆ ಭವಿಷ್ಯದಲ್ಲಿ ಉದ್ಯೋಗ ಸಿಕ್ಕಿದ ಬಳಿಕ ಆ ಸಾಲವನ್ನ ಮರುಪಾವತಿಸಿದರೆ ಆಯ್ತು.

ಸಾರ್ವಜನಿಕರ ಹಾಗೂ ಖಾಸಗಿ ವಲಯದ ಬ್ಯಾಂಕುಗಳು ಉನ್ನತ ಶಿಕ್ಷಣಕ್ಕೆ ಶೈಕ್ಷಣಿಕ ಸಾಲವನ್ನು ನೀಡುತ್ತವೆ. ಎಂಜಿನಿಯರಿಂಗ್, ವೈದ್ಯಕೀಯ, ವಾಸ್ತುಶಿಲ್ಪ, ಮ್ಯಾನೇಜ್‌ಮೆಂಟ್ ಹಾಗೂ ಕಾನೂನಿನಂತಹ ವೃತ್ತಿಪರ ಕೋರ್ಸ್‌ಗಳನ್ನು ಒಳಗೊಂಡಂತೆ ಉನ್ನತ ಅಧ್ಯಯನಕ್ಕಾಗಿ ಶಿಕ್ಷಣ ಸಾಲವನ್ನು ಒದಗಿಸುತ್ತವೆ. ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ತಮ್ಮ ಶಿಕ್ಷಣವನ್ನು ಮುಗಿಸಿದ ನಂತರ ಉದ್ಯೋಗಕ್ಕೆ ಸೇರಿ ಯುವಕರು ಸಾಲವನ್ನು ಸುಲಭವಾಗಿ ಮರುಪಾವತಿಸಬಹುದು.

ಆರ್ಥಿಕ ಬಿಕ್ಕಟ್ಟು ಇದೆಯಾ? ಈ ಸ್ಕಾಲರ್‌ಶಿಪ್‌ಗಳಿಗೆ ಅಪ್ಲೈ ಮಾಡಿ

ಶೈಕ್ಷಣಿಕ ಸಾಲವು ಸಾಮಾನ್ಯವಾಗಿ ಬೋಧನಾ ಶುಲ್ಕ ಮತ್ತು ಹಾಸ್ಟೆಲ್ ವಸತಿ, ಪುಸ್ತಕಗಳು ಮತ್ತು ಕೆಲವು ಸಂದರ್ಭಗಳಲ್ಲಿ ಕಂಪ್ಯೂಟರ್‌ಗಳ ವೆಚ್ಚಗಳನ್ನು ಒಳಗೊಂಡಿರುತ್ತದೆ. ಶಿಕ್ಷಣ ಸಾಲವನ್ನ ಪಡೆಯುವ ಮುನ್ನ ಅದರ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಂಡಿರಬೇಕು.

-  ಬ್ಯಾಂಕುಗಳು ತಮ್ಮದೇ ಆದ ನಿಯಮಗಳನ್ನು ಹೊಂದಿವೆ. ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ನೀವು ಅರ್ಹತಾ ಮಾನದಂಡಗಳನ್ನು ಮತ್ತು ಇತರ ಎಲ್ಲ ಷರತ್ತುಗಳನ್ನು ಓದಬೇಕು. ಶಿಕ್ಷಣ ಸಾಲ ಪಡೆಯುವವರು ಭಾರತೀಯ ಪ್ರಜೆಯಾಗಿರಬೇಕು ಮತ್ತು ಮಾನ್ಯತೆ ಪಡೆದ ಕಾಲೇಜಿನಲ್ಲಿ ಪ್ರವೇಶ ಪಡೆದಿರಬೇಕು. ನೀವು ಆದಾಯ ಏನೂ ಇಲ್ಲದಿದ್ದರೆ, ನಿಮ್ಮ ಪೋಷಕರು ಅಥವಾ ಒಡಹುಟ್ಟಿದವರು ಸಹ- ಅರ್ಜಿದಾರರಾಗಬಹುದು. ಸಾಮಾನ್ಯವಾಗಿ ಯಾವುದೇ ಆಧಾರವಿಲ್ಲದೆ, ಬ್ಯಾಂಕುಗಳು 4 ಲಕ್ಷ ರೂ. ಸಾಲವನ್ನು ನೀಡುತ್ತವೆ. ಅದಕ್ಕಿಂತ ಹೆಚ್ಚಿನ ಸಾಲ ಬೇಕಂದ್ರೆ ಸಹ- ಅರ್ಜಿದಾರರ ಆದಾಯವು ಸಾಕಷ್ಟಿಲ್ಲದಿದ್ದರೆ ಬ್ಯಾಂಕುಗಳು ಮೇಲಾಧಾರವನ್ನು ಕೇಳಬಹುದು.

ಕೋವಿಡ್‌ನಿಂದ ತಂದೆ ತಾಯಿ ಕಳೆದುಕೊಂಡ ಮಕ್ಕಳಿಗೆ ಸರ್ಕಾರದಿಂದ ಉಚಿತ ಶಿಕ್ಷಣ

-  ಬ್ಯಾಂಕ್‌ಗಳು ನೀಡುವ ಎಲ್ಲಾ ರೀತಿಯ ಶೈಕ್ಷಣಿಕ ಸಾಲದ ಬಗ್ಗೆ ಮೌಲ್ಯಮಾಪನ ಮಾಡಿ. ವಿವಿಧ ಬ್ಯಾಂಕುಗಳು ನೀಡುವ ಬಡ್ಡಿದರವನ್ನು ಹೋಲಿಕೆ ಮಾಡಿ ನೋಡಿ. ಜೊತೆಗೆ  ನೀವು ಪ್ರವೇಶ ಪಡೆದ ನಿರ್ದಿಷ್ಟ ಕೋರ್ಸ್‌ಗೆ ಮರುಪಾವತಿ ಮಾಡುವ ಸಮಯವನ್ನು ಹೋಲಿಕೆ ಮಾಡಿ. ಹೆಚ್ಚಿನ ಬ್ಯಾಂಕುಗಳು 10 ಲಕ್ಷದವರೆಗೆ ಶೇ.10-15  ಬಡ್ಡಿದರದಲ್ಲಿ ಸಾಲವನ್ನು ನೀಡಿ, ಮರುಪಾವತಿಸಲು ಮೂರು ವರ್ಷಗಳವರೆಗೂ ಅವಕಾಶ ನೀಡುತ್ತವೆ. ಶಿಕ್ಷಣ ಸಾಲವಾಗಿ ಪಡೆದ ಮೊತ್ತಕ್ಕೆ ಕೆಲ ಬ್ಯಾಂಕುಗಳು ಕಡಿಮೆ ಬಡ್ಡಿದರ ಮತ್ತು ದೀರ್ಘ ಮರುಪಾವತಿ ಅವಧಿಯನ್ನು (ಸಾಮಾನ್ಯವಾಗಿ 5-7 ವರ್ಷಗಳು) ನೀಡುತ್ತವೆ. ಬ್ಯಾಂಕುಗಳು ಸಾಲ ನೀಡಲು ಖಾತರಿದಾರನನ್ನು ಕೇಳಬಹುದು, ಅವರು ವಿದ್ಯಾರ್ಥಿಯ ತಂದೆ-ತಾಯಿ ಅಥವಾ ಪೋಷಕರಾಗಿರಬಹುದು.

-  ಹೊಸ ಸಾಲ ಮಂಜೂರು ಮಾಡುವ ಮೊದಲು ಅರ್ಜಿದಾರರ ಮೇಲೆ ಅಥವಾ ಅವನ, ಅವಳ ಸಹ ಅರ್ಜಿದಾರರ ಮೇಲೆ ಯಾವುದಾದರೂ ಬಾಕಿ ಸಾಲವಿದೆಯೇ ಎಂದು ಬ್ಯಾಂಕುಗಳು ಪರಿಶೀಲಿಸುತ್ತವೆ. ಒಂದು ವೇಳೆ ನಿಮ್ಮ ಪೋಷಕರು ಈಗಾಗಲೇ ಅಸ್ತಿತ್ವದಲ್ಲಿರುವ ಸಾಲವನ್ನು ಮರುಪಾವತಿಸುತ್ತಿದ್ರೆ, ಹೊಸ ಸಾಲವನ್ನು ನೀಡಲು ಹಿಂಜರಿಯುತ್ತವೆ.

- ಮುಂದೆ ವಿದ್ಯಾರ್ಥಿಗಳು ದುಡಿಯಲು ಆರಂಭಿಸಿದ್ರೂ ಇಎಂಐ ಹೊರೆಯನ್ನು ಕಡಿಮೆ ಮಾಡಲು ಸಾಧ್ಯವಾಗುವಂತೆ ದೀರ್ಘಾವಧಿಯ ಶೈಕ್ಷಣಿಕ ಸಾಲ ಯೋಜನೆಗೆ ಹೋಗುವಂತೆ ವಿದ್ಯಾರ್ಥಿಗಳಿಗೆ ಆರ್ಥಿಕ ತಜ್ಞರು  ಸಲಹೆ ನೀಡುತ್ತಾರೆ. ವೃತ್ತ ಆರಂಭಿಸಿದ ಹೊಸದರಲ್ಲಿ ಹೆಚ್ಚು ಸಂಬಳ ಸಿಗುವುದಿಲ್ಲ. ಹೀಗಾಗಿಯೇ ಸಾಲದ ಅವಧಿ ೧೦ ರಿಂದ 12 ವರ್ಷವಿದ್ದರೆ ಸಾಲ ಮರುಪಾವತಿ ವೇಳಾಪಟ್ಟಿಗಳಲ್ಲಿ ಯಾವುದೇ ಲೋಪ ಆಗದಿರಲು ಅನುಕೂಲವಾಗಲಿದೆ.

ಒಡಿಶಾದಲ್ಲೂ ಸರ್ಕಾರಿ ಶಾಲೆ ಬಂದ್, ಆದೇಶ ರದ್ದುಗೊಳಿಸಿದ ಹೈಕೋರ್ಟ್

ಈ ರೀತಿಯಾಗಿ ಶಿಕ್ಷಣ ಸಾಲವನ್ನು ಪಡೆಯುವ ಮುನ್ನ ಸಮಗ್ರವಾಗಿ ಯೋಚಿಸಿ ಮುಂದುವರಿಯುವುದು ಒಳ್ಳೆಯದು. ಕೆಲವೊಮ್ಮೆ ಶಿಕ್ಷಣ ಪೂರೈಸಿದ ಬಳಿಕ ಸಾಲವನ್ನು ಮರುಪಾವತಿಸಲು ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಹಾಗಾಗಿ, ಸಾಲ ತೆಗೆದುಕೊಳ್ಳುವ ಮುನ್ನ ಸಾಕಷ್ಟು ಯೋಚಿಸಿ, ನಿಮಗೆ ಸೂಕ್ತವಾದ ರೀತಿಯಲ್ಲಿ ಶಿಕ್ಷಣ ಸಾಲಪಡೆದುಕೊಳ್ಳುವುದು ಒಳ್ಳೆಯದು.

click me!