ರಾಜ್ಯದಲ್ಲಿ 96 ಲಕ್ಷ ಮಕ್ಕಳಿಂದ ಶಾಲೆಗೆ ಪ್ರವೇಶ..!

By Kannadaprabha News  |  First Published Aug 8, 2021, 7:50 AM IST

* ಕೋವಿಡ್‌ ನಡುವೆಯೂ ಭರ್ಜರಿ ದಾಖಲಾತಿ
* ಈ ಬಾರಿ 1.05 ಕೋಟಿ ಮಕ್ಕಳು ಶಾಲೆ ಸೇರುವ ನಿರೀಕ್ಷೆ
*  ಈಗಾಗಲೇ ಶೇ.92ರಷ್ಟು ಮಕ್ಕಳು ಅಡ್ಮಿಷನ್‌
 


ಬೆಂಗಳೂರು(ಆ.08): ಕೋವಿಡ್‌ ನಡುವೆಯೇ ರಾಜ್ಯದ ಶಾಲೆಗಳಲ್ಲಿ ಭರ್ಜರಿ ದಾಖಲಾತಿ ನಡೆದಿದ್ದು, ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ 1ರಿಂದ 10ನೇ ತರಗತಿಗೆ ಈವರೆಗೆ ಬರೋಬ್ಬರಿ 96 ಲಕ್ಷಕ್ಕೂ ಹೆಚ್ಚು ಮಕ್ಕಳು ದಾಖಲಾತಿ ಪಡೆದಿದ್ದಾರೆ.

ರಾಜ್ಯದಲ್ಲಿ ಜುಲೈ 1ರಿಂದ 2021-22ನೇ ಸಾಲಿನ ಶಾಲಾ ದಾಖಲಾತಿ ಪ್ರಕ್ರಿಯೆ ಆರಂಭಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಈ ಬಾರಿ 1.05 ಕೋಟಿ ಮಕ್ಕಳು ದಾಖಲಾಗಬಹುದೆಂದು ನಿರೀಕ್ಷಿಸಿದ್ದು, ಈವರೆಗೆ 96.91 ಲಕ್ಷ ಮಕ್ಕಳು ದಾಖಲಾಗುವುದರೊಂದಿಗೆ ಶೇ.91.95ರಷ್ಟು ಗುರಿ ಸಾಧಿಸಿದಂತಾಗಿದೆ. ದಾಖಲಾತಿಗೆ ಆಗಸ್ಟ್‌ ಮಾಸಾಂತ್ಯದವರೆಗೂ ಕಾಲಾವಕಾಶ ಇರುವುದರಿಂದ ದಾಖಲಾತಿಯಲ್ಲಿ ಶೇ.100ರಷ್ಟು ಗುರಿ ತಲುಪುವ ವಿಶ್ವಾಸವನ್ನು ಇಲಾಖೆ ಹೊಂದಿದೆ.
ರಾಜ್ಯದ ಎಲ್ಲಾ ಮಾದರಿಯ ಶಾಲೆಗಳಿಗೆ 1ರಿಂದ 10ನೇ ತರಗತಿವರೆಗೆ 96,91,946 ಮಕ್ಕಳು ದಾಖಲಾತಿ ಪಡೆದಿದ್ದಾರೆ. ಈ ಪೈಕಿ ಸರ್ಕಾರಿ ಶಾಲೆಗಳಲ್ಲಿ ನಿರೀಕ್ಷಿತ ದಾಖಲಾತಿಯಲ್ಲಿ ಶೇ.96.79 ರಷ್ಟು ಗುರಿ ಸಾಧಿಸಿದ್ದರೆ, ಅನುದಾನಿತ ಶಾಲೆಗಳಲ್ಲಿ ನಿರೀಕ್ಷೆಗಿಂತಲೂ ಹೆಚ್ಚು ಅಂದರೆ ಶೇ.109ರಷ್ಟು ದಾಖಲಾತಿಯಾಗಿದೆ. ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಶೇ.82ರಷ್ಟು ದಾಖಲಾತಿ ನಡೆದಿದೆ. ಇತರೆ ಶಾಲೆಗಳಲ್ಲಿ ಶೇ.99.66ರಷ್ಟು ದಾಖಲಾತಿ ಪೂರ್ಣಗೊಂಡಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ.ಅನ್ಬುಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tap to resize

Latest Videos

ಸರ್ಕಾರಿ ಶಾಲೆ ದಾಖಲಾತಿ ಶೇ.200ರಷ್ಟು ಹೆಚ್ಚಳ..!

ಅನುದಾನ ರಹಿತ ಶಾಲೆಗಳಲ್ಲಿ ದಾಖಲಾತಿ ಕುಸಿತ:

ದಾಖಲಾತಿಯಲ್ಲಿನ ಇದುವರೆಗಿನ ಅಂಕಿ- ಅಂಶಗಳನ್ನು ಗಮನಿಸಿದಾಗ ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕಡಿಮೆ ಇದೆ. ಯಾವ ಕಾರಣಕ್ಕೆ ಕಡಿಮೆಯಾಗಿದೆ ಎಂಬ ಬಗ್ಗೆ ಸ್ಪಷ್ಟತೆ ಸಿಗಬೇಕಾದರೆ ಆಗಸ್ಟ್‌ ಮಾಸಾಂತ್ಯದವರೆಗೆ ಕಾಯಲೇಬೇಕಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಯಾವ ಶಾಲೆಗಳಲ್ಲಿ ಎಷ್ಟುದಾಖಲಾತಿ? (ಆ.7ರವರೆಗೆ) ಶಾಲೆ ನಿರೀಕ್ಷೆ ಈವರೆಗಿನ ದಾಖಲಾತಿ ಶೇಕಡಾ

ಸರ್ಕಾರಿ 45,57,511 44,11,062 96.79%
ಅನುದಾನಿತ 10,88,561 11,85,682 109%
ಅನುದಾರಹಿತ 46,36,386 38,26,613 82.53%
ಇತರೆ 2,69,493 2,68,589 99.66%
ಒಟ್ಟಾರೆ.... 1,05,51,951.... 96,91,946.... 91.85%

ದೇಶದಲ್ಲೇ ಮೊದಲು: ರಾಷ್ಟ್ರೀಯ ಶಿಕ್ಷಣ ನೀತಿ ಕರ್ನಾಟಕದಲ್ಲಿ ಜಾರಿ, ಅಶ್ವತ್ಥ್‌

ತಮ್ಮ ಶಾಲೆಗೆ ದಾಖಲಾದ ಮಕ್ಕಳ ಮಾಹಿತಿಯನ್ನು ಪ್ರತಿ ಶಾಲೆಯೂ ಕಾಲ ಕಾಲಕ್ಕೆ ಸ್ಟೂಡೆಂಟ್‌ ಅಚೀವ್‌ಮೆಂಟ್‌ ಟ್ರ್ಯಾಕಿಂಗ್‌ ಸಿಸ್ಟಮ್‌ನಲ್ಲಿ (ಎಸ್‌ಎಎಸ್‌ಟಿ) ದಾಖಲಿಸಬೇಕು. ಆದರೆ, ಪ್ರಕ್ರಿಯೆಗೆ ಆ.31ರವರೆಗೆ ಕಾಲಾವಕಾಶ ಇರುವುದರಿಂದ ಕೆಲ ಪೋಷಕರು ಇನ್ನೂ ಮಕ್ಕಳನ್ನು ದಾಖಲಿಸದೆ ಇರಬಹುದು. ದಾಖಲಾಗಿರುವ ಮಕ್ಕಳ ಮಾಹಿತಿಯನ್ನು ಕೆಲ ಖಾಸಗಿ ಶಾಲೆಗಳು ಎಸ್‌ಎಎಸ್‌ಟಿಯಲ್ಲಿ ದಾಖಲಿಸದೆ ಇರಬಹುದು. ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಎಲ್ಲ ಮಕ್ಕಳನ್ನೂ ನಿಗದಿತ ಅವಧಿಯೊಳಗೆ ಪೋಷಕರು ದಾಖಲಿಸಬೇಕು. ದಾಖಲಾದ ಮಕ್ಕಳ ಮಾಹಿತಿಯನ್ನು ಶಾಲೆಗಳು ಇಲಾಖೆಗೆ ಸಲ್ಲಿಸಬೇಕು ಎಂದು ಇಲಾಖಾ ಆಯುಕ್ತ ಅನ್ಬುಕುಮಾರ್‌ ಸೂಚಿಸಿದ್ದಾರೆ.

ಇದುವರೆಗೂ ತಮ್ಮ ಶಾಲೆಗಳಿಗೆ ದಾಖಲಾದ ಮಕ್ಕಳ ಮಾಹಿತಿಯನ್ನು ಇಲಾಖೆಯ ಎಸ್‌ಎಎಸ್‌ಟಿ ಪೋರ್ಟಲ್‌ನಲ್ಲಿ ದಾಖಲಿಸದ ಶಾಲೆಗಳಿಗೆ ಸ್ಪಷ್ಟನಿರ್ದೇಶನ ನೀಡಲು ಡಿಡಿಪಿಐಗಳು ಮತ್ತು ಬಿಇಒಗಳಿಗೆ ಸೂಚಿಸಲಾಗಿದೆ. ದಾಖಲಾತಿಗೆ ಆ.31ರವರೆಗೂ ಕಾಲಾವಕಾಶ ಇರುವುದರಿಂದ ಆ ವೇಳೆಗೆ ಶೇ.100ರಷ್ಟು ಗುರಿ ಮುಟ್ಟುವಲ್ಲಿ ಅನುಮಾನವಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ.ಅನ್ಬುಕುಮಾರ್‌ ತಿಳಿಸಿದ್ದಾರೆ. 
 

click me!