ಗಜೇಂದ್ರಗಡ: 380 ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳಿಗೆ ಕೇವಲ ಮೂರೇ ಬೋಧಕರು..!

By Kannadaprabha NewsFirst Published Aug 20, 2023, 10:00 PM IST
Highlights

ಗಜೇಂದ್ರಗಡ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ 30 ಹುದ್ದೆಗಳು ಖಾಲಿ/ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕವಿದ ಕಾರ್ಮೋಡ

ಎಸ್‌.ಎಂ. ಸೈಯದ್‌

ಗಜೇಂದ್ರಗಡ(ಆ.20):  380 ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳಿಗೆ 3 ಜನ ಬೋಧಕರು! ಇದು ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಕಥೆ. ಇಲ್ಲಿ 30 ಬೋಧಕ ಹುದ್ದೆಗಳು ಖಾಲಿ ಇವೆ! ತಾಂತ್ರಿಕ ಶಿಕ್ಷಣ ಇಲಾಖೆಯ ವರ್ಗಾವಣೆ ನಿಯಮಗಳಿಂದ ಕಾಲೇಜಿನಲ್ಲಿ ಬೆರಳಣಿಕೆಯಷ್ಟಿದ್ದ ಉಪನ್ಯಾಸಕರು ಬೇರೆಡೆ ವರ್ಗಾವಣೆ ಆಗಿದ್ದು, ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಸಿವಿಲ್‌, ಕಂಪ್ಯೂಟರ್‌ ಸೈನ್ಸ್‌, ಎಲೆಕ್ಟ್ರಾನಿಕ್‌ ಆ್ಯಂಡ್‌ ಕಮ್ಯುನಿಕೇಷನ್‌, ಮೆಕ್ಯಾನಿಕಲ್‌, ಅಟೋಮೊಬೈಲ್‌ ಡಿಪ್ಲೊಮಾ ಕೋರ್ಸ್‌ಗಳಿಗೆ ಇರಬೇಕಾದ 33 ಬೋಧನಾ ಸಿಬ್ಬಂದಿ ಪೈಕಿ ಕೇವಲ 3 ಮಾತ್ರ ಉಳಿದಿದ್ದಾರೆ. 30 ಹುದ್ದೆಗಳು ಖಾಲಿ ಇವೆ.

2012ರಲ್ಲಿ ಆರಂಭವಾದ ಈ ಕಾಲೇಜಿನ ಡಿಪ್ಲೊಮಾ ಕೋರ್ಸ್‌ಗಳ ವಿವಿಧ ಬೋಧನಾ ವಿಷಯಗಳಿಗೆ ಮಂಜೂರಾಗಿದ್ದ ಒಟ್ಟು 31 ಬೋಧನಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ 2013ರ ಶೈಕ್ಷಣಿಕ ವರ್ಷಕ್ಕೆ ಅರ್ಧದಷ್ಟುಬೋಧನಾ ಸಿಬ್ಬಂದಿ ಬೇರೆಡೆ ವರ್ಗವಾದಂತೆ, ಪ್ರತಿವರ್ಷ ಒಬ್ಬರಿಬ್ಬರು ಎಂಬಂತೆ ಕಳೆದ ಕೆಲವು ವರ್ಷಗಳಿಂದ ಕೇವಲ 5 ಬೋಧನಾ ಸಿಬ್ಬಂದಿ ಉಳಿದಿದ್ದರು. ಈಗ ಅದರಲ್ಲಿ ಇಬ್ಬರು ವರ್ಗಾವಣೆಗೊಂಡಿದ್ದು, ಇನ್ನುಳಿದ ಮೂವರ ಪೈಕಿ ಒಬ್ಬರು ಪ್ರಭಾರಿ ಪ್ರಾಚಾರ್ಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಬ್ಬರು ಹಾಗೂ 19 ಅರೆಕಾಲಿಕರು ಉಪನ್ಯಾಸಕರು ಬೋಧನಾ ಕಾರ್ಯದಲ್ಲಿ ತೊಡಗಿದ್ದಾರೆ.

ಅಕ್ಕಮಹಾದೇವಿ ವಿವಿ: ಅನುದಾನ ಇಲ್ಲದಿದ್ರೂ 6ಕೋಟಿ ರೂ. ಖರ್ಚು ಮಾಡಿ ವಸ್ತುಸಂಗ್ರಹಾಲಯ ನಿರ್ಮಾಣ!

380 ವಿದ್ಯಾರ್ಥಿಗಳು:

ಇಲ್ಲಿ 5 ವಿಭಾಗಗಳಿದ್ದು, ಒಟ್ಟು 380 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಕಂಪ್ಯೂಟರ್‌ ಸೈನ್ಸ್‌ ವಿಭಾಗಕ್ಕೆ 6 ಬೋಧನಾ ಸಿಬ್ಬಂದಿ ಪೈಕಿ ಒಬ್ಬರು ಮಾತ್ರ ಇದ್ದು, 5 ಹುದ್ದೆಗಳು ಖಾಲಿ ಇವೆ. ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಷನ್‌ ವಿಭಾಗದ 8 ಬೋಧಕರ ಹುದ್ದೆಗಳು ಖಾಲಿ, ಮೆಕ್ಯಾನಿಕಲ್‌ ವಿಭಾಗಕ್ಕೆ 9ರ ಪೈಕಿ 9 ಹುದ್ದೆಗಳೂ ಖಾಲಿ. ಸಿವಿಲ್‌ ಎಂಜಿನಿಯರಿಂಗ್‌ ವಿಭಾಗಕ್ಕೆ 7 ಹುದ್ದೆಗಳ ಪೈಕಿ ಒಬ್ಬರು ಮಾತ್ರ ಇದ್ದಾರೆ. ಸೈನ್ಸ್‌ ವಿಭಾಗಕ್ಕೆ ಎರಡೂ ಹುದ್ದೆ ಖಾಲಿ. ಎಲೆಕ್ಟ್ರಿಕಲ್‌ ವಿಭಾಗಕ್ಕೆ 1 ಉಪನ್ಯಾಸಕರು ಇದ್ದಾರೆ.

ಬೋಧನಾ ಸಿಬ್ಬಂದಿ ಕೊರತೆಯಿಂದ ಕಲಿಕಾ ಮಟ್ಟದ ಮೇಲೆ ಪರಿಣಾಮ ಬೀರುವುದನ್ನು ತಡೆಯಲಿ ಅರೆಕಾಲಿಕ ಉಪನ್ಯಾಸಕರೇ ಪಾಠ, ಪ್ರಯೋಗ ನಡೆಸುತ್ತಿದ್ದಾರೆ. ಇತ್ತ ಸೂಪರಿಂಟೆಂಡೆಂಟ್‌ 3 ಹುದ್ದೆ ಪೈಕಿ ಇಬ್ಬರು ಇದ್ದು 1 ಹುದ್ದೆ ಖಾಲಿ ಇದೆ. ಎಫ್‌ಡಿಎ 4 ಪೈಕಿ ಒಬ್ಬರಿದ್ದಾರೆ. ಎಸ್‌ಡಿಎ 5 ಹುದ್ದೆಗಳಲ್ಲಿ 2 ಇದ್ದಾರೆ. ರಿಜಿಸ್ಟ್ರಾರ್‌ ಹುದ್ದೆ ಖಾಲಿ, ಡಿ ಗ್ರೂಪ್‌ (ಕಚೇರಿ ಸಹಾಯಕರು 8 ಸಹ ಖಾಲಿ) ಟೈಪಿಸ್ಟ್‌ ಇಲ್ಲದ್ದರಿಂದ ಕಾಲೇಜಿನಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಸೂಕ್ತ ಮಾಹಿತಿ ಜತೆಗೆ ಸಕಾಲದಲ್ಲಿ ಕಾಲೇಜಿನ ಕಚೇರಿಯ ಕೆಲಸ ಕಾರ್ಯಗಳು ಸಹ ಸುಗಮವಾಗಿ ನಡೆಯದಂತಾಗಿವೆ.

ಮೆಡಿಕಲ್‌, ಎಂಜಿನಿಯರಿಂಗ್‌ ಪ್ರವೇಶಕ್ಕೆ ಆ.23 ರವರೆಗೆ ಅವಕಾಶ

ಹಾಳುಬಿದ್ದ ಹಾಸ್ಟೆಲ್‌:

ಪಟ್ಟಣದ ಕುಷ್ಟಗಿ ರಸ್ತೆಯಲ್ಲಿನ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿಗೆ ಬೋಧನೆ ಮತ್ತು ಪ್ರಾಯೋಗಿಕ ತರಬೇತಿ ನೀಡಲು ಸುಸಜ್ಜಿತ ಕಟ್ಟಡ, ಗ್ರಂಥಾಲಯ ಹಾಗೂ ಪ್ರಯೋಗಾಲಯಗಳಿವೆ. ಆದರೆ ವಿದ್ಯಾರ್ಥಿಗಳಿಗೆ ನಿರ್ಮಿಸಿದ ಸುಸಜ್ಜಿತ ವಿದ್ಯಾರ್ಥಿ ವಸತಿ ನಿಲಯ ನಿರ್ವಹಣೆಯ ಕೊರತೆಯಿಂದ ಬಾಗಿಲುಗಳಿಗೆ ಗೆದ್ದಲು ಹತ್ತಿದೆ. ಆವರಣದಲ್ಲಿ ಮುಳ್ಳು ಬೆಳೆದು ಪಾಳು ಬಿದ್ದಿದೆ.

ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಪ್ರಭಾರಿ ಪ್ರಾಚಾರ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಕೆಲವರು ಬೇರೆಡೆ ವರ್ಗಾವಣೆಯಾಗಿದ್ದು, 30 ಬೋಧನಾ ಸಿಬ್ಬಂದಿ ಸೇರಿ ಇತರ ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. 2 ಉಪನ್ಯಾಸಕರು ಹಾಗೂ 19 ಅರೆಕಾಲಿಕ ಉಪನ್ಯಾಸಕರೊಂದಿಗೆ ಕಾಲೇಜಿನಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಪ್ರಭಾರಿ ಪ್ರಾಚಾರ್ಯ ಕೃಷ್ಣಾ ಯರಡೋಣಿ ತಿಳಿಸಿದ್ದಾರೆ.  

click me!