ತಮಿಳುನಾಡಿನ ಕೊಯಮತ್ತೂರಿನ ಜನಪ್ರಿಯ ಬೈಕರ್, ಯೂಟ್ಯೂಬರ್ (YouTuber) 22 ವರ್ಷ ಪ್ರಾಯದ ಟಿಟಿಎಫ್ ವಾಸನ್ (TTF Vasan)ಬಂಧಿಸುವಂತೆ ಆಗ್ರಹಿಸಿ ಪೊಲೀಸರಿಗೆ ಒತ್ತಡ ಬಂದಿದ್ದು, ಯೂಟ್ಯೂಬರ್ ಸಂಕಷ್ಟದಲ್ಲಿದ್ದಾರೆ.
ಚೆನ್ನೈ: ತಮಿಳುನಾಡಿನ ಕೊಯಮತ್ತೂರಿನ ಜನಪ್ರಿಯ ಬೈಕರ್, ಯೂಟ್ಯೂಬರ್ (YouTuber) 22 ವರ್ಷ ಪ್ರಾಯದ ಟಿಟಿಎಫ್ ವಾಸನ್ (TTF Vasan)ಬಂಧಿಸುವಂತೆ ಆಗ್ರಹಿಸಿ ಪೊಲೀಸರಿಗೆ ಒತ್ತಡ ಬಂದಿದ್ದು, ಯೂಟ್ಯೂಬರ್ ಸಂಕಷ್ಟದಲ್ಲಿದ್ದಾರೆ. ಯೂಟ್ಯೂಬ್‌ನಲ್ಲಿ ಲಕ್ಷಾಂತರ ಚಂದಾದಾರರನ್ನು ಹೊಂದಿರುವ ವಾಸನ್, ಇತ್ತೀಚೆಗೆ ಕೊಯಮತ್ತೂರು ನಗರದಲ್ಲಿ (Coimbatore city) ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅವರನ್ನು ನೋಡಲು ಅಭಿಮಾನಿಗಳು ಸಾವಿರಾರು ಯುವಕರು ಅಲ್ಲಿ ಸೇರಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು.
ದೊಡ್ಡಮಟ್ಟದಲ್ಲಿ ಯುವ ಅಭಿಮಾನಿಗಳನ್ನು ಹೊಂದಿರುವ ವಾಸನ್, ನೇಪಾಳ ಮತ್ತು ಲಡಾಖ್ ಸೇರಿದಂತೆ ಹಲವಾರು ಪ್ರಮುಖ ಪ್ರವಾಸಿ ತಾಣಗಳಿಗೆ ತಮ್ಮ ಐಷಾರಾಮಿ ಬೈಕ್‌ನಲ್ಲಿ ಏಕಾಂಗಿ ಪ್ರವಾಸ ಕೈಗೊಂಡು ಅದರ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಿರುತ್ತಾರೆ. ಹೀಗಾಗಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ. ಇದೇ ಕಾರಣಕ್ಕೆ ಇವರ ಹುಟ್ಟುಹಬ್ಬದಂದು ಸಾವಿರಾರು ಜನ ಸೇರಿ ಟ್ರಾಫಿಕ್ ಜಾಮ್‌ಗೆ ಕಾರಣವಾಗಿತ್ತು. ಅಲ್ಲದೇ ಸ್ಥಳೀಯ ಜನರು ಯಾರೋ ಸಿನಿಮಾ ತಾರೆಯರು ಆಗಮಿಸಿದ ಕಾರಣಕ್ಕೆ ಈ ರೀತಿ ಟ್ರಾಫಿಕ್ ಜಾಮ್ ಆಗಿದೆ ಎಂದು ಭಾವಿಸಿದ್ದರು ಎಂದು ತಿಳಿದು ಬಂದಿದೆ.
ಅಲ್ಲದೇ ಹುಟ್ಟುಹಬ್ಬದ ಸಂಭ್ರಮದಲ್ಲಿ ವಾಸನ್ ಅಭಿಮಾನಿಗಳು ಭಾರಿ ಸಿಡಿಮದ್ದುಗಳನ್ನು ಸಿಡಿಸಿದ್ದು, ಇದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು ಎಂದು ವರದಿಯಾಗಿದೆ. ಈ ಹಿಂದೆ ವಾಸನ್ ಗಂಟೆಗೆ 243 ಕಿ.ಮೀ.ವೇಗದಲ್ಲಿ ಬೈಕ್ ಓಡಿಸುವ ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದರು. ಈ ವಿಡಿಯೋ ವೈರಲ್ ಆಗಿದ್ದು, ನಂತರ ಯುವಕರು ವಾಸನ್ ಅವರನ್ನು ಅನುಕರಿಸಲು ಪ್ರಯತ್ನಿಸಿದರು. ಇದರಿಂದ ಹದಿಹರೆಯದ ಯುವಕರು ಅಪಾಯಕ್ಕೆ ಒಳಗಾಗುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕ್ಯಾನ್ಸರ್‌ಗೆ ಬಲಿಯಾದ ಯೂಟ್ಯೂಬರ್: 23ಕ್ಕೆ ಬದುಕು ಮುಗಿಸಿದ ಟೆಕ್ನೋಬ್ಲೇಡ್
ತಾವು ಮಾಡುವ ಈ ಸಾಹಸವನ್ನು ಬೇರೆ ಯಾರೂ ಕೈಗೊಳ್ಳಬಾರದು ಮತ್ತು ಪ್ರತಿಯೊಬ್ಬರೂ ವಾಹನಗಳನ್ನು ಓಡಿಸುವ ಮೊದಲು ಸುರಕ್ಷತಾ ಸಾಧನಗಳನ್ನು ಧರಿಸಬೇಕು ಎಂದು ಹಲವಾರು ಸಂದರ್ಶನಗಳಲ್ಲಿ ವಾಸನ್ ಅವರು ಎಚ್ಚರಿಕೆ ನೀಡಿದ ಹೊರತಾಗಿಯೂ ಯುವ ಸಮೂಹ ಅವರಂತೆ ಸಾಹಸ ಮಾಡಲು ಮುಂದಾಗಿದ್ದಾರೆ. ಪರಿಣಾಮ ಮಾರಣಾಂತಿಕ ರಸ್ತೆ ಅಪಘಾತಗಳು ನಡೆದಿವೆ. ರಸ್ತೆ ಬದಿ ನಾಯಿಗಳಿಗೆ ಡಿಕ್ಕಿ ಹೊಡೆದು, ಬ್ಯಾರಿಕೇಡ್‌ಗಳಿಗೆ ಡಿಕ್ಕಿ ಹೊಡೆದು ಜನರು ಗಂಭೀರವಾಗಿ ಗಾಯಗೊಂಡ ಪ್ರಕರಣಗಳನ್ನು ನಾವು ನೋಡಿದ್ದೇವೆ. ನಮಗೆ ಅಪಾಯದ ರೂಪವನ್ನು ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂದು ಜನರು ಹೇಳಿದ್ದಾರೆ.
ಕೋಲ್ಕತ್ತಾದ ಫೇಕ್ ಕಾಲ್ ಸೆಂಟರ್ ಮುಚ್ಚಿಸಿದ ಅಮೆರಿಕಾದ ಯೂಟ್ಯೂಬರ್ ಮಾರ್ಕ್ ರಾಬರ್: ಹೇಗಿತ್ತು ಕಾರ್ಯಾಚರಣೆ?
ವಾಸನ್ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದ್ದಾರೆ. ಜೂನ್ 5ರಂದು, ತಮ್ಮ ಯೂಟ್ಯೂಬ್ ಪುಟದಲ್ಲಿ, ವಾಸನ್ ಅವರು ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಅವರ ಬಗ್ಗೆ ಕೆಟ್ಟ ಟೀಕೆಗಳು ಬರುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಯಾರನ್ನೂ ತಾನು ವೇಗವಾಗಿ ಬೈಕ್ ಓಡಿಸುವಂತೆ ಅಥವಾ ಚಮತ್ಕಾರಿ ಪ್ರದರ್ಶನ ಮಾಡುವಂತೆ ಪ್ರಚೋದನೆ ನೀಡಿಲ್ಲ ಎಂದ ಅವರು, ತಾವು ಮಾಡಿದ ಸಾಹಸಗಳೆಲ್ಲವೂ ಜನಸಂದಣಿ ಇಲ್ಲದ ಸ್ಥಳಗಳಲ್ಲಿ ಪ್ರದರ್ಶಿಸಿದ ಸಾಹಸಗಳಾಗಿವೆ ಎಂದು ಹೇಳಿದರು. ಆದಾಗ್ಯೂ ಇತ್ತೀಚಿನ ದಿನಗಳಲ್ಲಿ, ಒಂದು ವರ್ಗದ ಜನರು ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ತಮ್ಮ ಚಿತ್ರವನ್ನು ವಿರೂಪಗೊಳಿಸಲು ಯತ್ನಿಸಿದ್ದಾರೆ ಎಂದು ವಾಸನ್ ಬೇಸರ ವ್ಯಕ್ತಪಡಿಸಿದ್ದರು. ಯಾರಾದರೂ ಅಪಾಯಕಾರಿ ಕೃತ್ಯಗಳನ್ನು ಮಾಡಲು ಅಥವಾ ರಸ್ತೆಗಳಲ್ಲಿ ಅಜಾಗರೂಕತೆಯಿಂದ ವಾಹನ ಚಲಾಯಿಸಲು ನನ್ನ ವಿಡಿಯೋಗಳು ಪ್ರೇರಣೆ ನೀಡಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದು ವಾಸನ್ ಈ ವಿಡಿಯೋ ಮೂಲಕ ಕೇಳಿಕೊಂಡಿದ್ದರು.
ಬೈಕ್ ಓಡಿಸುವಾಗ ಹೆಲ್ಮೆಟ್ ಧರಿಸಿ ಖಾಸಗಿ ಜಾಗದಲ್ಲಿ ಸಾಹಸ ಪ್ರದರ್ಶಿಸುವಂತೆ ಅವರು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದರು. ವಾಸನ್ ಪ್ರಕಾರ, ಅವರು ಬೈಕ್‌ನ ಮಿತಿಯನ್ನು ಪರೀಕ್ಷಿಸಲು ಮಾತ್ರ ಗಂಟೆಗೆ 243 ಕಿಮೀ ವೇಗದಲ್ಲಿ ಬೈಕ್ ಚಲಾಯಿಸಿದ್ದು, ಇದು ಅಭಿಮಾನಿಗಳು ಮತ್ತು ಇತರ ಯುವಕರನ್ನು ಪ್ರಚೋದಿಸಲು ಅಲ್ಲ ಎಂದರು. ಅಲ್ಲದೇ ವಿಡಿಯೋದಲ್ಲಿ ಮಾಡಿದ ಅತೀವೇಗದ ಚಾಲನೆಯನ್ನು ಉತ್ತರ ಭಾರತದ ಯಮುನಾ ಹೆದ್ದಾರಿಯಲ್ಲಿ (Yamuna highway) ಮಾಡಿದ್ದು, ತಮಿಳುನಾಡಿನಲ್ಲಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಇದಾದ ಬಳಿಕವೂ ವಾಸನ್ ಯುವ ಪೀಳಿಗೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿ ನೆಟ್ಟಿಗರು ಅವರನ್ನು ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಪೊಲೀಸರ ಪ್ರಕಾರ, ವಾಸನ್ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿಲ್ಲ ಅಥವಾ ಇದುವರೆಗೆ ಯಾವುದೇ ಆನ್‌ಲೈನ್ ದೂರುಗಳು ದಾಖಲಾಗಿಲ್ಲ. ಬದಲಿಗೆ, ನೆಟಿಜನ್‌ಗಳು ವಾಸನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin), ಪೊಲೀಸ್ ಮಹಾನಿರ್ದೇಶಕ ಸೈಲೇಂದ್ರ ಬಾಬು (Sylendra Babu) ಮತ್ತು ಗ್ರೇಟರ್ ಚೆನ್ನೈ ಪೊಲೀಸ್ ಕಮಿಷನರ್ (Chennai Police Commissioner) ಶಂಕರ್ ಜಿವಾಲ್ (Shankar Jiwal) ಅವರನ್ನು ಟ್ವಿಟರ್‌ನಲ್ಲಿ ಟ್ಯಾಗ್ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.