ಪರಿಷ್ಕೃತ ಪಠ್ಯ ವಾಪಸಾತಿಗೆ ಆಗ್ರಹಿಸಿ ವಿಧಾನಸೌಧ ಮುಂದೆ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ

By Govindaraj SFirst Published Jun 10, 2022, 3:05 AM IST
Highlights

ರಾಜ್ಯ ಸರ್ಕಾರವು ಪಠ್ಯ ಪರಿಷ್ಕರಣೆಯಲ್ಲಿ ದೇಶದ ದಾರ್ಶನಿಕರು, ಮಹಾನ್‌ ಚೇತನಗಳಿಗೆ ಅವಮಾನ ಮಾಡಿದ್ದು, ಆರ್‌ಎಸ್‌ಎಸ್‌ ಅಜೆಂಡಾವನ್ನು ಮಕ್ಕಳ ಮೇಲೆ ಪ್ರಯೋಗಿಸಿ ಮಕ್ಕಳಿಗೆ ವಿಷ ಉಣಿಸಲು ಯತ್ನಿಸುತ್ತಿದೆ.

ಬೆಂಗಳೂರು (ಜೂ.10): ರಾಜ್ಯ ಸರ್ಕಾರವು ಪಠ್ಯ ಪರಿಷ್ಕರಣೆಯಲ್ಲಿ ದೇಶದ ದಾರ್ಶನಿಕರು, ಮಹಾನ್‌ ಚೇತನಗಳಿಗೆ ಅವಮಾನ ಮಾಡಿದ್ದು, ಆರ್‌ಎಸ್‌ಎಸ್‌ ಅಜೆಂಡಾವನ್ನು ಮಕ್ಕಳ ಮೇಲೆ ಪ್ರಯೋಗಿಸಿ ಮಕ್ಕಳಿಗೆ ವಿಷ ಉಣಿಸಲು ಯತ್ನಿಸುತ್ತಿದೆ. ಹೀಗಾಗಿ ಕೂಡಲೇ ಪರಿಷ್ಕೃತ ಪಠ್ಯವನ್ನು ಹಿಂಪಡೆದು ಹಿಂದಿನ ವರ್ಷದ ಪಠ್ಯವನ್ನೇ ಮುಂದುವರೆಸಬೇಕು ಎಂದು ಒತ್ತಾಯಿಸಿ ರಾಜ್ಯ ಕಾಂಗ್ರೆಸ್‌ ನಾಯಕರು ವಿಧಾನಸೌಧದ ಬಳಿ ಗುರುವಾರ ಬೃಹತ್‌ ಪ್ರತಿಭಟನೆ ನಡೆಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದ ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ಒಂದು ಗಂಟೆ ಸಾಂಕೇತಿಕ ಧರಣಿ ನಡೆಸಿದ ಕಾಂಗ್ರೆಸ್ಸಿಗರು, ಪಠ್ಯ ಪರಿಷ್ಕರಣೆ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ತಾಲೂಕು, ಹಳ್ಳಿ-ಹಳ್ಳಿಗಳ ಮಟ್ಟದಲ್ಲೂ ಸರ್ಕಾರದ ವಿರುದ್ಧ ಹೋರಾಟ ವಿಸ್ತರಿಸಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದರು.

Latest Videos

ಸಿಎಂ ರಾಜೀನಾಮೆ ನೀಡಬೇಕು- ಡಿಕೆಶಿ: ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಪರಿಷ್ಕೃತ ಪಠ್ಯವನ್ನು ಕಸದ ಬುಟ್ಟಿಗೆ ಎಸೆದು ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯವನ್ನೇ ಮಕ್ಕಳಿಗೆ ಬೋಧಿಸಬೇಕು. ಪಠ್ಯ ಪರಿಷ್ಕರಣೆ ಮೂಲಕ ನಾಡಿನ ಶಾಂತಿಯನ್ನು ಕದಡಿ ದೇಶ-ವಿದೇಶಗಳಲ್ಲಿ ರಾಜ್ಯದ ಗೌರವ ಹರಾಜು ಹಾಕುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯ ಮಾಡಿದರು.

ಬರಗೂರು ರಾಮಚಂದ್ರಪ್ಪ ಸಮಿತಿಯಿಂದ ಎಡವಟ್ಟು: ಹುತಾತ್ಮ ವೀರ ಯೋಧ ಸಂದೀಪ್ ಉನ್ನಿಕೃಷ್ಣನ್ ಪಠ್ಯಕ್ಕೆ ಕೊಕ್

ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಗಾದೆ ಮಾತಿನಂತೆ, ಬಿಜೆಪಿ ಸರ್ಕಾರ ಎಲ್ಲ ಸಮಾಜದ ಮಹನೀಯರಿಗೆ ಅಪಮಾನ ಮಾಡಿ ರಾಜ್ಯದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ. ಬಸವಣ್ಣನವರಿಂದ ಹಿಡಿದು ಅಂಬೇಡ್ಕರ್‌, ಕುವೆಂಪುವರೆಗೂ, ನಾರಾಯಣ ಗುರುಗಳಿಂದ ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮಿ, ಮುರುಘಾ ಮಠದ ಸ್ವಾಮಿಗಳು, ಭಗತ್‌ಸಿಂಗ್‌ವರೆಗೂ ಯಾರೊಬ್ಬರನ್ನೂ ಬಿಡದೆ ಈ ಸರ್ಕಾರ ಅಪಮಾನ ಮಾಡಿದೆ ಎಂದು ದೂರಿದರು.

ನಾವೆಲ್ಲರೂ ಸಂವಿಧಾನದ ಆಶ್ರಯದಲ್ಲಿ ಬದುಕುತ್ತಿದ್ದೇವೆ. ಅಂಬೇಡ್ಕರ್‌ ಅವರು ಸಂವಿಧಾನ ಶಿಲ್ಪಿ ಅಲ್ಲವೇ? ಅವರಿಗೆ ಬಿಜೆಪಿಯವರು ಅವಮಾನ ಮಾಡುವುದನ್ನು ಯಾರೂ ಸಹಿಸುವುದಿಲ್ಲ. ಇನ್ನು ಬಸವಣ್ಣನವರು, ನಾರಾಯಣ ಗುರುಗಳ ಆಚಾರ, ವಿಚಾರ ಪ್ರಚಾರ ಮಾಡುವ ಸಂದರ್ಭದಲ್ಲಿ ಅಪಮಾನ ಮಾಡಲಾಗುತ್ತಿದೆ. ಬುದ್ಧ, ಜೈನರ ತ್ಯಾಗವನ್ನು ನಾವು ಸ್ಮರಿಸುತ್ತೇವೆ. ಈ ಎಲ್ಲರಿಗೂ ಅಪಮಾನ ಮಾಡಿ, ಅವರ ವಿಚಾರಕ್ಕೆ ತಿಲಾಂಜಲಿ ಹಾಕಲು ಪ್ರಯತ್ನಿಸಲಾಗಿದೆ ಎಂದು ಕಿಡಿಕಾರಿದರು.

ಕೆಲಸಕ್ಕೆ ಬಾರದವನನ್ನು ಇಟ್ಟುಕೊಂಡು ನಾಗಪುರ ಶಿಕ್ಷಣ ನೀತಿಯನ್ನು ಹೇರಲು ಪ್ರಯತ್ನಿಸಿದ್ದಾರೆ. ಆತನ ಕೈಲಿ ಪಠ್ಯ ಪರಿಷ್ಕರಿಸಿ, ಇಡೀ ಕನ್ನಡ ನಾಡಿನ ಸಂಸ್ಕೃತಿ, ಇತಿಹಾಸ ತಿರುಚಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಮಠಗಳು, ಸಂಘಟನೆಗಳು ಸೇರಿದಂತೆ ಎಲ್ಲ ವರ್ಗದ ಜನ ಧ್ವನಿ ಎತ್ತಬೇಕು. ಯಾರೇ ಹೋರಾಟ ಮಾಡಿದರೂ ನಾವೂ ಬೆಂಬಲಿಸುತ್ತೇವೆ ಎಂದು ಹೇಳಿದರು.

ಮಕ್ಕಳಿಗೆ ವಿಷವುಣಿಸುವ ಕೆಲಸ ಬೇಡ- ಸಿದ್ದು: ಸಿದ್ದರಾಮಯ್ಯ ಮಾತನಾಡಿ, ಬಿಜೆಪಿಯವರು ನಾಡಿನ ದಾಸರು, ವಚನಕಾರರು ಸೇರಿ ಎಲ್ಲರಿಗೂ ಅಪಮಾನ ಮಾಡಿದ್ದಾರೆ. ಮಕ್ಕಳ ಮನಸ್ಸು ಹಾಳು ಮಾಡುವ ವಿಚಾರಗಳನ್ನು ಸೇರಿಸಿ ಮಕ್ಕಳ ಮನಸ್ಸಿಗೆ ವಿಷವುಣಿಸುವ ಕೆಲಸ ಮಾಡುತ್ತಿದ್ದಾರೆ. ಇದರ ವಿರುದ್ಧ ಸಾಂಕೇತಿಕ ಧರಣಿ ನಡೆಸಿದ್ದು, ಮುಂದಿನ ಹಂತದಲ್ಲಿ ಹೋರಾಟ ತೀವ್ರಗೊಳಿಸುವ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.

ಪಠ್ಯದಲ್ಲಿ ಇತಿಹಾಸವನ್ನು ತಿರುಚುವ ಕೆಲಸ ಮಾಡಿದ್ದಾರೆ. ಬಸವಣ್ಣ, ಅಂಬೇಡ್ಕರ್‌, ನಾರಾಯಣ ಗುರು, ಕುವೆಂಪು, ಭಗತ್‌ಸಿಂಗ್‌ ಸೇರಿ ಅನೇಕ ಸ್ವಾಮೀಜಿಗಳು, ಸಂತರು, ದಾರ್ಶನಿಕರು ಇವರೆಲ್ಲರ ಚರಿತ್ರೆಗಳನ್ನು ತಿರುಚಿದ್ದಾರೆ. 9ನೇ ತರಗತಿಯಲ್ಲಿರುವ ಪಠ್ಯದಲ್ಲಿ ಸಂವಿಧಾನ ಶಿಲ್ಪಿ ಎಂಬ ಪದವನ್ನೇ ತೆಗೆದು ಹಾಕಿದ್ದಾರೆ. ಬಸವಣ್ಣನವರು ವೈದಿಕ ಧರ್ಮಕ್ಕೆ ಪರ್ಯಾಯವಾಗಿ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ಅದಕ್ಕೆ ಸಂಬಂಧಿಸಿದ ವಿಚಾರಗಳನ್ನು ತೆಗೆದು ಕೇಸರೀಕರಣಗೊಳಿಸುವ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.

ಹಿಜಾಬ್‌ ಗದ್ದಲದ ಕಾಲೇಜಲ್ಲಿ ಈಗ ಸಾವರ್ಕರ್‌ ಫೋಟೋ ವಿವಾದ..!

ಇತಿಹಾಸ ತಿರುಚಿರುವುದನ್ನು ಸಚಿವರು ಒಪ್ಪಿದ್ದಾರೆ: ಮೊದಲು ಸಚಿವ ನಾಗೇಶ್‌ ಯಾವುದೇ ಕಾರಣಕ್ಕೂ ಪರಿಷ್ಕೃತ ಪಠ್ಯವನ್ನು ಬದಲಿಸಲ್ಲ ಎಂದಿದ್ದರು. ಸಾಹಿತಿಗಳು, ವಿಚಾರವಂತರಿಂದ ಪ್ರತಿರೋಧ ವ್ಯಕ್ತವಾದ ಮೇಲೆ ಕೆಲವು ವಿಚಾರಗಳನ್ನು ಪರಿಶೀಲನೆ ಮಾಡುತ್ತೇವೆ ಎಂದರು. ಇದೀಗ ಒಂದು ತಿಂಗಳಲ್ಲಿ ಹೊಸ ಪಠ್ಯ ಪುಸ್ತಕ ಮುದ್ರಿಸಿ ಮಕ್ಕಳಿಗೆ ಹಂಚುತ್ತೇವೆ ಎಂದಿದ್ದಾರೆ. ಇದರಿಂದ ಅವರೇ ಇತಿಹಾಸ ತಿರುಚಿರುವುದು ಸತ್ಯ ಎಂದು ಒಪ್ಪಿಕೊಂಡಂತಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

click me!