ಬಿಜೆಪಿ ಪರಿಷ್ಕರಿಸಿದ್ದ ಎಲ್ಲ ಪಾಠಗಳಿಗೂ ಕೊಕ್‌: ಈ ವರ್ಷ ಬರಗೂರು ಸಿದ್ಧಪಡಿಸಿದ್ದ ಪಠ್ಯ ಬೋಧನೆ

By Kannadaprabha News  |  First Published Jun 17, 2023, 4:00 AM IST

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಎಲ್ಲ ಶಾಲೆಗಳ ಮಕ್ಕಳಿಗೆ ಈ ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯ ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿದ್ದ ಪಠ್ಯಪುಸ್ತಕಗಳಲ್ಲಿದ್ದ ಪಾಠಗಳನ್ನೇ ಸಂಪೂರ್ಣವಾಗಿ ಬೋಧಿಸಲು ಸರ್ಕಾರ ತೀರ್ಮಾನಿಸಿದೆ. 


ಬೆಂಗಳೂರು (ಜೂ.17): ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಎಲ್ಲ ಶಾಲೆಗಳ ಮಕ್ಕಳಿಗೆ ಈ ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯ ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿದ್ದ ಪಠ್ಯಪುಸ್ತಕಗಳಲ್ಲಿದ್ದ ಪಾಠಗಳನ್ನೇ ಸಂಪೂರ್ಣವಾಗಿ ಬೋಧಿಸಲು ಸರ್ಕಾರ ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಸುಮಾರು 100ಕ್ಕೂ ಹೆಚ್ಚು ಪುಟಗಳ ಪ್ರತ್ಯೇಕ ಪಠ್ಯ ಕೈಪಿಡಿಯೊಂದನ್ನು ಮುದ್ರಿಸಿ ಶಾಲೆಗಳಿಗೆ ರವಾನಿಸಲು ಮುಂದಾಗಿದ್ದು, ಇದಕ್ಕೆ ಸುಮಾರು 40 ಲಕ್ಷ ರು.ವೆಚ್ಚವಾಗಲಿದೆ ಎಂದು ಮೂಲಗಳು ಖಚಿತಪಡಿಸಿವೆ.

ಈ ದಿಸೆಯಲ್ಲಿ ರಾಜ್ಯ ಸರ್ಕಾರವು ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪರಿಷ್ಕರಣಾ ಸಮಿತಿಯು ಸಾವರ್ಕರ್‌, ಹೆಡ್ಗೇರವಾರ್‌, ಚಕ್ರವರ್ತಿ ಸೂಲಿಬೆಲೆ, ಬನ್ನಂಜೆ ಗೋವಿಂದಾಚಾರ್ಯ ಅವರ ಪಾಠಗಳನ್ನೂ ಒಳಗೊಂಡು ಹೊಸದಾಗಿ ಸೇರಿಸಿದ್ದ ಎಲ್ಲ ಪಾಠಗಳನ್ನು ಬೋಧನೆಯಿಂದ ಕೈಬಿಡುವಂತೆ ಶಾಲೆಗಳಿಗೆ ಸುತ್ತೋಲೆ ಹೊರಡಿಸಲಿದೆ. ಇನ್ನು ಬರಗೂರು ಸಮಿತಿಯ ಶಿಫಾರಸು ಮಾಡಿದ್ದ ಹಾಗೂ ಚಕ್ರತೀರ್ಥ ಸಮಿತಿ ಕೈ ಬಿಟ್ಟಿದ್ದ ಪಾಠಗಳನ್ನು ಪ್ರತ್ಯೇಕ (ಸುಮಾರು 100ಕ್ಕೂ ಹೆಚ್ಚು ಪುಟಗಳ) ಕೈಪಿಡಿ ರೂಪದಲ್ಲಿ ಮುದ್ರಿಸಿ ಶಾಲೆಗಳಿಗೆ ರವಾನಿಸಲಿದೆ. ಈ ಕೈಪಿಡಿಯನ್ನು ಇನ್ನು ಮೂರು ನಾಲ್ಕು ದಿನಗಳಲ್ಲಿ ಸಾರ್ವಜನಿಕವಾಗಿ ಬಹಿರಂಗಪಡಿಸಲು ಕೂಡ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

Tap to resize

Latest Videos

ಸಾಮ, ದಾನ, ಭೇದ, ದಂಡ ನಾಲ್ಕನ್ನು ಬಳಸಿ ಮರು ಮತಾಂತರಕ್ಕೆ ಮುಂದಾಗಬೇಕು: ಸಿ.ಟಿ.ರವಿ

ಬರಗೂರು ರಾಮಚಂದ್ರಪ್ಪ ಅವರ ಸಮಿತಿಯಲ್ಲಿದ್ದ ಐವರು ವಿಷಯ ತಜ್ಞರ ಸದಸ್ಯರು ಸಲ್ಲಿಸಿದ ವರದಿಯನ್ನು ಆಧರಿಸಿ ಈಗಿರುವ ಪಠ್ಯಪುಸ್ತಕಗಳಲ್ಲಿ ಬದಲಾವಣೆ ಮಾಡಲು ಗುರುವಾರ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಮಾಹಿತಿ ಪ್ರಕಾರ, ಈ ಐವರ ಸಮಿತಿಯು 6ನೇ ತರಗತಿ ಮತ್ತು 10ನೇ ತರಗತಿಯ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಸುಮಾರು 40 ವಿಷಯಗಳ ಬದಲಾವಣೆಗೆ ಪಟ್ಟಿಸಿದ್ಧಪಡಿಸಿ ಬರಗೂರು ಅವರಿಗೆ ಸಲ್ಲಿಸಿದ್ದು ಬಳಿಕ ಅದು ಸರ್ಕಾರಕ್ಕೆ ರವಾನೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಸಮಿತಿ ಅಧಿಕೃತವಾಗಿ ರಚನೆಯೇ ಆಗಿಲ್ಲ: ಈ ಮಧ್ಯೆ, ಸರ್ಕಾರ ಐವರು ವಿಷಯ ತಜ್ಞರ ಸಮಿತಿಯನ್ನು ಯಾವ ಆಧಾರದಲ್ಲಿ ರಚಿಸಿದೆ ಎಂಬ ಬಗ್ಗೆ ಇದೀಗ ಕೆಲ ಶಿಕ್ಷಣ ತಜ್ಞರ ವಲಯದಲ್ಲಿ ಆಕ್ಷೇಪ ವ್ಯಕ್ತವಾಗತೊಡಗಿದೆ. ಬಿಜೆಪಿ ಸರ್ಕಾರ ಮಾಡಿದ ತಪ್ಪನ್ನೇ ಈ ಸರ್ಕಾರವೂ ಮಾಡುತ್ತಿದೆ. ನಿಯಮಾನುಸಾರ ಪಠ್ಯಪರಿಷ್ಕರಣೆ ಕಾರ್ಯ ಪಠ್ಯಪುಸ್ತಕ ಸಂಘದ ಮೂಲಕ ನಡೆಯಬೇಕು. ಆದರೆ, ಅಧಿಕೃತವಾಗಿ ತಜ್ಞರ ಸಮಿತಿ ರಚನೆ ಬಗ್ಗೆ ಸೊಸೈಟಿಯಿಂದ ಯಾವುದೇ ಆದೇಶ ಆಗಿಲ್ಲ. ಅಸಲಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ ಎನ್ನುತ್ತಾರೆ ಸಂಘದ ಅಧಿಕಾರಿಗಳು. ಸರ್ಕಾರದ ಮಟ್ಟದಲ್ಲೇ ಈ ರೀತಿ ಪಠ್ಯಗಳನ್ನು ಬದಲಾವಣೆ ಮಾಡಿಕೊಳ್ಳುವ ಸಂಸ್ಕೃತಿ ಬೆಳೆದರೆ ಪ್ರತಿ ಬಾರಿ ಸರ್ಕಾರಗಳು ಬದಲಾದಾಗಲೆಲ್ಲಾ ಇಂತಹ ಕೆಟ್ಟಸಂಪ್ರದಾಯ ಮುಂದುವರೆಯಬಹುದು ಎಂದು ಹೆಸರೇಳಲಿಚ್ಛಿಸದ ಹಿರಿಯ ಸಾಹಿತಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಜಿ.ಡಿ.ಹರೀಶ್‌ ಗೌಡ ತರಾಟೆ

ಸದ್ಯ ನಾವು ಯಾವುದೇ ಹೊಸ ಪಾಠಗಳನ್ನು ಸೇರಿಸುತ್ತಿಲ್ಲ. ಹಿಂದಿನ ಸರ್ಕಾರದಲ್ಲಿ ಪರಿಷ್ಕರಣೆಯಾಗಿದ್ದ ಪಾಠಗಳನ್ನು ತೆಗೆದು ಅದಕ್ಕೂ ಮುನ್ನ ಇದ್ದ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯ ಸಮಿತಿ ಸಿದ್ಧಪಡಿಸಿದ್ದ ಪಠ್ಯಪುಸ್ತಕಗಳಲ್ಲಿ ಇದ್ದ ವಿಷಯಗಳನ್ನು ಮತ್ತೆ ಸೇರ್ಪಡೆ ಮಾಡಲಾಗುತ್ತಿದೆ. ಅಂತಹ ಪಾಠಗಳ ಪಟ್ಟಿಮಾಡಿಕೊಡಲು ಬರಗೂರು ಅವರ ಸಮಿತಿಯಲ್ಲೇ ಇದ್ದ ಐವರು ವಿಷಯ ತಜ್ಞರಿಗೆ ಸೂಚಿಸಲಾಗಿತ್ತು. ಅವರು ನೀಡಿರುವ ವರದಿಯನ್ನು ಸಚಿವ ಸಂಪುಟ ಸಭೆ ಒಪ್ಪಿದೆ. ಸೋಮವಾರ ಅಥವಾ ನಂತರದ ಕೆಲ ದಿನಗಳಲ್ಲಿ ಯಾವ ಪಾಠ ತೆಗೆದಿದ್ದೇವೆ, ಯಾವುದು ಸೇರಿಸಲಾಗಿದೆ ಎಂಬುದನ್ನು ಸಾರ್ವಜನಿಕ ವೇದಿಕೆಗೆ ಬಹಿರಂಗಪಡಿಸಲಾಗುವುದು.
- ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ

click me!