‘ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ಗಳಾಗಿ (ಕೆಐಟಿ) ಉನ್ನತೀಕರಿಸುವ ಸಂಬಂಧ ಸಮಗ್ರ ವಿಸ್ತೃತ ಯೋಜನಾ ವರದಿ ಸಲ್ಲಿಸಲು ಪ್ರೊ.ಸಡಗೋಪನ್ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚನೆ
ಬೆಂಗಳೂರು(ಜು.21): ರಾಜ್ಯದ 14 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಪೈಕಿ ಏಳು ಕಾಲೇಜುಗಳನ್ನು ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಗಳ (ಐಐಟಿ) ಮಾದರಿಯಲ್ಲಿ ‘ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ಗಳಾಗಿ (ಕೆಐಟಿ) ಉನ್ನತೀಕರಿಸುವ ಸಂಬಂಧ ಸಮಗ್ರ ವಿಸ್ತೃತ ಯೋಜನಾ ವರದಿ ಸಲ್ಲಿಸಲು ಪ್ರೊ.ಸಡಗೋಪನ್ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಬುಧವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಯೋಜನೆಯ ಅಡಿಯಲ್ಲಿ ಹಾಸನ, ಹಾವೇರಿ, ಕೆ.ಆರ್. ಪೇಟೆ, ಕಾರವಾರ, ರಾಮನಗರ ಮತ್ತು ತಳಕಲ್‌ನಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಬೆಂಗಳೂರಿನ ಶ್ರೀ ಕೃಷ್ಣರಾಜೇಂದ್ರ ಸಿಲ್ವರ್ ಜ್ಯೂಬಿಲಿ ಟೆಕ್ನಾಲಜಿಕಲ್ ಇನ್ಸ್‌ಟಿಟ್ಯೂಟ್ ಅನ್ನು (ಎಸ್‌ಕೆಎಸ್‌ಜೆಐಟಿ) ಕೆಐಟಿ ಆಗಿ ಉನ್ನತೀಕರಿಸಲು ಆಯ್ಕೆ ಮಾಡಿಕೊಳ್ಳಲಾಗಿದೆ. ಇದಕ್ಕೆ ಡಿಪಿಆರ್ ಸಿದ್ಧಪಡಿಸಲು ಬೆಂಗಳೂರಿನ ಐಐಐಟಿ ಸ್ಥಾಪಕ ನಿರ್ದೇಶಕ ಪ್ರೊ.ಸಡಗೋಪಾಲನ್ ಅವರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದೆ. ಪ್ರೊ.ಎಲ್.ಎಸ್. ಗಣೇಶ್, ಪ್ರೊ.ಸಿ ರಾಜೇಂದ್ರ, ಪ್ರೊ. ರಾಮಗೋಪಾಲ್‌ರಾವ್, ಪ್ರೊ. ಚಕ್ರವರ್ತಿ, ಪ್ರೊ.ಮಣೀಂದ್ರ ಅಗರವಾಲ್ ಮತ್ತು ಪ್ರೊ. ವೈ.ನರಹರಿ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಈ ಸಮಿತಿಗೆ ಎರಡು ತಿಂಗಳಲ್ಲಿ ಡಿಪಿಆರ್ ಸಲ್ಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಗೊಂದು 'ಸೂಪರ್ 30' ಎಂಜಿನಿಯರಿಂಗ್ ಕಾಲೇಜು: ಅಶ್ವತ್ಥ ನಾರಾಯಣ
ಈ ಕಾಲೇಜುಗಳಲ್ಲಿ ಮೊದಲ ಹಂತದಲ್ಲಿ ಹೆಚ್ಚಿನ ಬೇಡಿಕೆ ಮತ್ತು ಉದ್ಯೋಗಾವಕಾಶ ಇರುವ ತಲಾ 2 ವಿಭಾಗಗಳನ್ನು ಕೆಐಟಿ ಆಗಿ ಬೆಳೆಸಲಾಗುವುದು. ಇವುಗಳಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಅತ್ಯುನ್ನತ ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರ ಉತ್ತೇಜನ ನೀಡುತ್ತದೆ. ಇದಕ್ಕಾಗಿ ವಿದೇಶದ ಶ್ರೇಷ್ಠ ವಿಶ್ವವಿದ್ಯಾಲಯಗಳೊಂದಿಗೆ ಸಹಭಾಗಿತ್ವ ಒಡಂಬಡಿಕೆಗಳನ್ನು ಈ ಕಾಲೇಜುಗಳು ಮಾಡಿಕೊಳ್ಳಲಿವೆ. ಈ ಮೂಲಕ ಇವುಗಳನ್ನು ಅಂತಾರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರಗಳನ್ನಾಗಿ ಮಾಡಲಾಗುವುದು. ಈ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಒಟ್ಟು 95 ಕೋಟಿ ರೂ. ಅಗತ್ಯವಿದ್ದು, ಈಗಾಗಲೇ 21 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಯಾವ್ಯಾವ ನಗರದ ಕಾಲೇಜು?
ಹಾಸನ, ಹಾವೇರಿ, ಕೆ.ಆರ್. ಪೇಟೆ, ಕಾರವಾರ, ರಾಮನಗರ, ತಳಕಲ್‌ನಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಬೆಂಗಳೂರಿನ ಶ್ರೀ ಕೃಷ್ಣರಾಜೇಂದ್ರ ಸಿಲ್ವರ್ ಜ್ಯೂಬಿಲಿ ಟೆಕ್ನಾಲಜಿಕಲ್ ಇನ್ಸ್‌ಟಿಟ್ಯೂಟ್.