ಸರ್ಕಾರಿ ಶಾಲೆ ಮಕ್ಕಳಿಗೆ ಈ ಸಲ ಬ್ರ್ಯಾಂಡೆಡ್‌ ಶೂ ಇಲ್ಲ: ಸಚಿವ ಬಿ.ಸಿ.ನಾಗೇಶ್‌

Published : Jul 21, 2022, 12:00 AM IST
ಸರ್ಕಾರಿ ಶಾಲೆ ಮಕ್ಕಳಿಗೆ ಈ ಸಲ ಬ್ರ್ಯಾಂಡೆಡ್‌ ಶೂ ಇಲ್ಲ: ಸಚಿವ ಬಿ.ಸಿ.ನಾಗೇಶ್‌

ಸಾರಾಂಶ

ಈ ಬಾರಿ ‘ಬ್ರಾಂಡೆಡ್‌’ ಷರತ್ತನ್ನು ಕೈಬಿಟ್ಟು ಕೇವಲ ಗುಣಮಟ್ಟದ ಶೂಗಳನ್ನು ನೀಡಬೇಕೆಂದು ಸರ್ಕಾರ ಸೂಚಿಸಿದೆ.

ಬೆಂಗಳೂರು(ಜು.21): ರಾಜ್ಯ ಸರ್ಕಾರಿ ಶಾಲಾ ಮಕ್ಕಳಿಗೆ ಎರಡು ವರ್ಷಗಳ ಬಳಿಕ ಮತ್ತೆ ಶೂ, ಸಾಕ್ಸ್‌ ನೀಡಲು ಆದೇಶ ಮಾಡಿರುವ ಸರ್ಕಾರ ಈ ಹಿಂದಿನಂತೆ ಬ್ರ್ಯಾಂಡೆಡ್‌’ ಶೂಗಳನ್ನೇ ನೀಡಬೇಕೆಂಬ ವಿಚಾರದಲ್ಲಿ ರಾಜಿ ಮಾಡಿಕೊಂಡಂತೆ ಕಾಣುತ್ತಿದೆ. ಅಲ್ಲದೆ, ಶೂ ಖರೀದಿಗೆ ಐದು ವರ್ಷಗಳ ಹಿಂದಿನ ದರವನ್ನೇ ನಿಗದಿಪಡಿಸಿರುವುದು ಟೀಕೆಗೆ ಗುರಿಯಾಗಿದೆ. ಕೋವಿಡ್‌ ಪೂರ್ವದ 2019-20ನೇ ಸಾಲಿನಲ್ಲಿ ಶೂ ವಿತರಣೆಗೆ ಹೊರಡಿಸಿದ್ದ ಆದೇಶದಲ್ಲಿ ಸರ್ಕಾರ ಕಡ್ಡಾಯವಾಗಿ ಬ್ರ್ಯಾಂಡೆಡ್‌ ಶೂಗಳನ್ನೇ ಖರೀದಿಸಿ ನೀಡಬೇಕೆಂದು ಷರತ್ತು ವಿಧಿಸುತ್ತು. ಅಲ್ಲದೆ, ಬ್ರಾಂಡ್‌ಗಳ ಆಯ್ಕೆಗೆ ಬಾಟಾ, ಪ್ಯಾರಾಗಾನ್‌, ಲಿಬರ್ಟಿ ಸೇರಿದಂತೆ ಸುಮಾರು 15 ಬ್ರಾಂಡ್‌ಗಳ ಪಟ್ಟಿಯನ್ನೂ ಸಹ ನೀಡಿತ್ತು. ಈ ಬಾರಿಯ ‘ಬ್ರಾಂಡೆಡ್‌’ ಷರತ್ತನ್ನು ಕೈಬಿಟ್ಟು ಕೇವಲ ಗುಣಮಟ್ಟದ ಶೂಗಳನ್ನು ನೀಡಬೇಕೆಂದು ಸೂಚಿಸಿದೆ.

ಅಲ್ಲದೆ, 2017-18ರಲ್ಲಿ 1 ರಿಂದ 5 ನೇ ತರಗತಿ ಮಕ್ಕಳಿಗೆ ಶೂ ಖರೀದಿಸಲು ಒಂದು ಜೊತೆಗೆ 265 ರು., 6 ರಿಂದ 8 ನೇ ತರಗತಿ ಮಕ್ಕಳಿಗೆ ತಲಾ 295 ರು. ಮತ್ತು 9 ಮತ್ತು 10 ನೇ ತರಗತಿಯ ಪ್ರತಿ ಮಗುವಿಗೆ 325 ರು. ದರ ನಿಗದಿ ಮಾಡಲಾಗಿತ್ತು. ಈಗ 2022-23ರಲ್ಲೂ ಸರ್ಕಾರ ಇದೇ ದರ ನಿಗದಿಪಡಿಸಿ ಸರ್ಕಾರ 132 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ. ಇದರಿಂದ ಮಕ್ಕಳಿಗೆ ಎಷ್ಟರ ಮಟ್ಟಿಗೆ ಗುಣಮಟ್ಟದ ಶೂ ಖರೀದಿಸಿ ವಿತರಿಸಲು ಸಾಧ್ಯ ಎಂಬುದು ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸದಸ್ಯರ ಪ್ರಶ್ನೆಯಾಗಿದೆ.

ಕನ್ನಡ ಮಾಧ್ಯಮ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್, ಇನ್ಮುಂದೆ ಸ್ಪೋಕನ್ ಇಂಗ್ಲೀಷ್ ಕ್ಲಾಸ್

ಅಲ್ಲದೆ, ಈ ವರ್ಷದ ಆದೇಶದಲ್ಲಿ ಸರ್ಕಾರ ನಿಗದಿಪಡಿಸಿರುವ ದರದ ಜೊತೆಗೆ ಸ್ಥಳೀಯವಾಗಿ ದಾನಿಗಳಿಂದ ದೇಣಿಗೆ ಲಭ್ಯವಾದರೆ ಸ್ವೀಕರಿಸಿ ಉತ್ತಮ ಗುಣಮಟ್ಟದ ಶೂಗಳನ್ನು ಖರೀದಿಸುವಂತೆ ಶಾಲೆಗಳಿಗೆ ಸೂಚಿಸಲಾಗಿದೆ. ಇದು ಸಾರ್ವಜನಿಕ ವಲಯದಲ್ಲಿ ಹಾಗೂ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳಿಂದ ಟೀಕೆಗೆ ಗುರಿಯಾಗಿದೆ. ಐದು ವರ್ಷದ ಹಿಂದಿನ ದರದಲ್ಲಿ ನಾವು ಗುಣಮಟ್ಟಶೂಗಳನ್ನು ಹೇಗೆ ಖಚಿತಪಡಿಸುವುದು. ಎಲ್ಲ ಕಡೆಯೂ ದಾನಿಗಳು ಎಲ್ಲಿ ಸಿಗುತ್ತಾರೆ ಎಂದು ತುಮಕೂರು ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಎಸ್‌ಡಿಎಂಸಿ ಅಧ್ಯಕ್ಷರೊಬ್ಬರು ಪ್ರಶ್ನಿಸಿದ್ದಾರೆ.

2018-19ನೇ ಶೈಕ್ಷಣಿಕ ವರ್ಷದಲ್ಲಿ ಸರಬರಾಜು ಮಾಡಿದ ಶೂಗಳ ಗುಣಮಟ್ಟದ ಬಗ್ಗೆ ದೂರುಗಳು ಬಂದ ನಂತರ ಇಲಾಖೆಯು ಬ್ರಾಂಡೆಡ್‌ ಶೂಗಳನ್ನು ಪೂರೈಸಲು ಸೂಚಿಸಿತ್ತು ಮತ್ತು ಅಂದಿನ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಶಾಲಾ ಶೂಗಳ ಕಳಪೆ ಪೂರೈಕೆಯ ಬಗ್ಗೆ ತನಿಖೆಗೆ ಆದೇಶಿಸಿದರು. ಗುಣಮಟ್ಟಕಳಪೆಯಾಗಿದ್ದರೆ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಸರ್ಕಾರ ನಿಗದಿಪಡಿಸಿರುವ ದರಕ್ಕೆ ಶೂಗಳನ್ನು ಸಿದ್ಧಪಡಿಸಿಕೊಡಲು ಹಲವು ಕಂಪನಿಗಳು ಸಿದ್ಧವಿದೆ. ಆ ಶೂಗಳು ಒಂದು ವರ್ಷ ಕಾಲ ತಡೆಯುವ ಮಟ್ಟಿನ ಗುಣಮಟ್ಟಕ್ಕೆ ಯಾವುದೇ ಕೊರತೆಯಾಗುವುದಿಲ್ಲ. ಸರ್ಕಾರದ ಬಾಬು ಜಗಜೀವನರಾಮ್‌ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದವರು (ಲಿಡ್ಕರ್‌) ಸರ್ಕಾರ ನಿಗದಿಪಡಿಸಿರುವ ದರಕ್ಕೆ ಶೂ ನೀಡಲು ಮುಂದೆ ಬಂದರೆ ಅವರ ಸಹಕಾರ ಪಡೆಯುವಂತೆಯೂ ಎಲ್ಲ ಜಿಲ್ಲಾ ಉಪನಿರ್ದೇಶಕರಿಗೆ ಸೂಚಿಸಲಾಗಿದೆ ಅಂತ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ. 
 

PREV
Read more Articles on
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ