* ಹಲವು ಖಾಸಗಿ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ಪ್ರಾರಂಭ ಇಲ್ಲ
* 2ನೇ ಪಿಯುಗೆ ಭರ್ಜರಿ ಹಾಜರಾತಿ
* ಸೋಮವಾರದಿಂದ 100% ಸಂಭವ
ಬೆಂಗಳೂರು(ಜೂ.10): ರಾಜ್ಯಾದ್ಯಂತ ಗುರುವಾರದಿಂದ ಪದವಿಪೂರ್ವ ಕಾಲೇಜುಗಳು ಆರಂಭಗೊಂಡಿದ್ದು, ಮೊದಲ ದಿನವೇ ಪ್ರಥಮ ಪಿಯುಸಿಯಲ್ಲಿ ಶೇ.40ರಿಂದ 50 ರಷ್ಟು, ದ್ವಿತೀಯ ಪಿಯುಸಿಯಲ್ಲಿ ಶೇ.70ರಿಂದ 80ರಷ್ಟು ಹಾಜರಾತಿ ಕಂಡುಬಂದಿದೆ.
ಸಮವಸ್ತ್ರ ಇರುವ ಕಾಲೇಜುಗಳಲ್ಲಿ ಸಮವಸ್ತ್ರ ಧರಿಸಿ, ಇಲ್ಲದ ಕಡೆ ಸರ್ಕಾರದ ಸೂಚನೆಯಂತೆ ಭಾವೈಕ್ಯತೆಗೆ ಧಕ್ಕೆಯಾಗದ ಉಡುಪು ಧರಿಸಿ ಮಕ್ಕಳು ತರಗತಿಗೆ ಹಾಜರಾದರು. ಇನ್ನು ಪಿಯು ಪಠ್ಯ ಪರಿಷ್ಕರಣೆಯಾಗದ ಕಾರಣ ಯಾವುದೇ ಗೊಂದಲಗಳಿಲ್ಲದೆ ಎಲ್ಲೆಡೆ ಹಳೆಯ ಪಠ್ಯ ಬೋಧನೆ ಶುರುವಾಗಿದೆ.
ಕಳೆದ ಎರಡು ಕೋವಿಡ್ ವರ್ಷಗಳ ಬಳಿಕ ಈ ವರ್ಷ ಶೈಕ್ಷಣಿಕ ವರ್ಷದ ಆರಂಭದ ನಿಗದಿತ ದಿನದಿಂದಲೇ ಸರ್ಕಾರಿ, ಬಿಬಿಎಂಪಿ, ಅನುದಾನಿತ ಹಾಗೂ ಅನುದಾನರಹಿತ ಪಿಯು ಕಾಲೇಜುಗಳಲ್ಲಿ ಭೌತಿಕ ತರಗತಿಗಳು ಆರಂಭಗೊಂಡಿವೆ. ಬಹುತೇಕ ಸರ್ಕಾರಿ ಕಾಲೇಜುಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯು ತರಗತಿಗಳು ಆರಂಭಗೊಂಡಿವೆ. ಆದರೆ, ಕೆಲ ಕಾಲೇಜುಗಳನ್ನು ಹೊರತುಪಡಿಸಿದರೆ ಬಹಳಷ್ಟು ಖಾಸಗಿ ಕಾಲೇಜುಗಳಲ್ಲಿ ಇನ್ನೂ ಪ್ರಥಮ ಪಿಯುಸಿ ಆರಂಭವಾಗಿಲ್ಲ. ದ್ವಿತೀಯ ಪಿಯುಸಿ ತರಗತಿಗಳನ್ನು ಮಾತ್ರ ಆರಂಭಿಸಲಾಗಿದೆ.
ಎಲ್ಲ ಮಾದರಿ ಕಾಲೇಜುಗಳಲ್ಲೂ ಮೊದಲ ದಿನವೇ ದ್ವಿತೀಯ ಪಿಯುಸಿಗೆ ಶೇ.70ರಿಂದ 80ರಷ್ಟುವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಸೋಮವಾರದಿಂದ ಶೇ.100ರಷ್ಟುಹಾಜರಾತಿ ನಿರೀಕ್ಷೆಯಲ್ಲಿ ಕಾಲೇಜುಗಳ ಮುಖ್ಯಸ್ಥರಿದ್ದಾರೆ. ಪ್ರಥಮ ಪಿಯುಸಿಗೆ ಇನ್ನೂ ಪ್ರವೇಶ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಪ್ರವೇಶ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿರುವುದರಿಂದ ಇದುವರೆಗೆ ಪ್ರವೇಶ ಪಡೆದಿರುವ ಮಕ್ಕಳು ಮಾತ್ರ ಹಾಜರಾಗುತ್ತಿದ್ದಾರೆ. ಕೆಲ ಕಾಲೇಜುಗಳ ಪ್ರಾಂಶುಪಾಲರು ಹೇಳಿದ ಪ್ರಕಾರ ಸಿಬಿಎಸ್‌ಇ, ಐಸಿಎಸ್‌ಇ 10ನೇ ತರಗತಿ ಫಲಿತಾಂಶ ಇನ್ನೂ ಪ್ರಕಟವಾಗದ ಕಾರಣ ಪ್ರತಿಷ್ಠಿತ ಕಾಲೇಜುಗಳನ್ನು ಹೊರತುಪಡಿಸಿ ಉಳಿದ ಕಾಲೇಜುಗಳಲ್ಲಿ ಸುಮಾರು ಇನ್ನೂ ಶೇ.25ರಷ್ಟುಸೀಟುಗಳು ಭರ್ತಿಯಾಗುವುದು ಬಾಕಿ ಇದೆ.
ಮೊದಲ ದಿನವೇ ಪಠ್ಯ ಬೋಧನೆ ಶುರು:
ತಮ್ಮ ಕಾಲೇಜಿನಲ್ಲಿ ತರಗತಿ ಆರಂಭದ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಬಸವನಗುಡಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ನಾಗಣ್ಣ, ಮೊದಲ ದಿನವೇ ನಮ್ಮ ಕಾಲೇಜಿನಲ್ಲಿ ಮಕ್ಕಳನ್ನು ಸಂತಸದಿಂದ ಬರಮಾಡಿಕೊಂಡು ತರಗತಿ ಬೋಧನೆ ಆರಂಭಿಸಿದ್ದೇವೆ. ಪಿಯು ಮೌಲ್ಯಮಾಪನ, ಪೂರಕ ಪರೀಕ್ಷೆಗೆ ನಿಯೋಜಿತ ಬೋಧಕರನ್ನು ಬಿಟ್ಟು ಉಳಿದ ಎಲ್ಲ ಉಪನ್ಯಾಸಕರೂ ಹಾಜರಾಗಿದ್ದರು. ದ್ವಿತೀಯ ಪಿಯುಸಿಯ ಸುಮಾರು 650ಕ್ಕೂ ಹೆಚ್ಚು ಮಕ್ಕಳಲ್ಲಿ 500ಕ್ಕೂ ಹೆಚ್ಚು ಮಕ್ಕಳು ಹಾಜರಾಗಿದ್ದರು. ಪ್ರಥಮ ಪಿಯುಸಿಗೆ ದಾಖಲಾಗಿರುವ ಅರ್ಧದಷ್ಟುಮಕ್ಕಳು ಮಾತ್ರ ಬಂದಿದ್ದಾರೆ ಎಂದರು.
ಎಚ್‌ಎಸ್‌ಆರ್ ಲೇಔಟ್ ಅಗರ ಸರ್ಕಾರಿ ಪಿಯು ಕಾಲೇಜಿನಲ್ಲಿ ಕೂಡ ದ್ವಿತೀಯ ಪಿಯುಸಿಗೆ ಶೇ.70ರಷ್ಟುಹಾಜರಾತಿ ಇತ್ತು. ಪ್ರಥಮ ಪಿಯುಗೆ ಹಾಜರಾತಿ ಕಡಿಮೆ ಇತ್ತು. ಸೋಮವಾರದಿಂದ ಹಾಜರಾತಿ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಪ್ರಾಂಶುಪಾಲ ರಾಜಗೋಪಾಲ್ ತಿಳಿಸಿದರು.
ಪ್ರಥಮ ಪಿಯು ಆರಂಭವಾಗಿಲ್ಲ:
ರಾಜಾಜಿನಗರದ ವಿವೇಕಾನಂದ ಪಿಯು ಕಾಲೇಜು, ಶೇಷಾದ್ರಿಪುರಂ ಪಿಯು ಕಾಲೇಜು, ಮೌಂಟ್ ಕಾರ್ಮೆಲ್ ಪಿಯು ಕಾಲೇಜು ಸೇರಿದಂತೆ ನಗರದ ಬಹಳಷ್ಟುಪಿಯು ಕಾಲೇಜುಗಳಲ್ಲಿ ಇನ್ನೂ ಪ್ರಥಮ ಪಿಯುಸಿ ಆರಂಭವಾಗಿಲ್ಲ. ನಮ್ಮಲ್ಲಿ ಇನ್ನೂ ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ. ಪ್ರವೇಶ ಪಡೆದಿರುವ ಮಕ್ಕಳಿಗೆ ಸೋಮವಾರದಿಂದ ತರಗತಿ ಆರಂಭಿಸುವುದಾಗಿ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರಾದ ದೊರೆಸ್ವಾಮಿ ತಿಳಿಸಿದರು. ಅಲ್ಲದೆ, ಶೇ.25ರಷ್ಟುಸೀಟುಗಳು ಭರ್ತಿಯಾಗುವುದಿದೆ. ಅಲ್ಲದೆ, ಸಿಬಿಎಸ್‌ಇ, ಐಸಿಎಸ್‌ಇ 10ನೇ ತರಗತಿ ಫಲಿತಂಶ ಬಂದ ಬಳಿಕ ಆ ಸೀಟುಗಳು ಭರ್ತಿಯಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಇನ್ನು ಕೆಲ ಪ್ರಾಂಶುಪಾಲರು.