ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯಲ್ಲಿ 39.59% ವಿದ್ಯಾರ್ಥಿಗಳು ಪಾಸ್‌

By Govindaraj SFirst Published Jul 21, 2022, 7:56 AM IST
Highlights

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಇತ್ತೀಚೆಗೆ ನಡೆಸಿದ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶವನ್ನು ಬುಧವಾರ ಪ್ರಕಟಿಸಿದ್ದು, ಪರೀಕ್ಷೆ ಬರೆದಿದ್ದ 94 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ 37,479 ಮಂದಿ ಉತ್ತೀರ್ಣರಾಗುವ ಮೂಲಕ ಶೇ.39.59ರಷ್ಟು ಫಲಿತಾಂಶ ಬಂದಿದೆ. 

ಬೆಂಗಳೂರು (ಜು.21): ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಇತ್ತೀಚೆಗೆ ನಡೆಸಿದ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶವನ್ನು ಬುಧವಾರ ಪ್ರಕಟಿಸಿದ್ದು, ಪರೀಕ್ಷೆ ಬರೆದಿದ್ದ 94 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ 37,479 ಮಂದಿ ಉತ್ತೀರ್ಣರಾಗುವ ಮೂಲಕ ಶೇ.39.59ರಷ್ಟು ಫಲಿತಾಂಶ ಬಂದಿದೆ. ಎಂದಿನಂತೆ ಗ್ರಾಮೀಣ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಗುರುವಾರ (ಜು.21) ಮಧ್ಯಾಹ್ನ 12 ನಂತರ https://karresults.nic.in ಹಾಗೂ  https://kseeb.karnataka.gov.in/sslcsupexamresults2022 ರಲ್ಲಿ ವೀಕ್ಷಿಸಬಹುದು. ಜತೆಗೆ ರಾಜ್ಯದ ಎಲ್ಲ ಶಾಲೆಗಳ ಸೂಚನಾ ಫಲಕದಲ್ಲಿ ಗುರುವಾರವೇ ಫಲಿತಾಂಶ ಪ್ರಕಟಿಸುವಂತೆ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸೂಚನೆ ನೀಡಿದೆ. ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ಫಲಿತಾಂಶ ಪಟ್ಟಿಹಾಗೂ ತಾತ್ಕಾಲಿಕ ಅಂಕಪಟ್ಟಿಯನ್ನು ಗುರುವಾರ ಮಧ್ಯಾಹ್ನ 1 ಗಂಟೆಯ ನಂತರ ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ.

Latest Videos

37 ವರ್ಷದ ಬಳಿಕ 10ನೇ ತರಗತಿ ಪರೀಕ್ಷೆ ಪಾಸ್ ಮಾಡಿದ ಅಮ್ಮ

ಕಳೆದ ಜೂ.27ರಿಂದ ಜು.4ರ ವರೆಗೆ ರಾಜ್ಯದ 423 ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಗೆ 94,669 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 37,479 (ಶೇ.39.59) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿಯ ಫಲಿತಾಂಶ ಹಿಂದಿನ ವರ್ಷಗಳಿಗೆ ಹೋಲಿಸಿಕೊಂಡರೆ ಅತಿ ಕಡಿಮೆಯಾಗಿದೆ. 2020-21ರಲ್ಲಿ ಶೇ.55.55 ಹಾಗೂ 2019-20ರಲ್ಲಿ ಶೇ.52.28ರಷ್ಟುಫಲಿತಾಂಶ ಪ್ರಕಟವಾಗಿತ್ತು. 23,745 ಬಾಲಕರು (ಶೇ.37.47) ಹಾಗೂ 13,734 (ಶೇ.43.89) ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಶೇ.38.07 ನಗರ ಹಾಗೂ ಶೇ.41.27 ಗ್ರಾಮೀಣ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.37.99 ಸರ್ಕಾರಿ, ಶೇ.41.46 ಅನುದಾನಿತ ಮತ್ತು ಶೇ.40.68 ಖಾಸಗಿ ಶಾಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಉತ್ತರ ಪತ್ರಿಕೆ ಸ್ಕ್ಯಾನ್‌ ಪ್ರತಿ, ಮರು ಎಣಿಕೆಗೆ ಅರ್ಜಿ: ಫಲಿತಾಂಶ ಪಡೆದ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿ ಪಡೆಯಲು ಜು.22ರಿಂದ 26ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ಮಂಡಳಿ ನಿರ್ದೇಶಕ ಎಚ್‌.ಎನ್‌. ಗೋಪಾಲಕೃಷ್ಣ ತಿಳಿಸಿದ್ದಾರೆ. ಆನ್‌ಲೈನ್‌ನಲ್ಲಿ ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿ ಪಡೆಯಲು ಅರ್ಜಿ ಸಲ್ಲಿಸಿದ ನಂತರ ಆಫ್‌ಲೈನ್‌ನಲ್ಲಿ ಚಲನ್‌ ಡೌನ್‌ಲೋಡ್‌ ಮಾಡಿಕೊಂಡು ಬ್ಯಾಂಕ್‌ನಲ್ಲಿ ಶುಲ್ಕ ಪಾವತಿಸಲು ಜು.27 ಕೊನೆಯ ದಿನವಾಗಿದೆ. ಉತ್ತರ ಪತ್ರಿಕೆಗಳ ಮರು ಎಣಿಕೆ ಹಾಗೂ ಮರು ಮೌಲ್ಯಮಾಪನಕ್ಕೆ ಜು.25ರಿಂದ ಜು.31ರ ವರೆಗೆ ಅರ್ಜಿ ಸಲ್ಲಿಸಬಹುದು. 

ಆಫ್‌ಲೈನ್‌ನಲ್ಲಿ ಶುಲ್ಕ ಪಾವತಿಸಲು ಆ.1 ಕೊನೆಯ ದಿನವಾಗಿದೆ. ಬೆಂಗಳೂರು ಒನ್‌ ಹಾಗೂ ಕರ್ನಾಟಕ ಒನ್‌ ಸೇವಾ ಕೇಂದ್ರಗಳಲ್ಲಿ ಶುಲ್ಕ ಪಾವತಿ ಮಾಡಬಹುದು. ಸ್ಕ್ಯಾನ್‌ ಪ್ರತಿಗೆ ಪ್ರತಿ ವಿಷಯಕ್ಕೆ 410 ರೂ. ಹಾಗೂ ಮರುಮೌಲ್ಯಮಾಪನ ಪ್ರತಿ ವಿಷಯಕ್ಕೆ 810 ರೂ.ಗಳನ್ನು ನಿಗದಿ ಮಾಡಲಾಗಿದೆ. ಅರ್ಜಿಗಳು ಸ್ವೀಕೃತವಾದ ನಂತರ ವಿದ್ಯಾರ್ಥಿಗಳಿಗೆ ಸಂದೇಶ ಕಳುಹಿಸಲಾಗುತ್ತದೆ. ವಿದ್ಯಾರ್ಥಿಗಳು ಸ್ಕ್ಯಾನ್‌ಪ್ರತಿಯನ್ನು ಮಂಡಳಿ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಎಸ್ಸೆಸ್ಸೆಲ್ಸಿಯಲ್ಲಿ 610ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ

ಮರು ಎಣಿಕೆ ಅರ್ಜಿ ಆನ್‌ಲೈನ್‌ನಲ್ಲಿ: ಮರು ಎಣಿಕೆಗಾಗಿ ಭೌತಿಕವಾಗಿ ಅರ್ಜಿ ಸಲ್ಲಿಸುವುದನ್ನು ರದ್ದುಗೊಳಿಸಲಾಗಿದೆ. ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಉಚಿತವಾಗಿದೆ. ಫಲಿತಾಂಶ ಪ್ರಕಟವಾಗದಿದ್ದರೆ ದೂರು ನೀಡಿ: ಯಾವುದೇ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗದಿದ್ದಲ್ಲಿ ಅಥವಾ ಫಲಿತಾಂಶ ತಡೆಹಿಡಿದಿದ್ದಲ್ಲಿ ಫಲಿತಾಂಶ ಪ್ರಕಟವಾದ 10 ದಿನದೊಳಗೆ ಮಂಡಳಿ ಸಹಾಯವಾಣಿಗೆ ದೂರು ನೀಡಬಹುದು. ಮಂಡಳಿ ಸಹಾಯವಾಣಿ 080- 23310075/76, 080 23349434/23445579 ಸಂಪರ್ಕಿಸಬಹುದು ಎಂದು ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!