ಇಂದು ಬೆಳಗ್ಗೆ 11 ಗಂಟೆಯಿಂದ ಸಿಇಟಿಗೆ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಏ.4 ಅರ್ಜಿ ಸಲ್ಲಿಸಲು ಕೊನೆಯ ದಿನ.
ಬೆಂಗಳೂರು(ಮಾ.02): ಎಂಜಿನಿಯರಿಂಗ್, ಪಶು ವೈದ್ಯಕೀಯ, ಕೃಷಿ ವಿಜ್ಞಾನ ಸೇರಿದಂತೆ 2023-24ನೇ ಸಾಲಿನ ವಿವಿಧ ವೃತ್ತಿಪರ ಕೋರ್ಸುಗಳ ಸರ್ಕಾರಿ ಸೀಟು ಪ್ರವೇಶಕ್ಕೆ ಮೇ 20 ಮತ್ತು 21ರಂದು ನಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ)ಮಾ.2ರ ಗುರುವಾರದಿಂದ ಏ.7ರವರೆಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಸಿಇಟಿ ಪರೀಕ್ಷೆ ನಡೆಸಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬುಧವಾರ ಅಧಿಕೃತವಾಗಿ ಸಿಇಟಿ ವೇಳಾಪಟ್ಟಿ ಪ್ರಕಟಣೆಯೊಂದಿಗೆ ಅರ್ಜಿ ಸಲ್ಲಿಕೆ ಕುರಿತಾದ ಸಂಪೂರ್ಣ ಮಾಹಿತಿ ನೀಡಿದೆ. ಆ ಪ್ರಕಾರ, ಮೇ 20ರ ಶನಿವಾರ ಬೆಳಗ್ಗೆ 10.30ರಿಂದ 11.50ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30ರಿಂದ 3.50ರವರೆಗೆ ಗಣಿತ, ಮೇ 21ರ ಭಾನುವಾರ ಬೆಳಗ್ಗೆ ಭೌತಶಾಸ್ತ್ರ, ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.
ಬಾಗಲಕೋಟೆ: ಕಲಾದಗಿಯಲ್ಲಿ ಆಧುನಿಕ ಪದವಿ ಕಾಲೇಜು ನಿರ್ಮಾಣ, ಸಚಿವ ನಿರಾಣಿ
ಮೇ 22ರಂದು ಬೆಳಗ್ಗೆ 11.30ರಿಂದ ಮಧ್ಯಾಹ್ನ 12.30ರವರೆಗೆ ಹೊರನಾಡು ಮತ್ತು ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯು ಬೆಂಗಳೂರು, ಬೀದರ್, ಬೆಳಗಾವಿ, ಬಳ್ಳಾರಿ, ವಿಜಯಪುರ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಮಾತ್ರ ನಡೆಯಲಿವೆ. ಗುರುವಾರ ಬೆಳಗ್ಗೆ 11 ಗಂಟೆಯಿಂದ ಸಿಇಟಿಗೆ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಏ.4 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.
ವೇಳಾಪಟ್ಟಿ
ಮೇ 20 - ಜೀವಶಾಸ್ತ್ರ (ಬೆಳಗ್ಗೆ), ಗಣಿತ (ಮಧ್ಯಾಹ್ನ)
ಮೇ 21 - ಭೌತಶಾಸ್ತ್ರ (ಬೆಳಗ್ಗೆ), ರಸಾಯನಶಾಸ್ತ್ರ (ಮಧ್ಯಾಹ್ನ)
ಅರ್ಜಿ ಸಲ್ಲಿಕೆ ವೇಳೆ ಅಭ್ಯರ್ಥಿಯ ಹೆಸರು, ಅವರ ತಂದೆ, ತಾಯಿಯ ಹೆಸರು ಹಾಗೂ ಜನ್ಮ ದಿನಾಂಕವನ್ನು ಎಸ್ಸೆಸ್ಸೆಲ್ಸಿ ಮಂಡಳಿಯಿಂದ ನೋಂದಾಯಿತ ಸಂಖ್ಯೆಯನ್ನು ಆಧರಿಸಿ ಸ್ಟೂಡೆಂಟ್ಸ್ ಅಚೀವ್ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್(ಎಸ್‌ಎಟಿಎಸ್) ಮೂಲಕ ಪಡೆಯಲಾಗುತ್ತದೆ . ಹಾಗಾಗಿ ಎಸ್ಸೆಸ್ಸೆಲ್ಸಿ ಮಂಡಳಿಯಿಂದ ತೇರ್ಗಡೆಯಾದ ರಾಜ್ಯದ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ನೋಂದಣಿ ಸಂಖ್ಯೆಯನ್ನು ದಾಖಲಿಸಬೇಕು. ಜಾತಿ, ಆದಾಯ ಪ್ರಮಾಣ ಪತ್ರದ ಆರ್‌ಡಿ ಸಂಖ್ಯೆ ಮತ್ತು 371(ಜೆ) ಆರ್‌ಡಿ ಸಂಖ್ಯೆ ಸೇರಿದಂತೆ ಎಲ್ಲ ಅಗತ್ಯ ದಾಖಲೆಗಳ ಮಾಹಿತಿಯನ್ನು ಎಚ್ಚರದಿಂದ ಸರಿಯಾಗಿ ದಾಖಲಿಸಬೇಕು. ಈ ಮಾಹಿತಿಗಳು ತಾಳೆಯಾಗದಿದ್ದಲ್ಲಿ ಮುಂದಿನ ಜೂನ್‌ನಲ್ಲಿ ನೀಡುವ ವೇಳಾಪಟ್ಟಿ ಅನುಸಾರ ಖುದ್ದು ಪರಿಶೀಲನೆಗೆ ಹಾಜರಾಗಲು ಅವಕಾಶ ನೀಡಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ. ಅರ್ಜಿ ಭರ್ತಿ ಮಾಡುವ ಸಂಬಂಧ ಯಾವುದೇ ಸಂದೇಹಗಳಿದ್ದರೆ ಪ್ರಾಧಿಕಾರದ ಇ-ಮೇಲ್ ಮಾಡಿ ಪರಿಹರಿಸಿಕೊಳ್ಳಬಹುದು.