ಶಾಲಾ ಆವರಣದಲ್ಲಿ ಕೊಠಡಿಯ ನಿರ್ಮಾಣ ಹಂತದ ಗೋಡೆ ಕುಸಿದು ಶಾಲಾ ವಿದ್ಯಾರ್ಥಿಯೋರ್ವ ಮೃತಪಟ್ಟು, ಮತ್ತೋರ್ವ ತೀವ್ರ ಗಾಯಗೊಂಡ ಘಟನೆ ತಾಲೂಕಿನ ಕಿರೇಸೂರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಹುಬ್ಬಳ್ಳಿ (ಜೂ.17) ಶಾಲಾ ಆವರಣದಲ್ಲಿ ಕೊಠಡಿಯ ನಿರ್ಮಾಣ ಹಂತದ ಗೋಡೆ ಕುಸಿದು ಶಾಲಾ ವಿದ್ಯಾರ್ಥಿಯೋರ್ವ ಮೃತಪಟ್ಟು, ಮತ್ತೋರ್ವ ತೀವ್ರ ಗಾಯಗೊಂಡ ಘಟನೆ ತಾಲೂಕಿನ ಕಿರೇಸೂರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಗಾಯಗೊಂಡ ವಿದ್ಯಾರ್ಥಿಯನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ. ಕಳಪೆ ಗುಣಮಟ್ಟದ ಕಾಮಗಾರಿಯೇ ಈ ದುರ್ಘಟನೆಗೆ ಕಾರಣ ಎಂದು ಆರೋಪಿಸಿರುವ ಸಾರ್ವಜನಿಕರು, ಗುತ್ತಿಗೆದಾರ, ಸೇರಿದಂತೆ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
3ನೇ ತರಗತಿ ಓದುವ ವಿಶೃತ್ ಬೆಳಗಲಿ (9) ಎಂಬ ವಿದ್ಯಾರ್ಥಿ ಮೃತಪಟ್ಟಬಾಲಕ. 7ನೇ ತರಗತಿಯಲ್ಲಿ ಓದುತ್ತಿದ್ದ ಪ್ರಜ್ವಲ್ ನಾಗಾವಿ (13) ಗಾಯಗೊಂಡಿದ್ದು ಕಮ್ಸ್‌ಗೆ ಸೇರಿಸಲಾಗಿದೆ, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ. ಗ್ರಾಮದಲ್ಲಿ ಸಶ್ಮಾನ ಮೌನ ಆವರಿಸಿದೆ.
Bengaluru ಕುಡಿದ ಮತ್ತಲ್ಲಿ ಬಾಲಕನ ಮೇಲೆಯೇ ವಾಟರ್ ಟ್ಯಾಂಕರ್ ಹರಿಸಿದ ಚಾಲಕ: ಸ್ಥಳದಲ್ಲೇ ಸಾವು
ಆಗಿದ್ದೇನು?
ಶಾಲೆಯಲ್ಲಿ ವಿವೇಕ ಯೋಜನೆಯಡಿ ಎರಡು ಕೊಠಡಿಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ನಿನ್ನೆಯಷ್ಟೇ ಈ ಕೊಠಡಿಗಳ ಒಂದು ಕಡೆಯ ಗೋಡೆಯನ್ನು ನಿರ್ಮಿಸಲಾಗಿತ್ತು. ಅವುಗಳಿಗೆ ಇನ್ನೂ ಕ್ಯೂರಿಂಗ್ ಮಾಡಿರಲಿಲ್ಲ. ಅವು ಇನ್ನೂ ಹಸಿಯಾಗಿಯೇ ಇದ್ದವು. ಶುಕ್ರವಾರ ಬೆಳಗ್ಗೆ 9ರ ಸುಮಾರಿಗೆ ಶಾಲೆಗೆ ಬಂದಿದ್ದ ಈ ಇಬ್ಬರು ಬಾಲಕರು ಆ ಕೊಠಡಿಯ ಕೆಳಗೆ ಆಟವಾಡುತ್ತಿದ್ದರು. ಆಗ ಏಕಾಏಕಿ ನಿನ್ನೆ ನಿರ್ಮಿಸಿದ್ದ ಗೋಡೆ ಕುಸಿದು ಈ ಬಾಲಕರ ಮೇಲೆ ಬಿದ್ದಿದೆ. ಶಾಲೆಯ ಸಮೀಪದಲ್ಲಿದ್ದ ಸಾರ್ವಜನಿಕರು ಗಮನಿಸಿ ತಕ್ಷಣ ಓಡಿ ಹೋಗಿ ಬಾಲಕರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟರೊಳಗೆ ವಿಶೃತ್ ಬೆಳಗಲಿ ಎಂಬ ಬಾಲಕ ಕೊನೆಯುಸಿರೆಳೆದಿದ್ದ. ಗಾಯಗೊಂಡಿದ್ದ ಪ್ರಜ್ವಲ್ ನಾಗಾವಿಯನ್ನು ಕಿಮ್ಸ್‌ಗೆ ಸಾಗಿಸಲಾಯಿತು. ಪ್ರಜ್ವಲ್‌ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆತ ಚೇತರಿಸಿಕೊಂಡಿದ್ದಾನೆ. ಪ್ರಾಣಕ್ಕೆ ಅಪಾಯವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಶಾಲೆ ಬೆಳಗ್ಗೆ 10.30ಕ್ಕೆ ಆರಂಭವಾಗುತ್ತದೆ. ಘಟನೆ ಬೆಳಗ್ಗೆ 9ಕ್ಕೆ ನಡೆದಿದೆ. ಹೀಗಾಗಿ, ಘಟನೆ ನಡೆದ ವೇಳೆ ಶಾಲಾ ಶಿಕ್ಷಕರಾಗಲಿ, ಇತರೆ ಸಿಬ್ಬಂದಿಗಳಾಗಲಿ ಶಾಲೆಯಲ್ಲಿರಲಿಲ್ಲ. ಈ ಘಟನೆ ನಡೆದಿದೆ ಎಂದು ಸಾರ್ವಜನಿಕರಿಂದ ಕರೆ ಬಂದ ಮೇಲೆ ಶಿಕ್ಷಕರು ಶಾಲೆಗೆ ಆಗಮಿಸಿದ್ದರು.
ಕಟ್ಟಡದ ಕಾಮಗಾರಿ ಕಳಪೆಯಾಗಿದೆ ಎಂಬುದು ಸಾರ್ವಜನಿಕರ ಆರೋಪ. ಜತೆಗೆ ಈ ಕಟ್ಟಡ ನೋಡಲು ವಾಚ್‌ಮನ್‌ನ್ನು ನೇಮಿಸಲಾಗಿತ್ತಂತೆ. ಆದರೆ, ಆತ ಆ ವೇಳೆಯಲ್ಲಿ ಉಪಾಹಾರಕ್ಕೆಂದು ಹೊರಗೆ ಹೋಗಿದ್ದನಂತೆ. ಅದೇ ವೇಳೆಯಲ್ಲೇ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಗುತ್ತಿಗೆದಾರರು ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಬಿಇಒ ಅಶೋಕ, ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳು ಕಿಮ್ಸ್‌ಗೆ ಭೇಟಿ ನೀಡಿ ದಾಖಲಾಗಿರುವ ಪ್ರಜ್ವಲ್‌ನ ಆರೋಗ್ಯ ವಿಚಾರಿಸಿದ್ದಾರೆ. ಜತೆಗೆ ಶಾಲೆಗೆ ಭೇಟಿ ನೀಡಿ ಕಾಮಗಾರಿ ಹಾಗೂ ಘಟನೆಯನ್ನು ಪರಿಶೀಲಿಸಿದ್ದಾರೆ. ತನಿಖೆಗೆ ಸೂಚನೆ ನೀಡಿದ್ದಾರೆ.
.1 ಲಕ್ಷ ಪರಿಹಾರ:
ಮೃತ ಬಾಲಕನ ಕುಟುಂಬಕ್ಕೆ ಸರ್ಕಾರದ ವತಿಯಿಂದ .1 ಲಕ್ಷ ಪರಿಹಾರ ನೀಡಲಾಗುವುದು. ಘಟನೆ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ತಿಳಿಸಿದ್ದಾರೆ.
ಗ್ರಾಮದಲ್ಲಿ ಬೆಳಗ್ಗೆಯೇ ಈ ಘಟನೆ ನಡೆದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕಳಪೆ ಕಾಮಗಾರಿಯೇ ಬಾಲಕನ ಬಲಿ ತೆಗೆದುಕೊಂಡಿದೆ. ಇದಕ್ಕೆ ಕಾರಣರಾದವರ ಮೇಲೆ ಉಗ್ರ ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕುಷ್ಟಗಿ: ಕಲುಷಿತ ನೀರು ಸೇವಿಸಿ ಮಗು ಸಾವು, ಮೃತರ ಸಂಖ್ಯೆ 2ಕ್ಕೇರಿಕೆ
ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ನಿರ್ಮಾಣ ಹಂತದ ಶಾಲಾ ಕೊಠಡಿಯ ಗೋಡೆ ಕುಸಿದು ಬಿದ್ದು ಬಾಲಕನೊಬ್ಬ ಮೃತಪಟ್ಟಿದ್ದಾನೆ. ಜತೆಗೆ ಓರ್ವ ಬಾಲಕ ಗಾಯಗೊಂಡಿದ್ದಾನೆ. ಘಟನಾ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು.
ಎಸ್.ಎಸ್.ಕೆಳದಿಮಠ, ಡಿಡಿಪಿಐ