ಕಾಲೇಜು ವಿದ್ಯಾರ್ಥಿಗಳ ವರ್ಗಾವಣೆ ಪ್ರಕ್ರಿಯೆ ಇನ್ನಷ್ಟು ಸರಳ

By Kannadaprabha News  |  First Published Mar 1, 2023, 12:24 PM IST

ಯುಜಿಸಿ ನಿಯಮಾಳಿಗಳಲ್ಲಿ ಸೂಚಿಸಿರುವಂತೆ ಒಬ್ಬ ವಿದ್ಯಾರ್ಥಿಯು ಏಕಕಾಲದಲ್ಲಿ ಬಹು ಪದವಿಗಳನ್ನು ಪಡೆಯಲು ಅವಕಾಶವಿದ್ದು, ವಿದ್ಯಾರ್ಥಿಯು ಹಾಜರಾತಿಯನ್ನು ಖಚಿತಪಡಿಸಿಕೊಂಡು ಎರಡು ಪದವಿಗಳಲ್ಲಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಉನ್ನತ ಶಿಕ್ಷಣ ಇಲಾಖೆ ಆದೇಶ. 


ಬೆಂಗಳೂರು(ಮಾ.01):  ರಾಜ್ಯದ ಯಾವುದೇ ಸಾರ್ವಜನಿಕ ವಿಶ್ವವಿದ್ಯಾಲಯ ಹಾಗೂ ಅವುಗಳ ಸಂಯೋಜಿತ ಕಾಲೇಜುಗಳಲ್ಲಿ ಪದವಿ, ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಇನ್ನು ಮುಂದೆ ವ್ಯಾಸಂಗದ ನಡುವೆ ರಾಜ್ಯದ ಯಾವುದೇ ಕಾಲೇಜುಗಳಿಗೆ ವರ್ಗಾವಣೆ ಪಡೆದು ಓದು ಮುಂದುವರೆಸಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020ರಡಿ ಅವಕಾಶ ನೀಡಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಜೊತೆಗೆ ವರ್ಗ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲಾಗಿದೆ.

ಆ ಪ್ರಕಾರವಾಗಿ ವಿದ್ಯಾರ್ಥಿಯು ಹಾಲಿ ವಿಶ್ವವಿದ್ಯಾಲಯದ ಒಂದು ಸಂಯೋಜಿತ ಕಾಲೇಜಿನಿಂದ ಅದೇ ವಿಶ್ವವಿದ್ಯಾಲಯದಡಿಯ ಇನ್ನೊಂದು ಸಂಯೋಜಿತ ಕಾಲೇಜಿಗೆ ಅಥವಾ ರಾಜ್ಯದ ಬೇರೆ ಯಾವುದೇ ವಿವಿಯ ಸಂಯೋಜಿತ ಕಾಲೇಜಿಗೆ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೇ ಬೆಸ ಸಂಖ್ಯೆಯ ಸೆಮಿಸ್ಟರ್‌ಗಳಿಗೆ ಮಾತ್ರ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ವ್ಯವಸ್ಥೆಯ (ಯುಯುಸಿಎಂಎಸ್‌) ತಂತ್ರಾಂಶ ಬಳಸಿಕೊಂಡು ಕಾಲೇಜುಗಳು ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು. ಹಿಂದಿನ ಸೆಮಿಸ್ಟರ್‌ಗಳಲ್ಲಿ ಪಾಸಾಗದೆ ಇರುವ ವಿಷಯಗಳನ್ನು ವರ್ಗಾವಣೆ ಪಡೆದ ಕಾಲೇಜಿನಲ್ಲೇ ಮುಂದುವರೆಸಬಹುದು ಎಂದು ಇಲಾಖೆ ಸೂಚಿಸಿದೆ.

Tap to resize

Latest Videos

ನೂತನ ಶಿಕ್ಷಣ ನೀತಿ​ಯಿಂದ ಸ್ವಾಭಿ​ಮಾ​ನದ ಮನಃ​ಸ್ಥಿ​ತಿ: ಬಿ.ಸಿ.​ನಾ​ಗೇ​ಶ್‌

ಅಲ್ಲದೆ, ಎನ್‌ಇಪಿ ಅಡಿಯಲ್ಲಿ ಇರುವ ಬಹು ಆಗಮನ ಮತ್ತು ನಿರ್ಗಮನ (ಮಲ್ಟಿಎಂಟ್ರಿ ಅಂಡ್‌ ಎಗ್ಸಿಟ್‌) ಅವಕಾಶದಡಿ ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗದ ವೇಳೆ ಯಾವುದೇ ವರ್ಷ ವಿದ್ಯಾರ್ಥಿ ಓದು ನಿಲ್ಲಿಸಿದರೆ ಆಯಾ ವರ್ಷ ಅಥವಾ ಸೆಮಿಸ್ಟರ್‌ ಅವಧಿಗೆ ನಿಗದಿತ ಕ್ರೆಡಿಟ್‌ ಅಂಕಗಳನ್ನು ಪಡೆದಿದ್ದರೆ ಪ್ರಥಮ ವರ್ಷಕ್ಕೆ ಸರ್ಟಿಫಿಕೇಟ್‌, ದ್ವಿತೀಯ ವರ್ಷಕ್ಕೆ ಡಿಪ್ಲೊಮಾ, ಮೂರನೇ ವರ್ಷಕ್ಕೆ ಪದವಿ ಪ್ರಮಾಣ ಪತ್ರ, ನಾಲ್ಕನೇ ವರ್ಷಕ್ಕೆ ಹಾನರ್ಸ್‌ ಪದವಿ ಪತ್ರ ನೀಡಬೇಕು. ಅಂತಹ ವಿದ್ಯಾರ್ಥಿ ನಂತರ ಓದು ಮುಂದುವರೆಸುವುದಾದರೆ ಪ್ರಥಮ ಸೆಮಿಸ್ಟರ್‌ಗೆ ಪ್ರವೇಶಾತಿ ಪಡೆದ 7 ವರ್ಷದೊಳಗೆ ಪುನಃ ಪ್ರವೇಶ ಪಡೆಯಬಹುದು ಎಂದು ತಿಳಿಸಿದೆ.

ಯುಜಿಸಿ ನಿಯಮಾಳಿಗಳಲ್ಲಿ ಸೂಚಿಸಿರುವಂತೆ ಒಬ್ಬ ವಿದ್ಯಾರ್ಥಿಯು ಏಕಕಾಲದಲ್ಲಿ ಬಹು ಪದವಿಗಳನ್ನು ಪಡೆಯಲು ಅವಕಾಶವಿದ್ದು, ವಿದ್ಯಾರ್ಥಿಯು ಹಾಜರಾತಿಯನ್ನು ಖಚಿತಪಡಿಸಿಕೊಂಡು ಎರಡು ಪದವಿಗಳಲ್ಲಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ.

click me!