* ಶಿಕ್ಷಣ ಸಚಿವ ನಾಗೇಶ ರಾಜೀನಾಮೆಗೆ ಈಶ್ವರ ಖಂಡ್ರೆ ಒತ್ತಾಯ
* ವಿಪ ಚುನಾವಣೆಯಲ್ಲಿ ಗೆಲವು
* ಡಬಲ್ ದೋಖಾ ಸರ್ಕಾರ
ಹುಬ್ಬಳ್ಳಿ(ಜೂ.10): ಇತಿಹಾಸ ತಿರುಚುವ ಕಾರ್ಯಕ್ಕೆ ಕೈ ಹಾಕಿರುವ ಬಿಜೆಪಿ ಸರ್ಕಾರ ಪಠ್ಯ ಪುಸ್ತಕದಲ್ಲಿ ಬಹುದೊಡ್ಡ ಅನಾಹುತ ಮಾಡಿದ್ದು, ಶಿಕ್ಷಣ ಸಚಿವ ನಾಗೇಶ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಾಕಷ್ಟುಶಿಕ್ಷಣ ತಜ್ಞರು, ಮೇಧಾವಿಗಳಿದ್ದಾರೆ. ಅಂಥವರಿಗೆ ಪಠ್ಯ ಪರಿಷ್ಕರಣೆ ಮಾಡಲು ಅವಕಾಶ ಕೊಟ್ಟಿಲ್ಲ. ಮನೆ ಪಾಠ ಮಾಡಿಕೊಂಡಿದ್ದ ರೋಹಿತ ಚಕ್ರತೀರ್ಥನಿಗೆ ಅಧ್ಯಕ್ಷನನ್ನಾಗಿ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಪಠ್ಯದಲ್ಲಿ ಬಸವಣ್ಣ, ಅಂಬೇಡ್ಕರ್ ಸೇರಿದಂತೆ ಹಲವು ಮಹಾನ್ ಪುರುಷರಿಗೆ ಅವಮಾನ ಮಾಡಲಾಗಿದೆ. ಇತಿಹಾಸವನ್ನೇ ತಿರುಚುವ ಕೆಲಸ ಮಾಡುತ್ತಿದ್ದಾರೆ. ಮಕ್ಕಳಲ್ಲಿ ನೈತಿಕ ಮೌಲ್ಯ, ಮಾನವೀಯ ಮೌಲ್ಯ ಹೆಚ್ಚಾಗುವಂತಹ ಪಾಠಗಳನ್ನು ಸೇರಿಸಬೇಕಿತ್ತು. ಅದು ಬಿಟ್ಟು ಜಾತಿಯ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ತನ್ನ ಎಡವಟ್ಟಿನಿಂದ ಸರ್ಕಾರ ರಾಜ್ಯದ 1.30 ಕೋಟಿ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುತ್ತಿದ್ದಾರೆ. ಇದೀಗ ಅವರೇ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಇದರ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವ ಬಿ.ಸಿ. ನಾಗೇಶ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮುತಾಲಿಕ ಹೆಡೆಮುರಿ ಕಟ್ಟಿ:
ಮಸೀದಿಗಳಲ್ಲಿ ಧ್ವನಿವರ್ಧಕ ತೆರವುಗೊಳಿಸುವ ಕುರಿತು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ ನೀಡಿರುವ ಹೇಳಿಕೆಗೆ, ಅವರು ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ಧರ್ಮಗಳ ನಡುವೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಇರುತ್ತದೆ. ಯಾರು ಧರ್ಮಗಳ ನಡುವೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಅವರನ್ನು ಹೆಡೆಮುರಿ ಕಟ್ಟುವಂಥ ಕೆಲಸ ಸರ್ಕಾರ ಮಾಡಬೇಕು. ಆದರೆ ಸರ್ಕಾರಕ್ಕೆ ಆ ಇಚ್ಛಾಶಕ್ತಿಯೇ ಇಲ್ಲ ಎಂದು ಟೀಕಿಸಿದರು.
ಡಬಲ್ ದೋಖಾ ಸರ್ಕಾರ:
ರಾಜ್ಯದಲ್ಲಿರುವುದು ಡಬಲ್ ಎಂಜಿನ್ ಸರ್ಕಾರವಲ್ಲ, ಡಬಲ್ ದೋಖಾ ಸರ್ಕಾರ. ಬಿಜೆಪಿ ಸರ್ಕಾರ ಮಾಡಿದ ವಾಗ್ದಾನ ಕೇವಲ ಪೊಳ್ಳು ಭರವಸೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಯೋಜನೆಗಳ ಮೂಲಕ ಲೂಟಿ ಮಾಡಲಾಗುತ್ತಿದೆ. ಇದು ಜನಪರ ಸರ್ಕಾರವಲ್ಲ. ಭ್ರಷ್ಟಸರ್ಕಾರ ಎಂದರು. ಬೆಲೆ ಏರಿಕೆ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಜನತೆ ಜೀವನ ಸಾಗಿಸುವುದಕ್ಕೆ ದುಸ್ತರ ಪಡುವಂತಾಗಿದೆ ಎಂದು ಹರಿಹಾಯ್ದರು.
ವಿಪ ಚುನಾವಣೆಯಲ್ಲಿ ಗೆಲವು:
ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳಿಗೆ ನಡೆಯುತ್ತಿರುವ ನಾಲ್ಕು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಖಚಿತ. ನಾನು ಧಾರವಾಡ, ಹುಬ್ಬಳ್ಳಿ, ಜಮಖಂಡಿ, ತೇರದಾಳ ಸೇರಿದಂತೆ ವಿವಿಧೆಡೆ ಪ್ರವಾಸ ಮಾಡಿದ್ದೇನೆ. ಎಲ್ಲೆಡೆ ಕಾಂಗ್ರೆಸ್ ಪರ ಅಲೆ ಇದೆ. ಈ ಸಲ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವು ಗ್ಯಾರಂಟಿ ಎಂದರು.
ಬಿಜೆಪಿ ಆಡಳಿತಕ್ಕೆ ಜನತೆ ಬೇಸತ್ತಿದೆ. ಶಿಕ್ಷಕರು, ಪದವೀಧರರು ಕಾಂಗ್ರೆಸ್‌ನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ಪಾಠ ಕಲಿಸಲಿದ್ದಾರೆ ಎಂದ ಅವರು, ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಈ ಸಲ ಕಾಂಗ್ರೆಸ್‌ನ ಬಸವರಾಜ ಗುರಿಕಾರ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಕಾಶಗೌಡ ಪಾಟೀಲ, ರಾಜಶೇಖರ ಮೆಣಸಿನಕಾಯಿ, ಅನಿಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರ, ರಜತ್ ಉಳ್ಳಾಗಡ್ಡಿಮಠ, ಬಂಗಾರೇಶ ಹಿರೇಮಠ ಸೇರಿದಂತೆ ಹಲವರಿದ್ದರು.